Homeಕರ್ನಾಟಕಭಾರತದ ಭಾವೈಕ್ಯತೆಯ ’ತಕ್ಕಡಿ’ಯಲ್ಲಿ ಭಿನ್ನ-ಭೇದವ ಮಾಡಬೇಡಿರೋ....

ಭಾರತದ ಭಾವೈಕ್ಯತೆಯ ’ತಕ್ಕಡಿ’ಯಲ್ಲಿ ಭಿನ್ನ-ಭೇದವ ಮಾಡಬೇಡಿರೋ….

- Advertisement -
- Advertisement -

ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕೋಮುದ್ವೇಷ ರಾಜಕಾರಣದಲ್ಲಿ ಶರವೇಗದಲ್ಲಿ ಚಲಿಸುತ್ತಿದೆ. ಮಾರಲ್ ಪೊಲೀಸಿಂಗ್ ಸಮರ್ಥನೆ, ಮತಾಂತರ ನಿಷೇಧ ಮಸೂದೆ, ಹರ್ಷ ಕೊಲೆ ಪ್ರಕರಣ, ಹಿಜಾಬ್-ಕೇಸರಿ ಶಾಲು ವಿವಾದ ಹೀಗೆ ನಿತ್ಯವೂ ಕೋಮು ರಾಜಕಾರಣದಲ್ಲಿ ಸುದ್ದಿಯಲ್ಲಿರುವ ರಾಜ್ಯ ಈಗ ಮತ್ತೊಂದು ಹೊಸ ವಿವಾದದ ಸುತ್ತ ಗಿರಕಿಹೊಡೆಯುತ್ತಿದೆ. ’ಹಿಂದೂಗಳ ದೇವಾಲಯಗಳ ಸಮೀಪ ಮತ್ತು ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ಮಾಡಬಾರದು’ ಎಂದು ಜನರ ನಡುವೆ ದ್ವೇಷ ಹಬ್ಬಿಸುತ್ತಿರುವವರ ಕೃತ್ಯಗಳನ್ನು ಸರ್ಕಾರ ಪರೋಕ್ಷವಾಗಿ ಬೆಂಬಲಿಸುತ್ತಿದೆ.

ಒಂದು ಸಮುದಾಯದ ವಿರುದ್ಧ ನಿರಂತರವಾಗಿ ದ್ವೇಷ ಹರಡುತ್ತಾ ವಿಕೃತ ಖುಷಿಪಡುತ್ತಿರುವವರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಸರ್ಕಾರ ಮೌನ ಸಮ್ಮತಿಯನ್ನು ಸೂಚಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಕರ್ನಾಟಕವನ್ನು ’ಫ್ಯಾಸಿಸ್ಟ್’ ಕಬಂಧಬಾಹುಗಳಿಂದ ಬಿಗಿದಿಡಿಯುವ ಆತಂಕ ಎದುರಾಗಿದೆ.

ಬಸವರಾಜ ಬೊಮ್ಮಾಯಿ

ಕರ್ನಾಟಕ ಹೈಕೋರ್ಟ್ ’ಹಿಬಾಜ್’ ಸಂಬಂಧ ನೀಡಿದ ತೀರ್ಪನ್ನು ವಿರೋಧಿಸಿ ರಾಜ್ಯದ ಕೆಲವು ಮುಸ್ಲಿಂ ಸಂಘಟನೆಗಳು ಒಂದು ದಿನದ ಮಟ್ಟಿಗೆ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದವು. ಹೀಗಾಗಿ ಕರಾವಳಿ ಭಾಗದ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯು ಸಾಂವಿಧಾನಿಕ ಹಕ್ಕೆಂಬುದು ನಿರ್ವಿವಾದ. ಆದರೆ ಬಂದ್‌ನ ಬಳಿಕ ಮುಸ್ಲಿಂ ಸಮುದಾಯವನ್ನು ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಮುಸ್ಲಿಂ ವರ್ತಕರು ದೇವಾಲಯ ಆವರಣದಲ್ಲಿ ವ್ಯಾಪಾರ ಮಾಡಬಾರದು, ಜಾತ್ರೆ, ಉತ್ಸವಗಳಿಗೆ ಪ್ರವೇಶಿಸಬಾರದು ಎಂದು ನಿರ್ಬಂಧ ಹೇರುವ ಬ್ಯಾನರ್‌ಗಳು ರಾಜ್ಯದ ಹಲವೆಡೆ ಕಾಣಿಸಿಕೊಂಡಿವೆ. ’ಹಿಂದೂ’ ಹೆಸರಲ್ಲಿ ರಾಜಕೀಯ ಮಾಡುವ ಪ್ರಭುತ್ವ ಬೆಂಬಲಿತ ಮತೀಯ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಇಂತಹ ವರ್ತನೆಗಳಿಗೆ ವ್ಯಾಪಾರಿ ಸಮುದಾಯ ಧರ್ಮಾತೀತವಾಗಿ ಖಂಡನೆ ವ್ಯಕ್ತಪಡಿಸುತ್ತಿವೆ. ಆದರೆ ದ್ವೇಷಸೃಷ್ಟಿಕಾರರು ನಿಶ್ಚಿಂತೆಯಿಂದ ತಮ್ಮ ದುಷ್ಕೃತ್ಯಗಳನ್ನು ಮುಂದುವರಿಸಿದ್ದಾರೆ.

ಕಾನೂನುಬಾಹಿರ ನಡೆ

ಘಟನೆಗಳನ್ನು ಖಂಡಿಸುವ ಹೇಳಿಕೆಗಳನ್ನು ನೀಡುತ್ತಲೇ ಸದನದಲ್ಲಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕಾನೂನಿನಲ್ಲಿ ನಿರ್ಬಂಧಕ್ಕೆ ಅವಕಾಶವಿದೆ ಎಂದು ಪ್ರತಿಪಾದಿಸಲು ಯತ್ನಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

“ಹಿಂದೂ ದೇವಸ್ಥಾನಗಳ ಆವರಣದ ಸ್ವತ್ತು ಮತ್ತು ಜಾಗವನ್ನು ಹಿಂದೂ ಧರ್ಮದವರಲ್ಲದೇ ಬೇರೆಯವರ ಬಳಕೆಗೆ ನೀಡಬಾರದು ಎಂದು ಈ ಹಿಂದೆಯೇ ಕಾನೂನು ರೂಪಿಸಲಾಗಿದೆ. ಈಗ ಧಾರ್ಮಿಕ ಸಂಸ್ಥೆಗಳು ಅದನ್ನು ಪಾಲಿಸುತ್ತಿವೆ” ಎಂದಿದ್ದಾರೆ.

ಮುಂದುವರಿದು, “2002ರಲ್ಲಿ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ದೇವಸ್ಥಾನದ ಸ್ವತ್ತನ್ನು ಹಿಂದೂಗಳಲ್ಲದವರ ಬಳಕೆಗೆ ಅವಕಾಶ ನೀಡತಕ್ಕದ್ದಲ್ಲ ಎಂದು ತಿದ್ದುಪಡಿ ಮಾಡಲಾಗಿದೆ. ಈಗ ಧಾರ್ಮಿಕ ಸಂಸ್ಥೆಯವರು ಅದನ್ನು ಜಾರಿ ಮಾಡುತ್ತಿದ್ದಾರೆ. ದೇವಸ್ಥಾನಗಳ ಆಡಳಿತ ಮಂಡಳಿಗಳ ಕ್ರಮ ಕಾನೂನು ವಿರೋಧಿ ಅಲ್ಲ. ದೇವಸ್ಥಾನದ ಆವರಣದಲ್ಲಿ ಕಾನೂನು ಬಳಕೆಗೆ ವಿರೋಧ ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಆ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲು ಅವಕಾಶ ಇಲ್ಲ” ಎಂದು ತಿಳಿಸಿದ್ದಾರೆ.

ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆಯೇ?

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆಯನ್ನು ಮೂಲತಃ 1997ರಲ್ಲಿ ರಚಿಸಲಾಯಿತು. ಆದರೆ 2001ರಲ್ಲಿ ಜಾರಿಗೆ ಬಂದಿತು. ಈ ಕಾನೂನು ಜಾರಿಯಾದಾಗಲೇ ವಿವಾದವನ್ನು ಹುಟ್ಟುಹಾಕಿತ್ತು. ಕರ್ನಾಟಕ ಹೈಕೋರ್ಟ್ 2006ರಲ್ಲಿ ಕೆಲವು ಷರತ್ತುಗಳ ಕಾರಣದಿಂದ ಕಾಯ್ದೆಯ ಜಾರಿಯನ್ನು ತಡೆಹಿಡಿದಿತ್ತು.

ಹಿಂದೂಯೇತರರು ಅಂಗಡಿಗಳನ್ನು ದೇವಸ್ಥಾನದಲ್ಲಿ ಅಥವಾ ಸಮೀಪದಲ್ಲಿ ನಡೆಸುವುದನ್ನು ನಿಷೇಧಿಸುವ ಅಥವಾ ಅಂತಹ ನಿಷೇಧಗಳನ್ನು ಜಾರಿಗೆ ತರಲು ದೇವಾಲಯದ ಅಧಿಕಾರಿಗಳಿಗೆ ಅಧಿಕಾರ ನೀಡುವ ಯಾವುದೇ ಷರತ್ತು ಈ ಕಾಯ್ದೆಯಲ್ಲಿಯೇ ಇಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ಕರ್ನಾಟಕ ಕಾನೂನು ಸಚಿವರು ಹೇಳಿರುವುದಕ್ಕೆ ವ್ಯತಿರಿಕ್ತವಾಗಿ, ಹಿಂದೂಯೇತರರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ/ನೀಡದಿರುವ ಬಗ್ಗೆ ನಿಯಮ 12 ಏನನ್ನೂ ಹೇಳುವುದಿಲ್ಲ. ದೇವಾಲಯದ ಸೇವಕರು ಮತ್ತು ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ಇರುವುದು ನಿಯಮ 12.

ಆದರೆ ನಿಯಮ 31, ಉಪ-ಕಲಂ 12, “ಸಂಸ್ಥೆಯ ಭೂಮಿ, ಕಟ್ಟಡ ಅಥವಾ ಸೈಟ್‌ಗಳನ್ನು ಒಳಗೊಂಡಂತೆ ಯಾವುದೇ ಆಸ್ತಿಯನ್ನು ಹಿಂದೂಯೇತರರಿಗೆ ಭೋಗ್ಯಕ್ಕೆ ನೀಡಲಾಗುವುದಿಲ್ಲ” ಎಂದಿದೆ. ಕಾಯ್ದೆಯ ಅಡಿಯಲ್ಲಿ ಅಧಿಸೂಚಿಸಲಾದ ಹಿಂದೂ ಧಾರ್ಮಿಕ ಸಂಸ್ಥೆಯ ಒಡೆತನದ ಸ್ಥಿರ ಆಸ್ತಿಯ ಭೋಗ್ಯಕ್ಕೆ ಸಂಬಂಧಿಸಿದಂತೆ ನಿಯಮ 31 ತಿಳಿಸುತ್ತದೆ. ಈ ನಿಯಮವು ದೇವಸ್ಥಾನದ ಒಡೆತನದ ಸ್ಥಿರ ಆಸ್ತಿಯ ದೀರ್ಘಾವಧಿ ಭೋಗ್ಯಕ್ಕೆ ಮಾತ್ರ ಅನ್ವಯಿಸುತ್ತದೆ. (ಭೂಮಿ ಗುತ್ತಿಗೆ 30 ವರ್ಷಗಳವರೆಗೆ ಮತ್ತು ಅಂಗಡಿಗಳು, ಕಟ್ಟಡಗಳ ಗುತ್ತಿಗೆ ಐದು ವರ್ಷಗಳವರೆಗೆ). ಹಬ್ಬದ ಸಮಯದಲ್ಲಿ ವ್ಯಾಪಾರಿಗಳು ಮಳಿಗೆ ಹಾಕುವುದಕ್ಕೆ ಅಥವಾ ಸ್ಥಳಗಳನ್ನು ಅಲ್ಪಾವಧಿಗೆ ಬಳಸುವ ಪರವಾನಗಿಗೆ ಇದು ಅನ್ವಯಿಸುವುದಿಲ್ಲ ಎಂಬುದು ಕಾನೂನು ಹಾಗೂ ಸಂವಿಧಾನ ಕಾನೂನು ತಜ್ಞರ ವಾದ.

ವಾಸ್ತವವಾಗಿ, ಈ ’ಜಾತ್ರೆಗಳ’ ನಡವಳಿಕೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ನಿಯಮವಿದೆ. ನಿಯಮಗಳು 40-ಡಿ ದೇವಸ್ಥಾನದ ಜಾತ್ರೆಗಳಿಗೆ ಸಂಬಂಧಿಸಿದೆ. ಇದು ಹಿಂದೂಗಳಲ್ಲದವರ ಬಗ್ಗೆ ಏನನ್ನೂ ಹೇಳುವುದಿಲ್ಲ. 40-ಡಿ ನಿಯಮವು ಈ ಉತ್ಸವಗಳಲ್ಲಿ ಶುಲ್ಕವನ್ನು ಸಂಗ್ರಹಿಸುವ ಹಕ್ಕಿನ ಕುರಿತು, ಹರಾಜು ಅಥವಾ ಟೆಂಡರ್ ಮೂಲಕ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡುವವರಿಗೆ ಹಂಚುವ ವಿಧಾನದ ಕುರಿತು ಹೇಳುತ್ತದೆ.

ಈ ನಿಯಮವನ್ನು 2012ರಲ್ಲಿ ಸೇರಿಸಲಾಗಿದೆ. ಕಳೆದ 10 ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಿಗಳು ಹಬ್ಬಗಳಲ್ಲಿ ಮಳಿಗೆಗಳನ್ನು ಹಾಕುವಲ್ಲಿ ಯಾವುದೇ ತೊಂದರೆಯನ್ನು ಎದುರಿಸಿಲ್ಲ. 2002ರಿಂದ
ಜಾರಿಯಲ್ಲಿರುವ ನಿಯಮ 31ನ್ನು, ಹಿಂದೂ ಹಬ್ಬಗಳಲ್ಲಿ ಮುಸ್ಲಿಮರು ಮಳಿಗೆಗಳನ್ನು ಹಾಕುವುದನ್ನು ನಿಷೇಧಿಸುವುಕ್ಕೆ ಈವರೆಗೂ ಬಳಸಲಾಗಿಲ್ಲ.

ಸಂವಿಧಾನದ ಆರ್ಟಿಕಲ್ 15(2) ಉಲ್ಲಂಘಿಸುತ್ತಿದ್ದಾರೆಯೇ?

“ಸರ್ಕಾರವು ಯಾವುದೇ ನಾಗರಿಕರ ವಿರುದ್ಧ ಕೇವಲ ಧರ್ಮ, ಜನಾಂಗ, ಜಾತಿ, ಹುಟ್ಟಿದ ಸ್ಥಳ, ಲಿಂಗ ಅಥವಾ ಅವುಗಳ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡಬಾರದು” ಎಂದು ಸಂವಿಧಾನ 15(1) ವಿಧಿ ಹೇಳುತ್ತದೆ.

15ನೇ ವಿಧಿಯ ಉಪ-ಕಲಂ 2ರಲ್ಲಿ, ನಾಗರಿಕರ ನಡುವಿನ ತಾರತಮ್ಯವನ್ನೂ ನಿಷೇಧಿಸಲಾಗಿದೆ. “ಯಾವುದೇ ನಾಗರಿಕನು ಕೇವಲ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಅವುಗಳ ಯಾವುದೇ ಆಧಾರದ ಮೇಲೆ ತಾರತಮ್ಯ ಎಸಗುವಂತಿಲ್ಲ. ಅಂಗಡಿಗಳು, ಸಾರ್ವಜನಿಕ ರೆಸ್ಟೋರೆಂಟ್‌ಗಳಿಗೆ ಪ್ರವೇಶ, ಹೋಟೆಲ್‌ಗಳು, ತೊಟ್ಟಿಗಳು, ಸ್ನಾನಘಟ್ಟಗಳು, ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗಿದೆ” ಎಂದು ವಿವರಿಸಲಾಗಿದೆ.

ಈ ಮಳಿಗೆಗಳನ್ನು ಹಂಚುವ ಪ್ರಕ್ರಿಯೆಯು ವಾಣಿಜ್ಯ ಪ್ರಕ್ರಿಯೆಯಾಗಿದೆ. ಮಾರಾಟಗಾರರು ಬಿಡ್‌ಗಳನ್ನು ಸಲ್ಲಿಸುವ ಮೂಲಕ ನಡೆಯುತ್ತದೆ. ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂಪೂರ್ಣವಾಗಿ ಸಂವಿಧಾನದ ವಿಧಿ 15(2)ರ ಉಲ್ಲಂಘನೆಯಾಗುತ್ತದೆ.

“ಧರ್ಮ, ಜಾತಿ ಮತ್ತು ಮುಂತಾದವುಗಳ ಆಧಾರದ ಮೇಲೆ ಬಹಿಷ್ಕರಿಸುವುದು ಸಂವಿಧಾನ ವಿರೋಧಿ ನಡೆ ಎಂಬುದನ್ನು ಐಎಂಎ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ” ಎಂಬುದನ್ನು ತಜ್ಞರು ಗುರುತಿಸುತ್ತಾರೆ.

ಆದೇಶ ನಿಜ, ಆದರೆ ಬಿಜೆಪಿ ತಿರುಚಿದೆ: ಪ್ರಿಯಾಂಕ್ ಖರ್ಗೆ

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಯುವ ನಾಯಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, “ಸರ್ಕಾರ ಈ ಹಿಂದೆ ಒಂದು ಆದೇಶ ಹೊರಡಿಸಿರುವುದು ನಿಜ. ಆದರೆ ಅದನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ” ಎಂದರು.

“ದೇವಾಲಯದ ಪ್ರಾಂಗಣ ಅಂದರೆ ಪೂಜಾ ಸ್ಥಳದಲ್ಲಿ ವ್ಯಾಪಾರ ನಿಷಿದ್ಧ. ಇಂಥದ್ದೇ ನಿಯಮ ದರ್ಗಾದಲ್ಲಿಯೂ ಇದೆ. ಆದರೆ ದೇವಾಲಯ ಕಟ್ಟಡದಾಚೆ, ಸಾರ್ವಜನಿಕ ಬೀದಿಯಲ್ಲಿ, ದೇವಾಲಯ ಸಮೀಪ ವ್ಯಾಪಾರ ಮಾಡಬಾರದೆಂದು ಎಲ್ಲಿಯೂ ಹೇಳಿಲ್ಲ. ದೇವಾಲಯ ಪ್ರಾಂಗಣದೊಳಗೆ ವ್ಯಾಪಾರ ಮಾಡುವುದಾಗಿ ಯಾವ ಮುಸ್ಲಿಂ ವ್ಯಾಪಾರಿಯೂ ಬಂದಿಲ್ಲ. ಕಾನೂನನ್ನು ತಿರುಚಿ ಜನರ ದಿಕ್ಕು ತಪ್ಪಿಸಲಾಗಿದೆ” ಎಂದು ಹರಿಹಾಯ್ದರು.

“ಮತೀಯ ಸಂಘಟನೆಗಳು ಮುಸ್ಲಿಂ ಸಮುದಾಯಕ್ಕೆ ಬಹಿಷ್ಕಾರ ಹಾಕುತ್ತಿದ್ದರೂ ಸಿಎಂ ಮೌನವಾಗಿದ್ದಾರೆ. ಹಾಗಿದ್ದರೆ ಇವರಿಗೆ ಸಹಮತ ಇದೆಯಾ? ಇಲ್ಲಿಯವರೆಗೂ ಒಂದು ಮಾತನಾಡುತ್ತಿಲ್ಲ. ಸರಿ ಅಥವಾ ತಪ್ಪು- ಯಾವುದಾದರೂ ಒಂದು ಸಂಗತಿ ಹೇಳಬೇಕಲ್ಲ. ಅಡ್ಡಗೋಡೆ ಮೇಲೆ ದೀಪ ಇಡಬಾರದಲ್ಲವೇ?” ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ

“ಆರ್ಥಿಕ ವ್ಯವಸ್ಥೆ ದಿವಾಳಿಯಾಗಿದೆ. ದಿನಕ್ಕೆ ಎರಡು ಮೂರು ಸಲ ಇಂಧನ ಬೆಲೆ ಏರಿಕೆಯಾಗುತ್ತಿದೆ. ದಿನಸಿಗಳ ಬೆಲೆ ಹೆಚ್ಚುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇರುವ ಮಾರ್ಗ ಕೋಮುದ್ವೇಷ. ಬಿಜೆಪಿ ಶಾಸಕರ, ಸಂಸದರ ಮಕ್ಕಳ್ಯಾರೂ ಕೇಸರಿ ಶಾಲು ಹಾಕಿಕೊಂಡು ಬಂದು ಗಲಭೆ ಮಾಡಲ್ಲ. ಇವರು ಮಕ್ಕಳೆಲ್ಲ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಬಡವರ ಮಕ್ಕಳು ಮಾತ್ರ ಧರ್ಮರಕ್ಷಣೆ, ಹಿಂದೂ ರಕ್ಷಣೆ ಮಾಡಬೇಕಾ?” ಎಂದು ಪ್ರಶ್ನಿಸುತ್ತಾರೆ ಪ್ರಿಯಾಂಕ್.

“ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಒಂದು ರೀತಿಯಲ್ಲಿ ಅಸ್ಪೃಶ್ಯತೆ
ಆಚರಣೆಯಲ್ಲವೇ? ಇಂದು ಮುಸ್ಲಿಮರ ಅಂಗಡಿಗೆ ಹೋಗಬೇಡಿ ಅಂತೀರಾ. ನಾಳೆ ದಲಿತರ ಅಂಗಡಿಗಳಿಗೆ ಹೋಗಬೇಡಿ ಎಂದರೆ ಆಶ್ಚರ್ಯವಿಲ್ಲ. ಒಂದು ಮಗು ದೇವಸ್ಥಾನದ ಒಳಗೆ ಹೋಗಿದ್ದಕ್ಕೆ ದಂಡ ಹಾಕಿದ್ದು ಇದೇ ಸರ್ಕಾರದ ಅವಧಿಯಲ್ಲಿ ಅಲ್ಲವೇ?” ಎಂದು ಪ್ರಶ್ನಿಸುವ ಪ್ರಿಯಾಂಕ್, “ಮುಂದಿನ ಚುನಾವಣೆವರೆಗೂ ಸರ್ಕಾರ ಇದೇ ರೀತಿಯಲ್ಲಿ ಮುಂದುವರಿಯಲಿದೆ. ಹೀಗಾಗಿ ನಮ್ಮ ಯುವಕರು ಎಚ್ಚೆತ್ತುಕೊಂಡು ಕರ್ನಾಟಕ ರಾಜ್ಯ ಉತ್ತರಪ್ರದೇಶದಂತಲ್ಲ ಎಂದು ಧ್ವನಿ ಎತ್ತಬೇಕಿದೆ” ಎಂದರು.

ನರಮೇಧದ ಹಾದಿಯ ಕುರಿತು ಎಚ್ಚರವಿರಲಿ: ಅರವಿಂದ್ ನಾರಾಯಣ್

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಕರ್ನಾಟಕ (ಪಿಯುಸಿಎಲ್) ಅಧ್ಯಕ್ಷರಾದ ಅರವಿಂದ ನಾರಾಯಣ್ ಸರ್ಕಾರದ ನಡೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ನಾಜಿ ಹೆಜ್ಜೆಯ ಜಾಡಿನಲ್ಲಿ ಕರ್ನಾಟಕವೂ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

’ನ್ಯಾಯಪಥ’ದೊಂದಿಗೆ ಮಾತನಾಡಿದ ಅವರು, “ಹಿಂದೂಯೇತರರ ದೀರ್ಘಕಾಲದ ಭೋಗ್ಯವನ್ನು ನಿಷೇಧಿಸಲಾಗಿದೆ. ಜಾತ್ರೆಯಲ್ಲಿ ವ್ಯಾಪಾರ ಮಾಡುವವರು ಭೋಗ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಇದನ್ನೆಲ್ಲ ನೋಡಿದರೆ ದುರುದ್ದೇಶದಿಂದ ಕಾನೂನನ್ನು ತಪ್ಪಾಗಿ ವಿಶ್ಲೇಷಿಸಲಾಗುತ್ತಿದೆ” ಎಂದರು.

“ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಸಂವಿಧಾನ ರಕ್ಷಣೆ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಹೇಗೆ ಇವರು ಒಂದು ಸಮುದಾಯವನ್ನು ವಂಚಿಸಲು ಸಾಧ್ಯ? ರೂಲ್ ಪ್ರಕಾರ ಮಾಡುತ್ತೇವೆ ಎನ್ನುತ್ತಾರೆ. ಸಂವಿಧಾನ ಬಗ್ಗೆ ಮಾತನಾಡಿ ಎಂದರೆ ರೂಲ್ ಬಗ್ಗೆ ಮತನಾಡುತ್ತಾರೆ” ಎಂದು ಟೀಕಿಸಿದರು.

ಅರವಿಂದ್ ನಾರಾಯಣ್

“’ಶಾಪ್’ (ಅಂಗಡಿ) ಎಂಬ ಪದವನ್ನು ಸಂವಿಧಾನಲ್ಲಿ ಬಳಸಲಾಗಿದೆ. ಶಾಪ್ ಎಂಬುದನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶಾಲ ಅರ್ಥದಲ್ಲಿ ಚರ್ಚಿಸಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ಇಂಥದ್ದೇ ಒಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಹಿಂದೂಯೇತರರಿಗೆ ವ್ಯಾಪಾರ ನಿಷೇಧ ಮಾಡುವುದನ್ನು ತಡೆಹಿಡಿದಿದೆ” ಎಂದು ವಿವರಿಸಿದರು.

“ಸರ್ಕಾರ ಸಂವಿಧಾನದ ಪ್ರಕಾರ ಕೆಲಸ ಮಾಡಬೇಕಾಗಿದೆ. ಬಜರಂಗದಳ, ಶ್ರೀರಾಮ ಸೇನೆ ಯಾವುದೇ ಹೇಳಿಕೆ ಕೊಟ್ಟರೂ ಸರ್ಕಾರ ಸುಮ್ಮನಿರುವುದನ್ನು ನೋಡಿದರೆ ಹಿಟ್ಲರ್ ಆಡಳಿತ ನೆನಪಾಗುತ್ತದೆ. ಹಿಟ್ಲರ್ ಆಡಳಿತದಲ್ಲಿ ಕಾನೂನು ಬಾಹಿರ ಕ್ರಮಗಳನ್ನು ಸಮ್ಮತಿಸಲಾಯಿತು. ನಾಜಿ ಜರ್ಮನಿಯಲ್ಲಿ ಯಹೂದಿಗಳ ವಿರುದ್ಧ ಮೊದಲು ದ್ವೇಷದ ಭಾಷಣಗಳನ್ನು ಆರಂಭಿಸಲಾಯಿತು. ನಂತರ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಲಾಯಿತು. ಯಹೂದಿಗಳ ಅಂಗಡಿಗಳಿಗೆ ಹೋಗಬಾರದು ಎಂದು ಕರೆ ನೀಡಲಾಯಿತು. ನಂತರ ನರಮೇಧ (ಜೆನೊಸೈಡ್) ನಡೆಯಿತು. ನೀವು ನರಮೇಧದತ್ತ ಹೋಗುತ್ತಿದ್ದೀರಾ ಎಂದು ಸರ್ಕಾರವನ್ನು ಕೇಳಬೇಕಿದೆ. ಇತಿಹಾಸದಿಂದ ಪಾಠ ಕಲಿತು ಆರಂಭದಲ್ಲೇ ನಾವು ಎಚ್ಚರಿಕೆ ವಹಿಸಬೇಕಿದೆ” ಎಂದು ತಿಳಿಸಿದರು.

ಹೈಕೋರ್ಟ್ ವಕೀಲರಾದ ರಾಜಲಕ್ಷ್ಮಿ ಅಂಕಲಗಿಯವರು ಮಾತನಾಡಿ, “ಯಾವುದೇ ಸಮುದಾಯದ ವ್ಯಾಪಾರವನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಉದ್ಯೋಗವನ್ನು ಯಾರು ಎಲ್ಲಿ ಬೇಕಾದರೂ ಮಾಡಬಹುದು. ಕೋಮು ಧ್ರುವೀಕರಣಕ್ಕಾಗಿ ಇಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ” ಎಂದು ವಿಷಾದಿಸಿದರು.

ಇದು ಜನಾಂಗೀಯವಾದವೇ ಹೊರತು ಪ್ರಜಾಪ್ರಭುತ್ವವಲ್ಲ: ಜಸ್ಟೀಸ್ ದಾಸ್

“ಯಾವ ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇರುವುದಿಲ್ಲವೋ ಅಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಯಾವ ದೇಶದಲ್ಲಿ ಒಂದು ವರ್ಗದ ಜನ, ಒಂದು ಧರ್ಮದ, ಸಮುದಾಯದ ಜನ, ಭಯದಿಂದ, ಅಭದ್ರತೆಯಿಂದ ಮತ್ತು ಹಿಂಸೆಯಿಂದ ಉಸಿರುಗಟ್ಟುವ ವಾತಾವರಣದಲ್ಲಿರುತ್ತಾರೋ ಅಲ್ಲಿ ಜನಾಂಗೀಯವಾದವಿದೆ ಎನ್ನದೆ ಇನ್ನೇನು ಅನ್ನಬೇಕು” ಎಂದು ಪ್ರಶ್ನಿಸುತ್ತಾರೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್.

ಎಚ್.ಎನ್.ನಾಗಮೋಹನ ದಾಸ್

“ಇಂದಿನ ಬೆಳವಣಿಗೆಗಳು ನಮ್ಮ ಸಂವಿಧಾನಕ್ಕೆ, ಭಾರತೀಯ ಸಂಸ್ಕೃತಿಗೆ ಮತ್ತು ಬಹುತ್ವಕ್ಕೆ ವಿರುದ್ಧವಿವೆ. ಇದನ್ನು ಹಿಮ್ಮೆಟ್ಟಿಸಲೇಬೇಕು. ಭಾರತ ದೇಶಕ್ಕೆ ಕೆಲವರು ಆಹಾರಕ್ಕಾಗಿ, ಕೃಷಿಗಾಗಿ, ವ್ಯಾಪಾರಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ, ಪ್ರವಾಸಿಗರಾಗಿ, ದಾಳಿಕೋರರಾಗಿ ಬಂದರು. ಹೀಗೆ ಬಂದಂತಹ ಜನ ಬೇರೆಬೇರೆ ವರ್ಣಕ್ಕೆ, ಬೇರೆಬೇರೆ ದೇಶಗಳಿಗೆ ಸೇರಿದ್ದರು. ತಮ್ಮ ಕೆಲಸ ಮುಗಿದ ಮೇಲೆ ಬಹುಪಾಲು ಜನ ವಾಪಸ್ ಹೋಗಲಿಲ್ಲ. ಇಲ್ಲೇ ಉಳಿದು ಬೆರೆತುಹೋದರು. ಈಗ ಇಡೀ ದೇಶದಲ್ಲಿ ಹುಡುಕಿದರೆ ಪ್ಯೂರ್‌ರೇಸ್ ಎಂಬುದು ಸಿಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಪಾರ್ಸಿ ಎಂದು ಹೊಡೆದಾಡುತ್ತಿದ್ದಾರೆ” ಎನ್ನುತ್ತಾರೆ ಜಸ್ಟೀಸ್ ದಾಸ್.

ಮುಸ್ಲಿಮರ ವ್ಯಾಪಾರಕ್ಕೆ ತಡೆಯೊಡ್ಡುತ್ತಿರುವವರಿಗೆ ಪ್ರತಿಕ್ರಿಯೆ ನೀಡಿದ ಅವರು, “ಊದುಬತ್ತಿ ಹೊಸೆಯುವವರಲ್ಲಿ ಇರುವ ಶೇ.90ರಷ್ಟು ಜನರು ಮುಸ್ಲಿಮರಲ್ಲವೇ! ಅರಬ್ಬರಿಂದ ಪೆಟ್ರೋಲ್ ತರಿಸಿಕೊಳ್ಳುವುದನ್ನು ನಿಲ್ಲಿಸುತ್ತೀರಾ? ಅರಬ್ ದೇಶದಲ್ಲಿರುವ ಹಿಂದೂಗಳನ್ನು ವಾಪಸ್ ಕರೆಸಿಕೊಳ್ಳುತ್ತೀರಾ? ಹಿಂದೂಸ್ಥಾನಿ ಸಂಗೀತ ಎಲ್ಲಿಂದ ಬಂತು? ನಾವು ತಿನ್ನುವ ಬಿರಿಯಾನಿ ಎಲ್ಲಿಂದ ಬಂತು? ಚಹಾ, ಕಾಫಿ ಎಲ್ಲಿಂದ ಬಂದವು, ನಾವು ಹಾಕುವ ಜುಬ್ಬಾ ಪೈಜಾಮಾ ಎಲ್ಲಿಂದ ಬಂದವು? ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ದಿನ ಭಾಷಣ ಮಾಡುವುದಿಲ್ಲ ಎಂದು ಮೋದಿ ಹೇಳಲು ಸಾಧ್ಯವೇ? ಇಂದು ನಡೆಯುತ್ತಿರುವ ಘಟನೆಗಳು ಕೋಮು ಶಕ್ತಿಗಳಿಗೆ ತಾತ್ಕಾಲಿಕ ರಾಜಕೀಯ ಲಾಭ ತರಬಹುದಷ್ಟೇ. ಆದರೆ ದೇಶಕ್ಕೆ ಯಾವುದೇ ಪ್ರಯೋಜನಗದು” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...