ಶುಕ್ರವಾರ ಕರ್ನಾಟಕ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಇಂದು (ನವೆಂಬರ್ 2) ಚಿತ್ತಾಪುರದಲ್ಲಿ ತಮ್ಮ ಮಾರ್ಗ ಮೆರವಣಿಗೆ ನಡೆಸಲು ಅನುಮತಿ ಕೋರಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಶಾಂತಿ ಸಭೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ಸ್, ಗೊಂಡ ಕುರುಬ ಎಸ್‌ಟಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ 10 ಸಂಘಟನೆಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.
ಸಭೆಯು ಬೆಳಿಗ್ಗೆ 11.30 ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಪ್ರಾರಂಭವಾಗಲಿದೆ. ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಸದಸ್ಯರಿಗೆ ಆಹ್ವಾನಿಸಲಾಗಿದೆ. ಸಂಬಂಧಪಟ್ಟ ಎಲ್ಲಾ ಗುಂಪುಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.
ಆರೆಸ್ಸೆಸ್ 100 ವರ್ಷದ ತುಂಬಿದ ಹಿನ್ನೆಲೆಯಲ್ಲಿ ದೊಣ್ಣೆ ಹಿಡಿದು ರಾಜ್ಯದ ಹಲವು ಭಾಗಗಳಲ್ಲಿ ಸಾರ್ವಜನಿಕವಾಗಿ ಪಥಸಂಚಲನ ಮಾಡಿವೆ. ಇದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದೆ ಅಲ್ಲದೆ ಆರೆಸ್ಸೆಸ್ ಸಾರ್ವಜನಿಕ ಸ್ಥಳಗಳಲ್ಲಿ ಶಾಖೆಗಳನ್ನು ನಡೆಸುತ್ತಿರುವುದಕ್ಕೆ ಹಾಗೂ ಆ ರೀತಿಯ ಚಟುವಟಿಕೆ ನಡೆಸಲು ನಿರ್ಭಂದಿಸಬೇಕು ಎಂದು ಕೋರಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಸರ್ಕಾರದ ಅನುಮತಿ ಖಡ್ಡಾಯ ಎಂದು ಸರ್ಕಾರ ಇತ್ತೀಚೆಗೆ ಆದೇಶ ಹೊಡಿಸಿತ್ತು.
ಪ್ರಿಯಾಂಕ್ ಖರ್ಗೆಯವರ ಈ ಪತ್ರದ ವಿರುದ್ದ ದೇಶದ ನಾನಾ ಭಾಗಗಳಿಂದ ಬೆದರಿಕೆ ಕರೆಗಳು ಬಂದಿದ್ದವು. ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಸಂವಿಧಾನ ವಿರೋಧಿ ಎಂಬುದನ್ನು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಆರೆಸ್ಸೆಸ್ ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನಲಾಗುತ್ತಿದೆ.
ಪ್ರಿಯಾಂಕ್ ಖರ್ಗೆಯವರ ಈ ನಿಲುವನ್ನು ವಿರೋಧಿಸಿ ಅವರ ಕ್ಷೇತ್ರವಾದ ಚಿತ್ತಾಪುರದಲ್ಲಿ ನವೆಂಬರ್ 2ರಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಆರೆಸ್ಸೆಸ್ ಮುಂದಾಗಿತ್ತು.
ಪ್ರಿಯಾಂಕ್ ಖರ್ಗೆ ನಿಲುವನ್ನು ಬೆಂಬಲಿಸಿ ಭೀಮ್ ಆರ್ಮಿ, ದಲಿತ ಸಂಘಟನೆಗಳು ಹಾಗೂ ಇನ್ನಿತರೆ ಸಂಘಟನೆಗಳು ಆರೆಸ್ಸೆಸ್ ಪಥಸಂಚಲನ ನಡೆಸಲು ಉದ್ದೇಶಿಸಿರುವ ಮಾರ್ಗದಲ್ಲೇ ತಮಗೂ ಮೆರವಣಿಗೆಗೆ ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದವು. ಅಲ್ಲದೇ ತಮಗೂ ದೊಣ್ಣೆ ಸೇರಿದಂತೆ ಪರವಾನಗಿ ಪಡೆದ ಬಂದೂಕುಗಳನ್ನೂ ಮೆರವಣಿಗೆಯಲ್ಲಿ ಬಳಸಲು ಅನುಮತಿ ಕೇಳಿದ್ದವು.
ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ತಾಲೂಕು ಆಡಳಿತವು ಪಥಸಂಚಲದ ಆಯೋಜಕರಿಗೆ ಹಲವು ಮಾಹಿತಿ ಕೋರಿ ಅನುಮತಿಯನ್ನು ನಿರಾಕರಿಸಲಾಗಿತ್ತು. ಆರ್‌ಎಸ್‌ಎಸ್ ನಾಯಕ ಅಶೋಕ್ ಪಾಟೀಲ್ ಅವರು ತಹಶೀಲ್ದಾರ್ ಅವರ ನಿರ್ಧಾರವನ್ನು ಪ್ರಶ್ನಿಸಿ ಕಲಬುರಗಿಯ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಅಕ್ಟೋಬರ್ 19 ರಂದು ವಿಶೇಷ ಸಭೆಯಲ್ಲಿ ಈ ವಿಷಯವನ್ನು ಆಲಿಸಿದ ನ್ಯಾಯಾಲಯವು, ಅಕ್ಟೋಬರ್ 28ಕ್ಕೆ (ಇಂದು) ಶಾಂತಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.


