Homeಮುಖಪುಟತಮಿಳುನಾಡು: ಕಸ್ಟಡಿ ಸಾವು, ಮೃತದೇಹ ಸ್ವೀಕರಿಸಲು ನಿರಾಕರಿಸಿದ ಕುಟುಂಬ

ತಮಿಳುನಾಡು: ಕಸ್ಟಡಿ ಸಾವು, ಮೃತದೇಹ ಸ್ವೀಕರಿಸಲು ನಿರಾಕರಿಸಿದ ಕುಟುಂಬ

ಘಟನೆಯ ನಂತರ ಕೊಡುಂಗಯ್ಯೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

- Advertisement -
- Advertisement -

ಜೂನ್ 12ರಂದು (ಭಾನುವಾರ) ಚೆನ್ನೈನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ 33 ವರ್ಷದ ರಾಜಶೇಖರ್ ಅವರ ಮೃತದೇಹವನ್ನು ಸ್ವೀಕರಿಸಲು ಅವರ ಕುಟುಂಬ ಸೋಮವಾರ ನಿರಾಕರಿಸಿದೆ.

ರಾಜಶೇಖರ್ ಅವರನ್ನು ‘ಬಿ ಕೆಟಗರಿ’ ಹಿಸ್ಟರಿ-ಶೀಟರ್ (ವೃತ್ತಿಪರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು) ಎಂದು ಶೋಲವರಂ ಪೊಲೀಸರು ವರ್ಗೀಕರಿಸಿದ್ದಾರೆ. ರಾಜಶೇಖರ್‌‌ ವಿರುದ್ಧ ಸುಮಾರು 30 ಪ್ರಕರಣಗಳಿವೆ. ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡುಂಗಯ್ಯೂರು ಪೊಲೀಸರು ರಾಜಶೇಖರ್‌ ಅವರನ್ನು ಕರೆದೊಯ್ದಿದ್ದು, ವಿಚಾರಣೆ ವೇಳೆ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ನಂತರ ಅವರನ್ನು ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜಶೇಖರ್‌ ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದರಿಂದ ಕುಸಿದುಬಿದ್ದರು ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದರೆ, ಅವರ ಕುಟುಂಬವು ಇದನ್ನು ನಿರಾಕರಿಸಿದೆ. ಪೊಲೀಸರು ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಶೇಖರ್ ಅವರ ತಾಯಿ ಉಷಾ ರಾಣಿ, “ನೀನು ಎಲ್ಲಿಗೂ ಹೋಗಬೇಡ ಎಂದಿದ್ದೆ.  ಆದರೆ ಆತ- ಹೋಗಲೇಬೇಕಾಗಿದ್ದು, ಇಲ್ಲವಾದರೆ ಪೊಲೀಸರಿಂದ ತೊಂದರೆಯಾಗುತ್ತದೆ- ಎಂದ. ಟಿವಿಯಲ್ಲಿ ಸುದ್ದಿ ನೋಡಿದ ನಂತರ ಆತನ ನಿಧನದ ಬಗ್ಗೆ ತಿಳಿಯಿತು. ಯಾರೂ ನನಗೆ ಕರೆ ಮಾಡಿ ಮಾಹಿತಿ ನೀಡಿರಲಿಲ್ಲ. ಪೊಲೀಸರು ಆತನನ್ನು ಬಂಧಿಸಬಹುದು. ಆದರೆ ನನ್ನ ಮಗನನ್ನು ಕೊಲ್ಲುವ ಹಕ್ಕು ಅವರಿಗೆ ನೀಡಿದವರು ಯಾರು? ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳಬೇಕು. ಕಸ್ಟಡಿಯಲ್ಲಿ ಸಾವನಪ್ಪುವ ಪ್ರಕರಣಗಳು ಇಲ್ಲಿಗೇ ನಿಲ್ಲಬೇಕು” ಎಂದು ಆಗ್ರಹಿಸಿದರು.

ರಾಜಶೇಖರ್‌ ಅವರನ್ನು ಪೊಲೀಸರು ಮನೆಯಲ್ಲಿದ್ದಾಗಲೇ ಬಂಧಿಸಿದ್ದಾರೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಅದನ್ನು ಉಷಾ ರಾಣಿ ನಿರಾಕರಿಸಿದ್ದಾರೆ.

“ಅವರು ನನ್ನ ಮಗನನ್ನು ಹೊಡೆದು ಕೊಂದಿದ್ದಾರೆ. ಆದರೆ ಪೊಲೀಸ್ ಠಾಣೆಯಲ್ಲಿ ಕುಸಿದುಬಿದ್ದರೆಂದು ಪೊಲೀಸರು ಹೇಳುತ್ತಿದ್ದಾರೆ. ನನ್ನ ಮಗ ಎಂದಿಗೂ ಮೂರ್ಛೆ ಹೋದವನಲ್ಲ. ನನಗೆ ನ್ಯಾಯ ಬೇಕು. ನಾನು ಅವನ ಮೃತ ದೇಹವನ್ನು ಸ್ವೀಕರಿಸುವುದಿಲ್ಲ. ನಾನು ಪೊಲೀಸ್ ಠಾಣೆಗೆ ಹೋಗುವುದಿಲ್ಲ” ಎಂದು ರಾಜಶೇಖರ್‌ ತಾಯಿ ಹೇಳಿದರು.

ರಾಜಶೇಖರ್ ಅವರ ಸಹೋದರ ಮಣಿಕಂದನ್ ಸುದ್ದಿಗಾರರೊಂದಿಗೆ ಮಾತನಾಡಿ, “ಆತ ಜೂನ್ 10ರಂದು ಶನಿವಾರ ನನ್ನ ತಾಯಿಯನ್ನು ಭೇಟಿಯಾಗಿ ಮನೆಯಲ್ಲಿ ಊಟ ಮಾಡಿದ್ದ. ಭಾನುವಾರ ಬೆಳಗ್ಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಂತರ, ಸುದ್ದಿ ನೋಡಿದಾಗ ಸಾವಿನ ವಿಚಾರ ತಿಳಿಯಿತು. ಆದರೆ ನಮಗೆ ಪೊಲೀಸ್ ಠಾಣೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಅಯನವರಂ, ವಿಲ್ಲಿವಕ್ಕಂ ಮತ್ತು ಶೋಲವರಂ ಪೊಲೀಸ್ ಠಾಣೆಗಳು ನಮ್ಮ ಕರೆಗಳಿಗೆ ಪ್ರತಿಕ್ರಿಯಿಸುತ್ತಿದ್ದವು. ಆದರೆ ಪೊಲೀಸ್ ಸಿಬ್ಬಂದಿ ನಮಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಪೊಲೀಸರು ಇಂದು (ಸೋಮವಾರ) ನಮಗೆ ಕರೆ ಮಾಡಿದರು. ನನ್ನ ಸಹೋದರ ನಿಧನರಾಗಿರುವುದಾಗಿ ತಿಳಿಸಿದರು. ಮನೆಯ ವಿಳಾಸ ಕೇಳಿದರು” ಎಂದಿದ್ದಾರೆ.

“ನನ್ನ ಸಹೋದರನ ಆರೋಗ್ಯ ಸ್ಥಿತಿಯ ಬಗ್ಗೆ ಪೊಲೀಸರು ಹೇಳಿರುವುದು ನಿಜವಲ್ಲ. ಆತ ಎಂದಿಗೂ ಆಸ್ಪತ್ರೆಗೆ ದಾಖಲಾದವನಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ. ಪೊಲೀಸರು ಆತನಿಗೆ ಥಳಿಸಿ ಕೊಂದಿದ್ದಾರೆ” ಎಂದು ಆರೋಪಿಸಿದ್ದಾರೆ ಮಣಿಕಂದನ್‌.

ಇದನ್ನೂ ಓದಿರಿ: ತಮಿಳುನಾಡು: ‘ದನದ ಮಾಂಸ’ ಇಲ್ಲದ ಅಂಬೂರ್‌ ಬಿರಿಯಾನಿ ಹಬ್ಬ; ದಲಿತರಿಂದ ವ್ಯಾಪಕ ಟೀಕೆ

ಇತ್ತ ರಾಜ್ಯ ಮಾನವ ಹಕ್ಕುಗಳ ಆಯೋಗವೂ (ಎಸ್‌ಎಚ್‌ಆರ್‌ಸಿ) ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ನಾಲ್ಕು ವಾರಗಳಲ್ಲಿ ಚೆನ್ನೈ ಪೊಲೀಸ್ ಆಯುಕ್ತರು ವರದಿ ನೀಡಬೇಕೆಂದು ಸೂಚಿಸಿದೆ.

ಘಟನೆಯ ನಂತರ ಕೊಡುಂಗಯ್ಯೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಇನ್‌ಸ್ಪೆಕ್ಟರ್ ಜಾರ್ಜ್ ಮಿಲ್ಲರ್ ಪೊನ್‌ರಾಜ್, ಸಬ್ ಇನ್‌ಸ್ಪೆಕ್ಟರ್ ಕಣ್ಣಿಯಪ್ಪನ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಜಯಶೇಖರ್, ಮಣಿವಣ್ಣನ್ ಮತ್ತು ಗ್ರೇಡ್ 1 ಪೊಲೀಸ್ ಪೇದೆ ಸತ್ಯಮೂರ್ತಿ ಅಮಾನತಾದವರು.

ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 176(1)(ಎ) ಅಡಿಯಲ್ಲಿ ಎಂಕೆಬಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು, ಕೊಡುಂಗಯ್ಯೂರು ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಮೃತರ ಸಂಬಂಧಿಕರನ್ನು ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಎಸ್ ಲಕ್ಷ್ಮಿ ವಿಚಾರಣೆಗೆ ಒಳಪಡಿಸಿದ್ದಾರೆ. ಸಹಾಯಕ ಕಮಿಷನರ್ ಸೆಂಬೇಡು ಬಾಬು ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...