“ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಬ್ಯಾನರ್‌ನೊಂದಿಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಇಂದು ವಿಜಯ್ ಚೌಕ್‌ನಿಂದ ರಾಷ್ಟ್ರಪತಿ ಭವನದತ್ತ ಭಾರೀ ಭದ್ರತಾ ನಿಯೋಜನೆಯ ನಡುವೆ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಮೆರವಣಿಗೆ ತಡೆದು ಸಂಸದರನ್ನು ಬಂಧಿಸಿ ಸಮೀಪದ ಪೊಲೀಸ್ ಠಾಣೆಗಳಿಗೆ ಬಸ್‌ನಲ್ಲಿ ಕರೆದೊಯ್ದಿದ್ದಾರೆ. ಮೆರವಣಿಗೆಗೆ ಅನುಮತಿ ಪಡೆದಿರಲಿಲ್ಲ ಮತ್ತು ರಾಷ್ಟ್ರಪತಿಗಳು ಕೂಡ ಇವರ ಭೇಟಿಗೆ ಸಮಯ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅದಾನಿ-ಹಿಂಡೆನ್‌ಬರ್ಗ್ ಸಮಸ್ಯೆಯ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ನೀಡಬೇಕು ಎನ್ನುವ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ ಪಕ್ಷಗಳು, ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಬಯಸುತ್ತಿವೆ. ಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರೊಂದಿಗಿನ ಪ್ರಧಾನಿಯವರ ಸ್ನೇಹದ ಬಗೆಗಿನ ಗಮನವನ್ನು ಬೇರೆಡೆಗೆ ಸೆಳೆಯಲು 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸುವ ತಂತ್ರ ಮಾಡಿದ್ದಾರೆ ಎಂದು ಪ್ರತಿಪಕ್ಷದ ನಾಯಕರು ಹೇಳಿದ್ದಾರೆ.
”ಅದಾನಿ ಷೇರುಗಳ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪದ ನಂತರ ಎಲ್ಐಸಿ ಎಸ್‌ಬಿಐನಂತಹ ರಾಜ್ಯ-ಸಂಬಂಧಿತ ಕಂಪನಿಗಳಲ್ಲಿ ಇರಿಸಲಾಗಿರುವ ಸಾರ್ವಜನಿಕ ಹಣ ಭಾರಿ ನಷ್ಟಕ್ಕೆ ಕಾರಣವಾಗಿದೆ” ಎಂದು ಪ್ರತಿಪಕ್ಷಗಳು ಹೇಳಿವೆ.
ಇದನ್ನೂ ಓದಿ: ‘ಮೋದಿ ಉಪನಾಮ’ ಟೀಕೆ ಕೇಸ್‌ನಲ್ಲಿ ರಾಹುಲ್‌ಗೆ 2 ವರ್ಷ ಜೈಲು: ಬಿಜೆಪಿಯ ಪಿತೂರಿ ಎಂದ ಪ್ರತಿಪಕ್ಷಗಳು
ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಘಟಕಗಳು ಏಕಕಾಲದಲ್ಲಿ ಪ್ರತಿಭಟನೆಗಳನ್ನು ಆರಂಭಿಸಿವೆ. ಕೇಂದ್ರವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಗಾಂಧಿ ವಿರುದ್ಧದ ಸೂರತ್ ಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕದಲ್ಲೂ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪಕ್ಷದ ಇತರ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ವಿವಾದಾತ್ಮಕ ಲಂಡನ್ ಹೇಳಿಕೆಗಳ ಬಗ್ಗೆ ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಲು ರಾಹುಲ್ ಗಾಂಧಿ ಅವರು ಸಮಯ ಕೋರಿ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಆದರೆ ಅವರ ಧ್ವನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ”ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ನಾಯಕರನ್ನು ಬೇಟೆಯಾಡುತ್ತಿದೆ. ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಸದನದ ಕಲಾಪ ಪ್ರಾರಂಭವಾಗುವ ಮೊದಲು ಪಕ್ಷದ ಸಂಸದರ ಸಭೆಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೂಡ ಉಪಸ್ಥಿತರಿದ್ದರು.
ಪಾದಯಾತ್ರೆಗೂ ಮುನ್ನ ಕಾಂಗ್ರೆಸ್ ಮುಖ್ಯಸ್ಥ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಸತ್ತಿನ ಕಚೇರಿಯಲ್ಲಿ 12 ವಿರೋಧ ಪಕ್ಷಗಳ ಸದಸ್ಯರು ಸಭೆ ನಡೆಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, ”ಸೂರತ್ ನ್ಯಾಯಾಲಯದ ತೀರ್ಪನ್ನು ”ದುರದೃಷ್ಟಕರ” ಎಂದು ಕರೆದಿದ್ದಾರೆ. ಅದಾನಿ-ಹಿಂಡೆನ್‌ಬರ್ಗ್ ವಿಷಯವನ್ನು ಪ್ರಸ್ತಾಪಿಸಿದಾಗಿನಿಂದಲೂ ಸರ್ಕಾರವು ರಾಹುಲ್ ಅವರನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸುತ್ತಿದೆ” ಎಂದು ಹೇಳಿದರು.
”ನಾವು ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ ಈ ತೀರ್ಪು ತುಂಬಾ ದುರದೃಷ್ಟಕರವಾಗಿದೆ. ಪ್ರತಿಪಕ್ಷಗಳೆಲ್ಲಾ ಸೇರಿ ಕಾಂಗ್ರೆಸ್ ಪಕ್ಷಕ್ಕಾಗಿ ಸಾಮೂಹಿಕ ಮೆರವಣಿಗೆ ಮಾಡುತ್ತೇವೆ. ನಾವು ಅಧ್ಯಕ್ಷರೊಂದಿಗೆ ಅಪಾಯಿಂಟ್ಮೆಂಟ್ ಕೇಳುತ್ತಿದ್ದೇವೆ. ರಾಹುಲ್ ಗಾಂಧಿ ಅವರು ಅದಾನಿ ವಿಚಾರವನ್ನು ಪ್ರಸ್ತಾಪಿಸಿದ ಮೊದಲ ದಿನದಿಂದ ಅವರನ್ನು ತಡೆಯಲು ಬಿಜೆಪಿಯವರು ಮುಂದಾದರು. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾತನಾಡುವುದು ಅವರಿಗೆ ಇಷ್ಟವಿಲ್ಲ. ಅವರ ಧ್ವನಿಯನ್ನು ನಿಲ್ಲಿಸಲು ಅವರು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ” ಎಂದು ವೇಣುಗೋಪಾಲ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.



No justice