ಹಿರಿಯ ಕಾಂಗ್ರೆಸ್ ನಾಯಕ ಎ ಕೆ ಆಂಟನಿ ಅವರ ಪುತ್ರ ಅನಿಲ್ ಕೆ.ಆಂಟನಿಯವರು ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ಸ್ವತಃ ಎ.ಕೆ.ಆಂಟನಿಯವರೇ ವಿರೋಧಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಪ್ರತಿಕ್ರಿಯಿಸಿ, “ಬಿಜೆಪಿ ಸೇರಿ ನನ್ನ ಮಗ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾನೆ. ಇದರಿಂದ ನೋವಾಗಿದೆ” ಎಂದು ಹೇಳಿದ್ದಾರೆ.
ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಎ.ಕೆ.ಆಂಟನಿ, “ನರೇಂದ್ರ ಮೋದಿ ಸರ್ಕಾರ ವ್ಯವಸ್ಥಿತವಾಗಿ ದೇಶದ ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ದುರ್ಬಲಗೊಳಿಸುತ್ತಿದೆ. ದೇಶದ ಸಾಂವಿಧಾನಿಕ ಮೌಲ್ಯವನ್ನು ನಾಶಪಡಿಸುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಭಾರತದ ಮೂಲವೆಂದರೆ ಏಕತೆ ಮತ್ತು ಧಾರ್ಮಿಕ ಸಾಮರಸ್ಯ. 2014ರ ನಂತರ ಅಧಿಕಾರಕ್ಕೆ ಬಂದ ಮೋದಿ ಸರಕಾರವು ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಭಾರತೀಯ ಪರಿಕಲ್ಪನೆಯಾಗಿದೆ. ಆದರೆ ಬಿಜೆಪಿ ಏಕರೂಪತೆಯನ್ನು ಮಾತ್ರ ಪ್ರತಿಪಾದಿಸುತ್ತದೆ. ಅವರು ದೇಶದ ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸುತ್ತಿದ್ದಾರೆ” ಎಂದಿದ್ದಾರೆ.
“ಕೊನೆಯ ಉಸಿರು ಇರುವವರೆಗೂ ನಾನು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ತಪ್ಪು ನೀತಿಗಳನ್ನು ವಿರೋಧಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದ ಅನಿಲ್ ಆಂಟನಿ, ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸೇರುವ ಮುನ್ನ ತಮ್ಮ ತಂದೆಯವರನ್ನು ಸಂಪರ್ಕಿಸಿದ್ದೀರಾ ಎಂಬ ಪ್ರಶ್ನೆಗೆ, “ಇದು ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಭಿನ್ನಾಭಿಪ್ರಾಯ ಮತ್ತು ವಿಚಾರಗಳ ಬಗ್ಗೆ ಸಂಬಂಧಿಸಿದ್ದು. ನಾನು ಸರಿಯಾದ ಹೆಜ್ಜೆ ಇಟ್ಟಿದ್ದೇನೆ ಎಂದು ನಂಬುತ್ತೇನೆ. ನನ್ನ ತಂದೆಯ ಮೇಲಿನ ನನ್ನ ಗೌರವ ಹಾಗೆಯೇ ಉಳಿಯುತ್ತದೆ” ಎಂದು ತಿಳಿಸಿದ್ದಾರೆ.
ಬಿಜೆಪಿ ಸೇರಿದ್ದಕ್ಕಾಗಿ ಅನಿಲ್ ಆಂಟನಿ ವಿರುದ್ಧ ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, “ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಕೆ ಆಂಟನಿ ಅವರಿಗೆ ದ್ರೋಹ ಮಾಡಿದ್ದಾರೆ” ಎಂದು ಆರೋಪಿಸಿದೆ. ಕೆಪಿಸಿಸಿ ಮುಖ್ಯಸ್ಥ ಕೆ ಸುಧಾಕರನ್ ಅವರು, “ಅನಿಲ್‌ಗೆ ಯಾವುದೇ ಪಕ್ಷದ ಜವಾಬ್ದಾರಿಗಳನ್ನು ನೀಡಿಲ್ಲ. ಹೀಗಾಗಿ ಹೋಗಿದ್ದಾರೆ” ಎಂದಿದ್ದಾರೆ.
ಅನಿಲ್ ಆಂಟೋನಿಯವರ ನಿರ್ಧಾರವನ್ನು ಅವರ ಕಿರಿಯ ಸಹೋದರ ಅಜಿತ್ ಆಂಟೋನಿ ವಿರೋಧಿಸಿದ್ದಾರೆ. “ಅನಿಲ್ ಅವರು ತಮ್ಮ ನಿರ್ಧಾರದ ಬಗ್ಗೆ ಕುಟುಂಬಕ್ಕೆ ಕಿಂಚಿತ್ತೂ ಸುಳಿವು ನೀಡಿಲ್ಲ, ಗುರುವಾರದ ಬೆಳವಣಿಗೆಯ ಬಗ್ಗೆ ಚಾನೆಲ್‌ಗಳಲ್ಲಿ ಸುದ್ದಿ ನೋಡಿ ಆಘಾತವಾಗಿದೆ” ಎಂದಿದ್ದಾರೆ.
ಇದನ್ನೂ ಓದಿರಿ: ಆಂಧ್ರಪ್ರದೇಶದ ಮಾಜಿ ಸಿಎಂ ಕಿರಣ್‌ಕುಮಾರ್ ರೆಡ್ಡಿ ಬಿಜೆಪಿಗೆ ಸೇರ್ಪಡೆ
“ಪಪ್ಪ (ಎ ಕೆ ಆಂಟನಿ) ಮನೆಯ ಮೂಲೆಯೊಂದರಲ್ಲಿ ಅತ್ಯಂತ ನೋವಿನಿಂದ ಕುಳಿತ್ತಿದ್ದರು. ನನ್ನ ಜೀವನದಲ್ಲಿ ನಾನು ಅವರನ್ನು ಈ ರೀತಿ ದುರ್ಬಲವಾಗಿ ನೋಡಿಲ್ಲ. ಅವರು ಕಣ್ಣೀರು ಹಾಕಲಿಲ್ಲ, ಅಷ್ಟೇ” ಎಂದು ಅಜಿತ್ ಹೇಳಿಕೊಂಡಿದ್ದಾರೆ.
ತನ್ನ ಸಹೋದರ ಬಿಜೆಪಿಗೆ ಸೇರಲು ತನ್ನದೇ ಆದ ಕಾರಣಗಳನ್ನು ಹೊಂದಿದ್ದಾನೆ. ಕಾಂಗ್ರೆಸ್ ಪಕ್ಷದ ಅಪರಿಚಿತ ಕಾರ್ಯಕರ್ತರಿಂದ ಆತನಿಗೆ ಹಲವಾರು ನಿಂದನೀಯ ಕರೆಗಳು ಬರುತ್ತಿದ್ದವು, ಅದು ತನಗೆ ನೋವುಂಟು ಮಾಡಿರಬಹುದು ಎಂದು ಶಂಕಿಸಿದ್ದಾರೆ.
“ಅವರು ಕೋಪದಿಂದ (ಕಾಂಗ್ರೆಸ್) ಪಕ್ಷ ತೊರೆದಿದ್ದಾರೆಂದು ನಾನು ಭಾವಿಸಿರುವೆ. ಆದರೆ ಅವರು ಬಿಜೆಪಿಗೆ ಹೋಗುತ್ತಾರೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ನಿರ್ಧಾರವು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡ ನಂತರ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಬಹುದು. ಬಿಜೆಪಿಯವರು ಅನಿಲ್ ಅವರನ್ನು ಕರಿಬೇವಿನ ಎಲೆಗಳಂತೆ ಬಳಸಿ ಎಸೆಯುತ್ತಾರೆ” ಎಂದು ಅವರು ಭವಿಷ್ಯ ನುಡಿದಿದ್ದಾರೆ.


