ತಮ್ಮ ಪಕ್ಷವನ್ನು ಒಡೆಯಲು ಮತ್ತು ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಯ ಪ್ರಯತ್ನಗಳ ಹೊರತಾಗಿಯೂ ಎಲ್ಲಾ ಎಎಪಿ ಶಾಸಕರು ತಮ್ಮೊಂದಿಗೆ ಇದ್ದಾರೆ ಎಂಬುದನ್ನು ಸಾಬೀತುಪಡಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಸದನದಲ್ಲಿ ವಿಶ್ವಾಸ ಯಾಚನೆ ಮಾಡಲಿದ್ದಾರೆ. ತಮ್ಮ ಪಕ್ಷದ ಶಾಸಕರು ಯಾವುದೆ ಪ್ರಲೋಭನೆಗೆ ಒಳಗಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ಬಹುಮತದ ಸಾಬೀತು ಮಾಡುತ್ತಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
‘ಆಪರೇಷನ್ ಕಮಲ’ದ ಭಾಗವಾಗಿ ಎಎಪಿ ಶಾಸಕರಿಗೆ ತಲಾ 20 ಕೋಟಿ ರೂ.ಗಳನ್ನು ನೀಡುವುದಾಗಿ ಬಿಜೆಪಿ ಆಫರ್ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ವಾರ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ದೆಹಲಿ ಸರ್ಕಾರದ 62 ಎಎಪಿ ಶಾಸಕರಲ್ಲಿ 53 ಮಂದಿ ಭಾಗವಹಿಸಿದ್ದರು. ಉಳಿದವರು ಆನ್‌ಲೈನ್ ಮುಖಾಂತರ ಸಭೆಗೆ ಸೇರಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತಮ್ಮ ನಿವಾಸದಲ್ಲಿ ನಡೆದ ಸಭೆಯ ನಂತರ ತಮ್ಮ ಶಾಸಕರೊಂದಿಗೆ ಮಹಾತ್ಮ ಗಾಂಧಿ ಸ್ಮಾರಕ ರಾಜ್‌ಘಾಟ್‌ಗೆ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾಜ್‌ಘಾಟ್ ಭೇಟಿ ನಂತರ ಮಾತನಾಡಿದ ಕೇಜ್ರಿವಾಲ್, ‘‘ಅವರು ಎಎಪಿಯ 40 ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿದ್ದಾರೆಂದು ನನಗೆ ತಿಳಿಯಿತು. ಆದರೆ ಒಬ್ಬನೇ ಒಬ್ಬ ಶಾಸಕ ಮಣಿಯದಿರುವುದು ನನಗೆ ಸಂತೋಷವಾಗಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: `ಬಿಜೆಪಿ ಸೇರುವುದಾದರೆ CBI & ED ಪ್ರಕರಣ ಮುಕ್ತಾಯ’: ಬಿಜೆಪಿಯಿಂದ ಆಫರ್ ಬಂದಿದೆ ಎಂದ ದೆಹಲಿ ಉಪಮುಖ್ಯಮಂತ್ರಿ
ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಲಿ ಎಂದು ಪ್ರಾರ್ಥಿಸಲು ರಾಜ್‌ಘಾಟ್‌ಗೆ ಹೋಗಿದ್ದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಾದರಿಯಲ್ಲಿ ಬಿಜೆಪಿ ತಮ್ಮ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲದ ಸಂಚು ರೂಪಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಎಎಪಿ ತೊರೆದರೆ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕುವುದಾಗಿ ಬಿಜೆಪಿ ಅವರಿಗೆ ಆಫರ್ ನೀಡಿದ್ದಾಗಿ ಸಿಸೋಡಿಯಾ ಹೇಳಿಕೊಂಡಿದ್ದರು.
ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ದೆಹಲಿಯ ಮದ್ಯ ನೀತಿಯಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಸೋಡಿಯಾ ಅವರ ಮೇಲೆ ಇತ್ತೀಚೆಗೆ ಸಿಬಿಐ ದಾಳಿ ನಡೆಸಿತ್ತು. ಈ ನೀತಿಯನ್ನು ಸರ್ಕಾರವು ನಂತರ ಹಿಂಪಡೆದಿತ್ತು. ಮದ್ಯದ ನೀತಿ ಉಲ್ಲಂಘನೆಯ ಕುರಿತ ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ಆರೋಪಿಗಳ ಪಟ್ಟಿಯಲ್ಲಿ ಸಿಸೋಡಿಯಾ ಅವರ ಹೆಸರು ಮೊದಲ ಸ್ಥಾನದಲ್ಲಿದ್ದಾರೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯ ಕೂಡಾ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ಯತ್ನ: ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಶಾಸಕರ ಸಭೆ
70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದೆ. ಬಿಜೆಪಿಗೆ ಎಂಟು ಸ್ಥಾನಗಳಷ್ಟೆ ಇವೆ.


