17 > 105 ! ಮ್ಯಾಥ್ಸ್ ಆಫ್ ಡೆಮಾಕ್ರಸಿ!
17 ಶಾಸಕರ ಅನರ್ಹತೆ ಡೆಮಾಕ್ರಸಿಗೆ ಘನತೆ
ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!
ರಾಜಕೀಯದಲ್ಲಿ ಒಂದು ಮಟ್ಟಿಗಿನ ನೈತಿಕತೆಯನ್ನು ಬಯಸುವ ರಾಜ್ಯದ ಜನರೆಲ್ಲ 17 ಶಾಸಕರ ಅನರ್ಹತೆಯ ಸಂಗತಿಯನ್ನು ಬೆಂಬಲಿಸಿದ್ದಾರೆ. ಅವರ ಆಶಯಕ್ಕೆ ಅನುಗುಣವಾಗಿಯೇ ಸ್ಪೀಕರ್ ಅವರ ನಿರ್ಧಾರವೂ ಬಂದಿದೆ ಅನಿಸುತ್ತಿದೆ ಎಂದು ದಿಟ್ಟವಾಗಿ ಹೇಳಲೂ ಆಗದ ಕಾಲದಲ್ಲಿ ನಾವಿದ್ದೇವೆ!
ಆದರೆ, ಒಬ್ಬ ಪ್ರಜೆಯಾಗಿ, ಮತದಾರನಾಗಿ ಹೇಳುವುದಾದರೆ ಹೊಣೆಗೇಡಿ 17 ಶಾಸಕರಿಗೆ ತಕ್ಕ ಶಾಸ್ತಿಯೇ ಆಗಿದೆ. ಹೀಗೆ ಪಾಠವು ದಿಟ್ಟವಾಗಿ ಹೇಳದೇ ಇದ್ದರೆ, ತಮ್ಮ ಮಿತಿಗಳಲ್ಲೇ ಅಂತಹ ಕ್ರಮಕ್ಕೆ ಮುಂದಾದ ಸ್ಪೀಕರ್‍ಗೆ ಅವಮಾನಿಸಿದಂತೆ.
2008ರಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್-ಎಲ್ಲವನ್ನೂ ಮಣ್ಣು ಮಾಡಿ ಅಧಿಕಾರ ಹಿಡಿಯಬಹುದು ಎಂದು ಹೊಸ ‘ಮಾದರಿ’ಯೊಂದನ್ನು ದೇಶದ ಮುಂದಿಟ್ಟ, ಆ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಅದನ್ನು ಎತ್ತಿ ಹಿಡಿಯುತ್ತಿದ್ದ ದೇಶದ ಉನ್ನತ ನ್ಯಾಯಾಲಯಗಳನ್ನೂ ಕಾಲಕಸ ಮಾಡಿದ ಕರ್ನಾಟಕ ರಾಜ್ಯದ ಬಿಜೆಪಿಯೀಗ ಅಂಥದ್ದೇ ‘ಮಾದರಿ’ಯ ಪ್ರಯೋಗದಲ್ಲಿ ಆರೂವರೆ ವರ್ಷಗಳ ನಂತರ ಅಧಿಕಾರ ಹಿಡಿದಿದೆ.
ಆದರೆ ಈ ಸಲ ಅಂತಹ ಅನೈತಿಕ ಪ್ರಯೋಗಕ್ಕೇ ಸವಾಲು ಎನಿಸುವಂತಹ ನೈತಿಕ ನಿರ್ಧಾರಗಳು ಹಲವು ಮೂಲಗಳಿಂದ ಹೊರಬಿದ್ದಿವೆ. ಮುಂದೆ ಈ ವಿಚಾರ ಸುಪ್ರೀಂ ಕೋರ್ಟಿಗೆ ಹೋಗಬಹುದು ಎಂಬ ಅರಿವಿದ್ದರೂ, ಸ್ಪೀಕರ್ ರಮೇಶಕುಮಾರ್ ಅವರು, ‘’ಅತೃಪ್ತ” ಎಂಬ ಹಣೆಪಟ್ಟಿ ಅಂಟಿಸಿಕೊಂಡು ಕ್ಷೇತ್ರ ಮತ್ತು ರಾಜ್ಯಗಳಿಂದ ಪಲಾಯನ ಮಾಡಿದ್ದ, ಸಾಂವಿಧಾನಿಕ ಮತ್ತು ಪ್ರಜಾತಾಂತ್ರಿಕ ಆಶಯಗಳನ್ನೇ ಗೇಲಿ ಮಾಡುವಂತೆ ಟಿವಿ ಚಾನೆಲ್ಲುಗಳಿಂದ ವಿಜೃಂಭಿಸಲ್ಪಡುತ್ತಿದ್ದ 17 ಹೊಣೆಗೇಡಿ ಶಾಸಕರನ್ನು ಅನರ್ಹಗೊಳಿಸುವ ಮೂಲಕ, ದೇಶದ ಎಲ್ಲೆಡೆ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿರುವ ಅಸಹ್ಯ ರಾಜಕಾರಣಕ್ಕೆ ಒಂದು ಏಟು ನೀಡಿದ್ದಾರೆ.
ಅನರ್ಹತೆ: ಮುಂದೇನು?
ಸದ್ಯ ಶೆಡ್ಯೂಲ್ 10ರ ತೀರಾ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಪರಿಗಣಿಸಿಯೇ ಸ್ಪೀಕರ್ ರಮೇಶಕುಮಾರ್ 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಸದ್ಯಕ್ಕೆ ಅವರು, ಈ ಸದನದ, 15ನೇ ಅಸೆಂಬ್ಲಿ ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸುಪ್ರೀಂ ಕೋರ್ಟು ಮೊರೆ ಹೋಗಿರುವ ಶಾಸಕರಿಗೆ ಅಲ್ಲೂ ನಿರಾಶೆ ಕಾದಂತಿದೆ. ಈ ಹಿಂದೆ, ಹೆಚ್ಚೂಕಡಿಮೆ ಇಂಥದ್ದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿನ 18 ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿತ್ತು. ಈ ಅಂತಿಮ ತೀರ್ಪು ಬರಲು ಒಂದು ವರ್ಷ ಹಿಡಿದಿತ್ತು!
ಅಸಲಿ ವಿಷಯ
ಈಗ ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಅದೀಗ ಪ್ರಜಾಸತ್ತಾತ್ಮಕ ವಿಷಯ ಎಂದು ಒಪ್ಪಿಕೊಳ್ಳಲು ಶುರು ಮಾಡಿಬಿಟ್ಟರೆ ಏನಾಗುತ್ತದೆ? ಇಲ್ಲೇನೂ ಆಗಲಿಕ್ಕಿಲ್ಲ. ಆದರೆ, ದೇಶದ ತುಂಬ ಹೀಗೇ ಪ್ರತಿಪಕ್ಷಗಳನ್ನೇ ನಾಶ ಮಾಡುವ ಅಜೆಂಡಾದೊಂದಿಗೆ ಒಂದು ದುಷ್ಟಶಕ್ತಿ ಹವಣಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಬೆಂಬಲವೂ ಇದೆ ಎಂಬುದೆಲ್ಲ ಗೊತ್ತಾದ ಮೇಲೂ, ‘ಕರ್ನಾಟಕದಲ್ಲಿ ಈಗ ವಿಶ್ವಾಸಮತ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದಿದೆ’ ಎಂದು ಒಪ್ಪಿಕೊಂಡರೆ ಅದು ಆತ್ಮವಂಚನೆಯೇ, ಅದೆಷ್ಟರ ಮಟ್ಟಿಗಿನ ಆತ್ಮವಂಚನೆ ಎಂದರೆ ಈ ದೇಶದಲ್ಲಿ ಇನ್ನೂ ಪರಿಪೂರ್ಣ ಪ್ರಜಾಪ್ರಭುತ್ವ ಜೀವಂತ ಇದೆ ಎಂದು ಹಲುಬುವ ಮನಸ್ಸುಗಳು ತಮಗೆ ತಾವೇ ದ್ರೋಹ ಬಗೆದುಕೊಂಡಂತೆ…
ಸುಪ್ರೀಂಕೋರ್ಟಿನಲ್ಲಿ 17 ‘ಅನರ್ಹ ಶಾಸಕರು’ ಅರ್ಜಿ ಸಲ್ಲಿಸುತ್ತಾರೆ. ಅಲ್ಲಿ ಗೆಲ್ಲುವುದೇ ಅವರಿಗೆ ಡೌಟು! ಆ ಕಾರಣಕ್ಕೇ ಈಗಾಗಲೇ ಕೆಲವು ಮನೆಹಾಳ ಅನರ್ಹರು ನಿವೃತ್ತಿ ಘೋಷಿಸಿದ್ದಾರೆ. ಇವರೆಲ್ಲ ತಮ್ಮ ಮಕ್ಕಳಿಗೆ ಅಥವಾ ಪತ್ನಿಗೆ ಸಚಿವ ಸ್ಥಾನ ಕೊಡಿ ಎಂದರೆ ಯಡಿಯೂರಪ್ಪ ಏನು ಮಾಡುತ್ತಾರೆ? ಕೊಡಲೇಬೇಕು ಅಲ್ಲವೇ? ಅಲ್ಲಿಗೇ ಮತ್ತೊಮ್ಮೆ ಮತ್ತೊಂದು ವಿಧದ ಆಪರೇಷನ್ ಕಮಲ ಶುರುವಾದಂತೆ!
ಈ ಸರ್ಕಾರ, ಮುಂದೇನಾಗುತ್ತೆ?
ಸರಳ ಪ್ರಶ್ನೆ. ಆರು ತಿಂಗಳು ಬೀಳಲ್ಲ. ಈಗಿನ ಕೇಂದ್ರದ ಬಲ ಮತ್ತು ಬಿಜೆಪಿಯ ಹಣಬಲ ನೋಡಿದರೆ ಬೀಳೋದೇ ಇಲ್ಲ. ಆದರೂ. ಇಲ್ಲಿ ವಿಪಕ್ಷಗಳು ಒಂದು ದೊಡ್ಡ ಹೋರಾಟಕ್ಕೆ ಅಣಿಯಾದರೆ ಸ್ವಲ್ಪ ವ್ಯತ್ಯಾಸ ಆಗಬಹುದಷ್ಟೇ. ಈ ಮೂರ್ಖರಲ್ಲಿ ಅಂತಹ ದೃಢತೆ ಇಲ್ಲವೇ ಇಲ್ಲ ಅಲ್ಲವೇ?
ಹಾಗಾಗಿ, ಈ ಸರ್ಕಾರವನ್ನು 2023ರವರೆಗೂ ಕರೆದೊಯ್ಯುವ ಜವಾಬ್ದಾರಿಯನ್ನು ಅಮಿತ್ ಶಾ ಹೊತ್ತಿದ್ದಾರೆ. ಗೋವಾದಲ್ಲಿ ಕೇವಲ 12 ಬಿಜೆಪಿ ಶಾಸಕರಿದ್ದೂ ಅಲ್ಲಿನ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ! ಇಲ್ಲೂ ಅದರ ಪ್ರಯೋಗ ಮುಂದುವರೆಯುತ್ತದೆ ಅಷ್ಟೇ!
ಮೀಡಿಯಾ: ಈಗ ವಿಪಕ್ಷ ವಿರುದ್ಧ!
ಇಲ್ಲಿ ಪ್ರಜಾಪ್ರಭುತ್ವ ಕೊಲ್ಲುವ ಕಾನೂನುಬಾಹಿರ ಕೆಲಸಗಳಿಗೆಲ್ಲ ಮಾನ್ಯತೆ ತಂದುಕೊಟ್ಟಿರುವುದೇ ಈ ಮೀಡಿಯಾ, ಅದರಲ್ಲೂ ದೃಶ್ಯ ಮೀಡಿಯಾ. ಇಲ್ಲಿವರೆಗೂ ಸರ್ಕಾರವನ್ನು ಟೀಕಿಸುತ್ತಿದ್ದ ಅವು ಇನ್ಮುಂದೆ ವಿಪಕ್ಷಗಳನ್ನು ಟೀಕಿಸಲು ಶುರು ಮಾಡಲಿವೆ!
ಇಲ್ಲಿವರೆಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ವಿಪರೀತ ಎನಿಸುವಷ್ಟು ಟೀಕೆ, ಅಪಪ್ರಚಾರ ಮಾಡತೊಡಗಿದ ಮಾಧ್ಯಮಗಳ ಕಾರ್ಯವನ್ನು ಮೆಚ್ಚೋಣ. ಮಾಧ್ಯಮ ಯಾವತ್ತಿಗೂ ವಿಪಕ್ಷ ಎಂಬ ಹಿನ್ನೆಲೆ ಇಟ್ಟುಕೊಂಡರೆ ಅದು ಸರಿಯೇ ಅನಿಸಬಹುದು. ಆದರೆ, ಈಗ ವಿಶ್ವಾಸಮತದ ಪ್ರಕ್ರಿಯೆ ಶುರು ಆದಾಗಿಂದ ಇವೆಲ್ಲ ಪುಟ್ಟಾಪೂರಾ ‘ಅತೃಪ್ತರ’ ಪರ ಬ್ಯಾಟಿಂಗ್ ಮಾಡಿದ್ದು ರಾಜ್ಯಕ್ಕೇ ಗೊತ್ತಿದೆ.
ಸುತ್ತು ಬಳಸಿ ಬೇಡವೇ ಬೇಡ, ರಾಜ್ಯದ ಬಹುಪಾಲು ದೃಶ್ಯ ಮಾಧ್ಯಮಗಳು ಬಿಜೆಪಿಗೆ ಮಾರಿಕೊಂಡಿವೆ. ಹೀಗಾಗಿ ಅವುಗಳ ಮುಂದಿನ ಟಾರ್ಗೆಟ್ ಆಡಳಿತ ಪಕ್ಷವಲ್ಲ, ವಿರೋಧ ಪಕ್ಷಗಳೇ. ಈ ಎರಡು ದಿನಗಳ ಅವುಗಳ ವರದಿ, ವಿಶ್ಲೇಷಣೆ ನೋಡಿದರೆ ಸಾಕು, ಇದೆಲ್ಲ ಅರ್ಥವಾಗುತ್ತದೆ


