ನ್ಯಾಯಾಧೀಶರ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕೈಕೊಳ್ಳುವಂತೆ ಒಕ್ಕೂಟ ಸರ್ಕಾರವನ್ನು ಸುಪ್ರೀಂಕೋರ್ಟ್ ಮಂಗಳವಾರ ಕೇಳಿದ್ದು, ಈ ವಿಷಯವನ್ನು ಕೇವಲ ರಾಜ್ಯಗಳಿಗೆ ಬಿಡಬಾರದು ಎಂದು ಹೇಳಿದೆ. ಕಳೆದ ತಿಂಗಳು ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶರ ಕೊಲೆ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.
ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ನ್ಯಾಯಾಧೀಶರ ಭದ್ರತಾ ಕ್ರಮಗಳ ಸ್ಥಿತಿಗತಿಯ ಕುರಿತು ವರದಿ ಸಲ್ಲಿಸದ ರಾಜ್ಯಗಳಿಗೆ ಎಚ್ಚರಿಕೆಯನ್ನೂ ಅದು ನೀಡಿದೆ.
ಇದನ್ನೂ ಓದಿ: ಜಾರ್ಖಂಡ್ ನ್ಯಾಯಾಧೀಶರಿಗೆ ಆಟೋದಿಂದ ಗುದ್ದಿ ಸಾಯಿಸಿದ ದುಷ್ಕರ್ಮಿಗಳು: ಸಿಸಿಟಿವಿಯಲ್ಲಿ ಸೆರೆ
“ತೆಗೆದುಕೊಳ್ಳುತ್ತಿರುವ ಕ್ರಮಗಳು ಎಲ್ಲವೂ ಚೆನ್ನಾಗಿದೆ ಎಂಬಂತಹ ಚಿತ್ರಣಗಳನ್ನು ರಾಜ್ಯಗಳು ನೀಡುತ್ತಿವೆ . ಆದರೆ, ಅದರ ಹೊರತಾಗಿಯೂ, ನ್ಯಾಯಾಂಗದ ಅಧಿಕಾರಿಗಳ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಿವೆ” ಎಂದು ಸುಪ್ರೀಂಕೋರ್ಟ್ ಹೇಳಿದೆ.
“ರಾಜ್ಯಗಳು ಸಿಸಿಟಿವಿ ನಿಧಿಯ ಕೊರತೆಯನ್ನು ಉಲ್ಲೇಖಿಸುತ್ತಿವೆ. ಆದರೆ ಸಿಸಿಟಿವಿಗಳು ಅಪರಾಧದ ದಾಖಲೆ ಮಾತ್ರ ಮಾಡುತ್ತದೆ. ಅಪರಾಧಿಗಳು ಆಕ್ರಮಣ ಮಾಡುವುದನ್ನು ತಡೆಯುವುದಾಗಲಿ, ಬೆದರಿಕೆಗಳನ್ನು ತಡೆಯುವುದಕ್ಕಾಗಲಿ ಅವುಗಳಿಗೆ ಸಾಧ್ಯವಿಲ್ಲ” ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಾಲಯವು ರಾಜ್ಯಗಳಿಗೆ ಒಂದು ವಾರದ ಕಾಲಾವಕಾಶವನ್ನು ನೀಡಿದ್ದು, ಒಂದು ವಾರದಲ್ಲಿ ಪರಿಸ್ಥಿತಿಯ ಕುರಿತು ವರದಿಯನ್ನು ಸಲ್ಲಿಸದಿದ್ದಲ್ಲಿ 1 ಲಕ್ಷ ರೂ. ದಂಡದ ಎಚ್ಚರಿಕೆಯನ್ನು ನೀಡಿದೆ. ಒಂದು ವಾರದಲ್ಲಿ ರಾಜ್ಯಗಳು ತಮ್ಮ ವರದಿಗಳನ್ನು ಸಲ್ಲಿಸದಿದ್ದರೆ ಮುಖ್ಯ ಕಾರ್ಯದರ್ಶಿಗಳು ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆಗಳು ‘ಗಂಭೀರ’: ಸುಪ್ರೀಂಕೋರ್ಟ್
ಜುಲೈ 28 ರಂದು ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ (49) ಅವರು ಬೆಳಗಿನ ಜಾವ ಜಾಗಿಂಗ್ ಮಾಡುತ್ತಿದ್ದಾಗ ಆಟೋ ಡಿಕ್ಕಿ ಹೊಡೆದು ಕೊಲ್ಲಲ್ಪಟ್ಟರು.
ಪ್ರಕರಣವು ಮೊದಲಿಗೆ ಹಿಟ್ ಅಂಡ್ ರನ್ ಎಂದು ಹೇಳಲಾಗಿತ್ತು, ಆದರೆ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ವೈರಲ್ ಆದ ನಂತರ ಪ್ರಕರಣವು ಇನ್ನೊಂದು ಮಗ್ಗುಲಿಗೆ ಹೊರಳಿತು.
ಉತ್ತಮ್ ಆನಂದ್ ಅವರು ಧನ್ಬಾದ್‌ನ ಅನೇಕ ಮಾಫಿಯಾ ಹತ್ಯಾ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದರು, ಅದರಲ್ಲಿ ಅವರು ಇಬ್ಬರು ದರೋಡೆಕೋರರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದರು. ಜೊತೆಗೆ ಶಾಸಕರ ಆಪ್ತರೊಬ್ಬರನ್ನು ಒಳಗೊಂಡ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು.
ಇದನ್ನೂ ಓದಿ: ಜಾಮೀನು ನೀಡದ ನ್ಯಾಯಾಧೀಶನ ಬರ್ಬರ ಕೊಲೆ: ಸುಮೊಟೋ ಪ್ರಕರಣದ ದಾಖಲಿಸಿದ ಸುಪ್ರೀಂ


