ಪಠ್ಯ ಪರಿಷ್ಕರಣ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ನಾಡಗೀತೆ ಹಾಗೂ ಕುವೆಂಪುರವರಿಗೆ ಅವಮಾನಿಸಿರುವುದನ್ನು ಖಂಡಿಸಿ ಜೂನ್ 15 ರಂದು ಕುಪ್ಪಳ್ಳಿಯ ಕವಿಶೈಲದ ಕುವೆಂಪು ಸಮಾಧಿಯ ಸ್ಥಳದಿಂದ ತೀರ್ಥಹಳ್ಳಿವರೆಗು ‘ಸಾಂಸ್ಕೃತಿಕ ಸೌಹಾರ್ದ ಜಾಗೃತ ಪಯಣ’ ನಡೆಸುತ್ತೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ನಾಗರೀಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಸೇರಿದಂತೆ ಪಕ್ಷಾತೀತವಾಗಿ ಈ ಹೋರಾಟವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಠ್ಯಗಳ ಪರಿಷ್ಕರಣೆ ಕಾರ್ಯ ನಿರ್ಮಲ ಮನಸ್ಸಿನಿಂದ ವ್ಯವಸ್ಥಿತವಾಗಿ ಮತ್ತು ಕ್ರಮಬದ್ದವಾಗಿ ಮಾಡಬೇಕಾದ ಒಂದು ಕೆಲಸ. ಇದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಜಾತಿ, ಧರ್ಮ, ಪಕ್ಷ ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಹರಿಬರಿಯಲ್ಲಿ ಸಂಕುಚಿತವಾದ ಭಾವನೆಯಿಂದ ಪಠ್ಯಗಳ ಪರಿಷ್ಕರಣೆ ನಡೆಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜಗಳನ್ನು ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯದ ಒಂದು ಕೋಟಿ ವಿದ್ಯಾರ್ಥಿಗಳ ಭವಿಷ್ಯ ಪಠ್ಯ ಪರಿಷ್ಕರಣೆಯಲ್ಲಿ ಅಡಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್, ನಾರಾಯಣಗುರು, ಮಹಾವೀರರು, ಪುರಂದರದಾಸರು, ಕನಕದಾಸರು, ಶಂಕರಾಚಾರ್ಯ ಮುಂತಾದ ಮಹಾ ಪುರುಷರಿಗೆ ಅವಮಾನ ಮಾಡಲಾಗಿದೆ. ಬಿಜೆಪಿ ಪಕ್ಷದ ಅನೇಕ ಶಾಸಕರೇ ಇದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ರತ್ನಾಕರ್ ಹೇಳಿದ್ದಾರೆ.
ಈ ಪಯಣದಲ್ಲಿ ಸಾಹಿತಿಗಳಾದ ಪ್ರೊ. ಎಸ್.ಜಿ ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಹಾಗೂ ಜಿಲ್ಲಾಧ್ಯಕ್ಷರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ಮಾಜಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್, ರಾಜ್ಯ ಸಭಾ ಸದಸ್ಯ ಹನುಮಂತಯ್ಯ, ಡಿ.ಕೆ.ಶಿವಕುಮಾರ್, ವೈ.ಎಸ್.ವಿ.ದತ್ತಾ ಹಾಗೂ ಇನ್ನಿತರ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ; ನೂತನ ಪಠ್ಯ: ಘಟನೋತ್ತರ ಆದೇಶ ಸಂವಿಧಾನಬದ್ಧ ಅವಕಾಶ- ವಿನಯ್ ಬಿದರೆ ಸಮರ್ಥನೆ
ಜೂ.15 ರಂದು ಬೆಳಿಗ್ಗೆ 7 ಗಂಟೆಗೆ ಕುಪ್ಪಳಿಯ ಕವಿಶೈಲದಲ್ಲಿ ಕುವೆಂಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಈ 20 ಕಿ.ಮೀ.ಗಳ ಪಯಣ ಆರಂಭವಾಗಲಿದೆ. ಮಧ್ಯಾಹ್ನದ ನಂತರ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಆವರಣದಲ್ಲಿ ಸಾರ್ವಜನಿಕ ಸಭೆ ಜರಗಲಿದೆ ಎಂದು ಮಾಜಿ ಸಚಿವರು ತಿಳಿಸಿದ್ದಾರೆ.


