ಟೋಕಿಯೋ ಒಲಂಪಿಕ್ಸ್ ಅಂಗಳದಲ್ಲಿ ಇಂದು ಭಾರತದ ಪಾಲಿಗೆ ಸಂಭ್ರಮದ ದಿನ. ಭಾರತದ ಕುಸ್ತಿಪಟುಗಳಾದ ರವಿ ದಹಿಯಾ, ದೀಪಕ್ ಪುನಿಯಾ ತಮ್ಮ ಅದ್ವೀತಿಯಾ ಆಟದಿಂದ ಸೆಮಿಫೈನಲ್ ತಲುಪಿ ಪದಕದ ಭರವಸೆ ಮೂಡಿಸಿದ್ದಾರೆ.
ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಕ್ವಾಟರ್‌ಫೈನಲ್ ಪಂದ್ಯದಲ್ಲಿ ಬಲ್ಗೇರಿಯಾದ ಜಾರ್ಜಿ ವಾಂಗೆಲೋವ್ ರವರನ್ನು 14-4 ಅಂತರದಲ್ಲಿ ಮಣಿಸಿದ ರವಿ ದಹಿಯಾ ಸೆಮಿಗೆ ಕಾಲಿಟ್ಟಿದ್ದಾರೆ.
ಅದೇ ರೀತಿಯಾಗಿ ದೀಪಕ್ ಪುನಿಯಾ ಪುರುಷರ ಫ್ರೀಸ್ಟೈಲ್ 86 ಕೆಜಿ ವಿಭಾಗದ ಕ್ವಾಟರ್‌ಫೈನಲ್ ಪಂದ್ಯದಲ್ಲಿ ಚೀನಾದ ಜುಶೆನ್ ಲಿನ್ ವಿರುದ್ಧ 6-3 ಅಂತರದಲ್ಲಿ ಜಯಗಳಿಸಿ ಸೆಮಿಗೆ ಲಗ್ಗೆ ಇಟ್ಟಿದ್ದಾರೆ.
ಅದಕ್ಕೂ ಮೊದಲು ದೀಪಕ್ ಪುನಿಯಾ ಪ್ರಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ನೈಜೀರಿಯಾದ ಅಜಿಯೋಮರ್ ಎಕೆರೆಕೆಮೆ ಅವರನ್ನು 12-1 ರಿಂದ ಸೋಲಿಸಿ ಕ್ವಾಟರ್‌ಫೈನಲ್ ಪ್ರವೇಶಿಸಿದ್ದರು.
ಇನ್ನೊಂದೆಡೆ ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ 86.65 ಮೀಟರ್ ದೂರ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.
ಇಂದು ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಣಕ್ಕಿಳಿಯಲಿದ್ದಾರೆ. ಅದೇ ರೀತಿ ಭಾರತದ ಮಹಿಳಾ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ ಸೆಮಿಫೈನಲ್ ಪಂದ್ಯ ಎದುರಿಸಲಿದೆ.
ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್


