ಮೇಕೆ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿ, ಥಳಿಸಿ ಚಪ್ಪಲಿಯಿಂದ ಹಾರ ಹಾಕಿ ಅವಮಾನಿಸಿದ ಘಟನೆ ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶನಿವಾರ ವರದಿ ಮಾಡಿದೆ. ಒಡಿಶಾ
ಬಿರಿಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 27 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಒಡಿಶಾ ಕಾಂಗ್ರೆಸ್ ನಾಯಕ ಅಮಿಯಾ ಪಾಂಡವ್ ಅವರು ಶನಿವಾರ ಬೆಳಗ್ಗೆ ಎಕ್ಸ್‌ನಲ್ಲಿ, ನಡೆದ ಹಲ್ಲೆಯ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಪ್ರಕರಣದ ಬಗ್ಗೆ ಗಮನ ಸೆಳೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಬ್ಬರು ವ್ಯಕ್ತಿಗಳು ಆಟೋ ರಿಕ್ಷಾದಲ್ಲಿ ಎರಡು ಮೇಕೆಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯರು ಹಿಂಬಾಲಿಸಿ ಹಿಡಿದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ನಂತರ ಅವರನ್ನು ಪೊಲೀಸರು ರಕ್ಷಿಸಿದ್ದು, ಕಳ್ಳತನದ ಆರೋಪ ಹೊರಿಸಿ, ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ವರದಿಯಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಜೊತೆಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, 1989 ರ ಅಡಿಯಲ್ಲಿ ಆಪಾದಿತ ಹಲ್ಲೆಗಾಗಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ದೌರ್ಜನ್ಯಕ್ಕೆ ಒಳಗಾದ ಯುವಕರಲ್ಲಿ ಒಬ್ಬರ ತಂದೆ ಜನವರಿ 1 ರಂದು ಈ ಬಗ್ಗೆ ದೂರು ನೀಡಿದ್ದಾರೆ. “ನನ್ನ ಮಗ ಮತ್ತು ಅವನ ಸ್ನೇಹಿತ ಸಿಮದಾಳ ಗ್ರಾಮದಿಂದ ಹಿಂದಿರುಗುತ್ತಿದ್ದಾಗ, ಕೆಲವು ಸ್ಥಳೀಯರು ಪಂಚಾಯಿತಿ ಕಚೇರಿ ಬಳಿಯ ಬರೇಡಿಯಾ ಸೇತುವೆಯ ಬಳಿ ಅವರ ಆಟೋರಿಕ್ಷಾವನ್ನು ತಡೆದಿದ್ದಾರೆ. ಈ ವೇಳೆ ನನ್ನ ಮಗನ ಹೆಸರು ಮತ್ತು ಊರಿನ ಬಗ್ಗೆ ಕೇಳಿದ್ದಾರೆ” ಎಂದು ಅವರು ದೂರಿದ್ದಾರೆ. ಒಡಿಶಾ
“ಈ ಅವರು ಹೆಸರು ಹೇಳಿದಾಗ, ಸ್ಥಳೀಯರು ನನ್ನ ಮಗ ಮತ್ತು ಅವನ ಸ್ನೇಹಿತನನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿ, ಜಾತಿಯ ನಿಂದನೆ ಮಾಡಿದ್ದಾರೆ. ಜೊತೆಗೆ ಮೇಕೆಗಳನ್ನು ಕದ್ದಿದ್ದಾರೆಂದು ಆರೋಪಿಸಿದ್ದಾರೆ” ಎಂದು ತಂದೆಯ ದೂರಿನಲ್ಲಿ ಹೇಳಿದ್ದಾರೆ. ಅಲ್ಲದೆ, ಹಲ್ಲೆ ವೇಳೆ ಅವರು ತಮ್ಮ ಮಗನ ಬಳಿಯಿದ್ದ ಬೆಳ್ಳಿಯ ಸರವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನು ಗುರುತಿಸಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಜಗತ್‌ಸಿಂಗ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಭವಾನಿ ಶಂಕರ್ ಉದ್ಗಾಟ ತಿಳಿಸಿದ್ದಾರೆ. “ನಾವು ಅವರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದದ್ದಾರೆ.
ಘಟನೆ ಕಾಂಗ್ರೆಸ್ ಮುಖಂಡ ಪಾಂಡವ್ ಖಂಡಿಸಿದ್ದು, ಎಕ್ಸ್‌ನಲ್ಲಿ “ಇಂತಹ ಅಕ್ರಮವು ಬಿಜೆಪಿ ಆಡಳಿತದ ಒಡಿಶಾದ ಪ್ರಧಾನ ಲಕ್ಷಣವಾಗಿದೆ. ಜಗತ್‌ಸಿಂಗ್‌ಪುರದಲ್ಲಿ ಇಬ್ಬರು ದಲಿತ ಯುವಕರನ್ನು ಹೇಗೆ ನಡೆಸಿಕೊಂಡರು ನೋಡಿ! ಮಾನವ ಘನತೆ ಅಪಾಯದಲ್ಲಿದೆ, ಡಬಲ್ ಎಂಜಿನ್ ಸರ್ಕಾರಕ್ಕೆ ಅವಮಾನ” ಎಂದು ಹೇಳಿದ್ದಾರೆ.
महामहिम राष्ट्रपति ओडिसा से आती है लेकिन वहां दलितों के साथ इतना सब कुछ होते हुए भी चुप है। खाक समाज का उद्धार करेगी, सरकार की मात्र रबर स्टाम्प बन के रह गई। @rashtrapatibhvnpic.twitter.com/jdAAVzci8z
— Hansraj Meena (@HansrajMeena) January 5, 2025
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಒಡಿಶಾದ 147 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 78 ಸ್ಥಾನಗಳನ್ನು ಗೆದ್ದಿತ್ತು. ಮಾರ್ಚ್ 2000 ರಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜು ಜನತಾ ದಳವು 51 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದಿತ್ತು.
ಇದನ್ನೂಓದಿ: ಮಧ್ಯಪ್ರದೇಶ ಪೊಲೀಸ್ ಠಾಣೆಯಲ್ಲಿ ದಲಿತ ಯುವಕ ಸಾವು – ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ


