ನಿಮಗೆ ಗೂಂಡಾಗಿರಿ, ದಂಗೆ ಬೇಕಾದರೆ ಬಿಜೆಪಿಗೆ ಓಟು ಹಾಕಿ. ಉತ್ತಮ ಶಾಲೆ, ಆಸ್ಪತ್ರೆ ಬೇಕಾದರೆ ಆಪ್ ಗೆಲ್ಲಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಪ್ ವತಿಯಿಂದ ಏರ್ಪಡಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಹಿಂದೆ 20% ಕಮಿಷನ್ ಸರ್ಕಾರವಿತ್ತು. ಈಗ 40% ಕಮಿಷನ್ ಸರ್ಕಾರ ಅಧಿಕಾರ ನಡೆಸುತ್ತಿವೆ. ಆದರೆ ನಮ್ಮ ದೆಹಲಿ ಸರ್ಕಾರ 0% ಕಮಿಷನ್ ಸರ್ಕಾರವಾಗಿದೆ. ಸಂಪೂರ್ಣ ಪ್ರಮಾಣಿಕ ಪಕ್ಷ ನಮ್ಮದು” ಎಂದರು.
ಇತಿಹಾಸದಲ್ಲಿ ರಾವಣ ಅಹಂಕಾರ ತೋರಿಸಿದ. ದೇವ ಸ್ವರೂಪಿ ರಾಮಚಂದ್ರರ ಜೊತೆ ದುಷ್ಮನ್ ಮಾಡಬೇಡ ಎಂದು ವಿಭೀಷಣ, ಮಂಡೋದರಿ ಮನವಿ ಮಾಡಿದರೂ ರಾವಣ ಕೇಳಲಿಲ್ಲ. ಅಂತ್ಯದಲ್ಲಿ ರಾವಣನಿಗೆ ಏನಾಯಿತು ನಾವೆಲ್ಲ ನೋಡಿದ್ದೇವೆ. ನಮ್ಮ ಕೇಂದ್ರ ಸರ್ಕಾರ ಕೂಡ ಅದೇ ರೀತಿ ವರ್ತಿಸಿತು. ಕೃಷಿ ಕಾನೂನುಗಳನ್ನು ತಂದು ರೈತರ ವಿರುದ್ಧ ನಡೆದುಕೊಂಡಿತು. ಆದರೆ ದಿಟ್ಟ ರೈತ ಹೋರಾಟದ ಮುಂದೆ ಅದು ಮಂಡಿಯೂರಿತು ಅಂದರು.
ಆಪ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಘೋಷಿಸಿದ ಕೋಡಿಹಳ್ಳಿ ಚಂದ್ರಶೇಖರ್‌ರವರಿಗೆ ಸ್ವಾಗತ ಕೋರಿದ ಅವರು, ಹೋರಾಡುತ್ತಿರುವ ಸಾವಿರಾರು ರೈತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. “ದೇಶದ ಮೂಲೆ ಮೂಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತನ ಮಕ್ಕಳು ರೈತರಾಗಲು ಬಯಸುತ್ತಿಲ್ಲ. ಇದನ್ನು ಬದಲಿಸಬೇಕಿದೆ. ಅದಕ್ಕೆ ಆಮ್ ಆದ್ಮಿ ಪಕ್ಷ ಬದ್ಧವಾಗಿದೆ” ಎಂದರು.
“ದಿಲ್ಲಿಯಲ್ಲಿ 0% ಸರ್ಕಾರವಿದೆ. ಕಟ್ಟರ್ ಪ್ರಾಮಾಣಿಕ ಸರ್ಕಾರವಿದೆ. ಒಂದು ಪೈಸೆ ಸಹ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಹ ಹೇಳುತ್ತಾರೆ. ಏಕೆಂದರೆ ಪ್ರಧಾನಿ ಮಂತ್ರಿ ನನ್ನ ಮನೆ ಮೇಲೆ ಸಿಬಿಐ ದಾಳಿ, ಐಟಿ ದಾಳಿ ನಡೆಯಿತು. ನನ್ನ ಬೆಡ್ ರೂಂ ಚೆಕ್ ಮಾಡಿದರು. ಅವರಿಗೆ ಏನು ಸಿಗಲಿಲ್ಲ. ಏಕೆಂದರೆ ನಾನು ಪ್ರಾಮಾಣಿಕ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮ ಉಪ ಮುಖ್ಯಮಂತ್ರಿ, ಎಲ್ಲಾ ಮಂತ್ರಿಗಳು ಮತ್ತು 20 ಶಾಸಕರ ಮನೆ ಮೇಲೆ ದಾಳಿಯಾಯತು. ಆದರೆ ಏನೂ ಸಿಗಲಿಲ್ಲ” ಎಂದು ತಿಳಿಸಿದರು.
ನಾನೊಬ್ಬ ಸಾಮಾನ್ಯ ಮನುಷ್ಯ. ನನಗೂ ಹೆಂಡತಿ ಮಕ್ಕಳು ತಂದೆ ತಾಯಿ ಇದ್ದಾರೆ. ಹಾಗಾಗಿ ಸಾಮಾನ್ಯ ಮನಷ್ಯರ ಕಷ್ಟಗಳು ನನಗೆ ಗೊತ್ತಿವೆ. ಸಾಮಾನ್ಯರಿಗೆ ಏನು ಬೇಕು ಎಂದು ನನಗೆ ಗೊತ್ತಿದೆ. ಹಿಂದೆ ದಿಲ್ಲಿಯಲ್ಲಿ ಸರ್ಕಾರಿ ಶಾಲೆಗಳು ಹೇಗಿದ್ದವು? ಆದರೆ ಇಂದು ಖಾಸಗಿ ಶಾಲೆಗಳಿಂತ ಚೆನ್ನಾಗಿವೆ. ಐದು ವರ್ಷಗಳಲ್ಲಿ ಅವುಗಳನ್ನು ಬದಲಿಸಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ 99.7% ಫಲಿತಾಂಶ ಬಂದಿದೆ. ಅಲ್ಲಿ ಸ್ವಿಮ್ಮಿಂಗ್ ಫೂಲ್, ಲಿಫ್ಟ್, ಸಭಾಂಗಣ ಎಲ್ಲವೂ ಇದೆ. ಹಾಗಾಗಿ 4 ಲಕ್ಷ ಮಕ್ಕಳಿಗೆ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಬಂದಿದ್ದಾರೆ. ಇದು ಮ್ಯಾಜಿಕ್ ಎಂದರು.
ದೆಹಲಿಯಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಲು 40-50 ಲಕ್ಷ ಖರ್ಚಾಗುತ್ತಿತ್ತು. ಈಗ ಸಂಪೂರ್ಣ ಉಚಿತವಾಗಿದೆ. 2 ಕೋಟಿ ಜನರಿಗೆ ಉಚಿತ ಆರೋಗ್ಯ ನೀಡುತ್ತಿದ್ದೇವೆ. ಇದೆಲ್ಲವೂ ಪ್ರಾಮಾಣಿಕ ಸರ್ಕಾರ ಹಣ ಉಳಿಸಿದ್ದರಿಂದ ಸಾಧ್ಯವಾಗಿದೆ ಎಂದರು. ದೆಹಲಿಯಲ್ಲಿ ಶಿಕ್ಷಣ ವೆಚ್ಚ ಉಚಿತ, ಆರೋಗ್ಯ ಉಚಿತ, ವಿದ್ಯುತ್, ಕುಡಿಯುವ ನೀರು ಮತ್ತು ಮಹಿಳೆಯರಿಗೆ ಸಾರಿಗೆ ಉಚಿತವಾಗಿದೆ ಎಂದರು.
ನನ್ನ ಮನೆ ಮೇಲೆ ಕೆಲ ಗೂಂಡಾಗಳು ದಾಳಿ ಮಾಡಿದರು. ನನಗೆ ಯಾವುದೇ ಭಯವಿಲ್ಲ. ನಾನು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ದನಿದ್ದೇನೆ. ಆದರೆ ಆ ದಿನ ನನ್ನ ಮನೆ ಮೇಲೆ ದಾಳಿ ಮಾಡಿದಾಗ ನಾವು ಯಾರು ಇರಲಿಲ್ಲ. ನನ್ನ ತಂದೆ ತಾಯಿ ಇದ್ದರು. ಆ ಗೂಂಡಾಗಳಿಗೆ ಬಿಜೆಪಿ ಸನ್ಮಾನ ಮಾಡುತ್ತಿದೆ ಎಂದು ಕಿಡಿಕಾರಿದರು. ಅತ್ಯಾಚಾರಿ, ಗೂಂಡಾ, ಲಫಂಗರು ಎಲ್ಲಾರೂ ಒಂದೇ ಪಕ್ಷದಲ್ಲಿದ್ದರೆ. ಅದೇ ಬಿಜೆಪಿ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮಕ್ಕಳು ವಿಧಾನಸಭೆ ಪ್ರವೇಶ ಮಾಡಬೇಕು – ಕೋಡಿಹಳ್ಳಿ ಚಂದ್ರಶೇಖರ್ ಆಶಯ
ನಮ್ಮ ಬದುಕಿಗೆ ರಾಜಕೀಯ ಪಕ್ಷಗಳು ಕೈಹಾಕಿದ ಮೇಲೆ, ನಿಮ್ಮ ಅಧಿಕಾರಕ್ಕೆ ನಾವು ಕೈ ಹಾಕುವುದು ಧರ್ಮ. ಹಾಗಾಗಿ ನಿಮ್ಮನ್ನು ಆಚೆಗೆ ಕಳಿಸಿ, ರೈತರ ಮಕ್ಕಳು ವಿಧಾನಸಭೆ ಪ್ರವೇಶ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಆಶಯ ವ್ಯಕ್ತಪಡಿಸಿದರು.
1980 ರಲ್ಲಿ ರೈತ ಚಳವಳಿ ಆರಂಭವಾಯಿತು. ಆರ್ ಗುಂಡೂರಾವ್ ಸರ್ಕಾರ ನೀರಿಗೆ ತೆರಿಗೆ ಹಾಕಿ, ವಸೂಲಿ ಮಾಡಲು ಹೋದಾಗ ನರಗುಂದದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗುಂಡು ಹಾರಿಸಿ ಕೊಂದರು. ಅಲ್ಲದೆ ಬೆಳಗಾವಿಯ ನಿಪ್ಪಾಣಿ, ಹಾಸನದ ದುದ್ದ, ಶಿವಮೊಗ್ಗದ ನಾಗಸಮುದ್ರ ಸೇರಿ ರಾಜ್ಯದಲ್ಲಿ 154 ರೈತರನ್ನು ಸರ್ಕಾರಗಳು ಗುಂಡು ಹಾರಿಸಿ ಕೊಂದಿವೆ. ಅಂತಹ ಸರ್ಕಾರಗಳನ್ನು ಕಿತ್ತೆಸೆಯುವ ಸಂದರ್ಭ ಬಂದಿದೆ ಎಂದರು.
ಕೇಂದ್ರ ಸರ್ಕಾರ ಕೊರೊನಾ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ರೈತ ವಿರೋಧಿ ಕೃಷಿ ಕಾನೂನುಗಳನ್ನು ಜಾರಿಗೆ ತಂದಿತು. ಆದರೆ 13 ತಿಂಗಳ ನಂತರ ವಾಪಸ್ ತೆಗೆದುಕೊಂಡರು. ಕರ್ನಾಟಕದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕಾನೂನಗಳನ್ನು ಜಾರಿಗೊಳಿಸಿ ಕುಂಟು ನೆಪ ಹೇಳಿ ವಾಪಸ್ ಪಡೆದಿಲ್ಲ. ಇದರ ವಿರುದ್ಧ ಹೋರಾಡಬೇಕಿದೆ ಎಂದರು.
ನಾಲ್ಕು ಅಪಾಯಕಾರಿ ಕಾನೂನುಗಳು ವಾಪಸ್ ಹೋಗಿಲ್ಲ. ಈಗ ವಿಧಾನಸಭೆಯಲ್ಲಿ ಕೂತಿರುವ 224 ಜನ ಶಾಸಕರು ರೈತರಿಗೆ ನ್ಯಾಯ ಕೊಡಿಸಿಲ್ಲ. ಬದಲಿಗೆ ರೈತರ ಸಾವಿಗೆ ಕಾರಣರಾಗಿದ್ದೀರಿ. 40% ಹಗಲು ದರೋಡೆಗೆ ಸಾಕ್ಷಿಯಾಗಿದ್ದೀರಿ. ನಿಮ್ಮನ್ನು ಮನೆಗೆ ಕಳುಹಿಸುವ ಸಮಯ ಬಂದಿದೆ. ಬೊಮ್ಮಾಯಿ ಸರ್ಕಾರದ ಅವಧಿ ಮುಗಿದಿದೆ ಎಂದರು.
ವಿರೋಧ ಪಕ್ಷದವರನ್ನು ಬೆಂಬಲಿಸಲು ಮಾನದಂಡವೇನು? ನಾವೇ ಒಂದು ಪಕ್ಷವನ್ನು ಕಟ್ಟಬೇಕು ಎಂದುಕೊಂಡೆವು. ನಾವು ಎಷ್ಟು ಸಮರ್ಥವಾಗಿ ಮಾಡಲಿಕ್ಕೆ ಸಾಧ್ಯ? ಎಲ್ಲಾ ಅಳೆದು ತೂಗಿದಾಗ ಕಳೆದ 8 ವರ್ಷಗಳಿಂದ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು ಆಪ್ ಬೆಂಬಲಿಸಿಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು.
ಇದನ್ನೂ ಓದಿ: 40% ಕಮಿಷನ್‌ನಿಂದ ಕರುನಾಡು ಕಳೆದುಕೊಳ್ಳುತ್ತಿರುವುದೇನು?
2023ರ ಚುನಾವಣೆಯಲ್ಲಿ ಆಪ್ ಆದ್ಮಿ ಪಕ್ಷದೊಂದಿಗೆ ನಾವು ಕರ್ನಾಟಕ ವಿಧಾನಸಭೆ ಪ್ರವೇಶಿಸಬೇಕು. ಶುದ್ಧ ಹಸ್ತರಾದ ಆಪ್ ಪಕ್ಷ ವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇವೆ. ನಮ್ಮ ರಾಜಕೀಯ ಮುಖವಾಣಿ ಆಮ್ ಆದ್ಮಿ ಪಕ್ಷ: ನಮ್ಮ ಚುನಾವಣೆಯ ಅಸ್ತ್ರ ಪೊರಕೆ ಎಂದು ಸಾರಿದರು.
ರೈತ ಸಂಘ ಮುಂದೆಯೂ ಸ್ವತಂತ್ರವಾಗಿ ಇರುತ್ತದೆ. ಹಾಗಿದ್ದುಕೊಂಡೆ ಆಮ್ ಆದ್ಮಿ ಸರ್ಕಾರ ರಚಿಸಲು ಹಗಲು ರಾತ್ರಿ ದುಡಿಯತ್ತದೆ. ಇದಕ್ಕೆ ರೈತರು ಪ್ರಮಾಣ ಮಾಡಬೇಕು. ರೈತರು ಅನ್ನ ಕೊಟ್ಟು, ಹಾಲು ಕೊಟ್ಟು ಪವಿತ್ರ ಕೆಲಸ ಮಾಡುತ್ತೀವಿ. ಹೆಂಡ, ಹಣಕ್ಕೆ ವೋಟು ಹಾಕುವುದು ಬಿಡಬೇಕು. ಯಾರಾದರೂ ಜಾತಿ ಹೆಸರೇಳಿದರೆ ಉಗಿಯಬೇಕು. ನಮ್ಮ ನಡುವೆ ಧರ್ಮ ಪ್ರವೇಶ ಮಾಡಬಾರದು. ಏಕೆಂದರೆ ನಮ್ಮದು ಕಾಯಕ ಧರ್ಮ. ಇದು ಬಸವಣ್ಣನವರ ನಾಡು. ಕಾಯಕ ಧರ್ಮ ಶ್ರೇಷ್ಟ ಎಂದರು.



ಮಾಧ್ಯಮಗಳು, ಹೊರರಾಜ್ಯದ ಪಕ್ಷಗಳಿಗೆ ಕೊಡುವ ಮಹತ್ವವನ್ನು ಕರ್ನಾಟಕ ರಾಜ್ಯದ ಪಕ್ಷಗಳಿಗೂ ಕೊಡಬೇಕು. ಕರ್ನಾಟಕ ರಾಜ್ಯಕ್ಕಾಗಿಯೇ ” ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ” ಹಗಲಿರುಳು ಶ್ರಮಿಸುತ್ತಾ ಇದೆ. ಏಪ್ರಿಲ್ 24 ರಂದು 10 : 00 ಗಂಟೆಗೆ ಜನ ಚೈತನ್ಯ ಯಾತ್ರೆ ಪ್ರಾರಂಭವಾದ್ರೆ ಮುಂದಿನ 2023 ರ ಮೇ ಎರಡನೇ ವಾರದ ವಿಧಾನ ಸಭಾ ಚುನಾವಣೆ ಮುಗಿಯುವವರೆಗೆ ಮನೆಯನ್ನು ಸೇರದೇ ರಾಜ್ಯಧ್ಯಕ್ಷರಾದ ರವಿ ಕೃಷ್ಣ ರೆಡ್ಡಿ ಯವರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಹಿಂದೆ ನಡೆದಿಲ್ಲ ಮುಂದೆ ನಡೆಯೋದಿಲ್ಲ. ಇದ್ರ ಬಗ್ಗೆ ಬರೆಯಿರಿ, ಮೇಡಂ.