ಅಕ್ರಮ ವಿದೇಶಿಯರು ಎಂದು ಅಸ್ಸಾಂನ ಈ ದಂಪತಿಯನ್ನು ಬಂಧಿಸಿ ಬಂಧನ ಕೇಂದ್ರಕ್ಕೆ ಸೇರಿಸಲಾಗಿತ್ತು. ಎನ್‌ಆರ್‌ಸಿ ಹೆಸರಲ್ಲಿ ಅಸ್ಸಾಂನಲ್ಲಿ ನಡೆದ ದಬ್ಬಾಳಿಕೆಗೆ ಸಾಂಕೇತಿಕದಂತಿದೆ ಈ ಪ್ರಕರಣ. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬಂಧನ ಕೇಂದ್ರ(ಡಿಟೆನ್ಸನ್ ಸೆಂಟರ್)ದಲ್ಲಿ ಕಳೆದ ಈ ದಂಪತಿ ಈಗ ತಾವು ಭಾರತೀಯರು ಎಂದು ಪ್ರೂವ್ ಮಾಡಿ ನಿರಾಳರಾಗಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಎಂಬ ಸೇಡು-ದ್ವೇಷದ ಮತ್ತು ರಾಜಕೀಯ ಲಾಭದ ಆಟದಲ್ಲಿ ಲಕ್ಷಾಂತರ ಜನ ಇಂದಿಗೂ ಏದುಸಿರು ಬಿಡುತ್ತಿದ್ದಾರೆ.
’ನಮ್ಮನ್ನು ಅಕ್ರಮ ವಲಸೆಗಾರರು ಎಂದು ನಿರ್ಧರಿಸಿದ್ದರು. ಅದು ಹೇಗೆ ಸಾಧ್ಯ?’ ಎಂಬ ಈ ದಂಪತಿಯ ಪ್ರಶ್ನೆಗೆ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಬಳಿ ಯಾವ ಉತ್ತರವೂ ಇಲ್ಲ. ಮೊಹಮ್ಮದ್ ನೂರ್ ಹುಸೇನ್ (34) ಮತ್ತು ಶಹೀರಾ ಬೇಗಂ(26) ದಂಪತಿ ಕತೆಯಿದು. ಇವರ ಬಂಧನದ ನಂತರ, ಅವರ ಇಬ್ಬರು ಪುಟ್ಟ ಮಕ್ಕಳಿಗೆ ಆಶ್ರಯವಿಲ್ಲದೇ ಅವರೂ ಡಿಟೆನ್ಸನ್ ಸೆಂಟರ್‌ನಲ್ಲಿ ಕಳೆಯಬೇಕಾಯಿತು. ಇದೀಗ ವಿದೇಶಿಯರ ನ್ಯಾಯಮಂಡಳಿ (ಫಾರೆನರ್‍ಸ್ ಟ್ರಿಬುನಲ್) ಇವರನ್ನು ಭಾರತೀಯರು ಎಂದು ಘೋಷಿಸಿದೆ.
’ನಾವು ಹೆಮ್ಮೆಯ ಭಾರತೀಯರು. ಅಸ್ಸಾಂನವರು. ಅಕ್ರಮವಾಗಿ ಗಡಿ ದಾಟಿದ ಬಾಂಗ್ಲಾದೇಶಿಯರು ಎಂದು ನಮ್ಮನ್ನು ಬಂಧಿಸಿ ಕೊಳೆ ಹಾಕಿದರು. ಇದೆಲ್ಲ ಹೇಗೆ ಸಾಧ್ಯ? ನಾನು ಅಸ್ಸಾಂನಲ್ಲೇ ಜನಿಸಿದವನು’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಎದುರು ತಮ್ಮ ನೋವು-ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಹುಸೇನ್. ಅಸ್ಸಾಂನ ಉದುಲ್‌ಗಿರಿ ಜಿಲ್ಲೆಯ ಲಾಲ್‌ಡಂಗ್ ಗ್ರಾಮದ ಹುಸೇನ್ ಗುವಾಹತಿಯಲ್ಲಿ ರಿಕ್ಷಾ ಎಳೆಯುವ ಕೆಲಸ ಮಾಡುತ್ತಾರೆ. ಹುಸೇನ್‌ರ ಅಜ್ಜ-ಅಜ್ಜಿಯರ ಹೆಸರು 1951 ರ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿದೆ. ಹುಸೇನ್ ತಂದೆಯ ಹೆಸರು (ಹುಸೇನ್ ಅಜ್ಜ-ಅಜ್ಜಿಯರ ಹೆಸರಿನ ಸಮೇತ) 1965 ರ ಮತದಾರರ ಪಟ್ಟಿಯಲ್ಲಿದೆ.

ಇದನ್ನೂ ಓದಿ: ಎನ್ನಾರ್ಸಿ, ಸಿಎಬಿ ಹಾಗೂ ಎನ್‍ಪಿಆರ್ ಎನ್ನುವ ಮೂರು ಅಂಕದ ನಾಟಕ
ಹುಸೇನ್ ಪತ್ನಿ ಬೇಗಂ ತಂದೆಯ ಹೆಸರು ಕೂಡ 1951 ರ ಎನ್‌ಆರ್‌ಸಿ ಮತ್ತು 1966 ರ ಮತದಾರರ ಪಟ್ಟಿಯಲ್ಲಿದೆ, ಜೊತೆಗೆ ಕುಟುಂಬದ ಬಳಿ 1958-59 ರ ದಿನಾಂಕಗಳಿರುವ ಭೂ ದಾಖಲೆಗಳು ಇವೆ. ಭಾರತೀಯನೆಂದು ಗುರುತಿಸಲು ಅಸ್ಸಾಂನಲ್ಲಿ ಕಟ್ ಆಫ್ ದಿನಾಂಕ ಮಾರ್ಚ್ 24-1971.
ಇಷ್ಟಿದ್ದರೂ, 2017 ರಲ್ಲಿ ಈ ದಂಪತಿಯ ಭಾರತೀಯತೆಯ ರುಜುವಾತುಗಳನ್ನು ತನಿಖೆ ಮಾಡತೊಡಗಿದ ಗುವಾಹತಿ ಪೊಕೀಸರಿಗೆ ಮೇಲಿನ ಯಾವ ದಾಖಲೆಗಳೂ ಮೌಲ್ಯಯುತ ಅನಿಸಲೇ ಇಲ್ಲ. 2017 ರ ಅಗಸ್ಟ್‌ನಲ್ಲಿ ಬೇಗಂ ಕೇಸನ್ನು ಮತ್ತು 2018 ರ ಜನವರಿಯಲ್ಲಿ ಹುಸೇನ್ ಕೇಸನ್ನು ಫಾರೆನರ್‍ಸ್ ಟ್ರಿಬುನಲ್‌ಗೆ ವರ್ಗಾಯಿಸಲಾಯಿತು. ಅಂದರೆ ಈ ದಂಪತಿ ತಮ್ಮನ್ನು ಭಾರತೀಯರು ಎಂದು ತಾವು ಪ್ರೂವ್ ಮಾಡಿಕೊಳ್ಳಬೇಕು.
’ಅನಕ್ಷರಸ್ಥರಾದ ನಮ್ಮಿಬ್ಬರಿಗೂ ಯಾವುದು ಯಾವುದರ ದಾಖಲೆ ಎಂದು ಗುರುತಿಸುವುದು ಗೊತ್ತಾಗಲಿಲ್ಲ ಮತ್ತು ಮುಂದೇನು ಮಾಡುವುದು ಎಂಬುದೂ ತಿಳಿಯಲಿಲ್ಲ’ ಎನ್ನುತ್ತಾರೆ ಹುಸೇನ್. ಹುಸೇನ್ 4 ಸಾವಿರ ರೂ. ಕೊಟ್ಟು ಒಬ್ಬ ಲಾಯರ್ ಪಡೆದರು. ಆದರೆ ಟ್ರಿಬುನಲ್‌ನಲ್ಲಿ ಅವರ ಪತ್ನಿ ಬೇಗಂ ಪ್ರತಿನಿಧಿಸಲು ಯಾರೂ ಇರಲಿಲ್ಲ. ಅಗಸ್ಟ್ 28-2018 ರಂದು ಕೇಸಿನಿಂದ ಹೊರ ನಡೆದ ಹುಸೇನ್ ಲಾಯರ್, ಮುಂದೆ ಸತತವಾಗಿ ಟ್ರಿಬುನಲ್ ವಿಚಾರಣೆಗೆ ಹಾಜರಾಗಲೇ ಇಲ್ಲ.
ಟ್ರಿಬುನಲ್ ನಲ್ಲಿ ೨ ಲಕ್ಷ ಕೇಸು ಇತ್ಯರ್ಥ. ಫಾರೆನರ್‍ಸ್ ಟ್ರಿಬುನಲ್ ಅರೆ ನ್ಯಾಯಾಂಗೀಯ ಮಂಡಳಿಗಳಾಗಿದ್ದು, ಒಬ್ಬ ವ್ಯಕ್ತಿ ’ಅಕ್ರಮ ವಿದೇಶಿಗ’ ಹೌದೋ ಅಲ್ಲವೋ ಎಂಬ ಅಭಿಪ್ರಾಯ ನೀಡುತ್ತವೆ. ರಾಜ್ಯ ಪೊಲೀಸರು ರೆಫರ್ ಮಾಡಿದ ಕೇಸುಗಳು ಮತ್ತು ಚುನಾವಣಾ ಅಧಿಕಾರಿಗಳು ’ಸಂದೇಹಿತ ಮತದಾರ’ ಎಂದು ಗುರುತಿಸಿದ ಕೇಸುಗಳನ್ನು ಟ್ರಿಬುನಲ್ ವಿಚಾರಣೆ ಮಾಡುತ್ತದೆ. 2020 ರ ಜುಲೈವರೆಗೆ 4.34 ಲಕ್ಷ ಕೇಸುಗಳ ಪೈಕಿ 2 ಲಕ್ಷ ಕೇಸುಗಳನ್ನು ಟ್ರಿಬುನಲ್ ಇತ್ಯರ್ಥ ಮಾಡಿದೆ.
“ಲಾಯರ್ ನನಗೆ ಹೇಳಿದ, ‘ನಿನ್ನಿಂದ ನನ್ನ ಫೀಸ್ ಭರಿಸಲಾಗಲ್ಲ. ಗುವಾಹತಿ ತೊರೆದು ಪರಾರಿಯಾಗು, ಇಲ್ಲವಾದರೆ ಪೊಲೀಸರು ನಿನ್ನನ್ನು ಬಂಧಿಸುತ್ತಾರೆ…..’ ಎಂದು. ಅದಕ್ಕೆ ನಾನು ಹೇಳಿದೆ, ‘ನಾನ್ಯಾಕೆ ಪರಾರಿಯಾಗಲಿ, ನಾನೇನು ತಪ್ಪು ಮಾಡಿರುವೆ’’ ಎಂದು ಹುಸೇನ್ ಅಂದಿನ ಸಂದಿಗ್ಧವನ್ನು ನೆನೆಯುತ್ತಾರೆ. ಮೇ 29-2019 ರಂದು ಟ್ರಿಬುನಲ್ ಬೇಂಗಂರನ್ನು ’ವಿದೇಶಿ’ ಎಂದು ಘೋಷಿಸಿತು. ಮರುವರ್ಷ ಮಾರ್ಚ್ 30 ರಂದು ಹುಸೇನ್‌ಗೂ ’ವಿದೇಶಿ’ ಪಟ್ಟವನ್ನು ಟ್ರಿಬುನಲ್ ಕಟ್ಟಿತು. ವಿದೇಶಿಯರ ಕಾಯ್ದೆ ಸೆಕ್ಷನ್ 9 ರ ಪ್ರಕಾರ, ಒಬ್ಬ ವ್ಯಕ್ತಿ ತಾನು ವಿದೇಶಿಯಲ್ಲ ಎಂದು ಪ್ರೂವ್ ಮಾಡುವ ಜವಾಬ್ದಾರಿ ಆತನ/ಆಕೆಯ ಮೇಲೆಯೇ ಇದೆ. ಹೀಗಾಗಿ ಟ್ರಿಬುನಲ್ ಮುಂದೆ ಹಾಜರಾಗದೇ ಇದ್ದರೆ ಆತ/ಆಕೆ ವಿದೇಶಿ ಎಂದು ನಿರ್ಧರಿತವಾಗಿ ಬಿಡುತ್ತದೆ! ಜೂನ್ 2019 ರಲ್ಲಿ ಈ ದಂಪತಿಯನ್ನು ಬಂಧಿಸಿ ಗೋಲ್ಪಾರಾ ಜಿಲ್ಲೆಯ ಡಿಟೆನ್ಸನ್ ಸೆಂಟರ್‌ಗೆ ತಳ್ಳಿದಾಗ, ಅವರಿಬ್ಬರ ಸುತ್ತಲಿನ ಜಗತ್ತೇ ಕುಸಿದು ಹೋದಂತಾಯಿತು.

ಇದನ್ನೂ ಓದಿ: ಕರೋನಾಕ್ಕೆ ಕೊನೆಯಿದ್ದೀತು, ಆದರೆ ಈ ಮುಸ್ಲಿಮ್ ದ್ವೇಷಕ್ಕೆ ಮದ್ದೇನು?
”ನಮ್ಮ ಸಂಬಂಧಿಕರು ದೂರದ ಹಳ್ಳಿಯಲ್ಲಿದ್ದ ಕಾರಣ ಮಕ್ಕಳ ಪಾಲನೆ ಮಾಡುವವರು ಯಾರೂ ಇರಲಿಲ್ಲ. ಹೀಗಾಗಿ ನಮ್ಮ 7 ಮತ್ತು 5 ವರ್ಷದ ಮಕ್ಕಳನ್ನು ಡಿಟೆನ್ಸನ್ ಸೆಂಟರ್‌ಗೇ ಕರೆದೊಯ್ದೆವು. ಹಿರಿಮಗ ಶಾಲೆಯನ್ನೂ ತಪ್ಪಿಸಿಕೊಂಡ’’ ಎಂದು ಬೇಂಗಂ ನೆನೆಸಿಕೊಳ್ಳುತಾರೆ. ಜೈಲಿನಲ್ಲಿದ್ದಾಗ ನನ್ನ ಮಕ್ಕಳು ಆಗಾಗ ”ಮನೆಗೆ ಹೋಗೋಣ’’ ಎಂದು ಪೀಡಿಸುತ್ತಲೇ ಇದ್ದರು ಎನ್ನುತ್ತಾರೆ ಬೇಗಂ. ಇಂತಹ ಸಂದರ್ಭದಲ್ಲಿ, ದಂಪತಿಯ ಸಂಬಂಧಿಕರು ಗುವಾಹತಿಯ ಅಮನ್ ವಡುದ್ ಎಂಬ ಮಾನವ ಹಕ್ಕು ವಕೀಲರನ್ನು ಭೇಟಿಯಾಗುತ್ತಾರೆ. ಸಯ್ಯದ್ ಬರ್‍ಹನುರ್ ರೆಹಮಾನ್ ಮತ್ತು ಝಕೀರ್ ಸಯ್ಯದ್ ಎಂಬ ವಕೀಲರೊಂದಿಗೆ ಅಮನ್ ಗುವಾಹತಿ ಹೈಕೋರ್ಟಿನಲ್ಲಿ ಮತ್ತು ಮುಂದೆ ಟ್ರಿಬುನಲ್‌ನಲ್ಲಿ ಈ ದಂಪತಿಯ ಕೇಸನ್ನು ಪ್ರತಿನಿಧಿಸುತ್ತಾರೆ.
“ವಿದೇಶಿ ಎಂಬ ಹಣೆಪಟ್ಟಿ ಪಡೆದ ಎಲ್ಲರಿಗೂ ವಕೀಲರು ಸಿಗುವುದಿಲ್ಲ. ಇದರಿಂದ ನಾಗರಿಕರು ದಿಕ್ಕೆಟ್ಟು ಹೋಗುತ್ತಿದ್ದಾರೆ, ಅವರ ಬಳಿ ಲಾಯರ್ ಫೀಸ್ ಕಟ್ಟಲೂ ಕಾಸು ಇರುವುದಿಲ್ಲ’’ ಎನ್ನುತ್ತಾರೆ ವಕೀಲ ಅಮನ್ ವಡುದ್. 2020 ರ ಅಕ್ಟೋಬರ್ 8 ರಂದು ಫಾರೆನರ್‍ಸ್ ಟ್ರಿಬುನಲ್ ಆದೇಶಗಳನ್ನು ತಳ್ಳಿ ಹಾಕಿದ ಹೈಕೋರ್ಟ್, ಮರು ವಿಚಾರಣೆ ನಡೆಸುವಂತೆ ಟ್ರಿಬುನಲ್‌ಗೆ ಆದೇಶಿಸಿತು. ನಂತರ ಕೆಲ ದಿನಗಳಲ್ಲಿ ದಂಪತಿ ಜಾಮೀನು ಮೇಲೆ ಹೊರ ಬಂದರು. ಅದಾದ ಎರಡು ವಾರಗಳ ನಂತರ 2020 ಡಿಸೆಂಬರ್ 16 ರಂದು ಟ್ರಿಬುನಲ್ ಹುಸೇನ್ ಅವರನ್ನು ಭಾರತೀಯ ಎಂದು ಘೋಷಿಸಿತು.
ಮೊನ್ನೆ ಬುಧವಾರ ಬೇಗಂ ಅವರ ತಲೆಗೆ ಕಟ್ಟಿದ್ದ ’ವಿದೇಶಿ’ ಹಣೆಪಟ್ಟಿಯೂ ಕಳಚಿಬಿದ್ದು, ಅವರೂ ಭಾರತೀಯ ಎಂದು ಘೋಷಣೆಯಾಗಿತು. ಅವತ್ತು ಮೂವರು ಲಾಯರ್‌ಗಳು ಮತ್ತು ಹುಸೇನ್ ಕುಟುಂಬ ಸಂಭ್ರಮಾಚರಣೆ ಮಾಡಿದರು. ಆಗ ವಕೀಲ ಅಮನ್ ವುಡುದ್ ದಂಪತಿಯ 7 ವರ್ಷದ ಹಿರಿಮಗ ಶಹಾಜಹಾನ್‌ಗೆ ಕೇಳಿದರು, ’ಮುಂದೇನಾಗುತ್ತಿಯಾ?’ ಎಂದು. ಏಳು ವರ್ಷದ ಹುಡುಗ ಹೇಳಿತು: ’ಉಕೀಲ್’ (ವಕೀಲ) ಎಂದು!.
ಇದನ್ನೂ ಓದಿ: ಅಂದಿನ ಸಾದತ್ ಹಸನ್ ಮಂಟೋ ಮತ್ತು ಇಂದಿನ ನಾವು…!! : ಇಸ್ಮತ್ ಪಜೀರ್


