ಖಾಸಗಿ ಟೆಲಿಕಾಂ ಕಂಪನಿಗಳು ಕಟ್ಟಬೇಕಿರುವ 4 ಲಕ್ಷ ಕೋಟಿ ರೂ.ಗಳನ್ನು ಸರ್ಕಾರಿ ಸಂಸ್ಥೆಗಳಿಂದ ತುಂಬಿಕೊಡಲು ಮುಂದಾಗಿರುವ ದೂರಸಂಪರ್ಕ ಇಲಾಖೆಯ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದ್ದು, ತನ್ನ ಹಿಂದಿನ ತೀರ್ಪನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಕಿಡಿಕಾರಿದೆ.
4 ಲಕ್ಷ ಕೋಟಿ ರೂಗಳನ್ನು ಆಯಿಲ್ ಇಂಡಿಯಾ, ದೆಹಲಿ ಮೆಟ್ರೋ ರೈಲು ನಿಗಮ ಮತ್ತು ಪವರ್ ಗ್ರಿಡ್ ಕಾರ್ಪೊರೇಶನ್‌ನಂತಹ ಸಾರ್ವಜನಿಕ ವಲಯದ ಘಟಕಗಳಿಂದ ಕೊಡಬೇಕೆಂದು ಸರ್ಕಾರದ ದೂರಸಂಪರ್ಕ ಇಲಾಖೆ ಕೋರಿರುವುದನ್ನು ಉಲ್ಲೇಖಿಸಿದ ಕೋರ್ಟ್ ಇದನ್ನು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಹೇಳಿದೆ.
ಸುಪ್ರೀಂನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಅಬ್ದುಲ್ ನಜೀರ್ ಮತ್ತು ಎಂ.ಆರ್ ಶಾ ಇದ್ದ ತ್ರಿದಸ್ಯ ಪೀಠವನ್ನು ಪ್ರಕರಣವನ್ನು ವಿಚಾರನೆ ನಡೆಸುತ್ತಿದ್ದು, ಈ ಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ತಿರಸ್ಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ತನ್ನ ಈ ನಿರ್ಧಾರವನ್ನು ಮೂರು ದಿನಗಳೊಳಗೆ ಮರುಪರಿಶೀಲಿಸುವಂತೆ ಸರ್ಕಾರವನ್ನು ಕೇಳಿದೆ.
ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ವೊಡಾಫೋನ್ ಐಡಿಯಾ ಸೇರಿದಂತೆ ಹಲವಾರು ದೂರಸಂಪರ್ಕ ಸಂಸ್ಥೆಗಳಿಗೆ 20 ವರ್ಷಗಳಲ್ಲಿ 1.4 ಲಕ್ಷ ಕೋಟಿ ರೂ. ಮೌಲ್ಯದ ಬ್ಯಾಕ್-ಶುಲ್ಕವನ್ನು ಪಾವತಿಸಲು ಅನುಮೋದನೆ ಕೋರಿತ್ತು. ಇದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ದೂರಸಂಪರ್ಕ ಇಲಾಖೆಯ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಬೇಲ್ ಔಟ್ ಯೋಜನೆಯನ್ನು ಸರ್ಕಾರ ಹೊರತಂದಿದೆ. ಕಂಪೆನಿಗಳಿಗೆ ಒಂದೇ ಸಮಯದಲ್ಲಿ ಮೊತ್ತವನ್ನು ಪಾವತಿಸುವುದು ಕಷ್ಟಕರವಾಗಿರುತ್ತದೆ. ನ್ಯಾಯಾಲಯವು ಆಕ್ಷೇಪಿಸಿದರೆ ಅದು ಟೆಲಿಕಾಂ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ನೆಟ್‌ವರ್ಕ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗ್ರಾಹಕರು ಅಂತಿಮವಾಗಿ ತೊಂದರೆ ಅನುಭವಿಸುತ್ತಾರೆ. ಸಾರ್ವಜನಿಕ ವಲಯದ ಉದ್ಯಮಗಳಿಂದ ಬಾಕಿ ಹಣವನ್ನು ಏಕೆ ಸಂಗ್ರಹಿಸಲಾಗಿದೆ ಎಂಬುದರ ಕುರಿತು ಸರ್ಕಾರ ಅಫಿಡವಿಟ್ ಸಲ್ಲಿಸಲಿದೆ” ಎಂದು ಅವರು ಹೇಳಿದರು.
“ಭವಿಷ್ಯದ 20 ವರ್ಷಗಳನ್ನು ಯಾರು ನೋಡಿದ್ದಾರೆ?” ಎಂದು ಕಟುವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, ಆ ಬೇಡಿಕೆಯನ್ನು ನಿರಾಕರಿಸಿದೆ.
ಇದನ್ನೂ ಓದಿ: ಕೂಡಲೇ ಹಣ ಪಾವತಿಸಿ : ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ತಾಕೀತು


