Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ಯಡೂರು ಮಹಾಬಲ ಅವರ ಜಯಪ್ರಕಾಶ ನಾರಯಣ ಬಾಲ್ಯದಿಂದ ಸಂಪೂರ್ಣ ಕ್ರಾಂತಿಯವರೆಗೆ - ಒಂದು...

ಪುಸ್ತಕ ಪರಿಚಯ: ಯಡೂರು ಮಹಾಬಲ ಅವರ ಜಯಪ್ರಕಾಶ ನಾರಯಣ ಬಾಲ್ಯದಿಂದ ಸಂಪೂರ್ಣ ಕ್ರಾಂತಿಯವರೆಗೆ – ಒಂದು ಮೌಲ್ಯಮಾಪನ

- Advertisement -
- Advertisement -

ಜಯಪ್ರಕಾಶ ನಾರಾಯಣ (ಜೆ.ಪಿ) ಅವರ ಹೆಸರು ಕೇಳಿದಾಕ್ಷಣ ನಮಗೆ ನೆನಪಾಗುವುದು 1970ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಜನರ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದು, ಮತ್ತು ಜೆ.ಪಿಯವರ ನೇತೃತ್ವದಲ್ಲಿ ಅದಕ್ಕೆ ಪ್ರತಿರೋಧ ಉಂಟಾಗಿ 1977ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಸೋಲು ಕಂಡಿದ್ದು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲುಪಾಲಾದ ಜೆ.ಪಿ. ಬಿಡುಗಡೆಗೊಂಡ ಮೇಲೆ ಎಲ್ಲ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವುದು ಸಾಧ್ಯ ಅನ್ನುವುದನ್ನು ತೋರಿಸಿದರು. ಆ ಸಂದರ್ಭದ ಅವರ ’ಸಂಪೂರ್ಣ ಕ್ರಾಂತಿ’ಯ ಪರಿಕಲ್ಪನೆ ಹಾಗೂ ಜೈಲು ದಿನಚರಿಗಳಿಂದಾಗಿ ದೇಶದಲ್ಲಿ ಮನೆಮಾತಾದ ಜೆ.ಪಿ. ಭಾರತದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದರು. ಹೀಗಾಗಿ ಆಧುನಿಕ ಭಾರತದ ಇತಿಹಾಸದಲ್ಲಿ ಜೆ.ಪಿ.ಯವರು ಭದ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಆದರೆ ಜೆ.ಪಿ.ಯವರಿಗೆ ಸಂಬಂಧಪಟ್ಟಂತೆ ಇಷ್ಟು ಮಾತ್ರ ಇತಿಹಾಸವಲ್ಲ. ಇಂದಿರಾ ಗಾಂಧಿಯವರ ನಿರಂಕುಶಾಧಿಕಾರವನ್ನು ಎದುರಿಸುವುದಕ್ಕೊ ಮೊದಲೇ, ಅಂದರೆ 1947ರವರೆಗೂ ಈ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿದ್ದರು. ಆನಂತರವೂ ಅವರು ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರ ಟೀಕಾಕಾರರಾಗಿದ್ದರು. ಬಿಹಾರದ ಶ್ರೀಮಂತವೇ ಎನ್ನಬಹುದಾದ ಕುಟುಂಬದಲ್ಲಿ ಹುಟ್ಟಿದ ಜೆ.ಪಿ. ಒಳ್ಳೆಯ ಶಿಕ್ಷಣವನ್ನು ಪಡೆದರು; ಆಧುನಿಕ ಚಿಂತನೆಗೆ ತಮ್ಮನ್ನು ತಾವು ತೆರೆದುಕೊಂಡರು. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಗತಿಪರ ಮನೋಧರ್ಮವನ್ನು ಮೈಗೂಡಿಸಿಕೊಂಡು ಸಮಾಜವಾದ ಮಾರ್ಕ್ಸ್‌ವಾದಗಳ ಕಡೆ ಆಕರ್ಷಿತರಾದರು. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಅದರೊಳಗಿನ ಸಮಾಜವಾದಿ ಗುಂಪಿನ ಮುಖ್ಯ ಸದಸ್ಯರೂ ಅಗಿದ್ದರು.

ಇಂದಿನ ಪೀಳಿಗೆಯವರಿಗೆ ಜೆ.ಪಿ. ಎಂದು ಮಾತ್ರ ತಿಳಿದಿರುವ ಜಯಪ್ರಕಾಶ ನಾರಾಯಣದ ಬೌದ್ಧಿಕ ಪಯಣದ ವಿವರಗಳು ಅಪರಿಚಿತವೆಂದೇ ಹೇಳಬೇಕು. ಯಡೂರ ಮಹಾಬಲ ಅವರು ಈ ಅವಶ್ಯಕತೆಯನ್ನು ಪೂರೈಸಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಮಹಾಬಲರವರು ಈಗಾಗಲೇ ಲೋಹಿಯಾರವರ ವಿಚಾರಗಳ ವಿಮರ್ಶೆಯ ಮೂಲಕ ಲೋಹಿಯಾವಾದಿಗಳ ಬಗ್ಗೆ, ಲೋಹಿಯಾವಾದದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಜೆ.ಪಿಯವರ ಜೀವನ ಚರಿತ್ರೆಯಾಗಿರುವ ಈ ಕೃತಿಯೂ ಸಹ ಆ ಪ್ರಶ್ನೆಗಳ ಮುಂದುವರಿಕೆ ಎನ್ನಬಹುದು. ಅಲ್ಲದೆ ಈಶಾನ್ಯ ರಾಜ್ಯಗಳ ಹಿನ್ನೆಲೆಯಲ್ಲಿ ಭಾರತ-ಚೀನಾ ದೇಶಗಳ ಸಂಬಂಧಗಳ ಕುರಿತಾದ ಹಲವು ಗ್ರಂಥಗಳೂ ಅವರ ಲೇಖನಿಯಿಂದ ಹೊರಬಂದಿದೆ. ’ನಿಗೂಢ ಟಿಬೆಟ್, ’ಯುದ್ಧೋತ್ತರ ಕಾಂಡ’, ’ಅಕ್ಸಾಯ್ ಚಿನ್’ ಮುಂತಾದ ಕೃತಿಗಳೇ ಅಲ್ಲದೆ ’ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’ ಎಂಬ ಸ್ವಾತಂತ್ರ್ಯ ಹೋರಾಟದ ಕುರಿತಾದ ಪುಸ್ತಕವನ್ನೂ ರಚಿಸಿ ಮಹಾಬಲರು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಯಾವುದೇ ವಿಷಯದ ಕುರಿತು ಬರೆಯಲಿ, ಮಹಾಬಲ ಅವರ ಆ ಪ್ರಯತ್ನದಲ್ಲಿ ಸಾಕಷ್ಟು ಓದು, ಸಂಶೋಧನೆಗಳು ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಸಂಶೋಧನೆಯ ಫಲವಾಗಿ ಅವರು ಸಾಧಾರಣಕ್ಕಿಂತ ಭಿನ್ನವಾದ ತೀರ್ಮಾನಗಳಿಗೆ ಬರುತ್ತಾರೆ, ಆ ಮೂಲಕ ಓದುಗರಲ್ಲಿ ಹೊಸ ಪ್ರಶ್ನೆಗಳನ್ನು ಮೂಡಿಸುತ್ತಾರೆ.

ಜೆ.ಪಿಯವರ ಬಗೆಗಿನ ಈ ಕೃತಿಯೂ ಸಹ ಮಹಾಬಲರ ಸಂಶೋಧನೆಯ ಮತ್ತೊಂದು ಫಲ. ಜೆ.ಪಿ.ಯವರ ಬಾಲ್ಯ, ವಿದ್ಯಾಭ್ಯಾಸ, ಕೌಟುಂಬಿಕ ಜೀವನ, ರಾಜಕಾರಣ ಮುಂತಾದವುಗಳನ್ನು ಹಲವು ಆಕರಗಳ ಅಧ್ಯಯನದ ಮೂಲಕ ಪ್ರಸ್ತುತಪಡಿಸಲಾಗಿದೆ. ಅಲ್ಲದೆ, ಆ ಜೀವನದ ವಿವರಗಳನ್ನು ನೀಡುವಾಗಲೇ ಆಯಾ ಸಂದರ್ಭಗಳಲ್ಲಿನ ಜೆ.ಪಿ.ಯವರ ನಿಲುವುಗಳ ಮೌಲ್ಯಮಾಪನವನ್ನು ಮಹಾಬಲರು ನಡೆಸಿದ್ದಾರೆ. ಹೀಗೆ ಮಾಡುವಲ್ಲಿ ಇವರು ಯಾವ ಮುಲಾಜನ್ನು ತೋರುವುದಿಲ್ಲ; ಸರಿಯಾದ ತೀರ್ಮಾನಗಳನ್ನು ಹೊಗಳುವಂತೆಯೇ ವೈರುಧ್ಯಗಳಿಂದ ಕೂಡಿದ, ಅಥವಾ ಆ ಸಂದರ್ಭಕ್ಕೆ ಸರಿಹೊಂದದ ತೀರ್ಮಾನವನ್ನು ಅಷ್ಟೇ ಕಟುವಾಗಿ ಟೀಕಿಸುತ್ತಾರೆ.

ಕಾಂಗ್ರೆಸ್ ಪಕ್ಷದ ಸಮಾಜವಾದಿ ಗುಂಪಿನ ಸಕ್ರಿಯ ಸದಸ್ಯರಾಗಿದ್ದಾಗ ಜೆ.ಪಿ.ಯವರ ನಿಲುವುಗಳಿಗೂ, ನಂತರದ ಘಟ್ಟದ ಅವರ ನಿಲುವುಗಳಿಗೂ ಇರುವ ವೈರುಧ್ಯವನ್ನು ಎತ್ತಿತೋರಿಸುತ್ತಾರೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಆರ್.ಎಸ್.ಎಸ್. ಕುರಿತ ಅವರ ವಿಮರ್ಶೆಗಳಿಗೂ ತುರ್ತು ಪರಿಸ್ಥಿತಿಯ ನಂತರ ಅದೇ ಸಂಘಟನೆಯ ಬಗ್ಗೆ ಬದಲಾದ ಅಭಿಪ್ರಾಯಗಳಿಗೂ ಒಂದಕ್ಕೊಂದು ತಾಳೆಯಾಗುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸುತ್ತಾರೆ.

ಮಾತ್ರವಲ್ಲದೆ ಜೆ.ಪಿ.ಯವರ ಸಮಕಾಲೀನರಾದ ಹಲವಾರು ರಾಜಕಾರಣಿಗಳು, ಆ ಕಾಲದ ಪ್ರಮುಖ ಬೆಳವಣಿಗೆಗಳು ಸಹ ಮಹಾಬಲರ ಪರಿಶೀಲನೆಯ ವಸ್ತುಗಳಾಗಿವೆ. ಸಾಮಾಜಿಕ ಬದಲಾವಣೆಗಾಗಿ ನಿರಂತರ ತುಡಿಯುತ್ತಿದ್ದ ಮನಸ್ಸುಳ್ಳ ಜೆ.ಪಿ.ಯವರ ನಿಲುವುಗಳು ಅವರ ಇಂಥ ತುಡಿತದ ಕಾರಣದಿಂದಲೇ ಕಾಲಕಾಲಕ್ಕೆ ಪರಸ್ಪರ ವಿರುದ್ಧವೆನಿಸುವ ರೀತಿಯಲ್ಲಿ ಬದಲಾಗುತ್ತಿದ್ದವೇನೋ ಎನ್ನುವ ಭಾವನೆಯನ್ನೂ ಮಹಾಬಲರ ಈ ಕೃತಿ ಹುಟ್ಟಿಸುತ್ತದೆ. ’ಸಂಪೂರ್ಣ ಕ್ರಾಂತಿ’ಯನ್ನು ಸದರಿ ಪುಸ್ತಕದ ಲೇಖಕರು ’ಸಂಪೂರ್ಣ ಭ್ರಾಂತಿ’ ಎಂತಲೂ ಕರೆಯುತ್ತಾರೆ ಮತ್ತು ಅದಕ್ಕೆ ಕಾರಣಗಳನ್ನು ಒದಗಿಸುತ್ತಾರೆ.

ಮಹಾಬಲರ ತೀರ್ಮಾನಗಳನ್ನು, ಮೌಲ್ಯಮಾಪನವನ್ನು ಓದುಗರು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಜೆ.ಪಿ.ಯವರಂತಹ ಪ್ರಮುಖ ವ್ಯಕ್ತಿಯ ಜೀವನದ ವಿವರಗಳನ್ನು ಅದರ ಎಲ್ಲ ಸಂಕೀರ್ಣತೆಗಳೊಂದಿಗೆ ತಿಳಿಯಲು ಈ ಕೃತಿ ಸಹಾಯಕವಾಗುತ್ತದೆ. ಜೆ.ಪಿ.ಯವರ ಬಗೆಗಿನ ಓದುಗರ ಮೌಲ್ಯಮಾಪನವನ್ನೇ ಮೌಲ್ಯಮಾಪನ ಮಾಡುವಂತೆ ಈ ಪುಸ್ತಕ ಪ್ರೇರೇಪಿಸುತ್ತದೆ; ಈ ಕಾರಣಗಳಿಗಾಗಿ ಇದೊಂದು ಓದಬೇಕಾದ ಪುಸ್ತಕ.

ಮುಗಿಸುವ ಮುನ್ನ ಒಂದು ಮಾತು; ಮಹಾಬಲರು ಕೈಗೆತ್ತಿಕೊಂಡಿರುವ ವಿಷಯಗಳು ಮೌಲಿಕವಾದವು. ಅವುಗಳು ಎಲ್ಲರನ್ನೂ ಸುಲಭವಾಗಿ ತಟ್ಟಬೇಕೆಂದರೆ ಮಹಾಬಲರ ಭಾಷೆಯ ಬಳಕೆ ಇನ್ನಷ್ಟ ಉತ್ತಮಗೊಳ್ಳಬೇಕಿದೆ; ಆಗ ಈ ಪುಸ್ತಕವು ಸೇರಿದಂತೆ ಅವರ ಅನೇಕ ಕೃತಿಗಳನ್ನು ಓದುಗರು ಸುಲಭವಾಗಿ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅವರು ತಮ್ಮ ವಿಷಯಮಂಡನೆ ಮತ್ತು ಬರವಣಿಗೆಯ ಶೈಲಿಯಲ್ಲಿ ಇನ್ನಷ್ಟು ಪ್ರಯೋಗಗಳನ್ನು ನಡೆಸಿ ಉತ್ತಮಪಡಿಸಿಕೊಂಡರೆ ಅವರ ಕೃತಿಗಳ ಮೌಲ್ಯ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಪ್ರೊ. ನಗರಗೆರೆ ರಮೇಶ್

ಪ್ರೊ. ನಗರಗೆರೆ ರಮೇಶ್
ನಗರಗೆರೆ ರಮೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ನಗರಗೆರೆಯವರು. ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು ನಂತರ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಮಾನವ ಹಕ್ಕು ಸಂಘಟನೆಯಾದ ಪ್ರಜಾತಾಂತ್ರಿಕ ಜನರ ವೇದಿಕೆ ಮೊದಲಾದವುಗಳ ಭಾಗವಾಗಿದ್ದಾರೆ. ಎಲ್ಲ ಜನಪರ ಚಳವಳಿಗಳ ದೀರ್ಘಕಾಲದ ಒಡನಾಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....