ಪ್ರತಿವರ್ಷ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಜಿಲ್ಲಾ ಕಚೇರಿಗಳಲ್ಲಿ ಪತ್ರಿಕೋದ್ಯಮದ ಪದವಿ ಪಡೆದ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಗೌರವಧನ ನೀಡಿ ಅಪ್ರೆಂಟಿಸ್ ತರಬೇತಿಯನ್ನು ನೀಡಲಾಗುತ್ತದೆ. 2020-21ನೇ ಸಾಲಿನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಡಿಸೆಂಬರ್ ತಿಂಗಳ ಪ್ರೋತ್ಸಾಹಧನವನ್ನು ನೀಡಲಾಗಿಲ್ಲ. ಅಧಿಕಾರಿಗಳ ಗೊಂದಲಕಾರಿ ಆದೇಶಗಳಿಂದಾಗಿ ಒಂದು ತಿಂಗಳು ಯಾವುದೇ ಪ್ರೋತ್ಸಾಹಧನ ಇಲ್ಲದೆ ಹೆಚ್ಚುವರಿ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಜಂಟಿ ನಿರ್ದೇಶಕರಾಗಿದ್ದ ಎ.ಆರ್.ಪ್ರಕಾಶ್ ಅವರು ಆಯುಕ್ತರ ಪರವಾಗಿ ಅಕ್ಟೋಬರ್ 21, 2020ರಂದು ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪತ್ರಿಕೋದ್ಯಮ ಅಭ್ಯರ್ಥಿಗಳನ್ನು ನವೆಂಬರ್ ತಿಂಗಳಿನಿಂದಲೇ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಬಹುತೇಕ ಜಿಲ್ಲೆಗಳ ಪದಾಧಿಕಾರಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಹಾಗೂ ಡಿಸೆಂಬರ್ ತಿಂಗಳಿನಿಂದಲೇ ತರಬೇತಿಯನ್ನೂ ನೀಡಿರುತ್ತಾರೆ.
ಪ್ರತಿ ತಿಂಗಳು 15,000 ಮಾಸಿಕ ಪ್ರೋತ್ಸಾಹಧನವನ್ನು ಮಾಧ್ಯಮ ಅಕಾಡೆಮಿಯ ಅಭ್ಯರ್ಥಿಗಳ ಖಾತೆಗೆ ಇಲಾಖೆ ಜಮಾ ಮಾಡುತ್ತದೆ. ಆದರೆ ಡಿಸೆಂಬರ್ ತಿಂಗಳಿನ ಮಾಸಿಕ ಪ್ರೋತ್ಸಾಹಧನ ಬಂದಿರುವುದಿಲ್ಲ. ಈ ಕುರಿತು ಮಾಧ್ಯಮ ಅಕಾಡೆಮಿಯಲ್ಲಿ ವಿಚಾರಿಸಿದಾಗ ಬೇರೆ ಜ್ಞಾಪನ ಪತ್ರದ ಪ್ರತಿಯನ್ನು ತೋರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪದವಿ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಆಯ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ತರಬೇತಿ ನೀಡುವ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ. 2020-21ನೇ ಸಾಲಿನಲ್ಲಿಯೂ ಹತ್ತು ತಿಂಗಳ ತರಬೇತಿ ನೀಡಲಾಗಿದೆ. ಪ್ರತಿ ತಿಂಗಳ ಪ್ರೋತ್ಸಾಹಧನವನ್ನು ತಡವಾಗಿಯಾದರೂ ಇಲಾಖೆ ಪಾವತಿಸುತ್ತಿರುವುದು ಸ್ವಾಗತಾರ್ಹ. ಆದರೆ ಡಿಸೆಂಬರ್‌ನಲ್ಲಿ ನೇಮಕ ಮಾಡಿಕೊಂಡು, ಹತ್ತು ತಿಂಗಳ ಬದಲು ಹನ್ನೊಂದು ತಿಂಗಳು ಕೆಲಸ ಮಾಡಿಸಿಕೊಳ್ಳಲಾಗಿದೆ. ಜನವರಿಯಿಂದ ಅಕ್ಟೋಬರ್‌ವರೆಗಿನ ಹಣ ಪಾವತಿಯಾದರೂ ಡಿಸೆಂಬರ್‌ನಲ್ಲೇ ತರಬೇತಿಗೆ ಸೇರಿದವರಿಗೆ ಒಂದು ತಿಂಗಳ ಹಣ ಬಾಕಿ ಉಳಿದಿದೆ.
ಇದನ್ನು ಓದಿರಿ: ಕೇರಳ ದಲಿತ ವಿದ್ಯಾರ್ಥಿನಿ ಹೋರಾಟಕ್ಕೆ ಜಯ: ಜಾತಿ ತಾರತಮ್ಯವೆಸಗಿದ್ದ ಪ್ರಾಧ್ಯಾಪಕನ ವಜಾ
“ಜ್ಞಾಪನ ಪತ್ರವನ್ನು ಹೊರಡಿಸಿದ್ದ ಎ.ಆರ್.ಪ್ರಕಾಶ್ ಅವರು ನಿವೃತ್ತರಾಗಿದ್ದು, ಆ ಜಾಗಕ್ಕೆ ಡಿ.ಪಿ.ಮುರಳಿಧರ್ ನೇಮಕವಾದರು. ಅವರು ಪ್ರಕಾಶ್ ಅವರ ಜ್ಞಾಪಕ ಪತ್ರಕ್ಕೆ ಪ್ರತಿಯಾಗಿ ಡಿಸೆಂಬರ್ 21, 2020ರಂದು ಮತ್ತೊಂದು ಜ್ಞಾಪನಪತ್ರವನ್ನು ಹೊರಡಿಸಿದ್ದಾರೆ. ಜ್ಞಾಪನ ಪತ್ರದಲ್ಲಿ ಜನವರಿಯಿಂದ ಅಭ್ಯರ್ಥಿಗಳಿಗೆ ತರಬೇತಿ ನೀಡುವುದು ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಮೊದಲೇ ಕೆಲಸ ಮಾಡಿದ ನಮಗೆ ಒಂದು ತಿಂಗಳ ಹಣ ಪಾವತಿಯಾಗಿಲ್ಲ” ಎಂದು ದೂರಿದ್ದಾರೆ ಅನಿಲ್‌ಕುಮಾರ್.


“ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2020-21ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿಯಲ್ಲಿ ರಾಜ್ಯ ಎಲ್ಲ ಜಿಲ್ಲಾ ಕಚೇರಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ತಲಾ ಇಬ್ಬರು ಅಭ್ಯರ್ಥಿಗಳನ್ನು ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು, ಚಾಮರಾಜನಗರ, ಹಾಸನ, ಮಂಡ್ಯ, ಉಡುಪಿ, ಕಲಬುರಗಿ, ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಬೆಳಗಾವಿ, ಧಾರಾವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ ಒಳಗೊಂಡಂತೆ ಆಯ್ದ ಈ ಇಪ್ಪತ್ತು ಜಿಲ್ಲಾ ಕಚೇರಿಗಳಲ್ಲಿ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡಕ್ಕೆ ಸೇರಿದ ತಲಾ ಒಬ್ಬರು ಅಭ್ಯರ್ಥಿಯನ್ನು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಹಾಗೂ ಮಾಧ್ಯಮ ಚಟುವಟಿಕೆಗಳ ಕಾರ್ಯ ನಿರ್ವಹಣೆ ಕುರಿತು ಹತ್ತು-ತಿಂಗಳ ಅವಧಿಯ ಅಪ್ರೆಂಟಿಶಿಪ್ ತರಬೇತಿಗೆ ತೆಗೆದುಕೊಳ್ಳಲು ಅನುಮತಿ ನೀಡಿದೆ”
“ಈ ತರಬೇತಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರಾಜ್ಯ ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ 2020, ಜನವರಿ 1ರಿಂದ ಅಕ್ಟೋಬರ್ 31ರವರೆಗೆ ಏಕಕಾಲಕ್ಕೆ ಪ್ರಾರಂಭವಾಗಿ ಏಕಕಾಲಕ್ಕೆ ಮುಕ್ತಾಯವಾಗಬೇಕಿರುವ ಹಿನ್ನೆಲೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ಕಚೇರಿಗೆ ಕೂಡಲೇ ಕಳುಹಿಸಿಕೊಡಲು ಸೂಚಿಸಿದೆ” ಎಂದು ಜ್ಞಾಪನಾಪತ್ರದಲ್ಲಿ ಸೂಚಿಸಲಾಗಿದೆ. (2021 ಜನವರಿ 1 ಎಂಬುದು, 2020 ಜನವರಿ 1 ಆಗಿರುವಂತಿದೆ).
ಡಿಸೆಂಬರ್ ತಿಂಗಳಿನಲ್ಲಿ ತರಬೇತಿ ಪಡೆದವರ ಪ್ರೋತ್ಸಾಹಧನದ ಕಥೆಯಾದರೂ ಏನು ಎಂದು ಜಂಟಿ ನಿರ್ದೇಶಕರಾದ ಡಿ.ಪಿ.ಮುರಳೀಧರ್ ಅವರನ್ನು ವಿಚಾರಿಸಿದರೆ, ಅವರು ಈ ಕುರಿತು ಮಾತನಾಡುವುದಕ್ಕೆ ಹಿಂಜರಿದರು. “ಅದು ಕೇಂದ್ರ ಕಚೇರಿಯಿಂದ ಆಗಿರುವ ಆದೇಶ” ಎಂದು ತಿಳಿಸಿದರು.
“ಅನುದಾನದ ಕೊರತೆಯನ್ನು ಗಮನಿಸದೆ ಈ ಹಿಂದಿನ ಅಧಿಕಾರಿಗಳು ಜ್ಞಾಪನಾ ಪತ್ರ ನೀಡಿದ್ದರು. ಅದರಂತೆ ನೇಮಕಾತಿ ನಡೆದಿದೆ. ಆದರೆ ಅವರು ನಿವೃತ್ತರಾದರು. ಬಳಿಕ ಸಮಸ್ಯೆ ಎದುರಾದಾಗ ಹೊಸ ಅಧಿಕಾರಿಗಳು ಜನವರಿಯಿಂದ ಅಕ್ಟೋಬರ್‌ವರೆಗೆ ಆದೇಶ ಹೊರಡಿಸಿ ಹತ್ತು ತಿಂಗಳ ಪ್ರೋತ್ಸಾಹಧನ ಕೊಡಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ತರಬೇತಿ ಪಡೆದ ಕೆಲವು ವಿದ್ಯಾರ್ಥಿಗಳಿಗೆ ಬಹುಶಃ ಪ್ರೋತ್ಸಾಹಧನ ಬರುವುದು ಅನುಮಾನ” ಎಂದು ಬಲ್ಲಮೂಲಗಳು ಹೇಳುತ್ತವೆ.
ಇದನ್ನೂ ಓದಿರಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ


