ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರು ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ತಮ್ಮ ಮೊದಲ ರ‍್ಯಾಲಿಯಲ್ಲಿ ಭಾನುವಾರ ಮಾತನಾಡಿದರು. ಆದರೆ ರ್ಯಾಲಿಗೆ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಭಾಗವಹಿಸಿರಲಿಲ್ಲ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಭಾರೀ ಜನ ಸೇರಿರುವುದಾಗಿ ಹಲವು ಫೋಟೊಗಳು ಹರಿದಾಡತೊಡಗಿದವು. ಆ ಚಿತ್ರಗಳು ಯಾವುವು ಎಂಬುದನ್ನು ಪರಿಶೀಲಿಸೋಣ.

ಚಿತ್ರ 1

ಈ ಒಂದು ಚಿತ್ರವನ್ನು ಬಿಜೆಪಿ ತಮಿಳುನಾಡು, ಬಿಜೆಪಿ ಪಂಜಾಬ್ ಮತ್ತು ಬಿಜೆಪಿ ಸದಸ್ಯರಾದ ತಾಜಿಂದರ್ ಬಗ್ಗಾ, ಎಸ್‌ಜಿ ಸೂರ್ಯ, ಭನು ಜಲನ್ ಮತ್ತು ಒಪಿ ಮಿಶ್ರಾ ಹಂಚಿಕೊಂಡಿದ್ದಾರೆ.

ಕಳೆದ ವಾರ ಕಾಂಗ್ರೆಸ್, ಸಿಪಿಐ (ಎಂ) ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ ಜಂಟಿ ರ‍್ಯಾಲಿ ನಡೆದಿತ್ತು. ಆಗಲೂ ಹಲವಾರು ಕಾಂಗ್ರೆಸ್ ಬೆಂಬಲಿಗರು ಇದೇ ಚಿತ್ರವನ್ನು ಹಂಚಿಕೊಂಡಿದ್ದಾರೆ ಎಂಬುದು ವಿಶೇಷ.

ಫ್ಯಾಕ್ಟ್-ಚೆಕ್

ಆಲ್ಟ್ ನ್ಯೂಸ್ ನಡೆಸಿದ ರಿವರ್ಸ್ ಇಮೇಜ್ ಹುಡುಕಾಟದ ಪ್ರಕಾರ, ಪ್ರಚಲಿತದಲ್ಲಿ ಬಿಜೆಪಿ ಬಳಸುತ್ತಿರುವ ಈ ಚಿತ್ರವು 2019ರಲ್ಲಿ ಎಡಪಂಥೀಯ ನೇತೃತ್ವದ ರಂಗ ನಡೆಸಿದ ಬೃಹತ್ ರ‍್ಯಾಲಿಯ ಚಿತ್ರವಾಗಿದೆ.

ಈ ಚಿತ್ರವನ್ನು 2019 ರಲ್ಲಿ ಸೋಷಿಯಲ್ ನ್ಯೂಸ್ XYZ ಪ್ರಕಟಿಸಿತು, ಇದು ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಎಡರಂಗ ನೇತೃತ್ವದಲ್ಲಿ ನಡೆದ ರ‍್ಯಾಲಿಯ ಚಿತ್ರ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ ಶೀರ್ಷಿಕೆಯೊಂದಿಗೆ ಅದು ಪ್ರಕಟಿಸಿದೆ. ಫೆಬ್ರವರಿ 3, 2019ರಂದು ನಡೆದ ಈ ರ‍್ಯಾಲಿಯ ಚಿತ್ರವನ್ನು ಐಎಎನ್‌ಎಸ್ ಪ್ರಕಟಿಸಿದೆ ಎಂದು ವರದಿ ಹೇಳುತ್ತದೆ.

ಚಿತ್ರವು ಭಾರಿ ಜನಸಮೂಹವನ್ನು ತೋರಿಸುತ್ತದೆ, ಇದನ್ನು ಮುಂಭಾಗದ ಎಡ ಪಕ್ಷಗಳ ಕೆಂಪು ಧ್ವಜಗಳಿಂದ ಗುರುತಿಸಲಾಗಿದೆ. ಬಿಜೆಪಿ ಬೆಂಬಲಿಗರು ಟ್ವೀಟ್ ಮಾಡಿದ ಚಿತ್ರವು ಸ್ವಲ್ಪ ಮಸುಕಾದ ಆವೃತ್ತಿಯಾಗಿದ್ದು, ಕೆಂಪು ಬಣ್ಣವನ್ನು ಕೇಸರಿ ಎಂದು ತಪ್ಪಾಗಿ ಗ್ರಹಿಸುವಂತೆ ಮಾಡಲಾಗಿದೆ.

ಚಿತ್ರ 2

ಎರಡನೇ ಚಿತ್ರವನ್ನು ಬಿಜೆಪಿ ಸದಸ್ಯ ಒ.ಪಿ.ಮಿಶ್ರಾ ಅವರು “ಹೌ ಜೋಶ್” ಎಂದು ಉತ್ಸುಕರಿತರಾಗಿ ಹೇಳಿ, ಶೇರ್ ಮಾಡಿದ್ದಾರೆ.

ಫ್ಯಾಕ್ಟ್-ಚೆಕ್

ರಿವರ್ಸ್ ಇಮೇಜ್ ಹುಡುಕಾಟವು ಈ ಚಿತ್ರವು 2014 ರಲ್ಲಿ ಎಡಪಂಥಿಯ ನೇತೃತ್ವದ ಬೃಹತ್ ರ‍್ಯಾಲಿಯನ್ನು ಪ್ರತಿನಿಧಿಸುತ್ತದೆ ಎಂದು ಸಾಬೀತು ಮಾಡಿದೆ.

ಫೇಕ್ ನ್ಯೂಸ್ ಹೆಚ್ಚಳವು ಚುನಾವಣೆಗಳ ಮೊದಲು ಕಂಡುಬರುವುದು ಸಾಮಾನ್ಯ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಇದಕ್ಕೆ ಹೊರತಾಗಿಲ್ಲ. ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಪಿಎಂ ಮೋದಿಯವರ ಭಾಷಣಕ್ಕೆ ಹೆಚ್ಚಿನ ಜನಸಮೂಹ ಸೇರದಿರುವುದು ಗಮನಾರ್ಹವಾಗಿದೆ. ಮೂರು ರೈಲು ಬಾಡಿಗೆ ಪಡೆದು ಜನರನ್ನು ತಂದರೂ ಅಲ್ಲಿ ದೊಡ್ಡ ಜನಸಂದಣಿ ಇರಲೇ ಇಲ್ಲ.

(ಕೃಪೆ: ಅಲ್ಟ್ ನ್ಯೂಸ್)


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಗ್ರೇಟಾ ಥನ್‌ಬರ್ಗ್‌ಗೆ ಕಳಂಕ ತರಲು ಮತ್ತೆ ಚಾಲ್ತಿಗೆ ಬಂದ ಎಡಿಟೆಡ್ ಫೋಟೊ!

1 COMMENT

LEAVE A REPLY

Please enter your comment!
Please enter your name here