Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬ್ಯಾಪಾರಿ ಮನೋರಂಜನ್ ಅವರ ’ಚಾಂಡಾಳನೊಬ್ಬನ ಆತ್ಮ ವಿಮರ್ಶೆ'- ಇಂಟರೋಗೇಟಿಂಗ್ ಮೈ ಚಾಂಡಾಲ ಲೈಫ್

ಪುಸ್ತಕ ಪರಿಚಯ; ಬ್ಯಾಪಾರಿ ಮನೋರಂಜನ್ ಅವರ ’ಚಾಂಡಾಳನೊಬ್ಬನ ಆತ್ಮ ವಿಮರ್ಶೆ’- ಇಂಟರೋಗೇಟಿಂಗ್ ಮೈ ಚಾಂಡಾಲ ಲೈಫ್

- Advertisement -
- Advertisement -

’ಭಾರತ-ಪಾಕಿಸ್ತಾನದ ವಿಭಜನೆಯ ದುರಂತವನ್ನು ಸದಾ ಹಸಿಯಾಗಿಟ್ಟು ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ನಾವು ’ಬಂಗಾಳ’ದ ರಕ್ತಚರಿತ್ರೆಯನ್ನು, ಲಕ್ಷಾಂತರ ಜನರ ನಿತ್ಯನರಕವನ್ನು, ಪ್ರಭುತ್ವಗಳ ನಾಚಿಕೆಗೇಡಿನ ಹುಸಿತನವನ್ನು ಮರೆತೇ ಬಿಡುತ್ತೇವೆ. ಅಂಥ ಒಂದು ಕಾಲದ ಇಂಡಿಯಾದ ಚರಿತ್ರೆಯನ್ನು ಯಾವುದೇ ಪೂರ್ವಗ್ರಹ ಮತ್ತು ಮುಖಾ ಮುಲಾಜಿಲ್ಲದಂತೆ ಈ ಮಹತ್ ಕೃತಿ ದಾಖಲಿಸುತ್ತದೆ. ಈ ದುರಂತದಲ್ಲಿ ಪ್ರತ್ಯಕ್ಷವಾಗಿ ಸಿಲುಕಿಕೊಂಡು ಬದುಕಿಗಾಗಿ ಮಾಡಬಾರದ ಕೆಲಸಗಳನ್ನು ಮಾಡಿ, ಪಡಬಾರದ ಕಷ್ಟಗಳನ್ನು ಪಟ್ಟು, ’ಈ ದೇಶ ನನ್ನದೇ?’ ಎಂದು ಆತಂಕಗೊಂಡ ಚಾಂಡಾಲನೊಬ್ಬ ತನ್ನ ಬದುಕನ್ನು ಯಾವುದೇ ಮುಜುಗರವಿಲ್ಲದಂತೆ ನಿರ್ಭಯವಾಗಿ ಜಗತ್ತಿನೆದುರು ತೆರೆದಿಟ್ಟ ಆತ್ಮಕಥಾನಕ ’ಇಂಟರೋಗೆಟಿಂಗ್ ಮೈ ಚಾಂಡಾಲ ಲೈಫ್’. ಚರಿತ್ರೆ, ಜನಾಂಗೀಯ ಹಿನ್ನೆಲೆ, ಜಾತಿಯ ಸ್ವರೂಪ, ಆರ್ಥಿಕತೆ, ಉದ್ಯೋಗದ ಹಾಹಾಕಾರ, ರಾಜಕೀಯ ಬೂಟಾಟಿಕೆ, ಅಧಿಕಾರಕ್ಕಾಗಿ ನಡೆದ ನಾಟಕಗಳು, ಕೊಲೆಗಳು, ಅತ್ಯಾಚಾರ, ಸೂಳೆಗಾರಿಕೆ, ಸಾಹಿತ್ಯಕ ಪೊಳ್ಳುತನ, ಶಿಕ್ಷಣ ವ್ಯವಸ್ಥೆಯ ಧರ್ಮಾಂಧತೆ ಮುಂತಾದ ಎಲ್ಲಾ ವಿಷಯಗಳನ್ನು ಮನಸ್ಸಿಗೆ ತಟ್ಟುವಂತೆ, ನಮ್ಮ ಮುಂದಿಡುವ ಈ ಮಹತ್ಕೃತಿ ಕೇವಲ ಆತ್ಮಕತೆ ಮಾತ್ರವಾಗಿರದೆ, ಇವೆಲ್ಲವನ್ನೂ ಒಳಗೊಂಡ ಇಂಡಿಯಾದ ಪ್ರಾತಿನಿಧಿಕ ಬಹುಶಿಸ್ತೀಯ ಒಂದು ಪಠ್ಯವಾಗಿ ಕಾಣಿಸುತ್ತದೆ.’

(ಮುನ್ನುಡಿ)

ಬ್ರಹ್ಮಕಪಾಲ: ಐದು ತಲೆಯ ಬ್ರಹ್ಮ ಜಗತ್ತಿಗೆ ತಾನೇ ಹೆಚ್ಚೆಂದು ಬೀಗಿ ತನ್ನ ಸೃಷ್ಟಿ ಶಾರದೆಯನ್ನೇ ಕಾಮಿಸಿ ಮೆರೆಯುತ್ತಿದ್ದ. ಅವನಿಗೆ ಬುದ್ಧಿ ಕಲಿಸಲು ಶಿವ ಕಾಲಭೈರವನಾಗಿ ಅವನ ತಲೆಯನ್ನು ಚಿವುಟಿಬಿಡುತ್ತಾನೆ. ಆದರೆ ಆ ಬ್ರಹ್ಮ ಕಪಾಲ ಶಿವನ ಕೈಗೆ ಹಾಗೆ ಕಚ್ಚಿಕೊಳ್ಳುತ್ತದೆ- ಬಿಡುವುದೇ ಇಲ್ಲ. ಅದರಿಂದ ಮುಕ್ತನಾಗಲು ಶಿವನು ಬ್ರಹ್ಮ ಕಪಾಲವನ್ನು ಹಿಡಿದು, ಧರ್ಮಧೀಕ್ಷೆಯಲ್ಲಿ ತಿರಿದುಂಡು ಬದುಕಿ, ಕಡೆಗೆ ಕಾಶಿಯಲ್ಲಿ ನೆಲೆಗೊಳ್ಳುತ್ತಾನೆ ಎಂದು ಶಿವಪುರಾಣದ ಒಂದು ಕಥೆ.

ಹಾಗೆ ಬಾಪಾರಿಯವರ ಈ ಆತ್ಮಕಥೆಯನ್ನು ಕೈಗೆತ್ತಿಕೊಂಡರೆ ಅದು ಪೂರ್ತಿ ಓದಿಸಿಕೊಳ್ಳುವವರೆಗೆ ಬಿಡುವುದೇ ಇಲ್ಲ. ಈ ಪುಸ್ತಕಕ್ಕೆ ನಿಡಿದಾದ ಮುನ್ನುಡಿಯನ್ನು ಬರೆದಿರುವ ಪಿ. ಆರಡಿ (ದುಂಬಿ) ಮಲ್ಲಯ್ಯನವರು ತಮ್ಮ ಸ್ನೇಹಿತರಾದ ಡಾ.ಎಚ್.ಎಸ್. ನಾಗಭೂಷಣರಿಗೆ ಇದರ ಇಂಗ್ಲಿಷ್ ಆವೃತ್ತಿಯನ್ನು ನೀಡಿ ’ಒಮ್ಮೆ ಓದಿ ಸರ್’ ಎಂದರಂತೆ. ಎರಡೇ ದಿನದಲ್ಲಿ ಅವರು ಓದಿ ’ಇಂಥ ಪುಸ್ತಕವನ್ನು ನಾನು ಇದುವರೆಗೂ ಓದಿಯೇ ಇಲ್ಲ’ ಅಂದರಂತೆ ಮತ್ತು ಮಲ್ಲಯ್ಯನವರು ’ಸರ್, ಇದನ್ನು ಅನುವಾದ ಮಾಡಲು ಸಾಧ್ಯವೇ?’ ಎಂದು ಅದ್ಯಾವ ಘಳಿಗೆಯಲ್ಲಿ ಕೇಳಿಕೊಂಡರೊ? ಅವರು ಮೂರೇ ತಿಂಗಳಲ್ಲಿ ಪೂರ್ಣ ಅನುವಾದ ಮಾಡಿ (212 ಪುಟ)ತಂದು ಕೊಟ್ಟರಂತೆ. [ಇದೊಂದು ಬಗೆಯ ಪಂಪ ಪ್ರತಿಭೆ. ಪಂಪ ಒಂದು ಕಾವ್ಯವನ್ನು ಆರು ತಿಂಗಳಲ್ಲಿಯೂ (ಸಮಸ್ತ ಭಾರತ) ಇನ್ನೊಂದು ಕಾವ್ಯವನ್ನು ಮೂರು ತಿಂಗಳಲ್ಲಿಯೂ (ಆದಿಪುರಾಣ) ರಚಿಸಿ ಮುಗಿಸಿದನಂತೆ.] ’ಚಾಂಡಾಳನೊಬ್ಬನ ಆತ್ಮವಿಮರ್ಶೆ’ ಪಂಪಭಾರತದಂತೆ ರಕ್ತಸಿಕ್ತ ಚರಿತ್ರೆಯೇ. ಆದರೆ ಅದು ಪುರಾಣ ಇದು ಚರಿತ್ರೆ.

ಹೀಗೂ ಉಂಟೆ?: ಹೂಗ್ಲಿ ಜಿಲ್ಲೆಯ ಬಾಲಾಗಢ ಎಂಬ ಮೀಸಲು ಕ್ಷೇತ್ರದಿಂದ ಗೆದ್ದು ಪ್ರಸ್ತುತ ಬಂಗಾಳದ ವಿಧಾನಸಭೆಯ ಹೊಸ್ತಿಲಿಗೆ ತನ್ನ ಪಾದ ಸೋಕಬಹುದೆಂಬ ಕಲ್ಪನೆಯನ್ನು ಸ್ವತಃ ಬ್ಯಾಪಾರಿಯರೇ ಊಹಿಸಿರಲಿಲ್ಲವೇನೋ? 12 ಕಾದಂಬರಿಗಳು 150ಕ್ಕೂ ಹೆಚ್ಚು ಕತೆಗಳನ್ನು ಬರೆದಿರುವ ಇವರ ಮೊದಲ ಉದ್ದೇಶ ಅನ್ನ-ವಸತಿ ಸೌಕರ್ಯಕ್ಕಾಗಿ ಮಾತ್ರ. ಬಂಗಾಳಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರೂ ಇವರ ನಿತ್ಯದ ಬದುಕಿಗೆ ತತ್ವಾರ ಇದ್ದೇ ಇತ್ತು; ಹಳ್ಳದಂಡೆಯಲ್ಲಿ ಸಾಗುವ ಹೆಳವನಂತೆ. 23 ವರ್ಷ ಕಿವುಡು ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ಮಧ್ಯಾಹ್ನದ ಅಡುಗೆ ಕೆಲಸಗಾರನಾಗಿದ್ದ ಬ್ಯಾಪಾರಿಯವರಿಗೆ ಮೊಣಕಾಲು ನೋವಿಗೆ ಶಸ್ತ್ರ ಚಿಕಿತ್ಸೆಯಾಗಿತ್ತು. ದೊಡ್ಡದೊಡ್ಡ ಬಾಣಲೆ ಪಾತ್ರೆಗಳನ್ನು ಒಲೆ ಮೇಲೆ ಎತ್ತಿ ಇಳಿಸಲು ಕಷ್ಟವಾಗಿತ್ತು. ಆದ್ದರಿಂದ ಅದೇ ದಕ್ಷಿಣದ 24 ಪರಗಣ ಜಿಲ್ಲೆಯ ಲೈಬ್ರರಿಗೆ ವರ್ಗಾವಣೆ ಮಾಡಿಕೊಡಿ ಎಂದು ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದರು. ಆಗ ಇವರನ್ನು ಮಮತಾ ಬ್ಯಾನರ್ಜಿಯವರ ಎದುರು ಯಾರೊ ಎಳತಂದು ಪರಿಚಯಿಸಿದರು. ಮುಖ್ಯಮಂತ್ರಿಗಳೇ ಇವರಿಗೆ ಟಿಕೆಟ್ ನೀಡಿದರು. ಇದು ಬ್ಯಾಪಾರಿಯವರು ಎಂ.ಎಲ್.ಎ ಆದ ಪರಿ.

ಬ್ಯಾಪಾರಿ ಮನೋರಂಜನ್

ಪೂರ್ವ ವೃತ್ತಾಂತ: ಬ್ಯಾಪಾರಿ ಮನೋರಂಜನ್ ಕುಟುಂಬ ನಿರಾಶ್ರಿತರಾಗಿ ಪೂರ್ವ ಬಂಗಾಳದಿಂದ ಬಂದು ನೆಲೆಸಿ, ಸ್ವಂತ ನೆಲವಿಲ್ಲವೆಂದು ಕೊರಗಿದರೂ ಸಹ ಇಂಡಿಯಾವನ್ನು ಬಂಗಾಳಿ ಭಾಷೆಯನ್ನು ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸಿದರು. ಆ ಬದ್ಧತೆ ಅವರ ಬದುಕು-ಬರಹದಲ್ಲಿ ಎದ್ದು ಕಾಣುತ್ತದೆ. ಅವರು ಒಂದೆಡೆ ಬರೆಯುವಂತೆ- ಬಂಗಾಳದ ಭಾಷೆ, ಸಂಸ್ಕೃತಿ ಜನಸಮುದಾಯಗಳನ್ನು ಸರ್ವನಾಶಗೊಳಿಸಲು ಶತ್ರುಗಳು ಯಾವತ್ತೂ ದಂಡೆತ್ತಿ ಬಂದಿದ್ದಾರೆ. ಮೊಘಲರು ಏಳುನೂರು ವರ್ಷ ಆಳಿದರು. ಬ್ರಿಟಿಷರು ವರ್ತಕರಾಗಿ ಬಂದು 200 ವರ್ಷಗಳ ಕಾಲ ನಮಗೆ ಗುಲಾಮಗಿರಿಯ ನರಕ ತೋರಿಸಿದರು. ಈಗ ಗುಜರಾತಿನ ವ್ಯಾಪಾರಿಗಳು ಅದೇ ಕುತಂತ್ರವನ್ನಿಟ್ಟುಕೊಂಡೇ ನಮ್ಮಲ್ಲಿಗೆ ನುಗ್ಗಿದ್ದಾರೆ. ಇವರಲ್ಲಿ ಅಂಥಾ ವ್ಯತ್ಯಾಸವೇನಿಲ್ಲ. ತಮ್ಮ ಹಿತಾಸಕ್ತಿಗಾಗಿ ಬಡವರ, ಕೆಳಜಾತಿಗಳ ರಕ್ತ ಹೀರುವುದು ಮತ್ತು ಲಾಭವೇ ಮುಖ್ಯ. ಹಾಗಾಗಿ ನಾನು ನನ್ನ ಲೇಖನಿಗೆ ಹೇಳುವುದಿಷ್ಟೇ, ’ನೀನು ತೆಪ್ಪಗೆ ಬರೆಯದೇ ಬಂಗಾಳದ ಆತ್ಮವನ್ನು ಕಾಪಾಡುವುದಕ್ಕೆ ಹೋರಾಡು’ ಎಂದು. ಇಂಥ ಬರಹಗಾರನಾಗಿ ಕೇವಲ ಬರವಣಿಗೆ ಮಾಡದೆ ಯಾಕೆ ರಾಜಕೀಯ ಪ್ರವೇಶ ಮಾಡಿದಿರಿ ಎಂದು ಪ್ರತಕರ್ತ ಪ್ರಶ್ನಿಸಿದರೆ, ’ಸಾಧಾರಣ ಸಂದರ್ಭಗಳಾಗಿದ್ದರೆ ನಾನು ಯಾವತ್ತೂ ರಾಜಕೀಯಕ್ಕೆ ಕಾಲಿಡುತ್ತಿರಲಿಲ್ಲ. ವ್ಯವಸ್ಥೆ ಅಷ್ಟೊಂದು ಕೆಟ್ಟುಹೋಗಿದೆ. ಈಗ ಹೊರಗಿನ ಶಕ್ತಿಗಳು ಬಂಗಾಳದ ಭಾಷೆ, ಸಂಸ್ಕೃತಿ ಪರಂಪರೆಗೆ ಗಂಡಾತರ ಒಡ್ಡಿವೆ. ಬಂಗಾಳವನ್ನು ತಮ್ಮ ಕಪಿಮುಷ್ಟಿಯ ಮೂಲಕ ನಿಯಂತ್ರಿಸಲು ಹೊರಟಿವೆ. ಹೀಗಾಗಿ ನಮ್ಮ ಕೈಲಾದ ಪ್ರತಿರೋಧ ತೋರದೆ ವಿಧಿಯಿಲ್ಲ. ಅದು ಅಧಿಕಾರದಿಂದ ಮಾತ್ರ ಸಾಧ್ಯ ಎಂಬುದು ನನಗೆ ಅನುಭವ ಹೇಳಿಕೊಟ್ಟ ಮಾತು’ ಎಂದು ಸ್ಪಷ್ಟವಾಗಿ ಹೇಳಿದ್ದರು.

’ನಾನೊಬ್ಬ ನಿರಾಶ್ರಿತ, ಅದರಿಂದಾಗಿ ನಾನು ಈ ದೇಶದ ಯಾವ ಭಾಗಕ್ಕೆ ಹೋದರೂ ಹೊರಗಿನವನೇ. ಆದರೆ ನಾನು ನಿಜವಾಗಿಯೂ ನಿಮ್ಮೊಳಗೆ ಒಬ್ಬನು. ಚಿಂದಿ ಆಯುವ, ರಿಕ್ಷಾ ತುಳಿಯುವ, ಚಹಾ ಮಾರುವ, ರಸ್ತೆ ಬದಿ ಮಲಗುವ ಮನುಷ್ಯ. ಹಾಗಾಗಿ ಇಂಥವರ ನೋವನ್ನು ನನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತೆ ಯಾರಿಗೆ ಸಾಧ್ಯ? ನಿಮ್ಮ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಗೆದ್ದರೂ, ಸೋತರೂ ಇದೇ ಬೀದಿಗಳಲ್ಲಿ ನಿಮ್ಮೊಂದಿಗೆ ಇದ್ದುಬಿಡುತ್ತೇನೆ’ ಎಂದು ಜವಾರಿ ಬಾಷೆಯಲ್ಲೇ ಹೇಳಿದರು. ನನಗೆ ಜೈಲಿನಲ್ಲಿ ಓದು ಬರಹ ಕಲಿಸಿದ ಗುರು ಸಹ ಕೈದಿ. ಮತ್ತು ಮಹಾಶ್ವೇತಾ ದೇವಿ ಅವರಂತ ಮಹಾತ್ಮರು. ರಿಕ್ಷಾವಾಲನಾಗಿದ್ದಾಗ ಅವರು ಸಿಕ್ಕಿದ್ದೇ ನನ್ನ ಬದುಕಿನ ಅದೃಷ್ಟ ತೆರೆದಂತಾಯಿತು’ ಎಂದು ಕೃತಜ್ಞತೆ ವ್ಯಕ್ತಪಡಿಸುವರು. ’ಈ ದೇಶದ ಮಹಾನ್ ಗ್ರಂಥ ಬಾಬಾ ಸಾಹೇಬರು ನೀಡಿದ ’ಸಂವಿಧಾನ’; ಆ ಪ್ರಕಾರ ಅನ್ಯಾಯವನ್ನು ವಿರೋಧಿಸಿ ಬರೆಯುವುದಷ್ಟೇ ನನ್ನ ಕೆಲಸ. ಅದಕ್ಕೆಲ್ಲಾ ಯಾವ ಸಿದ್ಧಾಂತ ಬೇಕು ಹೇಳಿ’ ಎಂದು ಕೇಳುತ್ತಾರೆ ಬ್ಯಾಪಾರಿ..

ಪ್ರೇರಣೆ: ’ನೊಂದವರ ನೋವನ್ನು ನೋಯದವರೆತ್ತ ಬಲ್ಲರು?’ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳೇ ಅವರ ಕ್ರಾಂತಿಕಾರಕ ಬರವಣಿಗೆಗೆ ಪ್ರೇರಣೆ. ’ನಾನು ಕೂಲಿ ಕಾರ್ಮಿಕನೂ ಅಲ್ಲ; ರೈತನೂ ಅಲ್ಲ ’ದಾಸ್ ಕ್ಯಾಪಿಟಲ್’ ಓದಿನಿಂದ ಪ್ರೇರಿತನಲ್ಲ. ನನಗೆ ಯಾವುದೇ ರಾಜಕೀಯ ಸಿದ್ಧಾಂತವಾಗಲೀ ತತ್ವವಾಗಲೀ ಅರಿವಿಗೆ ಬರಲಿಲ್ಲ. ಆದರೆ ಮೈಸುಟ್ಟುಕೊಂಡ ಘಟನೆಗಳಿಂದಾಗಿ ನನಗೆ ವಾಸ್ತವದ ಅರಿವಾಯ್ತು’ ಎಂದು ಹೇಳುತ್ತಾರೆ- ಬ್ಯಾಪಾರಿ.

ಕ್ಷೇಮದಡದಲ್ಲಿ ನಿಂತು, ಪ್ರವಾಹದಲ್ಲಿ ಕೊಚ್ಚಿಹೋಗುತ್ತ ’ಪ್ರಪಂಚ ಹಾಳಾಯ್ತು’ ಎಂದು ಕೂಗುವ ಬಡಜನರಿಗೆ, ’ಎಲ್ಲಿ ಹಾಳಾಗಿದೆ? ಎಲ್ಲ ಸರಿಯಾಗಿಯೇ ಇದೆಯಲ್ಲ? ಬುದ್ಧಿ ಇಲ್ಲದೆ ನೀನು ಸುಳಿಯಲ್ಲಿ ಸಿಲುಕಿ ’ಪ್ರಪಂಚ ಹಾಳಾಯ್ತು’ ಎಂದು ಏಕೆ ಪ್ರಲಾಪಿಸುವೆ?’ ಎನ್ನುವ ರೀತಿಯ ಡೋಂಗಿ ಬರಹಗಾರ-ಸಾಹಿತಿಯಲ್ಲ ಇವರು. ಅವರು ದನಿಯಿಲ್ಲದ ಬಡವರ, ಕೂಲಿಕಾರರ, ರೈತರ, ಕಾರ್ಮಿಕರ ಪರವಾಗಿ ದನಿ ಎತ್ತುವವರು. ಸಕಲೆಂಟು ಪಕ್ಷದ ಕಾರ್ಯಕರ್ತರು ಇವರ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ದು ಅವರ ಪ್ರಾಮಾಣಿಕತೆಗೆ ಸಾಕ್ಷಿ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಇದನ್ನು ತಡೆವರಾರು?

ಮಹಾಶ್ವೇತಾದೇವಿ

ಬ್ರಾಹ್ಮಣಿಕೆ: ಹೀಗೆ ಮಾತಾಡುವಾಗ, ಬರೆಯುವಾಗ ಅಂತರ್ಜಲದಂತೆ ಅವರ ಲೇಖನಿಯೊಳಗೆ ಪ್ರವಹಿಸುವ ದನಿ ’ದೋಪ್ದಿ’ಗೆ ಜೀವ ತುಂಬಿದ ಮಹಾಶ್ವೇತಾದೇವಿ.

ಬ್ರಾಹ್ಮಣರೆದುರು ಬಾಗುವ ಲೇಖನಿಯಲ್ಲ ನನ್ನದು
ನಮ್ಮ ಪ್ರಾರ್ಥನೆ ಮಾರಿಚ್ಝಾಪಿ
ಸಾವುಗಳ ರಕ್ತ ಮೆತ್ತಿಕೊಂಡಿರುವ ಕೈಗಳು
ಇನ್ನಾದರೂ ವಿರಮಿಸಲಿಯೆನ್ನುವವು
ನನ್ನ ಲೇಖನಿ ಗುರಿ ಮುಟ್ಟುವತನಕ
ವಿರಮಿಸದ ಬಿಲ್ಲಿನಿಂದ ಬಿಟ್ಟ ಬಾಣದಂತಹದ್ದು.

ಮಾರಿಚ್ಝಾಪಿ: ಇದೇ ಅವರ ಆತ್ಮಕಥೆ; ’ಇಂಟರೋಗೆಟಿಂಗ್ ಮೈ ಚಾಂಡಾಲ್ ಲೈಫ್; ಅನ್ ಆಟೋ ಬಯಾಗ್ರಫಿ ಆಫ್ ದಲಿತ್’ ಸಾರ! ಅವರ ಬಹರಗಳು ’ಜಲಿಯನ್‌ವಾಲಾ ಬಾಗ್’ನ ದುರಂತದ ನೆನಪಿನಂತೆ. ’ಮಾರಿಚ್ಝಾಪಿ’ ನರಮೇಧದ ನೆನಪುಗಳನ್ನು ಜನರ ಮನಸ್ಸಿನಿಂದ ಅಳಿಸಿಹೋಗದಂತೆ ಕಣ್ಣುಬಿಟ್ಟುಕೊಂಡು ಕಾಯುವ ಕಾವಲುಗಾರನಂತೆ. ಆಫ್ರಿಕನ್-ಅಮೆರಿಕನ್-ರೆಡ್ ಇಂಡಿಯನ್ನರ ಹೋರಾಟವನ್ನು ಅಮೆರಿಕದ ಮೌಖಿಕ ಇತಿಹಾಸ ಶತಮಾನಗಳ ಕಾಲ ಜೀವಂತವಾಗಿಟ್ಟಿರುವಂತೆ ಈ ಕಥನ. ಹಾಗಾದರೆ ಯಾರದೀ ಅಮೆರಿಕ? ಮೂಲನಿವಾಸಿ ರೆಡ್ ಇಂಡಿಯನ್ನರದೊ ಅಥವಾ ವಲಸೆಗಾರರಾದ ಬಿಳಿಯರದೋ? ಹಾಗೆ ಯಾರು ಭಾರತೀಯರು? ಬ್ರಿಟಿಷರ ಕಾಲದ ಇಡೀ ಜಂಬೂದ್ವೀಪ ಭರತಖಂಡದ ಈ ಬಹು ಸಂಸ್ಕೃತಿಯ ಭವ್ಯ ಭಾರತೀಯರದೊ? ಅಥವಾ ಅದನ್ನು ಮೂರು ತುಂಡಾಗಿ ಹಂಚಿಕೊಂಡ ಹುಸಿ ಹಿಂದುತ್ವವಾದಿಗಳದೊ? ಹಾಗೆ ಮರಿಚ್ಛಾಪಿಯ ಹತ್ಯಾಕಾಂಡಕ್ಕೆ ಜಾತಿದ್ವೇಷವೇ ಕಾರಣವಾಯ್ತು. ’ವಿಶ್ವಗುರು’ ಎಂದು ಬೀಗುವ ಮಂದಿ ಇವರಿಗೆ ಏನೆಂದು ಉತ್ತರ ಕೊಟ್ಟಾರು? ಶಾಸಕರಾಗಿಯೂ ಬ್ಯಾಪಾರಿಯವರು ಕಲ್ಕತ್ತಾ ನಗರದ ರಿಕ್ಷಾವಾಲರ ನಡುವೆ ಚಹಾ ಸೇವಿಸುತ್ತಾರೆ.

ಇದನ್ನೂ ಓದಿ: ಸರಮಾಗೋನ ’ಕುರುಡು’ ಕಾದಂಬರಿ: ನಾವು ಕಟ್ಟಿದ ಸ್ವರ್ಗ ದಿಢೀರನೆ ಕುಸಿದಾಗ..!

ಬ್ಯಾಪಾರಿ ಅವರು ನೇರಾನೇರ ಹೇಳುತ್ತಾರೆ; ’ಈ ಕಮ್ಯುನಿಸ್ಟರು ಯಾವಾಗಲೂ ವರ್ಗರಹಿತ, ಜಾತಿರಹಿತ ಸಮಾಜವನ್ನು ಪ್ರತಿಪಾದಿಸುತ್ತಿದ್ದರು. ಅವೆಲ್ಲ ಕೇವಲ ಮಾತುಗಳಷ್ಟೇ. ನಿಮಗೆ ತಿಳಿದಿಲ್ಲ. ಪೂರ್ವ ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗಾಗಿ ಬಂಗಾಳದಾದ್ಯಂತ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಶಿಬಿರಿಗಳಲ್ಲಿಯೂ ಸಹ ಜಾತಿ ತಾರತಮ್ಯವಿತ್ತು. ಮೇಲ್ಜಾತಿಯ ಜನರು ನಾಮ ಶೂದ್ರರ ಜೊತೆ ಒಂದೇ ಕ್ಯಾಂಪಿನೊಳಗೆ ಉಳಿದುಕೊಳ್ಳಲು ಸಿದ್ಧರಿರಲಿಲ್ಲ. ಪ್ರತ್ಯೇಕ ಶಿಬಿರಗಳಿಗಾಗಿ ಒತ್ತಾಯಿಸಿದ್ದರು. ನಂತರದ ದಿನಗಳಲ್ಲಿ ಬಲವಂತವಾಗಿ ಭೂಮಿಯನ್ನು ವಶಪಡಿಸಿಕೊಂಡ ಕೆಲವು ಕಾಲೋನಿಗಳಿದ್ದವು. ಅಂತಹ ಮೊದಲ ಸ್ಥಳ ಬಿಜಯ್‌ಪುರ. ವಿದ್ಯುತ್ ಮತ್ತು ನೀರಿನ ಮಾರ್ಗಗಳೂ ಈಗಾಗಲೇ ಇದ್ದ ಆ ಸ್ಥಳ ಮೊದಲು ಮಿಲಿಟರಿಗೆ ಸೇರಿತ್ತು. ಇದಲ್ಲದೆ, ಅಲ್ಲಿ ಬ್ಯಾಂಕುಗಳು, ಅಂಚೆ ಕಚೇರಿ, ವಿಶ್ವವಿದ್ಯಾಲಯ ಕೂಡ ಇತ್ತು. ಇಪ್ಪತ್ತರಷ್ಟು ನಿರ್ವಸತಿಗರ ಕಾಲೋನಿಗಳನ್ನು ಜಾದವಪುರ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ನನಗೆ ಒಂದೇ ಒಂದು ಶೂದ್ರ ಕುಟುಂಬವನ್ನು ಹುಡುಕಿಕೊಟ್ಟು ಮಾತನಾಡಿ, ಸಾಧ್ಯವೇ ಇಲ್ಲ. ಯಾಕೆಂದರೆ ಅಲ್ಲಿರುವುದೆಲ್ಲಾ ಮೇಲ್ಜಾತಿಯ ಕುಟುಂಬಗಳು’.

ನಕ್ಸಲರ ಹೋರಾಟ: ಕಮ್ಯುನಿಸ್ಟ್ ಸರ್ಕಾರವು ಬಾಂಗ್ಲಾ ನಿರಾಶ್ರಿತರನ್ನು ಶಂಕರ ಗುಹಾ ನಿಯೋಗಿ ಇದ್ದ ದಂಡಕಾರಣ್ಯದ ಬಂಜರು ಕಾಡಿಗೆ ಅಟ್ಟಿದರು. ಅಲ್ಲಿ ಬುದ್ಧ, ಗಾಂಧಿ, ಅಂಬೇಡ್ಕರ್, ಲೆನಿನ್, ಮಾವೋ ತತ್ವಗಳನ್ನು ಮೈಗೂಡಿಸಿಕೊಂಡಿದ್ದ ನಿಯೋಗಿಯವರನ್ನು ಬ್ಯಾಪಾರಿ ಭೇಟಿಯಾದದ್ದು ಇನ್ನೊಂದು ಪುಣ್ಯ. ನಿರಾಶ್ರಿತರ ಗೆಯ್ಮೆಯಿಂದ ದಂಡಕಾರಣ್ಯದ ಬಂಜರು ಭೂಮಿ ನಂದನವನವೇ ಆಯಿತು. ಆದರೆ ನಿಯೋಗಿಯನ್ನು ನಕ್ಸಲ್ ಎಂದು ಗುಂಡಿಕ್ಕಲಾಯಿತು. ಇದು ಬೇರೆಯೇ ಪರ್ವ.

ನರಮೇಧ: ಬ್ಯಾಪಾರಿ ಸಂದರ್ಶಕ ದೀಪಕ್ ಹಾಲ್ದರ್ ಅವರ ಕಣ್ಣಲ್ಲಿಕಣ್ಣಿಟ್ಟು ನೋಡಿ ಹೇಳಿದರು: ಜ್ಯೋತಿಬಸು ಶೂವರರ್ ಬಚ್ಚಾ (ಹಂದಿಯ ಮಗ). ಅವರೇ ಹತ್ಯಾಕಾಂಡದ ಮುಖ್ಯ ರೂವಾರಿ ಮಾತ್ರವಲ್ಲ, ನಂಬರ್ ಒನ್ ಖಳನಾಯಕರಾಗಿದ್ದರು. ನಾನು ಇದನ್ನು ಹಲವಾರು ಬಾರಿ ಹೇಳಿದ್ದೇನೆ ಮತ್ತು ಬರೆದಿದ್ದೇನೆ ಕೂಡ. ನನ್ನ ಹೆತ್ತವರು, ಸಹೋದರ ಮತ್ತು ಸಹೋದರಿ ಎಲ್ಲರೂ ಮಾರಿಚ್ಝಾಪಿಯಲ್ಲಿದ್ದರು. ಆದರೆ ನಾನು ಆ ದ್ವೀಪಕ್ಕೆ ಕಾಲಿಟ್ಟಿರಲಿಲ್ಲ. ನಾನು ಆ ಸಮಯದಲ್ಲಿ ಜಾಧವಪುರ ನಿಲ್ದಾಣದಲ್ಲಿ ರಿಕ್ಷಾ ಓಡಿಸುತ್ತಾ ನನ್ನ ಸ್ವಂತ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಮಾರಿಚ್ಝಾಪಿಯ ಆ ಕರಾಳ ದಿನಗಳನ್ನು ನನ್ನ ತಂದೆ, ನೆರೆಹೊರೆಯವರು ಮತ್ತು ಸ್ನೇಹಿತರಿಂದ ಕೇಳಿದ್ದೇನೆ. ನಂತರ ಮಾರಿಚ್ಝಾಪಿಗೆ ಭೇಟಿ ನೀಡಲು ಪ್ರಯತ್ನಿಸಿದೆ. ಆದರೆ ದ್ವೀಪವನ್ನು ಪೊಲೀಸರು ಎಲ್ಲೆಡೆ ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಿದ್ದರು. ಕೊಲೆಗಳು, ಅತ್ಯಾಚಾರಗಳು ಮತ್ತು ಅಗ್ನಿ ಸ್ಪರ್ಶಗಳಿಗೆ ನಾನು ಸಾಕ್ಷಿಯಾಗಿರಲಿಲ್ಲ. ಆದರೆ ಹತ್ಯಾಕಾಂಡದ ನಂತರ ನನ್ನ ಕುಟುಂಬ ಮತ್ತು ಸುಂದರಬನದ ಜನರಿಂದ ನಾನು ಅದರ ಕುರಿತು ಸಾಕಷ್ಟು ಕೇಳಲ್ಪಟ್ಟೆ. ಸಾಕಷ್ಟು ಮಾಹಿತಿ ಸಂಗ್ರಹಿಸಿದೆ. ಸುಂದರಬನದ ಹುಲಿಗಳು ನರಭಕ್ಷಕಗಳಾಗಿ ಹೇಗೆ ಪರಿವರ್ತನೆಗೊಂಡವು ಎನ್ನುವುದು ನಿಮಗೆ ತಿಳಿದಿದೆಯೇ? ಮಾರಿಚ್ಝಾಪಿಯಲ್ಲಿ ಹಲವು ದೇಹಗಳನ್ನು ಕಲ್ಲಿಗೆ ಕಟ್ಟಿ ನೀರಿನಲ್ಲಿ ಮುಳುಗಿಸಲಾಗಿತ್ತು. ಇನ್ನೂ ಒಂದಷ್ಟು ದೇಹಗಳನ್ನು ದಟ್ಟ ಅರಣ್ಯದ ಒಳ ಭಾಗಗಳಲ್ಲಿ ಎಸೆಯಲಾಗಿತ್ತು. ಹೀಗೆ ಮಾರಿಚ್ಝಾಪಿಯ ಹತ್ಯಾಕಾಂಡ ಅಲ್ಲಿನ ಹುಲಿಗಳನ್ನು ನರಭಕ್ಷಕ ಹುಲಿಗಳನ್ನಾಗಿ ಪರಿವರ್ತನೆ ಮಾಡಿತು. ಈ ಕಾರಣಕ್ಕಾಗಿಯೇ ಜ್ಯೋತಿ ಬಸು ಶುವರರ್ ಬಚ್ಚಾ ಅಲ್ಲವೆ? ಈ ನೆಲದಲ್ಲಿ ಹೂತು ಹಾಕಿದ ಹೆಣಕ್ಕೆ ಮಾತು ಕಲಿಸುವುದೆಂತು.. ಹೇಳಿ?’ ಎಂದು ಕೇಳುತ್ತಾರೆ.

ಜ್ಯೋತಿಬಸು

ಆದರೂ ಜ್ಯೋತಿ ಬಸು ಬಂಗಾಳವನ್ನು ಐದು ಅವಧಿಗೆ ಆಳಿದರು. ಹಾಗಾದರೆ ಅವರಿಗೆ ಅಧಿಕಾರ ಕೊಟ್ಟವರು ಯಾರು? ಈ ಬಡ ಕೂಲಿಕಾರರು, ಆದಿವಾಸಿಗಳು, ದಲಿತರು ತಾನೆ? ಹೊರಜಗತ್ತಿಗೆ ಇದೆಲ್ಲಾ ಗೊತ್ತಾಗುವುದು ಹೇಗೆ? 2002ರ ಗುಜರಾತಿನ ಹತ್ಯಾಕಾಂಡಕ್ಕೆ ಯಾರು ಹೊಣೆ ಎಂದು ಇದುವರೆಗೂ ಯಾರಿಗೂ ಹೇಳಲಾಗಿಲ್ಲವೆಂಬಂತೆ ಈ ಕಥನವೂ ಸಹ. ಇಲ್ಲವಾಗಿದ್ದರೆ ಗುಜರಾತಿನ ಸಂತ್ರಸ್ತೆ ಬಿಲ್ಕಿಸ್ ಬಾನುಗೆ, ಹತ್ರಾಸ್‌ನ ಅತ್ಯಾಚಾರದಲ್ಲಿ ಸುಟ್ಟುಬೂದಿಯಾದ ದಲಿತ ಯುವತಿಗೆ ನ್ಯಾಯ ಸಿಗುತ್ತಿತ್ತಲ್ಲವೆ? ಇಲ್ಲವಾಗಿದ್ದರು ಹಣೆಗೆ ಕುಂಕುಮವಿಲ್ಲದ ಹೆಣ್ಣುಮಗಳನ್ನು ’ಗಂಡ ಸತ್ತನೆ?’ ಎಂದು ಕೇಳುವ ಧೈರ್ಯ ಯಾರಿಗಾದರೂ ಬರುತ್ತಿತ್ತೆ? ರಾಷ್ಟ್ರದ ಪ್ರಧಾನಿಯಾಗುವಂತೆ ನಾಮ ನಿರ್ದೇಶಿತರಾಗಿದ್ದ ಕಮ್ಯುನಿಸ್ಟ್ ನೇತಾರ ಜ್ಯೋತಿ ಬಸುವಿನ ಧಾರ್ಮಿಕ ನಿಲುವು ಸಹ ಇಂತಿತ್ತು ಎಂದು ಬ್ಯಾಪಾರಿ ನೆನಪಿಸಿಕೊಳ್ಳುತ್ತಾರೆ.

ಪ್ರಕಟಣೆಯೇ ಒಂದು ಮಹಾಕಥನ

ಇವರ ಆತ್ಮಕತೆಯು 1912ರಲ್ಲಿಯೇ ’ಇತಿ ಬ್ರಿತ್ತೆ ಚಾಂಡಾಲ ಜಿಬಾನ್’ ಎಂಬ ಹೆಸರಿನಲ್ಲಿ ಬಂದಿದ್ದು ಸಿಫ್ರಾ ಮುಖರ್ಜಿಯವರು 2018ರಲ್ಲಿ ಇಂಟರೋಗೆಟಿಂಗ್ ಮೈ ಚಾಂಡಾಲ ಲೈಫ್ ಎಂದು ಇಂಗ್ಲಿಷ್‌ಗೆ ಅನುವಾದಿಸಿದರು.

ನಿಜ ಹೇಳಬೇಕೆಂದರೆ ನನ್ನ ಎಂಭತ್ತ ಮೂರು ವರ್ಷ ವಯಸ್ಸಿನಲ್ಲಿ ’ಬದುಕಿರುವುದೇ ಓದಿ ಬರೆಯಲಿಕ್ಕೆ’ ಎಂದು ನೂರಾರು ಪುಸ್ತಕಗಳನ್ನು ಓದಿ ಟಿಪ್ಪಣಿ ಹಾಕಿರುವ ನನಗೆ ಇಂಥ ಒಬ್ಬ ಲೇಖಕ ಇದ್ದಾನೆ ಎಂಬುದೇ ಗೊತ್ತಿರಲಿಲ್ಲ. ಈ ನಿಟ್ಟಿನಲ್ಲಿ ಇದನ್ನು ಪ್ರಕಟಿಸಲು ಅನುವಾದ ಪಿ. ಆರಡಿ ಮಲ್ಲಯ್ಯನವರ ಪರಿಶ್ರಮ, ಅನುವಾದಕರಾದ ಡಾ. ಎಚ್.ಎಸ್. ನಾಗಭೂಷಣರ ಆಸಕ್ತಿ ಹಾಗೂ ಸೃಷ್ಟಿ ಪ್ರಕಾಶನದ ನಾಗೇಶರನ್ನು ಅಭಿನಂದಿಸಲೇಬೇಕು.

ಶೈಲಿ: ಕಡೆಯದಾಗಿ, ಬ್ಯಾಪಾರಿಯವರ ಶೈಲಿಯ ಬಗ್ಗೆ ಒಂದು ಮಾತು. ಇದು ಕುರಿತೋದಿದ ಕಾವ್ಯ ಪ್ರಯೋಗ ಪರಿಣತಮತಿಗಳ ಆಲಂಕಾರಿಕ ಶೈಲಿಯಲ್ಲ. ’ಹಾಡಲ್ಲ ತಾಯಿ ನನ್ನ ಒಡಲುರಿ’ ಎಂಬಂತೆ. ನಿರಾಶ್ರಿತರ ಸಂಕಟ, ನೋವು ತಳಮಳಕ್ಕೆ ’ಎದೆಯ ಬಿರೆಯೆ ಭಾವದೀಟಿ’ ಆ ಗಾಯದ ನೆತ್ತರ ಹಾಡು. ಅಕ್ಕಿ ಕುದಿದು ಅನ್ನ ಅರಳುವಾಗಿನ ಬಿಡುವಿನಲ್ಲಿ ಬರೆದ ’ಕುದಿಯೆಸರಿನ’ ಬರಹವಿದು. ಇಲ್ಲಿ ’ನಾಕವಿದೆ, ನರಕವಿದೆ, ಪಾಪವಿದೆ, ಪುಣ್ಯವಿದೆ’; ಎಲ್ಲವನ್ನೂ ಓದುಗನ ಅಂತರಾತ್ಮಕ್ಕೆ ನಿವೇದಿಸಲಾಗಿದೆ. ಮಾವೋನ ’ಮಹಾಪಯಣ’ದಂತೆ ’ಜೀಬಾನ್’ ಆಧುನಿಕ ಭಾರತ ಸುತ್ತಿ ತೋರಿಸುವನು. ’ಬ್ಯಾಪಾರಿ’ ಶೈಲಿಯ ನಿದರ್ಶನಕ್ಕೆ ಸುಂದರಬನದ ಹುಲಿಗಳು ನರಭಕ್ಷಕವಾದುವು ಏಕೆ? ಮರಿಚ್‌ಝರಿ ಅಧ್ಯಾಯವನ್ನು ಓದಿ ನೋಡಿ! ಎಂಥ ಅದ್ಭುತ ರೂಪಕ!.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...