Homeಅಂಕಣಗಳುಸುಪ್ತಚೇತನವೇ ಮೂಲಶಕ್ತಿ ಎನ್ನುವ ಜೋಸೆಫ್ ಮರ್ಫಿ

ಸುಪ್ತಚೇತನವೇ ಮೂಲಶಕ್ತಿ ಎನ್ನುವ ಜೋಸೆಫ್ ಮರ್ಫಿ

- Advertisement -
- Advertisement -

ಜೋಸೆಫ್ ಮರ್ಫಿ ಎಂಬ ಅಮೆರಿಕದ ಮನಶಾಸ್ತ್ರಜ್ಞನ ಪುಸ್ತಕವು ನಮ್ಮ ಸುಪ್ತಚೇತನದ ಶಕ್ತಿ ಎಂತಹುದು ಎಂದು ತನ್ನ ಪುಸ್ತಕ ’ದ ಪವರ್ ಆಫ್ ಸಬ್‌ಕಾನ್ಷಸ್ ಮೈಂಡ್‌’ನಲ್ಲಿ ವಿವರಿಸುತ್ತಾರೆ. ಸಿಗ್ಮಂಡ್ ಫ್ರಾಯ್ಡ್‌ರ ಮನಸ್ಸಿನ ಮೂಲ ವಿಭಾಗಗಳನ್ನು ಒಪ್ಪುವಂತೆ ಜಾಗೃತಿಚೇತನ ಮತ್ತು ಸುಪ್ತಚೇತನದ ಬಗ್ಗೆ ಅವರು ವಿವರಣೆಗಳನ್ನು ಕೊಡುತ್ತಾರೆ. ನಾವು ಗಮನವಿಟ್ಟು ಮತ್ತು ಉದ್ದೇಶಪೂರ್ವಕವಾಗಿ ಆಲೋಚನೆ ಮತ್ತು ಚಿಂತನೆಗಳನ್ನು ನಡೆಸುವ ಮನಸ್ಸಿನ ಪದರವು ಜಾಗೃತಿ ಚೇತನವಾದರೆ, ಸುಪ್ತ ಚೇತನವು ಜಾಗೃತಿ ಚೇತನದ ನಂತರದ ಪದರವಾಗಿದ್ದು, ಅದರ ಚಟುವಟಿಕೆಗಳು ಬಾಹ್ಯ ಗ್ರಹಿಕೆಗೆ ಸಿಗುವುದಿಲ್ಲ ಮತ್ತು ನಮ್ಮ ಅಂಕೆಗೆ ನಿಲುಕುವುದಿಲ್ಲ. ಆದರೆ, ಅದರ ಕ್ರಿಯಾಶೀಲತೆ ಮಾತ್ರ ನಮ್ಮ ಜಾಗೃತಿ ಚೇತನದ ಮೇಲೂ ಮತ್ತು ಭೌತಿಕ ನಡಾವಳಿಗಳ ಮೇಲೂ ಪ್ರಭಾವ ಬೀರುತ್ತಿರುತ್ತದೆ.

ನಾನೀಗ ಪತ್ರಿಕೆಯನ್ನು ಓದುತ್ತಿದ್ದೇನೆ. ಇಂಥಾ ಲೇಖನವು ಇದು. ಇದು ಚೆನ್ನಾಗಿದೆ, ಅಥವಾ ಚೆನ್ನಾಗಿಲ್ಲ ಇತ್ಯಾದಿ ತಕ್ಷಣದ ಕ್ರಿಯೆ-ಪ್ರತಿಕ್ರಿಯೆಗಳನ್ನು ನಡೆಸುತಲಿದ್ದು ನಮ್ಮ ಗೋಚರದ ಪರಿಮಿತಿಯಲ್ಲಿಯೇ ಜಾಗೃತಿ ಚೇತನವು ಇರುತ್ತದೆ. ಆದರೆ, ಇಂದು ಯಾವುದೋ ವಿಷಯಕ್ಕೆ ಕೋಪಿಸಿಕೊಂಡಿದ್ದೇನೆ, ಯಾರೊಂದಿಗೋ ವಿರಸ ಹೊಂದಿದ್ದೇನೆ. ಅಥವಾ ಯಾವುದೋ ಆಸೆಯನ್ನು ಪಟ್ಟಿದ್ದೇನೆ. ಆದರೆ ಅದು ನೆರವೇರದೇ ನಿರಾಸೆಯಾಗಿದೆ. ಇತ್ಯಾದಿ ಯಾವುದೋ ಭಾವನಾತ್ಮಕವಾದ ಮನಸ್ಥಿತಿ ಉಂಟಾಗಿದೆ. ಇಂದಿನ ಭೌತಿಕ ಘಟನೆಯನ್ನು ನಾನು ಮರೆತುಹೋದರೂ ಭಾವನಾತ್ಮಕವಾಗಿರುವ ಅದರ ತಲ್ಲಣ ಮತ್ತು ತುಮುಲಗಳು ಮರೆತುಹೋಗಿರದೇ ಸುಪ್ತಚೇತನದಲ್ಲಿ ಅಡಕವಾಗಿರುತ್ತದೆ. ಯಾವಾಗಾದರೊಮ್ಮೆ ಜಾಗೃತಿಚೇತನವು ವಿಶ್ರಾಂತವಾಗಿದ್ದಾಗ ಅಥವಾ ದುರ್ಬಲವಾದಾಗ ಹುದುಗಿರುವ ಈ ಭಾವುಕತೆಯು ಅಭಿವ್ಯಕ್ತವಾಗುತ್ತದೆ. ಅದು ಕೆಲವೊಮ್ಮೆ ಕನಸುಗಳಾಗಿಯೂ ಕೂಡ ವ್ಯಕ್ತವಾಗಬಹುದು. ಕೆಲವೊಮ್ಮೆ ನಡವಳಿಕೆಗಳಲ್ಲಿ ವ್ಯಕ್ತವಾಗಬಹುದು. ಮತ್ತೂ ಗಂಭೀರವಾದ ವಿಷಯವೆಂದರೆ, ಅದು ನಮಗೇ ಗೊತ್ತಿಲ್ಲದಂತೆ ನಮ್ಮ ವ್ಯಕ್ತಿತ್ವದ ಭಾಗವಾಗಿ ನಮ್ಮ ನಡವಳಿಕೆಗಳನ್ನು ರೂಪಿಸಿದ್ದಿರಬಹುದು. ಏನೇ ಆಗಲಿ, ಗುಪ್ತವಾಹಿನಿಯಾಗಿ ಹರಿಯುವ ಭಾವತರಂಗಗಳು ಸುಪ್ತಚೇತನದಿಂದ ಎಂಬುದು ನಿರ್ವಿವಾದ.

PC : Amazon.ca (’ದ ಪವರ್ ಆಫ್ ಸಬ್‌ಕಾನ್ಷಸ್ ಮೈಂಡ್)

ಇಷ್ಟೆಲ್ಲಾ ವಿಷಯಗಳನ್ನು ಜೋಸೆಫ್ ಮರ್ಫಿ ಒಪ್ಪುತ್ತಾರೆ ಮತ್ತು ಬೇರೊಂದು ರೀತಿಯಲ್ಲಿ ಪ್ರತಿಪಾದಿಸುತ್ತಾರೆ. ನಮ್ಮ ಅತಿಸುಪ್ತಚೇತನವೇ ನಮ್ಮ ಮೂಲಶಕ್ತಿ. ನಮ್ಮಲ್ಲಿ ಶಕ್ತಿಯನ್ನು ಉಂಟುಮಾಡಲು ಮತ್ತು ಹೊರಗಿನ ಶಕ್ತಿಯನ್ನು ಆಕರ್ಷಿಸಲು ಈ ಮೂಲಶಕ್ತಿಯನ್ನು ನಾವು ಸಿದ್ಧಪಡಿಸಬೇಕೆಂದು, ಹದ ಮಾಡಬೇಕೆಂದು ಹೇಳುತ್ತಾರೆ. ಅವರ ಪ್ರಕಾರ, ದ ಸಬ್‌ಕಾನ್ಷಸ್ ಮೈಂಡ್ ಬಹಳ ಶಕ್ತಿಶಾಲಿ. ಆದರೆ ಅದಕ್ಕೆ ವಿವೇಚನೆಯಿಲ್ಲ. ಅದಕ್ಕೆ ಉದ್ದೇಶಗಳಾಗಲಿ, ಲೆಕ್ಕಾಚಾರ-ತರ್ಕಗಳಾಗಲಿ ಇಲ್ಲ. ಬದಲಿಗೆ ಅದು ಬರಿಯ ಫಲವತ್ತಾದ, ಹದವಾದ ಭೂಮಿಯಂತೆ. ಅದರಲ್ಲಿ ಯಾವುದೇ ಬಗೆಯ ಬೀಜಗಳನ್ನು ನೀವು ಬಿತ್ತಿದ್ದರೂ ಅದರದೇ ಫಸಲನ್ನು ತೆಗೆಯುತ್ತೀರಿ.

ಇರಲಿ, ಬೀಜವನ್ನು ಬಿತ್ತುವವರಾದರೂ ಯಾರು? ಜಾಗೃತ ಚೇತನ. ಮನಸ್ಸಿನ ಈ ಪದರವು ಜಾಗ್ರತೆಯಿಂದಲೋ ಅಥವಾ ಅಜಾಗರೂಕತೆಯಿಂದಲೋ ಬಿತ್ತುವ ಬೀಜಗಳು, ಒಳಗಿನ ಶಕ್ತಿ ಭೂಮಿಯಲ್ಲಿ ಬಿತ್ತಲ್ಪಟ್ಟು ಅದು ಸೊಗಸಾಗಿ ಬೆಳೆಯುತ್ತದೆ. ಫಲವನ್ನು ಕೊಡುತ್ತದೆ. ಬಿತ್ತಿದಂತೆ ಬೆಳೆ. ಇಷ್ಟೇ ವಿಷಯ. ನೀವು ಯಾರನ್ನೂ ದೂರುವಂತಿಲ್ಲ. ಅವರಿಂದ ಹೀಗಾಯ್ತು, ನನಗೆ ಅವರು ಹೀಗೆ ಮಾಡಿದರು ಎಂದೆಲ್ಲಾ ಗೋಳಿಡುವಂತಿಲ್ಲ. ನಾವೇ ಬಿತ್ತುಕೊಂಡೆವು, ನಾವೇ ಬೆಳೆದುಕೊಂಡೆವು. ಮಾಡಿದ್ದುಣ್ಣೋ ಮಾರಾಯ.

ಹಾಗಾಗಿ ಜೋಸೆಫ್ ಮರ್ಫಿ ಹೇಳುವುದೇನೆಂದರೆ, ಜಾಗೃತ ಮನಸ್ಸಿನಿಂದ ಬಿತ್ತಲ್ಪಡುವ ಪದ ಬೀಜಗಳನ್ನು ಜಾಗ್ರತೆಯಿಂದ ನಿಮ್ಮ ಸಬ್‌ಕಾನ್ಷಸ್ ಮೈಂಡಲ್ಲಿ ಬಿತ್ತಿ. ಪದಗಳು ಬರಿಯ ಪದಗಳಲ್ಲ. ಆ ಒಂದೊಂದು ಪದದ ಹಿಂದೆ ವಿಚಾರವಿದೆ, ಅದರದೇ ಆದಂತಹ ಭಾವವಿದೆ. ಆ ಭಾವುಕತೆಯ ಪರಿಚಯ ನಮ್ಮ ಮನೋಶಕ್ತಿಗಿದೆ. ಹಾಗಾಗಿ, ಭಾವನೆಯ ತರಂಗಗಳು ಆ ಶಕ್ತಿಯನ್ನು ಪ್ರೇರೇಪಿಸುತ್ತವೆ. ಅದರಂತೆಯೇ ಭಾವನೆಯ ಗಮ್ಯವೇನಿದೆಯೋ ಅದು ಆಯಾ ವ್ಯಕ್ತಿಯ ಜೀವನದಲ್ಲಿ ಪ್ರತಿಫಲಿತವಾಗುತ್ತದೆ. ಇದು ಜೋಸೆಫ್ ಮರ್ಫಿಯ ಮನಶಾಸ್ತ್ರೀಯ ವಾದ.

ಹಾಗಾಗಿ ಸಕಾರಾತ್ಮಕವಾದ ಭಾವನೆಗಳನ್ನು ಹೊಂದಿರಿ. ಸಕಾರಾತ್ಮಕವಾದ ಬೀಜಗಳನ್ನು ಬಿತ್ತಿರಿ. ನಕಾರಾತ್ಮಕವಾದ ಬೀಜಗಳನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿ. ಹಾಗೊಂದು ವೇಳೆ ನಿಮ್ಮ ಮನಸ್ಸಿನಲ್ಲಿ ಈಗಾಗಲೇ ನಕಾರಾತ್ಮಕವಾದ ಬಿತ್ತನೆಯಾಗಿಬಿಟ್ಟಿದ್ದರೆ, ಚಿಂತೆ ಬೇಡ, “ವಿತರ್ಕ ಭಾವನೇ ಪ್ರತಿಪಕ್ಷ ಭಾವನಾಂ” ಎಂದು ಪತಂಜಲಿಯ ಯೋಗಸೂತ್ರದಲ್ಲಿ ಹೇಳುವಂತೆ, ಅದಕ್ಕೆ ವಿರುದ್ಧವಾದ ಭಾವನೆಯನ್ನು ಅಂದರೆ ಸಕಾರಾತ್ಮಕವಾದ ಭಾವನೆಯನ್ನು ಉದ್ದೇಶಪೂರ್ವಕವಾಗಿ, ಪ್ರಯತ್ನಪೂರ್ವಕವಾಗಿ ಪ್ರತಿಷ್ಠಾಪಿಸಿ. ಬುದ್ಧನು ಹೇಳುವಂತೆ ದ್ವೇಷವನ್ನು ಪ್ರೇಮದಿಂದಲೂ, ಅಶಾಂತಿಯನ್ನು ಶಾಂತಿಯಿಂದಲೂ ಗೆಲ್ಲುವಂತೆ ವಿತರ್ಕವಾಗಿರುವ ಭಾವನೆಯ ಜಾಗದಲ್ಲಿ ಅದರ ವಿರುದ್ಧವಾಗಿರುವ ಸಕಾರಾತ್ಮಕವಾದ ಭಾವನೆಯನ್ನು ಪ್ರತಿಷ್ಠಾಪಿಸಿ ಎಂದು ಜೋಸೆಫ್ ಹೇಳುತ್ತಾ ಹೋಗುತ್ತಾರೆ. ಅದಕ್ಕೆ ಪೂರಕವಾಗಿ ಎಷ್ಟೊಂದು ಉದಾಹರಣೆಗಳನ್ನು ಕೊಡುತ್ತಾ ಹೋಗುವ ಅವರು ನಮ್ಮ ಜಯಾಪಜಯಗಳಿಗೆ ನಾವೇ ಜವಾಬ್ದಾರರು ಹೊರತು ಇನ್ನು ಹೊರಗಿನವರು ಯಾರೂ ಅಲ್ಲ ಎಂದು ಘೋಷಿಸುವ ಮೂಲಕ ಭಗವದ್ಗೀತೆಯ ವಾಕ್ಯವನ್ನು ನೆನಪಿಸಿಬಿಡುತ್ತಾರೆ. “ನಿನ್ನ ಉದ್ಧಾರವೇನಾದರೂ ಆಗುವುದಿದ್ದರೆ ಅದು ನಿನ್ನಿಂದ ಮಾತ್ರ. ನಿನ್ನಿಂದಲೇ ಎಲ್ಲವನ್ನೂ ನಿನ್ನ ಕುರಿತಾಗಿ ಸಾಧಿಸಿಕೊಳ್ಳಲು ಸಾಧ್ಯ. ನಿನಗೆ ನೀನೇ ಮಿತ್ರ, ನಿನಗೆ ನೀನೇ ಶತ್ರು ಅದು ನಿನ್ನನ್ನು ನೀನು ಉಪಚರಿಸಿಕೊಳ್ಳುವುದರ ಮೇಲಿದೆ.”

ಆದಿಮ ಕಾಲದಲ್ಲಿ ಗಗನದಲ್ಲಿ ಗುಡುಗುವ ಗುಡುಗನ್ನು ಕೇಳಿ, ಸಿಡಿಯುವ ಸಿಡಿಲನ್ನು ನೋಡಿ ಮನುಷ್ಯ ಭಯಗೊಂಡು ಅದ್ಯಾವುದೋ ಭಯಂಕರ ಶಕ್ತಿ ತಮ್ಮ ಮೇಲೆ ಎರಗುವಂತೆ ಭಾವಿಸಿದ. ಅದರ ಮೇಲೆ ವಿಶೇಷ ನಿಗಾವಹಿಸಿದ. ಅದರ ಆರ್ಭಟಕ್ಕೆ ಅವನು ಬಾಗಿದ. ಅದೊಂದು ಶಕ್ತಿಯು ತಮ್ಮನ್ನು ಆಳುತ್ತಿರುವಂತೆ ಅಥವಾ ತಮ್ಮ ಮೇಲೆ ಕೋಪಿಸಿಕೊಳ್ಳುವುದೆಂಬಂತೆ ಭಯದಿಂದ ಉಡುಗಿದ. ಅದ್ಯಾವುದೋ ಶಕ್ತಿಯ ಬಗ್ಗೆ ಅವನು ಕಲ್ಪಿಸಿಕೊಂಡಂತೆಲ್ಲಾ, ಅದರ ವಿಸ್ತರಣೆಯೂ ಮುಂದಿನ ಕಾಲಘಟ್ಟಗಳಲ್ಲಾಗುತ್ತಾ ಬಂದು ದೇವರ ಪರಿಕಲ್ಪನೆಗೆ ತೆಕ್ಕೆ ಹಾಕಿಕೊಂಡಿತು. ಮುಗ್ಧ ಮನುಷ್ಯನ ಈ ಭಯವು ಅಕಾರಣವಾದದ್ದು, ಅವೈಚಾರಿಕ ಅಥವಾ ಅವೈಜ್ಞಾನಿಕವಾದದ್ದು ಹಾಗೂ ಹುರುಳಿಲ್ಲದ್ದು ಎಂದು ತಿಳಿದುಕೊಂಡ ಜಾಣ ಅವರಿಗೆ ತಿಳಿವಳಿಕೆ ನೀಡಲಿಲ್ಲ. ಅದು ಹಾಗಲ್ಲ ಹೀಗೆ ಎಂದೂ ಹೇಳಲಿಲ್ಲ. ಬದಲಿಗೆ, ಮುಗ್ಧರ ಭಯವನ್ನೇ ಬಂಡವಾಳವಾಗಿಟ್ಟುಕೊಂಡು ಅವರನ್ನು ಶೋಷಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳತೊಡಗಿದರು. ಪ್ರೀತಿಯಿಂದ ಉಂಟಾಗಬಹುದಾದ ಭಕ್ತಿಯನ್ನು ಭಯದಿಂದ ಉತ್ಪಾದಿಸಿದರು. ಭಯ-ಭಕ್ತಿ ಜೋಡು ಪದಗಳಾದದ್ದು ಆಕಸ್ಮಿಕವೇನಲ್ಲ.

ಇನ್ನೂ ಮುಂದುವರೆದು ಇದೇ ವಿಷಯವನ್ನು ದೇವರೆಂಬ ಪರಿಕಲ್ಪನೆಯಲ್ಲಿ ಆಧುನಿಕ ಆಸ್ತಿಕರು ಬೇರೊಂದು ವಾದವನ್ನು ಮಂಡಿಸುತ್ತಾರೆ. ಧಾರ್ಮಿಕತೆಯನ್ನು ಅಲ್ಲಗಳೆದು ಅಧ್ಯಾತ್ಮಿಕತೆಯನ್ನು ಮುಂದಿಡುತ್ತಾರೆ. ವೇಷಭೂಷಣದ ದೇವತೆಗಳನ್ನು ನಿರಾಕರಿಸಿ, ಕೇವಲ ಅದೊಂದು ಶಕ್ತಿ ಎಂದು ಪ್ರತಿಪಾದಿಸುತ್ತಾರೆ.

ಇದೇ ದೇವರ ಪರಿಕಲ್ಪನೆಯ ಶಕ್ತಿವಾದಿಗಳು ಜೋಸೆಫ್ ಮರ್ಫಿಯ ವಾದದ ಸರಣಿಗೆ ಬಂದರೆ ಕೊಂಚ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದೇನೆಂದರೆ, ಶಕ್ತಿ ನಿಷ್ಪಕ್ಷಪಾತವಾದುದು. ನಿರುದ್ದೇಶವಾದದ್ದು. ಉದಾಹರಣೆಗೆ ಮಳೆಯೆಂಬ ಶಕ್ತಿ. ಅದು ತನ್ನ ಸುರಿಯುವ ಕ್ರಿಯೆಯಲ್ಲಿ ಭೂಮಿಗೆ ಬೀಳುತ್ತದೆ. ಮುಳ್ಳಿನ ಗಿಡಗಳಿಗಾಗಲಿ, ಹೂವಿನ ಗಿಡಗಳಿಗಾಗಲಿ ನೀರೆರೆಯುತ್ತದೆ. ಆ ಮಳೆಯನ್ನು ಪಡೆಯುವ ಹೂವಿನ ಗಿಡವೂ, ಮುಳ್ಳಿನ ಗಿಡವೂ ತಾನು ಸಮೃದ್ಧವಾಗಿ ಬೆಳೆಯುತ್ತದೆ. ಆದರೆ ಮಳೆ ಎಂಬ ಶಕ್ತಿ ಅಥವಾ ಮಳೆ ದೇವರು, “ಮುಳ್ಳು ಕೆಟ್ಟದ್ದು, ಅದು ಚುಚ್ಚುತ್ತದೆ. ಹೂವು ಒಳ್ಳೆಯದು, ಅದು ಸುಂದರವಾಗಿದೆ, ಅದು ಸುಗಂಧವನ್ನು ಕೊಡುತ್ತದೆ” ಎಂದು ಬರಿಯ ಹೂವಿನ ಗಿಡದ ಮೇಲೆ ಮಳೆಯನ್ನು ಸುರಿಸುವುದಿಲ್ಲ. ಅದು ನಿಷ್ಪಕ್ಷಪಾತ. ಅಂತೆಯೇ ಪ್ರಕೃತಿಯ ಎಲ್ಲಾ ಶಕ್ತಿಗಳೂ ಕೂಡ.

PC : Wikimedia Commons

ಈ ವಿಚಾರವನ್ನು ’ದ ಪವರ್ ಆಫ್ ದ ಸಬ್ ಕಾನ್ಷಸ್ ಮೈಂಡ್‌ಗೆ  ತಂದುಕೊಂಡರೂ ಸರಿಯೇ. ಆ ಶಕ್ತಿ ನಿಷ್ಪಕ್ಷಪಾತಿ, ಅದಕ್ಕೆ ತರ್ಕ, ಲೆಕ್ಕಾಚಾರ, ಆಲೋಚನೆ, ವಿಶ್ಲೇಷಣೆಗಳಿಲ್ಲ. ಅದು ತನ್ನಲ್ಲಿ ಬಂದಿದ್ದನ್ನು ಬರಿದೇ ಸ್ವೀಕರಿಸುತ್ತದೆ. ಹಾಗೆಯೇ ಅದನ್ನು ಪೋಷಿಸುತ್ತದೆ ಮತ್ತು ಫಲ ನೀಡುತ್ತದೆ.

ಬಯಲಾಟದ ಪಾತ್ರಗಳಂತಹ ದೇವರ ಉಡುಗೆ ತೊಡುಗೆಗಳನ್ನು ನಿರಾಕರಿಸಿ, ನಿರಾಕಾರ ಶಕ್ತಿ ಎಂದು ವಾದಿಸುವ ಆಸ್ತಿಕರು ದೇವರಿಗೆ ಆಲೋಚನೆಗಳಿಲ್ಲ, ಉದ್ದೇಶಗಳಿಲ್ಲ, ಖುಷಿ ಬಂದಾಗ ’ಮಗನೇ ಬೇಕಾದ ವರ ಕೇಳಿಕೋ’ ಎಂದು ವರ ಕೊಡುವಷ್ಟು ಅಹಂಕಾರಿಯಲ್ಲ, ಕೋಪ ಬಂದಾಗ ತಿಕ್ಕಲು ಹತ್ತಿ ಶಾಪ ಕೊಟ್ಟು ಹಾನಿಗೆಡವುವ ಕ್ರೂರಿಯಲ್ಲ ಎಂಬುದನ್ನು ಗಮನಿಸಬೇಕು. ನಿರುದ್ದೇಶವಾದ, ನಿಷ್ಪಕ್ಷಪಾತವಾದ, ಹೊಗಳಿದರೆ ಉಬ್ಬದ, ತೆಗಳಿದರೆ ಕುಗ್ಗದ ಅಥವಾ ರೇಗದ ಶಕ್ತಿಯೆಂದಷ್ಟೇ ನೋಡಿದರೆ, ಜೋಸೆಫ್ ಮರ್ಫಿಯ ಸುಪ್ತಚೇತನದ ಶಕ್ತಿಯ ಬಗ್ಗೆಯೂ ಅರ್ಥವಾಗುತ್ತದೆ.

ಜೋಸೆಫ್ ಮರ್ಫಿ ಸುಪ್ತವಾಗಿರುವ ಶಕ್ತಿಗೆ ಪದಗಳ ಬೀಜಗಳನ್ನು ಬಿತ್ತುವಾಗ ಎಂತಹ ಕ್ರಮವನ್ನು ಅನುಸರಿಸಬೇಕು ಎಂದು ವಿವರಿಸುತ್ತಾರೆ. ಉದಾಹರಣೆಗೆ, ನಾನು ಪರೀಕ್ಷೆಯಲ್ಲಿ ಫೇಲ್ ಆಗಬಾರದು. ಪಾಸ್ ಆಗಬೇಕು. ಹಾಗಿರುವಾಗ, ನಕಾರಾತ್ಮಕವಾದ ಶಬ್ದವಾದ ಫೇಲ್ ಅನ್ನು ಉಪಯೋಗಿಸದಿರಲು ಸೂಚಿಸುತ್ತಾರೆ. ಬದಲಿಗೆ ನಾನು ಪಾಸ್ ಆಗಬೇಕು, ಅಥವಾ ಆಗುತ್ತೇನೆ, ಇನ್ನೂ ಮುಂದುವರಿದು ಆಗಿಬಿಟ್ಟೆ ಎಂದು ಭಾವಿಸಲು, ಕಲ್ಪಿಸಿಕೊಳ್ಳಲು ಸೂಚಿಸುತ್ತಾರೆ. ಅದೇ ರೀತಿಯಲ್ಲಿ ಯಾವುದೇ ವಿಷಯದಲ್ಲಿಯೂ ಕೂಡ ನಾವು ಬಯಸದೇ ಇರುವಂತಹ ವಿಚಾರಗಳನ್ನು ಪದಗಳ ಮೂಲಕವಾಗಿ ಜಾಗೃತ ಚೇತನದ ಮೂಲಕ ಸುಪ್ತ ಚೇತನಕ್ಕೆ ಹಾಯಲಿಕ್ಕೆ ಬಿಡಬೇಡಿ ಎಂದು ಸೂಕ್ಷ್ಮವಾಗಿ ತಿಳಿಸುತ್ತಾರೆ. ಅವರ ಪ್ರಕಾರ ಆ ಶಕ್ತಿಯು ಬಹಳ ಸುಲಿಲತೆಯಿಂದ ಕೂಡಿರುವುದು. ಅದು ವಿಶ್ಲೇಷಣೆಯಿಂದ ಹೊರತಾಗಿರುವುದು, ಅದಕ್ಕೆ ತರ್ಕ ಮತ್ತು ಲೆಕ್ಕಾಚಾರಗಳಿಲ್ಲ. ಅದು ನೇರ ಮತ್ತು ಮುಗ್ಧ.

ಯೇಸುಕ್ರಿಸ್ತ ಪಟ್ಟ ಪಾಡುಗಳಿಗೆ, ಪಡೆದ ದುರಂತದ ಮರಣಕ್ಕೆ ಕಾರಣ ಯೇಸುವಿನ ನಕಾರಾತ್ಮಕ ಮನಸ್ಥಿತಿಯೇ ಕಾರಣವಾಗಿತ್ತು ಎನ್ನುವುದಕ್ಕೆ ಜೋಸೆಫ್ ಹಿಂಜರಿಯುವುದಿಲ್ಲ.

ತಂದೆಯೇ ನಿನ್ನ ಮನದಂತೆಯೇ ಆಗಲಿ ಎನ್ನುವ ಯೇಸುವು ಏನಾಗಬೇಕೆಂದು ತಾನೇ ಸಕಾರಾತ್ಮಕವಾಗಿ ನಿರ್ಧರಿಸಿದ್ದರೆ, “ದೇವರೇ, ದೇವರೇ ನೀನೇಕೆ ನನ್ನ ಕೈಬಿಟ್ಟೆ” ಶಿಲುಬೆಯ ಮೇಲೆ ಸಾಯುವ ಮುನ್ನ ವ್ಯಥೆಪಡುವಂತಿರಲಿಲ್ಲ ಎನ್ನುವ ಜಿಜ್ಞಾಸೆ ಲೇಖಕರದು.

ಒಟ್ಟಿನಲ್ಲಿ ಮರ್ಫಿ ಹೇಳುವುದಿಷ್ಟೇ, ನಿನ್ನ ಆಲೋಚನೆಗಳ ಕಾರಣವೇ ನೀನು ಅನುಭವಿಸುವ
ಪರಿಣಾಮ.


ಇದನ್ನೂ ಓದಿ: ಮನೋರೋಗಕ್ಕೆ ಚಿಕಿತ್ಸೆಯುಂಟು: ಅದನ್ನು ಗುರುತಿಸಿದರೆ ಮಾತ್ರ : ಯೋಗೇಶ್ ಮಾಸ್ಟರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...