“ಬೆಂಗಳೂರನ್ನು ಸ್ವಚ್ಛವಾಗಿಡಲು ನಾವು ಮಹಿಳಾ ಪೌರ ಕಾರ್ಮಿಕರು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಕೆಲಸ ಮಾಡುತ್ತೇವೆ. ಆದರೆ ಕೆಲಸದ ನಡುವೆ ನಮಗೆ ಮೂತ್ರ ವಿಸರ್ಜನೆ ಮಾಡಲು ಸಹ ನಿರ್ದಿಷ್ಟ ಶೌಚಾಲಯವಿಲ್ಲ. ಅದನ್ನೂ ನಾವು ತಡೆದುಕೊಂಡೇ ಕೆಲಸ ಮಾಡಬೇಕಾಗಿದೆ. ಇದರಿಂದ ಹತ್ತಾರು ಮಹಿಳಾ ಕಾರ್ಮಿಕರಿಗೆ ಅಲರ್ಜಿ ಸೇರಿದಂತೆ ಕಿಡ್ನಿ ತೊಂದರೆಗಳಾಗಿವೆ” ಎಂದು 25 ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಆಂಜನಮ್ಮ ಎಂಬುವವರು ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ.
“ನಾನು ಕಳೆದ 25 ವರ್ಷಗಳಿಂದ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 39ರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಪತಿ ಕೂಡ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೇವಲ 500 ರೂ. ವೇತನ ಇದ್ದಾಗಿನಿಂದಲೂ ನಾವು ಈ ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಉದ್ಯೋಗ ಇನ್ನೂ ಖಾಯಂ ಆಗಿಲ್ಲ. ಈ ಕುರಿತು ನಾವು ಪ್ರತಿಭಾರಿಯೂ ಹೋರಾಟ ಮಾಡುತ್ತಲೆ ಇದ್ದೇವೆ. ಆದರೆ ನಮಗೆ ನ್ಯಾಯಯುತವಾಗಿ ಸಿಗಬೇಕಾದ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ‍್ಯಾಲಿಯ ಫೋಟೊಗಳನ್ನು ಮೋದಿ ರ‍್ಯಾಲಿಯೆಂದು ತಪ್ಪಾಗಿ ಹಂಚಿದ ಬಿಜೆಪಿಗರು!
ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿಯೂ ಸಹ ಮಹಿಳೆಯರಿಗೆ ಯಾವುದೇ ರಜೆಗಳು ಇರುವುದಿಲ್ಲ. ನಾವು ಮಾಸಿಕ ಋತುಚಕ್ರಕ್ಕೆ ಒಳಗಾದಾಗ ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಕೆಲವು ದಿನಗಳ ಕಾಲ ಪಾಲಿಕೆಯೆ ನಮಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿತ್ತು. ಆದರೆ ಆ ಊಟದಲ್ಲಿ ಹುಳಗಳು ಕಂಡಬಂದಿದ್ದವು. ಬೇಕಾಬಿಟ್ಟಿ ಅಡಿಗೆ ಮಾಡಿ ತಂದುಕೊಡುತ್ತಿದ್ದರು. ಈಗ ಅದನ್ನೂ ನಿಲ್ಲಿಸಲಾಗಿದೆ ಎಂದು ಹೇಳಿದರು.
ನಮಗೆ ಈಗ ಕೇವಲ 12 ಸಾವಿರ ವೇತನ ನೀಡುತ್ತಿದ್ದಾರೆ. ನಮಗೆ ನ್ಯಾಯಯುತವಾದ ಯಾವುದೇ ಸೌಲಭ್ಯಗಳನ್ನೂ ನೀಡುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ಅದರಿಂದ ವೇತನವೇನೋ ಸ್ವಲ್ಪ ಹೆಚ್ಚಾಯಿತು ಎನ್ನುವುದನ್ನು ಬಿಟ್ಟರೆ ಉಳಿದ ಬೇಡಿಕೆಗಳೆಲ್ಲಾ ಹಾಗೇ ಉಳಿದಿವೆ ಎಂದು ಹೇಳಿದರು.
ಇದನ್ನೂ ಓದಿ: ಪ.ಬಂಗಾಳದಲ್ಲಿ 8 ಹಂತದ ಮತದಾನ: ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಜಾ
ಎಷ್ಟೋ ಜನರನ್ನು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ. ಅವರ ಹುದ್ದೆ ಖಾಯಂ ಆಗಿಲ್ಲವಾದ್ದರಿಂದ ಉದ್ಯೋಗ ಕಳೆದುಕೊಂಡವರೆಲ್ಲರೂ ಈಗ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದಾರೆ. ಉದ್ಯೋಗದಿಂದ ವಜಾಗೊಳಿಸಿದ ಸಂದರ್ಭದಲ್ಲಿ ಕಾರ್ಮಿಕರಿಗೆ ನೀಡುತ್ತೇವೆ ಎನ್ನಲಾಗಿದ್ದ 10 ಲಕ್ಷ ಹಣವನ್ನೂ ನೀಡಿಲ್ಲ. ಈ ಕಡೆ ಉದ್ಯೋಗವೂ ಖಾಯಂ ಆಗಿಲ್ಲ. ನಾವು ಏನು ಮಾಡಬೇಕು? ಬಯೋ ಮೆಟ್ರಿಕ್ ಬಂದಿದ್ದರಿಂದ ಪ್ರತಿ ತಿಂಗಳೂ 7-8 ನೇ ತಾರೀಖಿನಂದು ವೇತನ ಬರುತ್ತಿದೆ ಅಷ್ಟೆ. ಆದರೆ ಕೇವಲ 12 ಸಾವಿರ ವೇತನದಲ್ಲಿ ನಮ್ಮ ಮನೆ, ಮಕ್ಕಳ ಶಿಕ್ಷಣ, ಆರೋಗ್ಯ ಮುಂತಾದ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ಹಾಗಾಗಿ ನಮಗೆ ಕನಿಷ್ಠ 21 ಸಾವಿರ ವೇತನ ಖಾತ್ರಿಗೊಳಿಸಿ ಎಂದು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೆಲಸದಿಂದ ವಜಾಗೊಂಡವರನ್ನು ಅವರ ಮಕ್ಕಳೂ ನೋಡಿಕೊಳ್ಳುತ್ತಿಲ್ಲ. ಏಕೆಂದರೆ ಕೊರೊನಾ ಕಾರಣದಿಂದ ಅವರ ಮಕ್ಕಳೂ ಸಹ ಉದ್ಯೋಗ ಕಳೆದುಕೊಂಡಿದ್ದಾರೆ. ಅದೂ ಅಲ್ಲದೇ ಅವರೂ ಹೆಚ್ಚಿನ ಶಿಕ್ಷಣ ಪಡೆದುಕೊಂಡಿಲ್ಲ. ಇನ್ನು ಈ ಕಾಲದಲ್ಲಿ ಯಾವ ಮಕ್ಕಳು ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಾರೆ. ಹಾಗಾಗಿ ಕೆಲಸದಿಂದ ವಜಾಗೊಂಡವರೆಲ್ಲರೂ ವಾಸ್ತವದಲ್ಲಿ ಬೀದಿಯಲ್ಲಿದ್ದಾರೆ ಎಂದು ವಿವರಿಸಿದರು.
“ನಾವು ಜೀವನ ಸಾಗಿಸುವುದೇ ಕಷ್ಟವಾಗಿದೆ. ನಮಗೆ ಜೀವನದಲ್ಲಿ ಏನೂ ಸಿಕ್ಕಿಲ್ಲ. ಈಗ ನಾವು ಸಂಪೂರ್ಣ ಸೋತಿದ್ದೇವೆ. ನಮ್ಮ ಆರೋಗ್ಯವನ್ನೂ ಕಳೆದುಕೊಂಡಿದ್ದೇವೆ. ಈ ನಗರವನ್ನು ಸ್ವಚ್ಛವಾಗಿಡಲು ನಮ್ಮ ಆರೋಗ್ಯ ಮತ್ತು ಜೀವನವನ್ನು ಮುಡಿಪಾಗಿಟ್ಟಿದ್ದೇವೆ ಎಂಬುದನ್ನು ನಮ್ಮ ಮೇಲಧಿಕಾರಿಗಳು ಅರಿತುಕೊಳ್ಳಬೇಕು. ಈ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರ ಗುರುತಿಸಬೇಕು. ನಮ್ಮ ಹಕ್ಕುಗಳನ್ನು ಕಾಪಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನ 154 ಸ್ಥಾನಗಳಲ್ಲಿ ಎಂಎನ್‌ಎಂ ಸ್ಪರ್ಧೆ- ಕಮಲ್ ಹಾಸನ್


