Homeಕರ್ನಾಟಕಸತ್ಯಾನ್ವೇಷಣ ಸಿದ್ಧಾಂತವಾಗಿ, ಸಮಾನತೆಯ ಹಂಬಲವಾಗಿ ಕರ್ನಾಟಕದಲ್ಲಿ ಹುಟ್ಟಿದ ವಚನ ಸಾಹಿತ್ಯ ಮತ್ತು ಚಳವಳಿ

ಸತ್ಯಾನ್ವೇಷಣ ಸಿದ್ಧಾಂತವಾಗಿ, ಸಮಾನತೆಯ ಹಂಬಲವಾಗಿ ಕರ್ನಾಟಕದಲ್ಲಿ ಹುಟ್ಟಿದ ವಚನ ಸಾಹಿತ್ಯ ಮತ್ತು ಚಳವಳಿ

- Advertisement -
- Advertisement -

ಈ ದೇಶದಲ್ಲಿ ಮೊಟ್ಟಮೊದಲು ಜೀವವಿರೋಧಿ ಚಾತುರ್ವಣ್ಯ ಪ್ರಣೀತ ವೈದಿಕ ಧರ್ಮದ ಯಜ್ಞಕಾಂಡ, ಲಿಂಗತಾರತಮ್ಯ, ಗೊಡ್ಡು ಸಂಪ್ರದಾಯ, ಅಂಧಮತಾಚರಣೆ ವಿರುದ್ಧ ಪ್ರತಿಕ್ರಾಂತಿ ಹೂಡಿದ್ದು ಬೌದ್ಧ ಧರ್ಮ. ಬುದ್ಧನದು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ. ಹುಟ್ಟಿನ ಆಚೆಗೆ ಮತ್ತು ಸಾವಿನ ಈಚೆಗೆ, ಸ್ವರ್ಗ, ನರಕ, ದೇವರ ಬಗ್ಗೆ ನನಗೆ ಗೊತ್ತಿಲ್ಲ. ಆಶೆಯೇ ದುಃಖಕ್ಕೆ ಮೂಲ, ಆಶೆಯನ್ನು ಬಿಡಿ, ಬಲಿ ನೀಡಬೇಡಿ, ಹಿಂಸೆ ಮಾಡಬೇಡಿ, ಸಹಿಷ್ಣುತೆ ಇರಲಿ, ದುಡಿದು ತಿನ್ನಿ, ಲಿಂಗತಾರತಮ್ಯ ಬೇಡ, ಎಂದು ಭಿಕ್ಕುಗಳಿಗೆ ತಿಳಿಯಹೇಳಿದವನು ಬುದ್ಧ. ಅವನು ಹೇಳಿದ್ದು ದೇವ ಭಾಷೆ ಸಂಸ್ಕೃತದಲ್ಲಲ್ಲ. ಜನರ ಆಡುನುಡಿ ’ಪಾಳಿ’ಯಲ್ಲಿ. ಅವನ ಉಪದೇಶಕ್ಕೆ ಜನ ಮಾರುಹೋದರು. ಸುಮಾರು ಮೂರನೇ ಎರಡು ಭಾಗದಷ್ಟು ಜನ ಬುದ್ಧನ ಅನುಯಾಯಿಗಳಾದರು. ದೇಶ ಸಾಮಾಜಿಕವಾಗಿ ಆರ್ಥಿಕವಾಗಿ ಧಾರ್ಮಿಕವಾಗಿ ನೈತಿಕವಾಗಿ ಸಬಲೀಕರಣಗೊಂಡಿತು. ಯಾವುದೇ ಧರ್ಮಕ್ಕೆ ರಾಜಾಶ್ರಯ ದೊರೆಯಬೇಕು. ಚೀನಾದಲ್ಲಿ ಚಕ್ರವರ್ತಿ ಟಾಯ್ಜಾಂಗ್, ನಮ್ಮಲ್ಲಿ ಅಶೋಕ, ಹರ್ಷ ಅವರಂತಹ ಸರ್ವಧರ್ಮ ಸಮನ್ವಯ ದೃಷ್ಟಿಯ ದೊರೆಗಳ ಆಶ್ರಯ ಬೌದ್ಧ ಧರ್ಮಕ್ಕೆ ದೊರೆಯಿತು. ತದನಂತರ ವೈದಿಕ ಪುರೋಹಿತವರ್ಗ ಅಪ್ರಸ್ತುತವಾಗುತ್ತ ಬಂತು.

ಕ್ರಮೇಣ ಶಂಕರ, ಮಾಧ್ವ, ರಾಮಾನುಜರ ಆಚಾರ್ಯತ್ರಯರಿಂದ ವೈದಿಕವು ಪುನಃ ತಲೆಯೆತ್ತಿತು. ದಕ್ಷಿಣದಲ್ಲಿ ಪಲ್ಲವರು, ಪಶ್ಚಿಮದಲ್ಲಿ ಚಾಲುಕ್ಯರು ಅದಕ್ಕೆ ಆಶ್ರಯ ನೀಡಿದರು. ಶಂಕರಾಚಾರ್‍ಯರು ತನ್ನ ಶಿಷ್ಯವೃಂದದ ಸಮೇತ ಬೌದ್ಧ ನೆಲೆಗಳಾದ ನಳಂದ, ನಾಗಾರ್ಜುನಕೊಂಡ ಮುಂತಾದ ಕಡೆ ದಾಳಿ ನಡೆಸಿ ಹಾಳುಗೆಡವಿದರು ಎಂಬುದಕ್ಕೆ ದಾಖಲೆಗಳಿವೆ. ಕಡೆಗೆ ರಾಜಾಶ್ರಯ ವಂಚಿತವಾದ ಭೌದ್ಧ ಧರ್ಮ ಭಾರತ ಉಪಖಂಡದಿಂದ ಚೀನಾ ಮುಂತಾದ ಕಡೆ ಪಲಾಯನ ಮಾಡಿತು ಮತ್ತು ಇದೇ ವೇಳೆ ಬುದ್ಧನ ತತ್ವಗಳಿಗೆ ಮನಸೋತ ವೈದಿಕವು ಅವನನ್ನು ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದು ಎಂದು ಪರಿಗಣಿಸಿ ಹೈಜಾಕ್ ಮಾಡಿಕೊಂಡಿತು. ಇದು ಈ ದೇಶದ ಪ್ರಾಚೀನ ಧಾರ್ಮಿಕ ಚರಿತ್ರೆ. ಅಂತೂ ರಾಜಾಶ್ರಯವಿಲ್ಲದೆ ಯಾವ ಧರ್ಮಕ್ಕೂ ಉಳಿಗಾಲವಿಲ್ಲ. ಈ ಹಿನ್ನೆಲೆಯಲ್ಲಿ ನಾವೀಗ ವಚನ ಸಾಹಿತ್ಯ (ಧರ್ಮ)ವನ್ನು ಕುರಿತು ಕೊಂಚ ಪರಿಶೀಲಿಸಬಹುದು.

ಹನ್ನೆರಡನೇ ಶತಮಾನದಲ್ಲಿ ಬಸವಾದಿ ವಚನಕಾರರಿಗೆ ಕಲ್ಯಾಣದ ಕಳಚೂರ್ಯ ಬಿಜ್ಜಳನು ಆಶ್ರಯದಾತನಾಗಿದ್ದನು. ಶ್ರಮಜೀವಿಗಳಾದ ಶರಣರು ಬೌದ್ಧರ ನಂತರ ದಕ್ಷಿಣದಲ್ಲಿ ಅದೂ ಕರ್ನಾಟಕದಲ್ಲಿ ವೈದಿಕ ಪ್ರತಿಗಾಮಿ ವ್ಯವಸ್ಥೆಯ ವಿರುದ್ಧ ರಕ್ತರಹಿತ ಪ್ರತಿಕ್ರಾಂತಿ ಹೂಡಿದರು. ವರ್ಗ, ಜಾತಿ, ಲಿಂಗತಾರತಮ್ಯವಿಲ್ಲದೆ ವಿವಿಧ ವೃತ್ತಿಯ ಶಿವಶರಣರು ಸಹಬಾಳ್ವೆ, ಸಮಾನತೆ, ಸೋದರತ್ವ ಮುಂತಾದ ಜೀವಪರ ಮೌಲ್ಯಗಳನ್ನು ಬಿತ್ತಿ ಬೆಳೆದರು. ಆ ಬೆಳೆಯ ಸತ್ವ ಏನೆಂಬುದನ್ನು ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ನೈತಿಕ ನೆಲೆಯಲ್ಲಿ ವರ್ಗೀಕರಿಸಿ ನೋಡಬಹುದಾಗಿದೆ.

ಧಾರ್ಮಿಕ

ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಠಿ
ತರ್ಕವೆಂಬುದು ತಗರ ಹೋರಟೆ
ಭಕ್ತಿಯೆಂಬುದು ತೋರುಂಬ ಲಾಭ

ಹೀಗೆಂದು ಅಲ್ಲಮಪ್ರಭು ವೈದಿಕರ ರಕ್ಷಣಾತ್ಮಕ ಭದ್ರಕೋಟೆಗೆ ಲಗ್ಗೆಯಿಟ್ಟು ಅದರ ಜೀವ ವೀರೋಧಿ ಸಂಸ್ಕೃತ ಸಲಕರಣೆಗಳನ್ನೆಲ್ಲ ಎತ್ತಿ ಬೀದಿಗೆ ಬಿಸಾಡಿದರು. ಉದರನಿಮಿತ್ತ ಬಹುಕೃತ ವೇಷ ಧರಿಸಿ, ದಾನ ಧರ್ಮಾದಿಗಳಿಗೆ ಕೈಯೊಡ್ಡಿ, ವೇದ ಶಾಸ್ತ್ರ ಪುರಾಣ ತರ್ಕ ಕೊನೆಗೆ ಭಕ್ತಿಯೆಂದು ಕುಯುಕ್ತಿ ನುಡಿವ ಪುರೋಹಿತಷಾಹಿ ವ್ಯಾಘ್ರನ ’ಗುಂಡಿಗೆ’ ನಡುಗುವಂತೆ ನುಡಿಗುಂಡುಗಳನ್ನು ಹಾರಿಸುತ್ತಾರೆ. ಅಲ್ಲಮನ ವಾಣಿ ಅಳ್ಳೆದೆಯವನನ್ನೂ ಹುಲಿಯನ್ನಾಗಿಸುವ ಕಾಂತ ಗುಣವನ್ನು ಹೊಂದಿದೆ. ಆತ್ಮಬಲದ ಮುಂದೆ ಇನ್ನಾವುದೇ ಬಲ ನಿಲ್ಲಲಾರದು ಎಂಬ ಆತ್ಮವಿಶ್ವಾಸವನ್ನು ತುಂಬಿದವನು ಅಲ್ಲಮ. ಅವನ ನೈತಿಕ ನಿಲುವು ಜಗದಗಲ, ಮುಗಿಲಗಲ. ಅಲ್ಲಮನೆಂದರೆ ಪರಿಣತ ಜನತಾ ಪ್ರಜ್ಞೆಯ ಮಹಾನ್ ಪ್ರತಿಮೆ.

ಹಿಂದೂಸಮಾಜದಲ್ಲಿ ಯಾವ ದಲಿತವರ್ಗದವರು ಕನಿಷ್ಠರು-ನತದೃಷ್ಟರು-ನೀಚರು-ಪಾತಕಿಗಳು-ಪಂಚಮರು ಎಂದು ಮುಂತಾಗಿ ಕರೆಸಿಕೊಂಡು ಅವಜ್ಞೆಗೆ ಪಾತ್ರರಾಗಿ, ಶೋಷಣೆಗೆ ಒಳಗಾಗಿದ್ದರೋ ಅವರನ್ನೆಲ್ಲಾ ವಿಶಾಲವಾದ ತಳಹದಿಯ ಮೇಲೆ, ಪುನರುಜ್ಜೀವಿತವಾದ ವೀರಶೈವದ ತೋಳತೆಕ್ಕೆಯಲ್ಲಿ ತಬ್ಬಿ-ಅವರಿಗೆ ಇಹಪರಗಳೆರಡರಲ್ಲೂ ಸ್ಥಾನಮಾನಗಳನ್ನು ಬಸವಣ್ಣನು ಕಲ್ಪಿಸಿಕೊಟ್ಟರೆ – ಆ ವೀರಶೈವ ಪತಾಕೆಯಡಿಯಲ್ಲಿ ಒತ್ತೊಟ್ಟಿಗೆ ಬಂದ ಜನ ತಾವೇ ಒಂದು ಜಾತಿಯೆಂದು ಪ್ರತ್ಯೇಕಕೊಂಡು, ತಮ್ಮಂತೆಯೇ ಇರುವ – ಆದರೆ
ಇತರ ಧರ್ಮಗಳಲ್ಲಿರುವ – ತಮ್ಮ ಇನ್ನಿತರ ಸಹಜೀವಿಗಳೊಂದಿಗೆ ಸಂಬಂಧವನ್ನು ಎಲ್ಲಿ ಕಡಿದುಕೊಳ್ಳುವರೋ ಎಂದೂ – ಆ ಮೂಲಕ ಪ್ರಗತಿ ಎಲ್ಲಿ ಸ್ಥಗಿತವಾಗುವುದೋ ಎಂದೂ ಅಲ್ಲಮನು ಮೇಲಿಂದಮೇಲೆ ಬಿಳಿಲು ಬಿಟ್ಟು ಬಂದ ಮತೀಯತೆಯನ್ನು ಖಂಡಿಸಿದ. [ಡಾ. ಎಲ್. ಬಸವರಾಜು-ಅಲ್ಲಮನ ವಚನಗಳು, ಪುಟ 62]

ಸಾಮಾಜಿಕ

ಸಾಮಾಜಿಕ ನೆಲೆಯ ಬೇರೆ ಬೇರೆ ಸ್ತರಗಳಿಂದ ಬರುವ ಅಮ್ಮಿದೇವಯ್ಯನು ಕ್ಷೌರಿಕ; ಮಾರಿತಂದೆ ಮೂಲತಃ ಕನ್ನ ಕೊರೆದು ಕಳ್ಳತನ ಮಾಡುತ್ತಿದ್ದವನು; ಕಣ್ಣಪ್ಪ ಗಾಳಹಾಕಿ ಮೀನು ಹಿಡಿಯುವವನು; ಭೀಮಣ್ಣ ಹಾಗೂ ರಾಮಣ್ಣ ಗೋವಳಿಗರು; ಕಲಕೇತಯ್ಯ ಓರ್ವ ಜನಪದ ಕಲಾವಿದ; ಕಿನ್ನರಿ ಬ್ರಹ್ಮಯ್ಯ ಕಿನ್ನರಿ ನುಡಿಸುತ್ತಿದ್ದ ಓರ್ವ ಕಲಾವಿದ; ಡಕ್ಕೆ ಬೊಮ್ಮಣ್ಣನು ಮೂಲತಃ ಡಕ್ಕೆಯನ್ನು ಬಾರಿಸುತ್ತ ಮೊರದಲ್ಲಿ ಮಾರಿಯನ್ನಿಟ್ಟು ಕುಣಿಸುವವನು; ನುಲಿ ಚಂದಯ್ಯ ಹುಲ್ಲನ್ನು ತಂದು ಹಗ್ಗವನ್ನಾಗಿ ಹೊಸೆದು ಮಾರಿ ಜೀವಿಸುವವನು; ಮಾರಿತಂದೆ ಮೂಲತಃ ನಗಿಸುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದವನು; ಕಾಮಾಟದ ಭೀಮಣ್ಣ ಮನೆಕಟ್ಟುವ ವೃತ್ತಿಯವನು; ಕಾಮಿದೇವಯ್ಯ ಊರನ್ನು ಕಾಯುವ ತಳವಾರ ಕಾಯಕದವನು-ಇವರೆಲ್ಲರೂ ವೀರಶೈವ ಮತವನ್ನು ಸ್ವೀಕರಿಸಿ ಶಿವನನ್ನು ತಮ್ಮ ಇಷ್ಟದೈವವೆಂದು ಭಾವಿಸಿದವರು, ನಂಬಿದವರು. ವೀರಶೈವದ ತೆಕ್ಕೆಗೆ ಇವರು ಬಂದದ್ದರಿಂದ ಹುಟ್ಟಿನಿಂದ ಬಂದ ಅಸ್ಪೃಶ್ಯತೆಯನ್ನು ನೀಗಿಕೊಂಡು ಸಮಾನತೆಯ ಗೌರವ ಪಡೆದರು. ಈ ನಂಬಲೇಬೇಕಾದ ಪವಾಡ ಸಾಧ್ಯವಾದದ್ದು ಕಾಯಕ ತತ್ವದಿಂದಾಗಿ-ಬಿಜ್ಜಳನ ಆಳ್ವಿಕೆಯಲ್ಲಿ, ಕಲ್ಯಾಣ ನಗರದಲ್ಲಿ, ಕರ್ನಾಟಕದಲ್ಲಿ.

ವಚನ ಸಾಹಿತ್ಯದ ಇನ್ನೊಂದು ಪ್ರತಿಕ್ರಾಂತಿ ಹೆಜ್ಜೆ ಎಂದರೆ, ಸರ್ವಶೋಷಣೆಯ ಕೇಂದ್ರಸ್ಥಳವಾದ ದೇವಾಲಯ ಸಂಸ್ಕೃತಿಯನ್ನು ಪ್ರತಿರೋಧಿಸಿ, ’ದೇಹವೇ ದೇಗುಲ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಸಾರಿದ್ದು. ಪುರೋಹಿತವರ್ಗ ಹುಟ್ಟುಹಾಕಿದ ಶುಭ ಮುಹೂರ್ತ, ವಾರ, ದಿನ, ನಕ್ಷತ್ರ, ತಿಥಿ ಮುಂತಾದ ಹುಸಿಶಾಸ್ತ್ರದ ಅವೈಜ್ಞಾನಿಕ ಜ್ಯೋತಿಷ್ಯವನ್ನು ತಿರಸ್ಕರಿಸಿತು ವಚನ ಧರ್ಮ. ಹಾಗೇ ಬ್ರಾಹ್ಮಣ್ಯದ ಜಾತಿ ಶ್ರೇಷ್ಠತೆಯ ವ್ಯಸನವನ್ನು ತಿರಸ್ಕರಿಸಿ ವ್ಯಾಸ ಬೆಸ್ತಳ ಮಗ, ಮಾರ್ಕಂಡೇಯ ಹೊಲತಿಯ ಮಗ, ವಾಲ್ಮೀಕಿ ಬೇಡ, ಕಶ್ಯಪ ಕಮ್ಮಾರ, ಕೌಂಡಿನ್ಯನೆಂಬ ಋಷಿ ನಾಪಿತ ಎಂದು ಸಾರಿ ಸಾಮಾಜಿಕ ಹಾಗೂ ಮತೀಯ ಸಂಕಚಿತ ಗೆರೆಗಳನ್ನು ಅಳಿಸಿ ಹಾಕಿತು ವಚನ ಸಾಹಿತ್ಯ.

ಆರ್ಥಿಕ

ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ತತ್ವದಡಿ ವಚನ ಧರ್ಮವು ಅಧಿಕ ಸಂಗ್ರಹವನ್ನು ನಿರಾಕರಿಸಿತು. ಈ ನಿಟ್ಟಿನಲ್ಲಿ ಬಸವಣ್ಣನವರ ಕೆಲವು ವಚನಗಳಿವೆ. ’ಆಯುಷ್ಯ ಉಂಟು ಪ್ರಳಯವಿಲ್ಲೆಂದು ಅರ್ಥವ ಮಡಗುವಿರಿ; ಆಯುಷ್ಯ ತೀರಿ ಪ್ರಳಯ ಬಂದರೆ, ಆ ಅರ್ಥವನುಂಬುವರಿಲ್ಲ; ನೆಲನನಗೆದು ಮಡಗದಿರಾ! ನೆಲನುಂಗಿದರುಗುಳುವುದೇ? ಕಣ್ಣಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ ಉಣ್ಣದೆ ಹೋಗುವಿರಾ! ಕಡಬಡ್ಡಿ(ಸಾಲ) ವ್ಯವಹಾರದಲ್ಲಿ ನಿರತರಾದರೆ ಇದರಿಂದ ಆರ್ಥಿಕ ವಿಷಮತೆಗೆ ಕಾರಣವಾಗುತ್ತದೆಂದು
ಎಚ್ಚರಿಸುವರು. ಅರ್ಥ ಸಂಗ್ರವೆಂಬುದು ಅನರ್ಥಕ್ಕೆ ಕಾರಣವಾಗುತ್ತದೆ. ಆದ್ದರಿಂದ ಕಾಯಕ ಮತ್ತು ದಾಸೋಹ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ಸಾಗಬೇಕೆಂಬುದು ವಚನಸಾಹಿತ್ಯದ ಆರ್ಥಿಕನೀತಿ.

ಬಸವಣ್ಣನವರ ಆರ್ಥಿಕ ನೀತಿ ಶಿವಶರಣರೆಲ್ಲರ ಮೇಲೂ ಪರಿಣಾಮ ಬೀರಿತು. ಸಾಂಕೇತಿಕವಾಗಿ ನೋಡಿದರೆ ಅಂಥ ಒಂದು ಅಪರೂಪದ ನಿದರ್ಶನ ಆಯ್ದಕ್ಕಿ ಮಾರಯ್ಯ ಮತ್ತು ಅವನ ಪತ್ನಿ ಲಕ್ಕಮ್ಮ ದಂಪತಿಗಳ ಪ್ರಸಂಗ: ಇವರಿಬ್ಬರು ಮಹಾಮನೆಯಲ್ಲಿ ದವಸ ಧಾನ್ಯ ಶುದ್ಧೀಕರಣ ಹಾಗೂ ಶಿವಭಕ್ತರಿಗೆ ವಿತರಣೆ ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಆ ಒಂದು ಸಂದರ್ಭದಲ್ಲಿ ಚೆಲ್ಲಿದ ಹೆಚ್ಚುವರಿ ಅಕ್ಕಿಯನ್ನು ಮಾರಯ್ಯ ಆರಿಸಿಕೊಂಡು ಮನೆಗೆ ಹೊತ್ತು ತರುವನು. ಅದನ್ನು ಕಂಡ ಸ್ವಾಭಿಮಾನಿ ಲಕ್ಕಮ್ಮ ಸಿಡಿಮಿಡಿಗೊಂಡು:

ಆಸೆಯೆಂಬುದು ಅರಸಿಂಗಲ್ಲದೆ
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ
ಈಸಕ್ಕಿಯಾಸೆ ನಿಮಗೇಕೆ?

ಈಶ್ವರನೊಪ್ಪ- ಎಂದು ನಿಷ್ಠುರವಾಗಿ ನುಡಿದು ’ಬೇಗ ಹೋಗಿ ಅವನ್ನು ಅಲ್ಲಿಯೇ ಚೆಲ್ಲಿಬರುವಂತೆ’ ಹೇಳಿ ಕಳಿಸುತ್ತಾಳೆ. ಇಂದು ಯಾರಾದರೂ ಹೆಣ್ಣುಮಗಳು, ಅಪಮಾರ್ಗ ಹಿಡಿದ ತನ್ನ ಗಂಡ ಲಂಚ ರುಷುವತ್ತು ಪಡೆದು ಮನೆಗೆ ತಂದಾಗ ಹೀಗೆ ಛೀಮಾರಿ ಹಾಕಿದ್ದುಂಟೆ?- ಲಕ್ಕಮ್ಮನಂತೆ.

ಸ್ತ್ರೀ ಸಮಾನತೆ

ವೈದಿಕ ವರ್ಣಾಶ್ರಮ ವ್ಯವಸ್ಥೆಯಲ್ಲಿ ಸ್ತ್ರೀಗೆ ಗಂಡಿನ ಸರಿಸಮಾನತೆ ಇಲ್ಲ. ಪುರುಷ ಪಾರಮ್ಯ ವ್ಯವಸ್ಥೆಯಲ್ಲಿ ಅವಳ ಪಾತ್ರ ನಗಣ್ಯ. ಸ್ತ್ರೀಅಸಮಾನತೆ, ಶೋಷಣೆಗಳನ್ನು ನಿವಾರಿಸಲು ಯತ್ನಿಸಿದರು ವಚನಕಾರರು. ಹನ್ನೆರಡನೆಯ ಶತಮಾನದಲ್ಲಿ ಸ್ತ್ರೀಯರು ಪುರುಷ ಪಾರಮ್ಯದ ಸಾಮಾಜಿಕ ವ್ಯವಸ್ಥೆ ಸಂಕೋಲೆಯನ್ನು ಹರಿದುಕೊಂಡು ’ನಾನು ನಿನಗೆ ಸಮ’ ಎಂಬ ಬುದ್ಧಿಭಾವದಿಂದ ವಚನಗಳನ್ನು ಹಾಡಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಪುರುಷರ ಹಕ್ಕು ಎಂಬುದನ್ನು ಸುಳ್ಳಾಗಿಸಿದರು. ಅವಕಾಶ ಸಿಕ್ಕರೆ ಸ್ತ್ರೀಯರು ಸಹ ಎಂಥ ಸಾಹಿತ್ಯ ಸೃಜಿಸಬಲ್ಲರು ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ಹೇಳಬಹುದು. ಶಿವಶರಣರಂತೆಯೇ ಶರಣೆಯರೂ ಅನೇಕ ವೃತ್ತಿಯವರಿದ್ದರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಕದಿರ ಕಾಯಕದ ಕಾಳವ್ವ, ಕೊಟ್ಟಣದ ಸೋಮವ್ವ, ಗಂಗಾಬಿಕೆ, ನಾಗಲಾಂಬಿಕೆ, ನೀಲಮ್ಮ, ಮುಕ್ತಾಯಕ್ಕ, ಸತ್ಯಕ್ಕ, ಸೂಳೆಸಂಕವ್ವ. ಇಷ್ಟಲ್ಲದೆ ಅನೇಕ ಶರಣರ ಪುಣ್ಯ ಸ್ತ್ರೀಯರಿದ್ದಾರೆ.

ಇಲ್ಲಿ ಮೊಟ್ಟಮೊದಲ ಹೆಸರು ಅಕ್ಕಮಹಾದೇವಿಯದು. ಹೆಸರಿಗಷ್ಟೇ ಮೊದಲಲ್ಲ. ಜಡ್ಡುಗಟ್ಟಿದ ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ ದಂಗೆ ಎದ್ದ ಪ್ರಥಮ ಮಹಿಳೆ ಈಕೆ. ’ಈ ಸಾವ ಕೆಡುವ ಗಂಡರನ್ನು ಒಯ್ದು ಒಲೆಯೊಳಗಿಕ್ಕು ಎಲೆಗೆ, ತಾಯಿ’ ಎಂದು ಮಾತಿಗೆ ತಪ್ಪಿದ ಗಂಡ ಕೌಶಿಕನನ್ನು ತೊರೆದು ಕಲ್ಯಾಣದತ್ತ ದಿಟ್ಟ ಹೆಜ್ಜೆ ಇಟ್ಟ ಹೆಣ್ಣುಮಗಳು. ಮನೆ ಬಿಟ್ಟು ಹೊರಟು ನಿಂತಾಗ ಪತಿ ಅವಳ ಸೆರಗು ಹಿಡಿದು ಎಳೆದು ನಿಲ್ಲಿಸಲು ಯತ್ನಿಸಿದ. ಆಗ ಅಕ್ಕ ’ನೀ ಕೊಟ್ಟ ಒಡವೆ ವಸ್ತ್ರ ಎಲ್ಲ ನಿನಗೇ ಇರಲಿ’ ಎಂದು ಎಲ್ಲವನ್ನೂ ಬಿಚ್ಚಿ ಅವನ ಮುಖಕ್ಕೆ ರಾಚಿ ಒಗೆದು ನಿರ್ವಾಣದಲ್ಲಿ ಹೊರನಡೆದ ಪ್ರತಿಕ್ರಾಂತಿಯ ಮಹಾ ಶರಣೆ ಅಕ್ಕಮಹಾದೇವಿ. ’ನೊಂದ ನೋವ ನೋಯದವರೆತ್ತ ಬಲ್ಲರು ತಾಯಿ?’ ಎಂದು ಕೇಳಿದ ಅವಳ ಅಂದಿನ ಮಾತು ಇಂದಿಗೂ ಈ ನೆಲದಲ್ಲಿ ಅನುರಣಿಸುತ್ತಿದೆ. ಪ್ರಜಾಪ್ರಭುತ್ವದ ಸಂದರ್ಭದಲ್ಲೂ ಕೂಡ ಮಹಿಳೆಯರಿಗೆ 50:50ರ ಅನುಪಾತದಲ್ಲಿ ಅಧಿಕಾರ ಬಂದಿಲ್ಲ; ಸ್ವಾತಂತ್ರ್ಯ ಸಿಕ್ಕಿಲ್ಲ. ಭಾರತ ಇರಲಿ ವಚನಕಾರರ ಪುಣ್ಯಭೂಮಿಯಾದ ಕರ್ನಾಟಕದಲ್ಲೂ ಸಹ. ಇಂತಿದ್ದರೂ ಕೆಲವು ಸಂಪ್ರದಾಯವಾದಿ ಸ್ತ್ರೀಯರು ಸಹ ಮಹಿಳಾ ವಿರೋಧಿ ಪಕ್ಷ ಸಿದ್ಧಾಂತಗಳನ್ನು ನೆಮ್ಮಿ ಕೈವಾರಿಸುತ್ತಿರುವುದು ಕಂಡುಬರುತ್ತದೆ.

ರಾಜಕೀಯ

ರಾಜ್ಯಾಧಿಕಾರ ಗದ್ದಿಗೆಯಾಗಲಿ, ಐಶ್ವರ್ಯ ಸಂಪತ್ತಾಗಲಿ, ಸಿರಿಯ ಶೃಂಗಾರವಾಗಲಿ ಸ್ಥಿರವಲ್ಲ. ಸಂಪತ್ತಿನ ಸಮೃದ್ಧಿಯಿಂದ ಕೂಡಿ ಕಲ್ಯಾಣವೆಂಬ ಎಂಬ ಹೆಸರಿಗೆ ಅನ್ವರ್ಥವಾಗಿದ್ದ ಬಿಜ್ಜಳನ ರಾಜಧಾನಿಯು ಒಬ್ಬ ಜಂಗಮನ ಕಾರಣದಿಂದ ಹಾಳಾಯಿತಲ್ಲ? ಎಂದರೆ ಬಸವಣ್ಣನ ಮುಂದಾಳತ್ವದಲ್ಲಿ ಕಟ್ಟಿದ ನಗರ ಮೂಲಭೂತವಾದಿ ವೈದಿಕರ ದೆಸೆಯಿಂದ ಕೆಟ್ಟಿತು. ಚಾಲುಕ್ಯ ಸಾಮಂತ ಕಳಚೂರಿ ಬಿಜ್ಜಳನ ಆಳ್ವಿಕೆ ಕೊನೆಗೊಂಡಿತು. ಬಿಜ್ಜಳನ ಮಗ ಮತ್ತು ತಮ್ಮಂದಿರನ್ನೇ ಎತ್ತಿ ಕಟ್ಟಿದ ವೈದಿಕ ಮೂಲಭೂತವಾದಿಗಳು ಕಲ್ಯಾಣ ನಗರವನ್ನು ಕೆಡಿಸಿಬಿಟ್ಟರು ಎಂಬ ರಾಜಕೀಯ ಪಲ್ಲಟದ ಕುರಿತು ಹೇಳುತ್ತದೆ ಈ ವಚನ. ಪ್ರಸ್ತುತ ಭಾರತದ ಧರ್ಮ ರಾಜಕಾರಣವನ್ನು ಈ ಹಿನ್ನೆಲೆಯಿಂದ ಪರಿಶೀಲಿಸಬಹುದು.

ಕೊನೆಯದಾಗಿ

ಅಶೋಕ ಚಕ್ರವರ್ತಿಯ ನಂತರ ಆ ಎತ್ತರದ ಧಾರ್ಮಿಕ ಮೌಲ್ಯಗಳನ್ನು ಬಿತ್ತಿದವರಲ್ಲಿ ಬಸವಣ್ಣನವರೆ ಮೊದಲಿಗರು. ಗಾಂಧೀಜಿಯವರು ಆ ಧರ್ಮಶ್ರದ್ಧೆಯನ್ನೇ ಮತ್ತಷ್ಟು ವ್ಯಾಪಕವಾಗಿ ಆಚರಣೆಗೆ ತಂದರು. ಕದಿಯದಿರುವುದು, ಕೊಲ್ಲದಿರುವುದು, ಸುಳ್ಳಾಡದಿರುವುದು, ಮುನಿಯದಿರುವುದು, ಅನ್ಯರಿಗೆ ಅಸಹ್ಯ ಪಡದಿರುವುದು, ತನ್ನ ಸಮಾನವಿಲ್ಲವೆಂದು ಬಣ್ಣಿಸಿಕೊಳ್ಳೂವುದು, ಇನ್ನೊಬ್ಬರನ್ನು ಹೀಯ್ಯಾಳಿಸುವುದು ಇವು ಏಳು ಸರ್ವೋದಯ ಸಮಾಜಕ್ಕೆ ವಚನ ಸಾಹಿತ್ಯ ನೀಡಿದ ಸಪ್ತ ಸೋಪಾನಗಳು. ಇವು ಏಸುಕ್ರಿಸ್ತನ Ten commandments ಇದ್ದಂತೆ ಜಾಗತಿಕ ಸಮುದಾಯಗಳಿಗೂ ಆದರ್ಶಪ್ರಾಯವಾಗಿವೆ.

ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಹರಿಸುತ್ತ ಬರುವಾಗ ಒಂದು ಕಡೆ ತಪೋವನವನ್ನು ಪ್ರವೇಶಿಸಿದಂತೆಯೂ, ಸಿದ್ಧ ಸಾಧಕ ಋಷಿಗಳ ಸಂದರ್ಶನ ಪಡೆದು, ಅವರ ಉದಾತ್ತ ಜೀವನ ಧರ್ಮ ಬೋಧೆಗಳಿಂದ ನಮ್ಮ ಅಂತರಂಗ ಪರಿಶುದ್ಧವಾದಂತೆಯೂ, ಆತ್ಮನ ಬಂಧನಗಳು ಕಳಚಿಬಿದ್ದು ನಾವು ಮುಕ್ತರಾದಂತೆಯೂ ಒಂದು ದಿವ್ಯವಾದ ಆನಂದಾನುಭವ ಉಂಟಾಗುತ್ತದೆ. ಇಲ್ಲಿ ಪಟ್ಟಣದವಾಸದ ಗೊಂದಲವಿಲ್ಲ, ರಾಜಸ್ಥಾನದ ವೈಭವ ದೃಶ್ಯಗಳಿಲ್ಲ. ತಪೋವನದ ಸಹಜಶಾಂತಿ, ಪರಸ್ಪರ ಪ್ರೇಮ, ಸಮತಾಭಾವ, ಸ್ವಾತಂತ್ರ್ಯ-ಇವು ಮೂರ್ತಿಮತ್ತಾಗಿ ಕಾಣುತ್ತವೆ. ಅರಣ್ಯಕಗಳಲ್ಲಿ ಉಪನಿಷತ್ತಿನ ದರ್ಶನವನ್ನು ಕಂಡಂತೆ, ಇಲ್ಲಿ ವಚನಧರ್ಮದ ದರ್ಶನವನ್ನು ಕಾಣುತ್ತೇವೆ. ಸತ್ಯದ ಹಂಬಲ ಸಾಹಿತ್ಯವಾಗಿ, ಸತ್ಯಾನ್ವೇಷಣ ಸಿದ್ಧಾಂತವಾಗಿ, ಸತ್ಯ ಸಾಕ್ಷಾತ್ಕಾರವೇ ದರ್ಶನವಾಗಿ ನಮಗೆ ಆನಂದವನ್ನುಂಟುಮಾಡುತ್ತವೆ- ಎನ್ನುವ ಎಂ.ಆರ್.ಶ್ರೀನಿವಾಸಮೂರ್ತಿ ಅವರ ’ವಚನ ಧರ್ಮಸಾರ’ದ ಪ್ರಾರಂಭದ ಮಾತುಗಳು ವಚನ ಸಾಹಿತ್ಯದ ಬಗೆಗೆ ನಮಗಿರುವ ಗೌರವ, ಪೂಜ್ಯ ಭಾವನೆಗಳನ್ನು ತಿಳಿಯಪಡಿಸುತ್ತವೆ.

ವಚನ ಧರ್ಮ ಒಂದು ಜಾಗತಿಕ ಪ್ರಗತಿಪರ ಧರ್ಮ. ವಚನ ಸಾಹಿತ್ಯ ವಿಶ್ವ ಸಾಹಿತ್ಯದ ಸಮಸಮ ನಿಲ್ಲುವ ಮೌಲ್ಯವುಳ್ಳದ್ದು, ನಿಜ. ಆದರೆ, ಇಂದಿನ ಪ್ರಜಾಪ್ರಭುತ್ವದ ಸಂದರ್ಭದಲ್ಲೂ ಸಹ ನಮ್ಮಲ್ಲಿ ನುಡಿ ಭಯೋತ್ಪಾದನೆ ನಿಂತಿಲ್ಲ. ಇತ್ತೀಚೆಗೆ ಅಂಥ ಒಂದು ಪ್ರಸಂಗ ಜರುಗಿದೆ. ಸಿದ್ಧಗಂಗಾ ಶ್ರೀಯವರ ನೆಲೆವೀಡು ತುಮಕೂರಿನಲ್ಲಿ (23-10-2021) ಬಹಿರಂಗ ಸಭೆಯೊಂದರಲ್ಲಿ ’ಹಿಂದೂಗಳ ಮೇಲೆ ನಡೆಯುವ ಹಲ್ಲೆಗೆ ಪ್ರತಿಕ್ರಿಯೆ ಕೊಡಲು ನಾವು ಕತ್ತಿ ಎತ್ತಿದರೆ ನಿಮಗೆ ಶವ ಹೂಳಲೂ ಜಾಗ ಸಿಗದು’ ಎಂದು ವಿಹೆಚ್‌ಪಿ ರಾಜ್ಯ ಮುಖಂಡರು ಆಘಾತಕಾರಿ ಎಚ್ಚರಿಕೆ ನೀಡಿದ್ದಾರೆ. ದಯವೇ ಧರ್ಮದ ಮೂಲ ಎಂಬ ಬಸವಣ್ಣನವರ ಅನುಯಾಯಿಗಳ ಇಂಥ ಹೇಳಿಕೆಗಳು ಆತಂಕ ಹುಟ್ಟಿಸುತ್ತವೆ. ’ತಾಯಿ ಮೊಲೆಹಾಲು ನಂಜಾಗಿ ಕೊಲ್ಲುವೆಡೆ ಇನ್ನಾರಿಗೆ ದೂರುವೆ?’ ಎಂಬ ಪರಿಸ್ಥಿತಿ ಉದ್ಭವವಾಗುತ್ತಿದೆ. ಇದು ಅಸಂವಿಧಾನಿಕ ನಡೆ. ಕೋಮು ಶಕ್ತಿಗಳು ಹಿಂಸಾಚಾರವನ್ನು ಪ್ರಚೋದಿಸುವುದು ಸರಿಯಲ್ಲ. ನೈತಿಕ ಪೊಲೀಸ್‌ಗಿರಿ ಮಾಡುವ ಅಧಿಕಾರ ಯಾರಿಗೂ ಇಲ್ಲ. ನಮ್ಮ ಭವ್ಯ ಭಾರತದ ಭಾವೈಕ್ಯತೆ ಸಾವಿರಾರು ವರ್ಷಗಳಿಂದ ಬೆಳೆದು ಬಂದಿದೆ. ಯಾರು ಬಂದು ಯಾರು ಹೋದರೂ ಅದಕ್ಕೆ ಭಂಗ ಬಂದಿಲ್ಲ. ಈಗ ರಾಜಕೀಯ ಹಿತಾಸಕ್ತಿಗಳಿಗಾಗಿ ಅದನ್ನು ಬಲಿ ಕೊಡುವುದು ತರವಲ್ಲ. ’ನುಡಿದಂತೆ ನಡೆಯುವುದು, ನಡೆದಂತೆ ನುಡಿಯುವುದು’ ವಚನ ಸಾಹಿತ್ಯದ ಪರಮ ಸಂದೇಶ. ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂಬುದು ಸಂವಿಧಾನದ ಆಶಯ. ತಪ್ಪು ಮಾಡಿದವರು ಕಾನೂನು ಕ್ರಮಕ್ಕೆ ಒಳಪಡುತ್ತಾರೆ. ಹಾಗೆಂದು ಕಾನೂನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ? ಈ ಮಾತನ್ನು ವಿಚಾರದಕ್ಷರು ವೈಷಮ್ಯವನ್ನಳಿದು ನಿಷ್ಪಕ್ಷಪಾತವಾಗಿ ಪರಾಮರ್ಶಿಸಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ವಚನ ಚಳುವಳಿಯನ್ನು ನಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುವುದು ತರವಲ್ಲ/ಆಹಾರ ಸಂಸ್ಕೃತಿ ಮತ್ತು ವಚನ ಚಳವಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...