ಕನ್ನಡದ ಬಕಾಲ ಮುನಿ ಎಂದೇ ಹೆಸರಾದ ಕೆ.ಬಿ.ಸಿದ್ದಯ್ಯನವರ ’ದಕ್ಲಕಥಾ ದೇವಿ ಕಾವ್ಯ’ ಈಗ ರಂಗಭೂಮಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ತಳ ಸಮುದಾಯಗಳ ಯುವಜನರೇ ಸೇರಿ ಕಟ್ಟಿರುವ ’ಜಂಗಮ ಕಲೆಕ್ಟಿವ್’ ತಂಡ ಈ ಮಹತ್ತರ ರಂಗಸಾಧ್ಯತೆಯನ್ನು ಆಗುಮಾಡಿದೆ. ನೀನಾಸಂ ಅಲ್ಲಿ ಕಲಿತು ಸಿಂಗಾಪುರದಲ್ಲಿ ಹೆಚ್ಚಿನ ರಂಗಾಧ್ಯಯನ ಮಾಡಿ ಬಂದ ಕನ್ನಡದ ಇವತ್ತಿನ ಸೂಕ್ಷ್ಮ ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ’ದಕ್ಲಕಥಾ ದೇವಿ ಕಾವ್ಯ’ವನ್ನು ನಾಟಕವಾಗಿಸಿದ್ದಾರೆ.
ಎಲ್ಲಾ ಜಾನಪದ ಕಾವ್ಯಗಳೂ ಅತ್ಯದ್ಭುತವಾದ ರಂಗ ಸಾಧ್ಯತೆಯನ್ನು ಹೊಂದಿರುವಂಥವು. ಅದರಲ್ಲೂ ಪದಕಟ್ಟುವಿಕೆಯಲ್ಲೇ ತಾಳಪ್ರಜ್ಞೆಯನ್ನು ಅಂತರ್ಗತವಾಗಿ ಒಳಗೊಂಡಿರುವ ಸಿದ್ದಯ್ಯನವರ ಬಕಾಲ, ದಕ್ಲಕಥಾ ದೇವಿಯಂತಹ ಕಾವ್ಯಗಳನ್ನು ನಾಟಕ ಮಾಡುವುದೆಂದರೆ, ಅದನ್ನು ಆಗುಮಾಡುವವರಿಗೆ ಕಾವ್ಯದ ಆಳಕ್ಕಿಳಿದು ರೂಪಕಗಳನ್ನು ಕಟ್ಟಿಕೊಳ್ಳುವ ಅಂತಃಶಕ್ತಿ ಬೇಕು. ಇದರ ಜೊತೆಗೆ ತಳ ಸಮುದಾಯಗಳ ಚಲನಶೀಲತೆ, ಸಾಂಸ್ಕೃತಿಕ ಎಚ್ಚರ, ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಅರಿವು ಮತ್ತು ಇವೆಲ್ಲವುಗಳನ್ನು ನಟರ ನೆರವಿನಿಂದ ರಂಗದ ಮೇಲೆ ತರಬಲ್ಲ ಕಸುವು ಇರಬೇಕು. ಲಕ್ಷ್ಮಣ್ ಈ ಕಸುವನ್ನು ’ದಕ್ಲಕಥಾ ದೇವಿ ಕಾವ್ಯ’ದ ಮೂಲಕ ಕನ್ನಡಿಗರ ಗಮನಕ್ಕೆ ತಂದಿದ್ದಾರೆ.

ಕೆ.ಬಿ.ಸಿದ್ದಯ್ಯನವರ ಮಾತುಗಳ ಮೂಲಕ ಶುರುವಾಗುವ ನಾಟಕ ತಮಟೆ ನುಡಿಸುತ್ತಾ ನೆಲದ ಮೇಲೆ ಬಿದ್ದ ನೋಟನ್ನು ಕಣ್ಣರೆಪ್ಪೆಯಲ್ಲಿ ಎತ್ತಿಕೊಳ್ಳುವ ಪಾತ್ರಧಾರಿಯನ್ನು ಸ್ಪಟಿಕದ ಚೂರುಗಳ ಹಾಗೆ ಒಡೆಯುತ್ತಾ ಸಾಗುತ್ತದೆ. ಹಾಗೆ ಒಡೆದ ಪ್ರತಿಚೂರಿನಲ್ಲೂ ದಲಿತ ಬದುಕಿನ ಬಣ್ಣಗಳು ಪ್ರತಿಫಲಿಸುತ್ತದೆ. ದಕ್ಲಕಥಾ ದೇವಿಯ ಮಾತಿನ ಮಾಯಕಕ್ಕೆ ಇಡೀ ರಂಗಮಂಟಪ ನಾಲಿಗೆಯೊಣಗಿದ ಹಸುಗೂಸಿನ ಒಣ ತುಟಿಗಳ ಹಾಗೆ ನಿಧಾನಕ್ಕೆ ಪಸೆಯಾಡಲು ಶುರುವಿಟ್ಟುಕೊಳ್ಳುತ್ತದೆ. ನಾಟಕ ಘಟಿಸುತ್ತಾ ಘಟಿಸುತ್ತಾ ಪಾತ್ರಗಳೊಳಗೆ ಪಾತ್ರಗಳು ಒಡಮೂಡುತ್ತಾ ಸಮುದಾಯದೊಳಗಿನ ಸಮುದಾಯಗಳನ್ನು ಕಾಣಿಸುವ ಮಾಂತ್ರಿಕತೆ ತೆರೆದುಕೊಳ್ಳುತ್ತದೆ.
ಮಾದಿಗ ಸಮುದಾಯದ ಮಕ್ಕಳೆಂದೇ ನಂಬಿರುವ ದಕ್ಕಲರ ಕುಲಪುರಾಣವನ್ನು ನಿರೂಪಿಸುತ್ತಾ ಸಿದ್ದಯ್ಯನವರು ಮಾದಿಗ ಸಮುದಾಯದ ಕಾರುಣ್ಯದ ಹಾದಿಯನ್ನು ಬಿಚ್ಚಿಡುತ್ತಾರೆ. ಊರ ಹೊರಗೆ ನಿಂತು ಮಾದಿಗರ ಕೇರಿಯಲ್ಲಿ ಮಾತ್ರವೇ ಅನ್ನ ಬೇಡುವ ದಕ್ಕಲರು ಕಣ್ಣಿಗೆ ಕಾಣದಷ್ಟು ಸಣ್ಣ ಸಮುದಾಯವಾದರೂ ತಮ್ಮೊಳಗೆ ಇಡೀ ಜಗತ್ತಿಗೆ ಆಗುವಂಥಾ ಬೃಹತ್ತಾದ ಸಾಂಸ್ಕೃತಿಕ ಸಂಪತ್ತನ್ನು ಇರಿಸಿಕೊಂಡಿದ್ದಾರೆ. ಈ ಸಾಂಸ್ಕೃತಿಕ ಸಂಪತ್ತು ’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮೂಲಕ ಕನ್ನಡನಾಡಿನ ಸೀಳುರೋಗಕ್ಕೆ ಔಷಧಿಯಾಗಿ ಒದಗಿಬಂದಿದೆ. ಮಾದಿಗ ಸಮುದಾಯದ ಚಿಕ್ಕ ಕುಟುಂಬವೊಂದು ದಕ್ಕಲ ದೇವಿಯ ಕಥೆಯನ್ನು ಹೇಳುತ್ತಾ ಊರೂರು ಅಲೆದು ಬದುಕು ನಡೆಸುವ ಮತ್ತು ಕುಲಗಳನ್ನು ಕೂಡಿಸುತ್ತಾ ಸಾಗುವ ವಿಭಿನ್ನ ರಂಗತಂತ್ರವನ್ನು ನಿರ್ದೇಶಕರು ಕಟ್ಟಿಕೊಂಡಿದ್ದಾರೆ.
ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ
ಕರ್ನಾಟಕದಲ್ಲಿ ಅದರಲ್ಲೂ ಬಯಲ ಸೀಮೆಯಲ್ಲಿ ಹೊಲೆಯ ಮಾದಿಗರ ಸಾಂಸ್ಕೃತಿಕ ಚಹರೆಗಳಾದ ತಮಟೆ ಮತ್ತು ಅರೆವಾದ್ಯಗಳನ್ನು ಇಡೀ ನಾಟಕದಲ್ಲಿ ಸೂಜಿ ದಾರದ ಹಾಗೆ ಬಳಸಲಾಗಿದೆ. ದಕ್ಕಲದೇವನು ತನ್ನ ಎಡಭುಜದ ಮೇಲೆ ತಮಟೆಯನ್ನೂ, ಬಲಭುಜದ ಮೇಲೆ ಅರೆಯನ್ನೂ ಹೊತ್ತುಕೊಂಡು ಅವುಗಳನ್ನು ನುಡಿಸುವ ತನ್ನಿಬ್ಬರು ಮಕ್ಕಳನ್ನು ಜೊತೆಗೂಡಿಸಿಕೊಂಡು ಲೋಕಸಂಚಾರ ಹೊರಡುತ್ತಾನೆ. ಇಡೀ ರಂಗಭೂಮಿಯನ್ನೇ ನಾವು ಲೋಕದ ವಿಸ್ತಾರವೆಂದು ಭಾವಿಸಿದರೆ, ಆ ರಂಗದ ಒಂದು ಮೂಲೆಯಲ್ಲಿ ಕೂತ ದಕ್ಕಲದೇವಿ ಇಡೀ ಲೋಕವನ್ನೇ ಆವರಿಸಿಕೊಳ್ಳುತ್ತಾಳೆ ಮತ್ತು ತನ್ನ ಗಂಡ, ಮಕ್ಕಳ ಯಾತ್ರೆ ಅವಳ ಅರಿವಿಗೆ ಬರುತ್ತಲೇ ಇರುತ್ತದೆ. ಈ ವಿಶಿಷ್ಟ ರಂಗತಂತ್ರವನ್ನು ನಿರ್ದೇಶಕರು ದಲಿತ ಸಮುದಾಯದ ಎಡ ಬಲ ಬಣಗಳ ನಡುವಿನ ವಿದ್ಯಮಾನಗಳನ್ನು ಗಮನಿಸುವ ಬಾಬಾಸಾಹೇಬರ ಕಣ್ಣುಗಳಂತೆ ಸೃಷ್ಟಿಸಿದ್ದಾರೆ. ಇದನ್ನು ಹೊಸ ಕಾಲದ ಹೊಸ ಪ್ರಜ್ಞೆಯ ಲಕ್ಷ್ಮಣ್ ಅಂತಹ ನಿರ್ದೇಶಕರು ಮಾತ್ರ ಮಾಡಲು ಸಾಧ್ಯ.
ದಲಿತರ ನೋವುಗಳನ್ನಷ್ಟೇ ಕಲಾತ್ಮಕ ಮಂಡನೆ ಮಾಡುವ ಮೂಲಕ ಕಟ್ಟಲು ಯತ್ನಿಸಿ ಸೋಲುತ್ತಿದ್ದವರ ಎದುರಿಗೆ ಲಕ್ಷ್ಮಣ್ ಗೆದ್ದಿದ್ದಾರೆ. ಅಥವಾ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಊರ ಹಬ್ಬಗಳಲ್ಲಿ ಗ್ರಾಮದೇವತೆಗೆಂದು ಬೆಳಗಿನ ಜಾವ ಕಡಿದ ಕೋಣದ ರಕ್ತದಲ್ಲಿ ಅನ್ನವನ್ನು ಕಲೆಸಿ ಊರಿನ ಸುತ್ತಲಿನ ಹೊಲಗಳಿಗೆ ಚೆಲ್ಲುವ ’ರಿಚ್ಯುವಲ್ ಈ ನಾಟಕದ ಕೇಂದ್ರಬಿಂದು.

ಇದರೊಟ್ಟಿಗೆ ದಕ್ಕಲ ಮಕ್ಕಳು ಊರಬೀದಿಯ ಅಂಚಿನಲ್ಲಿ ಮಾದಿಗರಿಂದ ಸಂಗ್ರಹಿಸುವ ಅನ್ನದ ಮಡಿಕೆಗಳನ್ನು ಒಡೆದು ಅನ್ನವನ್ನು ತಲೆಯ ಮೇಲೆ ಹೊತ್ತೊಯ್ಯುವ ರಿಚ್ಯುವಲ್ ಅನ್ನೂ ಕೂಡಿಸಲಾಗಿದೆ. ನಾಟಕ ಎಲ್ಲವನ್ನೂ ಅಭಿನಯಿಸುತ್ತಾ ಕೊನೆಯ ಘಟ್ಟಕ್ಕೆ ಬರುವಷ್ಟರಲ್ಲಿ ಭಾರತೀಯರು ಅವುಡುಗಚ್ಚಿ ಸಹಿಸಿಕೊಳ್ಳಬೇಕಾದ, ಆ ಮೂಲಕ ತಳ ಸಮುದಾಯಗಳ ನಡಿಗೆಗೆ ಹೆಜ್ಜೆ ಹೊಂದಿಸಬೇಕಾದ ಸಮಯ ಬಂದೇಬಿಡುತ್ತದೆ.
ಆ ಘಟ್ಟದಲ್ಲಿ ದಕ್ಲಕಥಾ ದೇವಿ ಭಾರತಮಾತೆಯಾಗಿಬಿಡುತ್ತಾಳೆ. ಈ ದೃಶ್ಯ ಚಮತ್ಕಾರ ನಡೆಯುವ ಮೊದಲು ಭಾರತೀಯ ಗಂಡಸರು ಮೈಗೂಡಿಸಿಕೊಳ್ಳಲೇಬೇಕಾದ ಹೆಣ್ತನದ ಮಾದರಿಯೊಂದು ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಗಂಡನ್ನು ಹೆಣ್ಣಾಗಿಸಿ, ಅವನ ’ಪುರುಷಾಹಂಕಾರವನ್ನು’ ಲಯಗೊಳಿಸಿ ಹೆಣ್ಣ ಕಣ್ಣನ್ನು ಮುಡಿಯುವ ಅದ್ಭುತ ಕಾವ್ಯದಂತೆ ಆ ದೃಶ್ಯ ಮೂಡಿಬಂದಿದೆ.
ಇದನ್ನೂ ಓದಿ: ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ
ಇನ್ನು ಲಕ್ಷ್ಮಣ್ ಅವರ ಈ ಸಾಹಸಕ್ಕೆ ಕೈಜೋಡಿಸಿರುವ ನಟರು ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ನಾನು ನೋಡಿದ ಅತ್ಯದ್ಭುತ ಕಲಾವಿದರು. ದಕ್ಕಲದೇವನ ಪಾತ್ರ ಮಾಡುತ್ತಾ ಬೆರಗು ಹುಟ್ಟಿಸುವ ಸಂತೋಷ್ ದಿಂಡ್ಲೂರು, ದಕ್ಕಲದೇವಿ ಪಾತ್ರದ ಮೂಲಕ ನೆಲದವ್ವನೇ ಎದ್ದು ಬಂದಂತೆ ನಟಿಸುವ ಬಿಂದು ರಕ್ಷಿದಿ, ತಮಟೆ ಬಡಿಯುತ್ತಾ ಕಣ್ಣ ರೆಪ್ಪೆಯಲ್ಲಿ ನೋಟು ಎತ್ತುವ ಡಿಂಗ್ರಿ ಭರತ್, ಅರೆವಾದ್ಯದ ಮೂಲಕ ಮಾಂತ್ರಿಕ ಲೋಕವನ್ನೇ ಸೃಷ್ಟಿಸುವ ನರಸಿಂಹರಾಜು, ಗಂಗಮ್ಮನಾಗಿ ಧುಮ್ಮಿಕ್ಕುವ ರಮಿಕಾ ಚೈತ್ರ- ಈ ಎಲ್ಲರೂ ಅದ್ಬುತ ನಟರು. ಎಲ್ಲರೂ ನುರಿತ ಹಾಡುಗಾರರಾಗಿರುವುದು ಈ ನಾಟಕದ ಇನ್ನೊಂದು ಶಕ್ತಿ. ಇವರೆಲ್ಲರೊಂದಿಗೆ ಬೆಳಕಿನ ಮಂಜು ನಾರಾಯಣ್, ಡ್ರಾಮಟರ್ಜಿಯ ಮೋಹಿತ್, ವಸ್ತ್ರವಿನ್ಯಾಸದ ಶ್ವೇತಾರಾಣಿ, ನಿರ್ದೇಶನದಲ್ಲಿ ಸಹಾಯ ಮಾಡಿದ ಸ್ಕಂದ, ಶ್ರೀಹರ್ಷ ಮತ್ತು ಪೂರ್ವಿ ಕಲ್ಯಾಣಿ ಇವರೆಲ್ಲರೂ ಸೇರಿಕೊಂಡು ಕನ್ನಡ ರಂಗಭೂಮಿಗೆ ದಾರಿದೀಪವಾಗಬಲ್ಲ ನಾಟಕವೊಂದನ್ನು ಕೊಟ್ಟಿದ್ದಾರೆ.
ಭಾರತವನ್ನು ಮೇಲೆತ್ತುವ ಜವಾಬ್ದಾರಿಯನ್ನು ಹೊಂದಿರುವ ದಲಿತ ಸಮುದಾಯ ಒಟ್ಟಾಗಿ ಸಾಗಬೇಕಾದ ಬಾಬಾ ಸಾಹೇಬರ ಕನಸು ಕನ್ನಡದ ಕೆ.ಬಿ. ಸಿದ್ದಯ್ಯನವರ ಕಣ್ಣುಗಳಲ್ಲಿ ದೀಪವಾಗಿ ಉರಿಯುತ್ತಾ ತಲೆಮಾರುಗಳಿಗೆ ದಾರಿಯಾಗುತ್ತಿರುವುದನ್ನು ನೋಡಲು ನಾವು ’ದಕ್ಲಕಥಾ ದೇವಿ ಕಾವ್ಯ’ ನಾಟಕವನ್ನು ನೋಡಬೇಕು.
(’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮುಂದಿನ ಪ್ರದರ್ಶನ ನವೆಂಬರ್ 19, 2022 ಶನಿವಾರ ಸಂಜೆ 6:00 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿತವಾಗಿದೆ)

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


