Homeಪುಸ್ತಕ ವಿಮರ್ಶೆಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್' ಕಾದಂಬರಿ

ಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್’ ಕಾದಂಬರಿ

- Advertisement -
- Advertisement -

ಆಫ್ರಿಕಾದ ತಾಂಜಾನಿಯಾ ಮೂಲದ, ಈಗ ಬ್ರಿಟಿಷ್ ನಾಗರಿಕರಾಗಿರುವ ಅಬ್ದುಲ್ ರಜಾಕ್ ಗುರ್ನಾರವರು ’ಜಗತ್ತಿನಲ್ಲಿ ನೆಲೆಯಿಲ್ಲದವನಂತಾಗುವ ವಿಚಾರ ಮತ್ತು ಅನುಭವವೇ ನನ್ನನ್ನು ಬರೆಯಲು ಪ್ರೇರೇಪಿಸಿತು’ ಎಂದಿದ್ದಾರೆ.

ಪೂರ್ವ ಆಫ್ರಿಕಾದಿಂದ ಯೂರೋಪಿಗಾಗಲೀ ಅಥವಾ ಆಫ್ರಿಕಾದೊಳಗೇ ಆಗಲಿ ಆಗುವ ವಲಸೆ ಮತ್ತು ಸ್ಥಳಾಂತರ ಹಾಗೂ ಅಪರಿಚಿತ-ಅಜ್ಞಾತ ಸ್ಥಳಗಳಲ್ಲಿ ಸ್ವಂತ ಚಹರೆ ಅಥವಾ ಗುರುತಿನ ಅನ್ವೇಷಣೆ ಗುರ್ನಾರವರ ಕಾದಂಬರಿಗಳಲ್ಲಿ ಕೇಂದ್ರ ವಸ್ತುವಾಗಿವೆ. ಹತ್ತು ಕಾದಂಬರಿಗಳನ್ನು ಹಾಗೂ ಹಲವಾರು ಕತೆ, ಪ್ರಬಂಧಗಳನ್ನು ರಚಿಸಿರುವ ಗುರ್ನಾರವರ ’ಪ್ಯಾರಡೈಸ್’ಅನ್ನು (1994) ಈಗ ಕನ್ನಡಕ್ಕೆ ಜಿ. ಶರಣಪ್ಪರವರು ’ಸ್ವರ್ಗ’ ಎಂದು 2022ರಲ್ಲಿ ಅನುವಾದಿಸಿದ್ದಾರೆ.

ನಮ್ಮಲ್ಲಿ ’ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸಿ’ ಎಂದರೆ ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು- ಎಂಬ ಮಾತಿದೆ. ಆದರೆ ಈ ಮಾತು ಎಷ್ಟರಮಟ್ಟಿಗೆ ನಿಜ? ಇಂಡಿಯಾದಂಥ ಜಾತಿ ಸಮಾಜದಲ್ಲಿ ಅವಮಾನಿತನಾದ ವ್ಯಕ್ತಿಗೆ ಅಮೆರಿಕ, ಬ್ರಿಟನ್ನಿನಂಥ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಉದ್ಯೋಗ ಅಥವಾ ಗ್ರೀನ್‌ಕಾರ್ಡ್ ಸಿಕ್ಕರೆ ಅವನಿಗೆ ಅದೇ ಸ್ವರ್ಗ. ಆದ್ದರಿಂದ ಮೇಲಿನ ನುಡಿಗಟ್ಟು ಕಾಲ ಮತ್ತು ದೇಶಕ್ಕೆ ಸಂಬಂಧಿಸಿ ನಿಜವಾಗುತ್ತದೆ. ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಸಂಗತಿಯನ್ನಿಲ್ಲಿ ಪ್ರಸ್ತಾಪಿಸಬಹುದು. ಇದೇ ಏಪ್ರಿಲ್ 12, 2023ರಂದು ವರದಿಯಾಗಿರುವಂತೆ ’ವಿನಾಶಕಾರಿ ಬರಗಾಲ ಮತ್ತು ಹೆಚ್ಚುತ್ತಿರುವ ಭಯೋತ್ಪಾದಕ ದಾಳಿ ಪ್ರಕರಣಗಳಿಂದ ಕಂಗೆಟ್ಟಿರುವ ಆಫ್ರಿಕಾದ ಸೊಮಾಲಿಯಕ್ಕೆ ಅಂತಾರಾಷ್ಟ್ರೀಯ ಸಮುದಾಯದ ವ್ಯಾಪಕ ಬೆಂಬಲದ ಅಗತ್ಯವಿದೆ’ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಆಗ್ರಹಿಸಿದ್ದಾರೆ. ಬರಗಾಲ ಪೀಡಿತ ದೇಶ ಸೊಮಾಲಿಯಾ ಮಾತ್ರ ಅಲ್ಲ; ಕೀನ್ಯಾ ಮತ್ತು ಇಥಿಯೋಪಿಯಾ ಕೂಡ ಸತತ 5 ವರ್ಷದ ವಿಫಲ ಮಳೆಗಾಲದಿಂದ ಅತ್ಯಂತ ತೀವ್ರ ಬರಗಾಲಕ್ಕೆ ತುತ್ತಾಗಿವೆ. ಜತೆಗೆ ಅಂತರ್ ಯುದ್ಧದಿಂದ ಜರ್ಝರಿತವಾಗಿವೆ. ಪರಿಣಾಮ, ಆ ದೇಶಗಳ ಮಕ್ಕಳು ಮತ್ತು ತಾಯಂದಿರು ನಿರ್ಗತಿಕರಾಗಿ ನಿರಾಶ್ರಿತರ ಶಿಬಿರಗಳಲ್ಲಿ ಅನ್ನಾಹಾರಕ್ಕೆ ಗತಿ ಇಲ್ಲದೆ ರೋಗರುಜಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದಾರೆ. ಆ ದೃಶ್ಯಗಳನ್ನು ಲಭ್ಯವಿರುವ ಹಲವು ವೀಡಿಯೋ ವರದಿಗಳಲ್ಲಿ ನೋಡಬಹುದು. ತಾತ್ಪರ್ಯ ಕೇವಲ ಜನ್ಮಭೂಮಿಯಲ್ಲಿದ್ದರೆ ಮಾತ್ರ ’ಸ್ವರ್ಗ’ ಅಲ್ಲ ಎಂದಾಯಿತು. ಆ ಮಾತಿರಲಿ.

ಅಬ್ದುಲ್ ರಜಾಕ್ ಗುರ್ನಾ

ಪ್ರಸ್ತುತ ’ಪ್ಯಾರಡೈಸ್’ ಕಾದಂಬರಿಯತ್ತ ಬಂದರೆ, ಈ ಸ್ವರ್ಗದ ಕಥೆಯೇ ಬೇರೆ. ಸಾಹಿತ್ಯ ಕ್ಷೇತ್ರದ ನೋಬಲ್ ಪ್ರಶಸ್ತಿ ಪಡೆದ ಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್’ ಕಾದಂಬರಿಯು ಕುರಾನ್ ಧರ್ಮಗ್ರಂಥದ ಹಂದರದ ಮೇಲೆ ರಚನೆಗೊಂಡಿದೆ. ಕುರಾನ್‌ನಲ್ಲಿನ ಪ್ರವಾದಿ ಯೂಸೂಫನ ಕತೆಯಂತೆಯೇ ಪ್ಯಾರಡೈಸ್ ಕಾದಂಬರಿಯ ಈ ಕಥಾನಾಯಕ ಯೂಸೂಫನದಾಗಿದೆ. ಕುರಾನ್ ಕತೆಯಲ್ಲಿ ಯೂಸೂಫ್ ಚಿಕ್ಕ ಬಾಲಕನಾಗಿದ್ದಾಗ ಅವನನ್ನು ಈಜಿಪ್ಟ್‌ಗೆ ತಂದು ಫೆರೋನ ಅಧಿಕಾರಿಯೊಬ್ಬನಿಗೆ ಗುಲಾಮನಂತೆ ಮಾರಾಟ ಮಾಡುತ್ತಾರೆ. ಅಲ್ಲಿ ಆ ಅಧಿಕಾರಿಯ ಬಳಿ ಕೆಲಸ ಮಾಡುತ್ತಾ ಸ್ಫುರದ್ರೂಪಿ ಯುವಕನಾಗುವ ಯೂಸೂಫನ ಮೇಲೆ ಆ ಅಧಿಕಾರಿಯ ಹೆಂಡತಿ ಕಣ್ಣುಹಾಕುತ್ತಾಳೆ. ಆದರೆ ಯೂಸುಫ್ ತಿರಸ್ಕರಿಸುತ್ತಾನೆ. ಆದರೆ ಆಕೆ ಅವನೇ ತನ್ನ ಮೇಲೆ ಕಣ್ಣು ಹಾಕಿದ್ದಾನೆಂಬ ಅಪರಾಧ ಹೊರಿಸಿ ಸೆರೆಮನೆಗೆ ಹಾಕಿಸುತ್ತಾಳೆ. ಇತ್ತ ’ಪ್ಯಾರಡೈಸ್’ನಲ್ಲಿ ಯೂಸೂಫನನ್ನು ಅವನ ತಂದೆ ತಾನು ಮಾಡಿದ ಸಾಲಕ್ಕೆ ವ್ಯಾಪಾರಿ ಅಜೀಜ್ ಎಂಬುವನಿಗೆ ಮಾರಾಟ ಮಾಡುತ್ತಾನೆ. ತನ್ನನ್ನು ಮಾರಾಟ ಮಾಡಿದ್ದಾರೆ ಹಾಗೂ ತಾನೆಂದೂ ತನ್ನ ತಂದೆತಾಯಿಯರನ್ನು ಪುನಃ ಭೇಟಿಮಾಡಲು ಸಾಧ್ಯವಾಗುವುದಿಲ್ಲವೆಂಬ ಅರಿವೇ ಅವನಿಗರಿವಿರುವುದಿಲ್ಲ. ಕುರಾನ್‌ನಲ್ಲಿನ ಕತೆಯಂತೆಯೇ ಅಜೀಜ್‌ನ ಪತ್ನಿ ಇವನ ಮೇಲೆ ಕಣ್ಣು ಹಾಕುತ್ತಾಳೆ. ಇವನೂ ಆಕೆಯನ್ನು ತಿರಸ್ಕರಿಸುತ್ತಾನೆ. ಆಕೆ ಅವನ ಮೇಲೆ ಅಪವಾದ ಹೊರಿಸುತ್ತಾಳೆ. ’ಪ್ಯಾರಡೈಸ್’ನ ಕತೆ ಸ್ಥಿತವಾಗಿರುವುದು ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ- ಆಗ ಜರ್ಮನಿ ಕಾಲೋನಿಯಾಗಿದ್ದ ತಾಂಜಾನಿಯಾದಲ್ಲಿ. [ಜೆ ಬಾಲಕೃಷ್ಣ, ಮುನ್ನುಡಿ]

ಅಬ್ದುಲ್ ರಜಾಕ್ ಗುರ್ನಾರವರು 1948ರಲ್ಲಿ ಪೂರ್ವ ಆಫ್ರಿಕಾದ ಕಡಲಿನ ಜಾಂಜಿಬಾರ್ ದ್ವೀಪದಲ್ಲಿ ಜನಿಸಿದರು. 1963ರಲ್ಲಿ ಜಾಂಜಿಬಾರ್ ಬ್ರಿಟಿಷ್ ವಸಾಹತು ಆಡಳಿತದಿಂದ ಸ್ವತಂತ್ರ ಪಡೆದ ನಂತರ ಆಂತರಿಕ ದಂಗೆಗಳಾಗಿ, ಅರಬ್ ಮೂಲದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಯಿತು. 1968ರಲ್ಲಿ 18ನೇ ವಯಸ್ಸಿನ ಗುರ್ನಾ ಇಂಗ್ಲೆಂಡಿಗೆ ವಲಸೆ ಹೋಗಿ, ಅಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅಲ್ಲಿನ ಅವರ ನೋಟ, ಕಂಡ ಜೀವನದ ಪರಿ, ಅನುಭವಿಸಿದ ಹಿಂಸೆಯ ಹಿನ್ನೆಲೆಯ ಬಗ್ಗೆ ಮಿಡಿಯುತ್ತಾ ಬರೆಯತೊಡಗಿದರು. ಅವರ ಮಾತೃಭಾಷೆ ’ಸ್ವಾಹಿಲಿ’ ಆದರೂ ಅವರು ಇಂಗ್ಲಿಷ್ ಭಾಷೆಯಲ್ಲೇ ಬರೆಯತೊಡಗಿದರು. ನೆಲೆ ಇಲ್ಲದೆ ಪರಿತಪಿಸುವ ಅನುಭವವೇ ಅವರನ್ನು ಬರೆಯಲು ಪ್ರೋತ್ಸಾಹಿಸಿದ್ದು. ಅವರ ಬರಹಗಳಲ್ಲಿ ಕಂಡುಬರುವ ಪ್ರಮುಖ ಅಂಶವಂದರೆ ಅಪರಿಚಿತ ಸ್ಥಳಗಳಲ್ಲಿ, ಮಾನವನ ಸ್ಥಳಾಂತರದ ಬಾಧೆ, ಹಾಗೂ ಸ್ವಂತ ಚಹರೆಯ ಅನ್ವೇಷಣೆ. ಅವರ ಕೆಲವು ಕಾದಂಬರಿಗಳು ಪ್ರಸ್ತುತ ಬ್ರಿಟನ್‌ನಲ್ಲಿ ವಲಸೆ ಬಂದವರ ಅನುಭಗಳನ್ನು ವಿವಿಧ ಮಜಲುಗಳಲ್ಲಿ ಚಿತ್ರೀಕರಿಸಿವೆ. ಅವರ ನಾಲ್ಕನೇ ಕಾದಂಬರಿ ’ಸ್ವರ್ಗ’ ಮೊದಲನೇ ವಿಶ್ವಯುದ್ಧದ ಸಮಯದ ವಸಾಹತುಪೂರ್ವ ಆಫ್ರಿಕಾದ ಕತೆಯನ್ನು ಒಳಗೊಂಡಿದೆ. ಮೊದಲು ಅವರ ಕಾದಂಬರಿಗಳು ಜನರಿಂದ ಗಹನವಾಗಿ ಸ್ವೀಕೃತಿಗೊಂಡರೂ ಆರ್ಥಿಕವಾಗಿ ಅಂತಹ ಹಿರಿಮೆಯನ್ನೇನೂ ಪಡೆದುಕೊಳ್ಳಲಿಲ್ಲ. ಆದರೆ ಅವರಿಗೆ ನೋಬಲ್ ಪ್ರಶಸ್ತಿ ಬಂದ (2021) ಮೇಲೆ ಪ್ರಕಾಶಕರು ಸಾಲಲ್ಲಿ ನಿಂತು ಅವರ ಕೃತಿಗಳನ್ನು ಪ್ರಕಟಿಸಲು ದುಂಬಾಲು ಬಿದ್ದರು.

ಇದನ್ನೂ ಓದಿ: ಪ್ರೊ. ಕಾರ್ಲೋಸರ ‘ಶಂಬಾಲ’ ಎಂಬ ರಾಜಕೀಯ ಕಾದಂಬರಿ

ಗುರ್ನಾರವರು ತಮ್ಮ ಕಾದಂಬರಿಗಳಲ್ಲಿ ಮುಖ್ಯವಾಗಿ ಚಿತ್ರಿಸುವ ಮತ್ತೊಂದು ಅಂಶವೇಂದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಯುದ್ಧ ಅಥವಾ ಇನ್ನಿತರ ಸಂಘರ್ಷಗಳು ಮತ್ತು ಅವುಗಳಿಂದ ಹುಟ್ಟುವ ಯಾತನೆ ಹಾಗೂ ವಲಸೆ; ಅವರ ಕಥೆ ಕಾದಂಬರಿಗಳ ಪಾತ್ರಗಳು ಹೊಸ ಪರಿಸರದಲ್ಲಿ ತಮ್ಮ ಹೊಸ ಚಹರೆಗಳಿಗಾಗಿ ನಿರಂತರವಾಗಿ ಅಪೇಕ್ಷಿಸುತ್ತವೆ. ಅವು ನಿರಂತರವಾಗಿ ಹೊಸ ಬದುಕಿನ ಹಾಗೂ ಗತದ ಅಸ್ತಿತ್ವಗಳ ನಡುವಿನ ತಾಕಲಾಟಕ್ಕೆ ಒಳಗಾಗುತ್ತವೆ. ಹೊಸ ಸಂಸ್ಕೃತಿಯಲ್ಲಿ ಗತದ ಬಾಳಿನ ಅಸ್ತಿತ್ವವನ್ನು ಹುಡುಕುವ ಪ್ರಯತ್ನದಲ್ಲಿ ತೊಡಗುತ್ತವೆ. ಆಗ ತುಮುಲ, ಕೀಳರಿಮೆ ಮತ್ತು ಸಂಘರ್ಷಕ್ಕೆ ಸಿಕ್ಕಿ ಬಳಲುತ್ತವೆ. ಈ ಪರಿಸ್ಥಿತಿಯಲ್ಲಿ ಅವರು ಸಾಕಷ್ಟು ಯೋಚಿಸಿ ಎಚ್ಚರಿಕೆಯಿಂದ ಕೃತಿ ರಚನೆಗೆ ತೊಡಗುತ್ತಾರೆ. ವಾಸ್ತವದ ನೆಲೆಗಟ್ಟಿನ ಮೇಲೆ ಕಾಲ್ಪನಿಕ ಪಾತ್ರಗಳನ್ನು ನಿಲ್ಲಿಸುತ್ತಾರೆ. ’ಪ್ಯಾರಡೈಸ್’ ಕಾದಂಬರಿಯಲ್ಲಿ ಪ್ರಮುಖ ಅಂಶವೆಂದರೆ, ಒಬ್ಬ ಆಫ್ರಿಕಾ ಮೂಲದ ಹುಡುಗ ಬಾಲ್ಯದಿಂದ ಯೌವನಾವಸ್ಥೆಗೆ ಬರುವಂತಹುದು. ಇದೊಂದು ಆಫ್ರಿಕಾದ ಮೂಲ ಸಮುದಾಯವೊಂದರ ಕುಸುಮ. ಯೂರೋಪಿನ ವಸಾಹತುಶಾಹಿಯ ಕಾಲ್ತುಳಿತಕ್ಕೆ ಸಿಲುಕಿ ಧೂಳಾಗಿ ಹೋಗುವ ಪ್ರೇಮ ದುರಂತ ಚಿತ್ರ.

ಹನ್ನೆರಡು ವರ್ಷದ ಬಾಲಕ ಯೂಸೂಫ್ ತನ್ನ ತಂದೆ ಮಾಡಿದ್ದ ಸಾಲಕ್ಕೆ ಮಾರಾಟವಾಗುತ್ತಾನೆ; ತನ್ನ ಹಿಂದಿನ ಸರಳ ಹಳ್ಳಿ ಜೀವನವನ್ನ ಬಿಡಬೇಕಾಗುತ್ತದೆ. ಈ ಕಥಾನಾಯಕ ಯೂಸೂಫ್‌ನ ಕಣ್ಣುಗಳ ಮುಖಾಂತರ ಗುರ್ನಾರವರು ಯುದ್ಧದ ಜಂಜಾಟದಲ್ಲಿ ಸಿಲುಕಿರುವ ಆಫ್ರಿಕಾದ ಕೋಮುವಾರು ವ್ಯಾಪಾರದ ಹೋರಾಟಗಾರರ ಬಗ್ಗೆ ಚಿತ್ರಿಸುತ್ತಾರೆ. ಅದೇ ಸಮಯದಲ್ಲಿ ಕಥಾನಾಯಕನ ಬಾಲ್ಯದ ಹೋರಾಟದ ಪರಿಚಯವಾಗುತ್ತದೆ. ಇದರ ಪರಿಣಾಮ ಈ ಕೃತಿ ರೋಮಾಂಚಕ ಮತ್ತು ಶಕ್ತಿಯುತವಾದ ಕೃತಿ ಆಗಿ ಒಡಮೂಡಿದೆ. [ಲೇಖಕರ ಮಾತು]

ಇಲ್ಲಿ ಚಿತ್ರಿತವಾಗಿರುವ ಕೆಲವು ಸನ್ನಿವೇಶಗಳು, ಪಾತ್ರಗಳು ಮನರಂಜನೆಯ ಜೊತೆಗೆ ಹೊಸ ಸನ್ನಿವೇಶಗಳನ್ನು ಸೃಷ್ಟಿಸಿ ಓದುಗರು ಮರೆಯದಂತೆ ಪರಿಣಾಮವನ್ನುಂಟುಮಾಡುತ್ತವೆ. ಉದಾಹರಣೆಗೆ ಬಾಲಕ ಯೂಸೂಫನ ಜೇಬಿಗೆ ವ್ಯಾಪಾರಿ ಅಜೀಜ್ ಚಿಕ್ಕಪ್ಪ ಬಂದಾಗಲೆಲ್ಲಾ ಕಾಸು ಇಳಿಬಿಟ್ಟು ಅವನು ತನ್ನ ಹಿಂದೆ ಬರುವಂತೆ ಸಲಿಗೆ ಬೆಳೆಸಿಕೊಳ್ಳುವುದು; ಚಿಕ್ಕಪ್ಪ ಅಜೀಜ್‌ನ ಮನೆತೋಟದ ಮರಗಳಿಗೆ ಸಿಸಿ ಕ್ಯಾಮರಗಳೆಂಬಂತೆ ಅಲ್ಲಿಗಲ್ಲಿಗೆ ಕನ್ನಡಿಗಳನ್ನು ನೇತುಹಾಕಿ ಅಲ್ಲಿ ಕೆಲಸ ಮಾಡುವವರ ಚಲನವಲನಗಳನ್ನು (ಸಿ.ಸಿ.ಕ್ಯಾಮರ ತೋರಿದಂತೆ) ವೀಕ್ಷಿಸುವ ಮನೆಯ ಯಜಮಾನಿಯ ಚಾತುರ್ಯ; ಚಿಕ್ಕಪ್ಪ ಅಜೀಜ್ ದೂರ ಪ್ರಾಂತ್ಯಗಳಿಗೆ ವ್ಯಾಪಾರಕ್ಕೆ ಹೋಗುವಾಗ ಸರಕು ಸರಂಜಾಮುಗಳ ಜೊತೆಗೆ ಮನರಂಜನೆಗೆ ಜನರನ್ನು ಸಜ್ಜುಗೊಳಿಸುವುದು; ಆಫ್ರಿಕಾದ ಪರ್ವತ ಬೆಟ್ಟಗುಡ್ಡಗಳ ಕಣಿವೆಕಂದರಗಳ ರುದ್ರಭಯಂಕರ ದೃಶ್ಯಗಳು; ಅಲ್ಲಿಗಲ್ಲಿಗೆ ಕೇಳಿಬರುವ ಬುಡಕಟ್ಟು ಜನರ ಭಯಾದ್ಭುತ ದೆವ್ವ ಪಿಶಾಚಿಗಳ ಕಥನಗಳು; ಚಟು ಸುಲ್ತಾನನ ವ್ಯಾಪಾರ ವಂಚನೆಯ ದೃಶ್ಯಗಳು; ಬಿಳಿ ದೊರೆಗಳ ಕೋತಿ ಕಜ್ಜಾಯ ಹಂಚಿಕೆಯ ನ್ಯಾಯ ಪಕ್ಷಪಾತಗಳು; ಮುಂತಾಗಿ ಎಲ್ಲವೂ ಯೂಸೂಫನ ಕಣ್ಣ ನೋಟದಲ್ಲಿ ಅರಳುತ್ತವೆ.

ಬಯಕೆಯ ತೋಪು ಎಂಬ ಅಧ್ಯಾಯದಲ್ಲಿ ಬರುವ ಈ ವರ್ಣನೆಯನ್ನು ಗಮನಿಸಿ: “ಪರ್ವತದ ಮೇಲಿನ ಬೆಳಕು ಹಸಿರಾಗಿದೆ” ಅವನು ಹೇಳಿದ. “ಅಂತಹ ನೋಟವನ್ನು ನಾನೆಂದೂ ಕಲ್ಪಿಸಿಕೊಂಡಿರಲಿಲ್ಲ” ಮತ್ತು ಗಾಳಿ, ಅದು ಶುಭ್ರವಾಗಿ ತೊಳೆದಂತಿತ್ತು. ಬೆಳಗಿನ ವೇಳೆ, ಸೂರ್ಯ ಹಿಮದ ತುತ್ತತುದಿಯನ್ನು ಬಡಿಯುತ್ತಿದ್ದಾಗ ಅದು ನಿರಂತರತೆಯನ್ನು ಅನುಭವಿಸುತ್ತಿತ್ತು. ಬದಲಾವಣೆಯನ್ನ ಕಾಣದ ಕಾಲದಂತೆ ಮತ್ತು ಮಧ್ಯಾಹ್ನದ ಕೊನೇಭಾಗದಲ್ಲಿ ನೀರಿನ ಪಕ್ಕದ ಧ್ವನಿಯ ಶಬ್ದ ಆಳವಾಗಿ ಆಕಾಶಕ್ಕೇರುತ್ತಿತ್ತು. ಒಂದು ಸಾಯಂಕಾಲ ಪರ್ವತದ ಮೇಲಕ್ಕೆ ಪ್ರಯಾಣ ಮಾಡುತ್ತಿದ್ದಾಗ ನಾವು ನೀರು ಧುಮ್ಮುಕ್ಕುತ್ತಿದ್ದ ಒಂದು ಜಾಗದಲ್ಲಿ ನಿಂತೆವು. ಅದು ಎಲ್ಲವೂ ಅಂತ್ಯವಾದಷ್ಟೇ ಸುಂದರವಾಗಿತ್ತು. ಅಂತಹ ಸೌಂದರ್ಯವನ್ನು ನಾನೆಂದೂ ನೋಡಿರಲಿಲ್ಲ. ದೇವರು ಉಸಿರಾಡುವುದನ್ನ ನೀನು ಅಲ್ಲಿ ಕೇಳಬಹುದಾಗಿತ್ತು. [ಪುಟ.189]

ಈ ಭಾಗದ ಅನುಭವಾತ್ಮಕ ವರ್ಣನೆ ಎ.ಎನ್ ಮೂರ್ತಿರಾಯರ ’ಸಂಜೆಗಣ್ಣಿನ ಹಿನ್ನೋಟ’ದಲ್ಲಿ ಬರುವ ಅಮೆರಿಕದ ರಾಕೀಪರ್ವತ ತಪ್ಪಲಿನ ಅವರ ಅನುಭವಾತ್ಮಕ ವರ್ಣನೆಯನ್ನು ಸ್ಮರಣೆಗೆ ತರುವಂತಿದೆ. ದೇವರು ಇಂಥ ರಸಸ್ಥಳಗಳಲ್ಲಿ ಧ್ಯಾನಕ್ಕೆಳಸುತ್ತಾನೆ ಎಂಬುದು ಮೂರ್ತಿರಾಯರ ಮಾತು. ಯೂಸುಫ್ ಊರಿಗೆ ಹಿಂದಿರುಗಿದ ಮೇಲೆ ಹಿರಿಯ ಸೋದರ ಕಲೀಲನಿಗೆ ತಾನು ಕಂಡುಂಡ ಅನೇಕಾನೇಕ ಅನುಭವಗಳನ್ನು ಪುನರನುಭವಿಸಿದನೆಂಬಂತೆ ಹೇಳುತ್ತಿರುತ್ತಾನೆ. ಅವನು ಮಂತ್ರಮುಗ್ಧನಾಗಿ ಹೂಂಗುಟ್ಟುತ್ತಿರುತ್ತಾನೆ.

ಸ್ವರ್ಗ ಕಾದಂಬರಿಯಲ್ಲಿ ಒಂದು ಸ್ವಾರಸ್ಯದ ಪ್ರಹಸನ ಇದೆ. ಸ್ಥಳೀಯ ವ್ಯಾಪಾರಿ ಮತ್ತು ಮ್ಯಕ್ಯಾನಿಕ್ ಕಲಾಸಿಂಗ್ ಎಂಬಿಬ್ಬರ ನಡುವೆ ಅದು ಜರುಗುತ್ತದೆ. ಒಂದು ಹಂತದಲ್ಲಿ ಹಮೀದ್ ಕಲಾಸಿಂಗ್‌ನನ್ನು ಜಿಪುಣನಾಗಬೇಡ ದುಡಿದದ್ದನ್ನೆಲ್ಲಾ ಬಾಂಬೆಗೆ ಕಳಿಸುತ್ತೀಯೇನು? ಎಂದು ಕೇಳುತ್ತಾನೆ. ಅದಕ್ಕೆ ಕಲಾಸಿಂಗ್ ’ನಾವೇನು ಬಾಂಬೆಯಿಂದ ಬಂದಿಲ್ಲ. ಅದು ಕುತ್ತಿಗೆ ಕತ್ತರಿಸುವ ಬನಿಯಾಗಳ ಗೂಡು, ಗುಜರಾತೀ ಕಸ, ಅವರು ಹಣ ಉಳ್ಳವರು ಮತ್ತು ಅವರು ಅಣ್ಣತಮ್ಮಂದಿರ ರಕ್ತ ಹೀರುವವರು’(ಪುಟ-88) ಮುಂತಾಗಿ ಪ್ರತಿಕ್ರಿಯಿಸುತ್ತಾನೆ. ಬನಿಯಾಗಳ ಹಣದ ಮೇಲಿನ ದುರಾಸೆ ಎಷ್ಟೆಂಬುದು ಇಲ್ಲಿ ಸುವ್ಯಕ್ತ.

ಅಬ್ದುಲ್ ರಾಜಾಕ್ ಗುರ್ನಾರವರ ಲೋಕಾನುಭವ ದೊಡ್ಡದು. ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳಿಂದ ತುಂಬಿರುವ ಆಫ್ರಿಕಾ ಖಂಡಕ್ಕೆ ಶತಮಾನಗಳ ಪರ್ಯಂತ ವಿದೇಶೀ ಆಕ್ರಮಣಕಾರರು, ವರ್ತಕರು, ಧರ್ಮಪ್ರಚಾರಕರು ಲಗ್ಗೆ ಇಟ್ಟಿದ್ದಾರೆ. ಅದೆಲ್ಲವನ್ನು ಗುರ್ನಾ ಅವರು ಸೂಕ್ಷ್ಮವಾಗಿ ದಾಖಲಿಸುತ್ತಾರೆ. ಕೊಳ್ಳೆಕಾರರಿಗೆ ಆಫ್ರಿಕಾ ಒಂದು ಅಕ್ಷಯ ಭಂಡಾರ. ಬಹುರಾಷ್ಟ್ರದ ಬಹುಸಂಸ್ಕೃತಿಯ ಬಹು ಧರ್ಮೀಯ ಜನರು ಅಲ್ಲಿಗೆ ಬರುತ್ತಾರೆ. ಉದ್ಯೋಗ ಅರಸುತ್ತಾ ಬಂದವರೂ ಇದ್ದಾರೆ. ಆಫ್ರಿಕನ್ನರನ್ನು ಹಿಡಿದು ಗುಲಾಮರನ್ನಾಗಿ ಮಾರಾಟ ಮಾಡಿದ್ದಾರೆ. ಆದರೆ ಈಗ ಅಷ್ಟು ಸಂಪದ್ಯುಕ್ತ ದೇಶ ಬರಡುಬರಡಾಗಿ ಭೀಕರ ಬರ ಎದುರಿಸುತ್ತಿದೆ.

ಈ ಬಗೆಯ ಚಮತ್ಕಾರಯುಕ್ತ ಕೃತಿಯನ್ನು ಪ್ರೊ. ಜಿ. ಶರಣಪ್ಪ ಸೊರಗೊಂಡನಹಳ್ಳಿ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ; ಸೃಷ್ಟಿ ನಾಗೇಶ್ ಇದನ್ನು ಪ್ರಕಟಿಸಿದ್ದಾರೆ. ಅವರಿಗೆ ಧನ್ಯವಾದಗಳು ಸಲ್ಲಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...