Homeಕರ್ನಾಟಕಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಶತಮಾನದ ಕೋಮು ದಾಳಿಗಳು

ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಶತಮಾನದ ಕೋಮು ದಾಳಿಗಳು

- Advertisement -
- Advertisement -

ಕರ್ನಾಟಕದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿರುವ ಮುಸ್ಲಿಮರ ಮೇಲಿನ ದಾಳಿಗಳ ಹಿನ್ನೆಲೆಯಲ್ಲಿ, 1980ರಿಂದ ಕೋಮುವಾದವು ಕರ್ನಾಟಕದಲ್ಲಿ ಬೇರೂರಿದ ರೀತಿ- ಹಿಜಾಬ್-ಹಲಾಲ್ ಮತ್ತು ಅಜಾನ್‌ಗಳು ಅತ್ಯವಶ್ಯಕ ಧಾರ್ಮಿಕ ಆಚರಣೆಗಳೇ? ಅವನ್ನು ಕೈಬಿಡಲಾಗುವುದಿಲ್ಲವೇ?- ಮತ್ತು ಈ ರೀತೀಯ ದಾಳಿಗಳಿಗೆ ಸರ್ಕಾರದಿಂದ (ರಾಜ್ಯಾಂಗ) ದೊರೆಯುತ್ತಿರುವ ಮೌಖಿಕ ಬೆಂಬಲವನ್ನೂ ಒಳಗೊಂಡಂತೆ ಬಹಳಷ್ಟು ವಿಚಾರಗಳು ಚರ್ಚೆಯಾಗುತ್ತಿದೆ. ಇದರ ಬಗ್ಗೆ ಇಲ್ಲಿ ಗಮನಿಸುವುದು ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಜನರ ಪ್ರತಿನಿತ್ಯದ ಜೀವನದಲ್ಲಿ ನೆಲೆಯೂರಿರುವ ಕೋಮು ಸಾಮರಸ್ಯದ (ಸಿಂಕ್ರೆಟಿಕ್) ಸಂಸ್ಕೃತಿಯನ್ನು ಕುರಿತೂ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ.

ನಾಡಗೀತೆಯಲ್ಲಿ ಕುವೆಂಪು ಅವರು ಕರ್ನಾಟಕವನ್ನು ’ಸರ್ವ ಜನಾಂಗದ ಶಾಂತಿಯ ತೋಟ’ ಎಂದೇ ಕೊಂಡಾಡಿದ್ದಾರೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ಹಿತಚಿಂತಕರಲ್ಲಿ ಕೆಲವರನ್ನು ಇಲ್ಲಿ ನೆನಪಿಸಿಕೊಳ್ಳಬಹುದಾದರೆ, ರಹಮತ್ ತರೀಕೆರೆ, ಪುರುಷೋತ್ತಮ ಬಿಳಿಮಲೆ, ಅರುಣ್ ಜೋಳದಕೂಡ್ಲಿಗಿ, ಮುಜಾಫರ್ ಅಸ್ಸಾದಿ ಸೇರಿದಂತೆ ಇನ್ನೂ ಅನೇಕರು ಕರ್ನಾಟಕದಾದ್ಯಂತ ಆಚರಣೆಯಲ್ಲಿರುವ ಕೂಡು ಸಂಸ್ಕೃತಿ ಮತ್ತು ಸಂಪ್ರದಾಯಗಳು ಗಮನಿಸಿ, ತಮ್ಮ ಸಂಶೋಧನೆಗಳನ್ನು, ವಿಚಾರಗಳನ್ನು ಮತ್ತು ವಾದಗಳನ್ನು ಮುಂದಿಡುತ್ತಾ, ಕರ್ನಾಟಕವು ಕೋಮು ಸಾಮರಸ್ಯದ ನಾಡಾಗಿತ್ತು ಎಂಬುದನ್ನು ಮನಗಾಣಿಸುವುದು ಮಾತ್ರವಲ್ಲದೇ ಆ ವಿಚಾರಗಳನ್ನು ಇನ್ನಷ್ಟು ಪುಷ್ಟೀಕರಿಸಿದ್ದಾರೆ. ಮುಸ್ಲಿಮರ ಮೇಲೆ ದಾಳಿಗಳು ಪರಾಕಾಷ್ಠೆಗೆ ಏರುತ್ತಿರುವ ಸಮಯದಲ್ಲಿ, ಹೆಚ್ಚಾಗುತ್ತಿರುವ ಹಲ್ಲೆಗಳು ಮತ್ತು ದಾಳಿಗಳಿಗೆ ಪ್ರತಿಯಾಗಿ ಜನರ ದಿನನಿತ್ಯ ಜೀವನದಲ್ಲಿ ಆಚರಣೆಯಲ್ಲಿರುವ ಕೋಮು ಸಾಮರಸ್ಯದ ಸಂಪ್ರದಾಯ, ಆಚರಣೆ ಮತ್ತು ಸಂಸ್ಕೃತಿಗಳನ್ನು ಮುಂದುಮಾಡುವುದು ಕೂಡ ಪ್ರಜ್ಞಾವಂತ ಸಮಾಜವು ಪ್ರತಿಕ್ರಿಯಿಸುವ ಒಂದು ಮುಖ್ಯ ವಿಧಾನವಾಗಿ ಕಂಡುಬರುತ್ತಿದೆ.

ಒಟ್ಟಿನಲ್ಲಿ, ಈ ಹಿಂಸೆಯ ಘಟನೆಗಳು ಸಂಘ ಪರಿವಾರದ ಸಂಘಟನೆಗಳ ಗೂಂಡಾಗಳು ಸೃಷ್ಟಿಸುತ್ತಿರುವ ಗಲಭೆಗಳಾಗಿವೆ ಮತ್ತು ಇದಕ್ಕೆ ಸಮಾಜದ ಬಹುಸಂಖ್ಯಾತರ ಬೆಂಬಲವಿಲ್ಲ ಎಂದು ಸಾರುವುದೇ ಈ ರೀತಿಯ ಪ್ರತಿಕ್ರಿಯೆಗಳ ಒಟ್ಟು ಸಾರಾಂಶ. ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಈ ರೀತಿಯ ವಾದಗಳು ಎರಡು ಕಾರಣಕ್ಕೆ ಪ್ರಮುಖವೆನಿಸುತ್ತವೆ. ಮೊದಲನೆಯದಾಗಿ, ಈ ರೀತಿಯ ವಾದಗಳು ಬಹುಸಂಖ್ಯಾತ ’ಹಿಂದೂ’ ಸಮಾಜದ ಅಂತಃಸಾಕ್ಷಿಗೆ ಸಂಸ್ಕೃತಿ-ಸಂಪ್ರದಾಯವೆಂಬ ಪರಿಭಾಷೆಯನ್ನು ಬಳಸಿ, ಅವರನ್ನು de-radicalise ಮಾಡುತ್ತವೆ. ಎರಡನೆಯದಾಗಿ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ, ಬಹುಸಂಖ್ಯಾತರಲ್ಲಿ ಎಲ್ಲರೂ ಈ ರೀತಿಯ ಹಲ್ಲೆ, ದಾಳಿಗಳನ್ನು ಒಪ್ಪುವುದಿಲ್ಲ, ಸಮರ್ಥಿಸುವುದಿಲ್ಲ ಎಂದು ಧೈರ್ಯ ಮತ್ತು ಸಾಂತ್ವನವನ್ನು ನೀಡುವುದಕ್ಕೆ ಪ್ರಯತ್ನಿಸುತ್ತವೆ. ಆ ಮೂಲಕ ಅಲ್ಪಸಂಖ್ಯಾತರು ಪುನಃ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಮೌಲ್ಯಗಳ ಮೇಲೆ ಭರವಸೆ ಇರಸಲಿಕ್ಕೆ ಅನುವು ಮಾಡಿಕೊಡುತ್ತವೆ. ಆದರೆ, 1920ರಿಂದಲೂ ಕರ್ನಾಟಕದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಗಳ ರೀತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ರೀತಿಯ ವಾದಗಳು ಗುರುತಿಸದ ಕಾರಣ, ಅವು ಇಂದಿನ ಕಾಲಘಟ್ಟಕ್ಕೆ ಹೆಚ್ಚು ಉಪಯೋಗಕ್ಕೆ ಬಾರವು ಎಂದು ನಾವು ಪ್ರಬಲವಾಗಿ ನಂಬುತ್ತೇವೆ.

ಐತಿಹಾಸಿಕವಾಗಿಯೂ, ಇಂದಿಗೂ ಮುಸ್ಲಿಮರ ಮೇಲೆ ದಾಳಿಗಳನ್ನು ಮಾಡುವ ಸಂಚುಕೋರರು ಸಂಘ ಪರಿವಾರದ ಗೂಂಡಾಗಳೇ ಆಗಿದ್ದರೂ, ಇತ್ತೀಚಿನ ದಶಕಗಳಲ್ಲಿ ಈ ದಾಳಿಗಳಲ್ಲಿ ಪ್ರಭುತ್ವದ ಪಾತ್ರವೂ ಗಣನೀಯವಾಗಿ ಹೆಚ್ಚುತ್ತಿವೆ. ಈ ಬಗ್ಗೆ ಅನೇಕ ಸಾಮಾಜಿಕ ಹೋರಾಟಗಾರರು ನಮ್ಮನ್ನು ಎಚ್ಚರಿಸುತ್ತಲೂ ಇದ್ದಾರೆ. ಈ ವಿಚಾರದಲ್ಲಿ ಪ್ರಭುತ್ವಗಳು ನಡೆದುಕೊಳ್ಳುವ ರೀತಿಯು, ದಾಳಿಗಳು ಅಲ್ಲಿಗೇ ನಿಲ್ಲುವವೇ ಮತ್ತು ಆಮೂಲಕ ಕೋಮು ಸಾಮರಸ್ಯದ ಬಗ್ಗೆ ಅಲ್ಪಸಂಖ್ಯಾತ ಸಮುದಾಯವು ಮತ್ತೊಮ್ಮೆ ಭರವಸೆ ತಳೆಯಬಹುದೇ ಅಥವಾ ಈ ದಾಳಿಗಳು ಮತ್ತೆ ದಿನನಿತ್ಯ ಮುಂದುವರಿಯುವವೇ ಎಂಬುದನ್ನು ನಿರ್ಧರಿಸುತ್ತದೆ. ಹತ್ತಿರತ್ತಿರ ಶತಮಾನದ ಇತಿಹಾಸ ಹೊಂದಿರುವ ಈ ವಿಚಾರದಲ್ಲಿ ಈ ದಾಳಿಗಳಿಗೆ ತಡೆಯೊಡ್ಡುತ್ತಿದ್ದ ಪ್ರಭುತ್ವವು ಕ್ರಮೇಣವಾಗಿ ಮೌನವಹಿಸಲಿಕ್ಕೆ ಪ್ರಾರಂಭಿಸಿತು. ಆದರೆ ಇಂದಿನ ದಿನಮಾನದಲ್ಲಿ ಈ ರೀತಿಯ ದಾಳಿಗಳಿಗೆ ಬಹಿರಂಗವಾಗಿಯೇ ಪ್ರಭುತ್ವವು ತನ್ನ ಬೆಂಬಲವನ್ನು ನೀಡುತ್ತಿದೆ ಮತ್ತು ದಾಳಿಕೋರರಿಗೆ ರಕ್ಷಣೆಯನ್ನೂ ಒದಗಿಸುತ್ತಿದೆ.

ಇತ್ತೀಚಿಗೆ ಘಟಿಸಿದ ಸಂಗತಿಗಳನ್ನು ಗಮನಿಸಿ; ಶಿಕ್ಷಣವನ್ನು ಹಿಜಾಬ್ ಧರಿಸುವ ಹೆಣ್ಣುಮಕ್ಕಳಿಗೆ ನಿರಾಕರಿಸುವ ಮತ್ತು ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರದ ಪ್ರಕರಣಗಳಲ್ಲಿ ಕೂಡ, ಪ್ರಭುತ್ವವು ತನ್ನ ಕರ್ತವ್ಯವನ್ನು ನಿರ್ವಹಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಧಾರವಾಡದಲ್ಲಿ ಹನುಮಾನ್ ಮಂದಿರದ ಬಳಿ ಮುಸ್ಲಿಂ ಹಣ್ಣು ವ್ಯಾಪಾರಿಗಳ ಬಂಡಿಗಳನ್ನು ಹಾಳುಗೆಡವಿದ ಪ್ರಕರಣದಲ್ಲಿಯೂ ಕೂಡ ಇದು ಸ್ಪಷ್ಟವಾಗುತ್ತದೆ. ಶ್ರೀರಾಮ ಸೇನೆಯ ಕಾರ್ಯಕರ್ತರು ಕೇವಲ ಹಿಂದೂಗಳು ಹಿಂದೂಗಳೊಟ್ಟಿಗೆ ವ್ಯಾಪಾರ ನಡೆಸುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕೂತಿದ್ದರು. ಇಂಥ ದ್ವೇಷಪೂರಿತ ಚಟುವಟಿಕೆಗಳ ವಿರುದ್ಧ ಪ್ರಭುತ್ವವು ಇನ್ನೂ ಕಠಿಣ ಕ್ರಮಗಳನ್ನು ಅನುಸರಿಸುವ ಮೂಲಕ ಅವುಗಳಿಗೆ ಕಡಿವಾಣ ಹಾಕಿ ಎಲ್ಲರ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕಿತ್ತು. ಅಲ್ಲದೇ ಈ ಎಲ್ಲಾ ದಾಳಿಗಳ ವಿಚಾರವಾಗಿ, ಮುಖ್ಯಮಂತ್ರಿ, ಗೃಹ ಸಚಿವ, ಕಾನೂನು ಸಚಿವರನ್ನೂ ಸೇರಿದಂತೆ ಎಲ್ಲರ ಹೇಳಿಕೆಗಳು ಅಸಡ್ಡೆಯಿಂದ ಕೂಡಿದ್ದವು. ಅವರೆಲ್ಲರಿಗೂ ಇದಕ್ಕೆ ಕಡಿವಾಣ ಹಾಕಬೇಕೆಂಬ ಯಾವ ಇರಾದೆಯೂ ಇದ್ದಿರಲಿಕ್ಕಿಲ್ಲ. ಆದರೆ, ಹಿಂದುತ್ವ ಸಂಘಟನೆಗಳು ಕೋಮು ಸೌಹಾರ್ದ ಹಾಳುಗೆಡವುವ ನಿಟ್ಟಿನಲ್ಲಿ ಯಾವುದೇ ಕೆಲಸಕ್ಕೆ ಕೈಹಾಕಿದರೂ, ಖುದ್ದಾಗಿ ಮುಖ್ಯ ಮಂತ್ರಿಗಳೇ ವಿಷಯವನ್ನು ಆಲಿಸಿ, ಈ ವಿಚಾರವು ಗಂಭೀರ ಸ್ವರೂಪದ್ದಾಗಿದ್ದು, ವಿಷಯವನ್ನು ಪರಿಶೀಲಿಸಿ ಆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುತ್ವ ಸಂಘಟನೆಗಳಿಗೆ ಭರವಸೆ ನೀಡುತ್ತಾರೆ. ಈ ಸಂದರ್ಭಗಳಲ್ಲಿ ನಮಗೆ ಬಿಜೆಪಿಯ ಎರಡು ತಲೆ- ಎರಡು ನಾಲಿಗೆ ಎಂಬ ಹುಟ್ಟುಗುಣ ಕಾಣ ಸಿಗುತ್ತದೆ. ಅಲ್ಲದೇ, ಮುಸ್ಲಿಮರ ದಿನನಿತ್ಯ ಜೀವನದ ಭಾಗವಾಗಿರುವ ಹಿಜಾಬ್ ಮತ್ತು ಹಲಾಲ್ ವಿಚಾರದಲ್ಲಿ ಕಟ್ಟಪ್ಪಣೆಗಳನ್ನು ಹೊರಡಿಸುತ್ತದೆ. ಇದು ಅವರನ್ನು ಇನ್ನಷ್ಟೂ ನಿರ್ಬಂಧಿಸಿ,
ಅವರಿಗೆ ’ದೇಶ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಲೂ ಮುಂದಾಗುತ್ತದೆ; ಪ್ರಭುತ್ವದ ನಾಗರಿಕರು ಎಂದೆನಿಸಿಕೊಳ್ಳಬೇಕಾದರೆ ತಮ್ಮ ಘನತೆಯನ್ನೇ ಪಕ್ಕಕ್ಕಿರಿಸಿ ಅವರ ಜೀವನ ಕ್ರಮಗಳನ್ನೇ ಬದಲಾಯಿಸಿಕೊಳ್ಳುವ ಪರಿಸ್ಥಿತಿಗೆ ದೂಡುತ್ತದೆ.

ಈ ದಾಳಿಗಳ ವಿಚಾರವಾಗಿ ಪ್ರಭುತ್ವದ ವರ್ತನೆಗಿಂತಲೂ ಹೆಚ್ಚಿನ ಮಹತ್ವವುಳ್ಳ ಒಂದು ವಿಚಾರವನ್ನು ನಾವು ಇಲ್ಲಿ ಸಾಮಾನ್ಯವಾಗಿ ಕಡೆಗಣಿಸುತ್ತೇವೆ. ಅದೆಂದರೆ, 2002ರಲ್ಲಿ, ಗುಜರಾತಿನಲ್ಲಿ ನಡೆದ ನರಮೇಧದ ಹಿನ್ನೆಲೆಯಲ್ಲಿ ಕರ್ನಾಟಕದ ಬಾಬಾ ಬುಡನ್‌ಗಿರಿಯನ್ನು ದಕ್ಷಿಣ ಭಾರತದ ಅಯೋಧ್ಯೆಯನ್ನಾಗಿಸುತ್ತೇವೆ ಎನ್ನುವ ಸಂಘ ಪರಿವಾರದ ಘೋಷಣೆಯಿಂದಾಗಿ ಎಚ್ಚರಗೊಂಡು, 200ಕ್ಕೂ ಹೆಚ್ಚು ಸಂಘಟನೆಗಳು ಒಂದುಗೂಡಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಹೆಸರಿನಲ್ಲಿ ಕೂಡಿಕೊಂಡು ಸೌಹಾರ್ದತೆ ಕಾಪಿಡುವ ಸಲುವಾಗಿ ಕಾರ್ಯನಿರತವಾಗಿತ್ತು.

ಈ ವೇದಿಕೆಯು ಕರ್ನಾಟಕದಲ್ಲಿ ಬ್ರಿಟಿಷರ ಆಡಳಿತದ ಕಾಲದಿಂದ 2004ರವರೆಗೆ ನಡೆದ ಕೋಮುಗಲಭೆಗಳನ್ನು ದಾಖಲಿಸಿದೆ. ನಾವು ಪ್ರತಿ ಬಾರಿ ’ಕೋಮು ಸಾಮರಸ್ಯ’ದ ವಾದವನ್ನು ಮುಂದಿರಿಸಿದಾಗಲೂ ಈ ಒಂದು ಕರಾಳ ಇತಿಹಾಸವನ್ನು ನಮ್ಮ ನೆನಪಿನಿಂದ ಅಳಿಸಿಹಾಕಿ, ಕರ್ನಾಟಕದಲ್ಲಿ ವಿವಿಧ ಕೋಮುಗಳ ನಡುವೆ ಎಲ್ಲವೂ ಸರಿಯಿದೆ ಎಂಬ ಹುಸಿ ನಂಬಿಕೆಯಲ್ಲಿ ತೇಲಾಡುತ್ತ, ತಪ್ಪನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ.

ನಾವು ಈ ನಿಟ್ಟಿನಲ್ಲಿ ಯೋಚಿಸಿದಾಗ, ಪ್ರಶ್ನೆಯೊಂದು ನಮ್ಮನ್ನು ತಾನಾಗೇ ಕಾಡಲು ಪ್ರಾರಂಭಿಸುತ್ತದೆ.
ಮುಸ್ಲಿಮರ ಮೇಲಿನ ದಾಳಿಗಳು ಮತ್ತು ಹಲ್ಲೆಗಳಿಗೆ ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕದಲ್ಲಿ ಇಂದು ಘಟಿಸುತ್ತಿರುವ ಘಟನಾವಳಿಗಳು ಹಿಂದೆಂದೂ ಕಂಡರಿಯದ ರೀತಿಯವೇ? ಹೌದಾದರೆ ಯಾಕೆ? ಇಲ್ಲವಾದರೆ ಯಾಕೆ?

ಹಿಜಾಬ್ ಮತ್ತು ಹಲಾಲ್ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಗಳಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಯಾಮವಿದ್ದರೂ ಈ ಪ್ರಕರಣಗಳು ಅದನ್ನು ಮೀರಿ ಮುಂದೆಸಾಗುತ್ತವೆ.

ಯಾವುದೇ ಸಮುದಾಯವು ಬಲಿಷ್ಠವಾಗುವುದು ಅದಕ್ಕೆ ಅಗತ್ಯ ಇರುವಷ್ಟು ರಾಜಕೀಯ ಪ್ರಾತಿನಿಧಿತ್ವದ ಜೊತೆಗೆ institution (ಸಂಸ್ಥೆ) ಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ. ಮಾರುಕಟ್ಟೆಯು ಸಮುದಾಯಕ್ಕೆ ಆರ್ಥಿಕ ಬೆಂಬಲ ಒದಗಿಸಿದರೆ, Institutionಗಳು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಸಹಕಾರಿಯಾಗಿರುತ್ತದೆ.

ಸ್ವತಂತ್ರ ಭಾರತದಲ್ಲಿ ಮುಸ್ಲಿಂ ಸಮುದಾಯವು ತನಗೆ ಅಗತ್ಯವಿರುವ ಸಂಖ್ಯೆಯಲ್ಲಿ ಮತ್ತು ರೀತಿಯಲ್ಲಿ ರಾಜಕೀಯ ಪ್ರತಿನಿಧಿತ್ವವನ್ನು ಹೊಂದಲು ನಾವಿನ್ನೂ ಅವಕಾಶ ಕಲ್ಪಿಸಲಿಲ್ಲ. ಇದ್ದ ಅಷ್ಟಿಷ್ಟು ರಾಜಕೀಯ ಪ್ರತಿನಿಧಿತ್ವವೂ, ಹಿಂದುತ್ವ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯತೊಡಗಿದ ನಂತರ ನಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಹಲಾಲ್ ಮತ್ತು ಹಿಜಾಬ್ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳು ಮತ್ತು ಹಲ್ಲೆಗಳು ಒಟ್ಟಿನಲ್ಲಿ ’ಜಾತ್ಯತೀತ’ ಎನಿಸುವ ಮಾರುಕಟ್ಟೆ ಮತ್ತು Institutionಗಳಿಂದ, ಅವುಗಳ ಜೊತೆ ದಿನನಿತ್ಯ ಕೂಡಿ ವ್ಯವಹರಿಸುವ ಮುಸ್ಲಿಮರನ್ನು ಹೊರದೂಡುವ ಹುನ್ನಾರವನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ. ’ಜಾತ್ಯತೀತ’ವೆನಿಸಿರುವ ಶಿಕ್ಷಣ ಮತ್ತು ವ್ಯಾಪಾರದ ಕ್ಷೇತ್ರಗಳಲ್ಲಿ ತಮ್ಮ ಉತ್ತರ ಭಾರತದ ಬಾಂಧವರಿಗಿಂತಲೂ ಹೆಚ್ಚಿನದಾಗಿ ದಕ್ಷಿಣ ಭಾರತದ ಮುಸ್ಲಿಂ ಸಮುದಾಯವು ವ್ಯವಹಿರಿಸುವ ಮತ್ತು ಈ ಮೂಲಕ ಬಲಿಷ್ಠಗೊಳ್ಳುತ್ತಿರುವ ಒಂದು ಸುಪ್ತ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂಬುದನ್ನೂ ನಾವು ಮರೆಯವಂತಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಮಾತ್ರ ನಮಗೆ ’ಧಾರ್ಮಿಕ’ ಎಂದು ಸ್ವೀಕರಿಸಲ್ಪಡುವ ಮದರಸಗಳಿಗೆ ಬದಲಾಗಿ ’ಜಾತ್ಯತೀತ’ ಎನಿಸುವ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು ಕೇಂದ್ರಬಿಂದುವಾಯಿತು ಎಂಬುದು ಸ್ಪಷ್ಟವಾಗುತ್ತದೆ.

ಈ ರೀತಿಯಾಗಿ ತಮ್ಮ ದಿನನಿತ್ಯದ ವ್ಯವಹಾರವನ್ನು ’ಜಾತ್ಯತೀತ’ ಎನಿಸುವ ಸಂಸ್ಥೆಗಳೊಂದಿಗೆ, ಮಾರುಕಟ್ಟೆಗಳೊಂದಿಗೆ ಮತ್ತು ಇನ್ನಿತರೆ ಸ್ಥಳಗಳೊಂದಿಗೆ ಇಟ್ಟುಕೊಂಡಿರುವ ಮುಸ್ಲಿಮರ ಮೇಲಿನ ದಾಳಿಗಳು ಮುಸ್ಲಿಂ ಸಮುದಾಯವನ್ನು ಮತ್ತೊಮ್ಮೆ ’ಧಾರ್ಮಿಕ’ ಎಂಬುದರೆಡೆಗೇ ತಳ್ಳಿ ghettoise ಮಾಡುತ್ತವೆ ಮತ್ತು ಮುಸ್ಲಿಮರ ಗುರುತುಗಳೇ, ಮುಸ್ಲಿಮರ ಇರುವಿಕೆಯೇ ಹಿಂದುತ್ವಕ್ಕೆ ಅವರ ಮೇಲೆ ದಾಳಿ ನಡೆಸಲು ಸಾಕಿರುವ ಕಾಲಘಟ್ಟದಲ್ಲಿ ಅವರನ್ನು ಇನ್ನಷ್ಟೂ ಸಂಕಷ್ಟಕ್ಕೆ ದೂಡುತ್ತವೆ. ಈ ವರ್ಷದ ರಾಮನವಮಿ ಮೆರವಣಿಗೆಯ ವೇಳೆಯಲ್ಲಿ ದೇಶದ ಒಂಬತ್ತು ರಾಜ್ಯಗಳಲ್ಲಿ ನಡೆದ, ಮುಸ್ಲಿಮರ ಮತ್ತು ಮಸೀದಿಗಳ ಮೇಲಿನ ದಾಳಿಗಳು ಇದಕ್ಕೆ ಒಂದು ಸೂಕ್ತ ಉದಾಹರಣೆ. ಮುಸ್ಲಿಂ ಸಮುದಾಯದ ಮಹಿಳೆಯರು ಬಹಳ ಗಟ್ಟಿಯಾಗಿ ನಿಂತು ಕಟ್ಟಿದ ಸಿಎಎ ವಿರೋಧಿ ಹೋರಾಟ ಜಾತ್ಯತೀತವಾಗಿತ್ತು ಮಾತ್ರವಲ್ಲ institutions ಗಳಿಂದಲೂ ಬಹಳ ಬಲ ಪಡೆದಿತ್ತು.

ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮುಸ್ಲಿಮರನ್ನು ಕೆಳ ದರ್ಜೆಯ ನಾಗರಿಕರನ್ನಾಗಿಸುವ ಅಜೆಂಡಾ ಹೊತ್ತಿರುವ ಹಿಂದುತ್ವ ಶಕ್ತಿಗಳಿಗೆ ಮುಸ್ಲಿಮ್ ಸಮುದಾಯವು ಒಡ್ಡಬಹುದಾದ ಪ್ರತಿರೋಧವನ್ನು ದಮನಿಸುವುದ್ದಕೆ, ಆ ಸಮುದಾಯಕಿರುವ ಈ ಎರಡು ಪ್ರಮುಖ ಬೆನ್ನೆಲುಬುಗಳನ್ನು ಮುರಿಯುವುದು ಅಗತ್ಯ ಎಂಬುದು ಸಂಘ ಪರಿವಾರದವರಿಗೆ ತಿಳಿದುಬಂದಿರಲೂಬಹುದು.

ಮುಸ್ಲಿಮರನ್ನು institutions ಒಳಗೆ ಬಿಟ್ಟುಕೊಳ್ಳಬೇಡಿ ಮತ್ತು ಮಾರುಕಟ್ಟೆ ವ್ಯಾಪಾರ ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂಬ ಬಹಿರಂಗ ಹೇಳಿಕೆಗಳ ಹಿನ್ನೆಲೆಯಲ್ಲಿ, ಮೊದಲಿನಿಂದಲೂ ಹಿಂದೂ ರಾಷ್ಟ್ರದ ನಿರ್ಮಾಣದ ಗುರಿ ಹೊಂದಿರುವ ಆರ್‌ಎಸ್‌ಎಸ್-ಬಿಜೆಪಿಯ ನಡೆಯಲ್ಲಿ ಎರಡು ಪ್ರಮುಖ ಅಂಶಗಳು ಮುನ್ನಲೆಗೆ ಬರುತ್ತವೆ. ಒಂದು, ಅವರಿಗೆ ಈಗಲೂ ಹಿಂದುತ್ವದ ಹೆಸರಿನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಯುದ್ಧ ನಡೆಸಲು ಒಂದು ರೀತಿಯ ಹಿಂಜರಿಕೆಯಿದೆ. ಆದರೆ ಅವರು ಅಲ್ಪಸಂಖ್ಯಾತರ ವಿರುದ್ಧ ಸಾರ್ವಜನಿಕವಾಗಿ ದ್ವೇಷದ ವಾತಾವರಣವನ್ನು ಸೃಷ್ಟಿಸಿ ಚುನಾವಣೆ ರಾಜಕೀಯ ಮತ್ತು ತಮ್ಮ ಪ್ರೋಪಾಗಾಂಡವನ್ನು ಮುಂದುಮಾಡಲು ಹಿಂಜರಿಯುವುದಿಲ್ಲ ಮತ್ತು ಹಿಂದುತ್ವದ ಪುಡಿ ಗುಂಪುಗಳೇ ಇಂದು ಪ್ರಭುತ್ವದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನಷ್ಟೂ ಬಲಾಢ್ಯವಾಗಲು ಬಿಜೆಪಿ ಪ್ರಯತ್ನಿಸುತ್ತಿದೆ.

ಆರ್‌ಎಸ್‌ಎಸ್-ಬಿಜೆಪಿ ಜೋಡಿಯು ಇಂದು ನೆಪಮಾತ್ರಕ್ಕಾದರೂ ಇರುವ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ನಾಶಗೊಳಿಸಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಅಧಿಕೃತವಾಗಿ ಘೋಷಿಸುವ ಸಮಯ ಸನ್ನಿಹಿತವಾಗಿದೆ.

ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದದ ವಾದವು, ಸಮಾಜವನ್ನು ಒಡೆಯುವ ಪ್ರಭುತ್ವದ ಹುನ್ನಾರವನ್ನೂ, ಕಲ್ಪಿತ ಹಿಂದೂ ಅಸ್ಮಿತೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ರೀತಿಯ ಹಿಂದುತ್ವ ಶಕ್ತಿಗಳನ್ನು ಮತ್ತು ವಾದಗಳನ್ನು ಮುಸ್ಲಿಮರ ಮೇಲಿನ ಹಲ್ಲೆಗಳನ್ನು ವಿರೋಧಿಸುವುದರಿಂದ ಮಾತ್ರವಲ್ಲದೇ, ಬಲಿಷ್ಟಗೊಳ್ಳುತ್ತಿರುವ ಜಾತಿವಾದವನ್ನೂ, ಹಿಂದುಳಿದ ಜಾತಿಗಳ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನೂ ಮುಂದಿಟ್ಟು ಎದುರಿಸಬೇಕಾಗುತ್ತದೆ. ಸಂಘ ಪರಿವಾರದ ಅತಿರೇಕದ, ಹಿಂಸೆಯ ಮತ್ತು ತಾರತಮ್ಯದ ನಡೆಗಳಿಗೆ, ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲ ನೀಡುತ್ತಿರುವುದಲ್ಲದೆ, ಮುಸ್ಲಿಮರನ್ನು ಸಂಸ್ಥೆಗಳಿಂದ ಮತ್ತು ಮಾರುಕಟ್ಟೆಯಿಂದ ದೂರ ಇರಿಸುವ ಮೂಲಕ ಅವರನ್ನು ಅನಧಿಕೃತವಾಗಿ ಸಾಂಸ್ಥೀಕರಿಸಿ, ಅವರ ವಿರುದ್ಧ ಆಗುತ್ತಿರುವ ಅನ್ಯಾಯಗಳ ವಿರುದ್ಧ ತಮ್ಮನ್ನು ತಾವು ಶಿಕ್ಷಿತರನ್ನಾಗಿಸಿಕೊಂಡು, ಸಂಘಟಸಿಕೊಂಡು, ಹೋರಾಡುವ ಶಕ್ತಿಯನ್ನೂ ಕಸಿದುಕೊಳ್ಳಲಾಗುತ್ತಿದೆ.

ಇಷ್ಟು ದಿನ ನಡೆಯುತ್ತಿದ್ದ ದಾಳಿಗಳು, ಹಲ್ಲೆಗಳು ಅಂಬೇಡ್ಕರರು ಪ್ರತಿಪಾದಿಸಿದ ಸ್ವಾತಂತ್ರ್ಯದ, ಭ್ರಾತೃತ್ವದ ಮತ್ತು ಸಮಾನತೆಯ ಮೇಲಿನ ಹಲ್ಲೆಗಳಾಗಿದ್ದವು. ಅದನ್ನು ಎದುರಿಸಲಿಕ್ಕೆ ಡಾ. ಅಂಬೇಡ್ಕರರು ನಮಗೆ ನೀಡಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ದಾರಿಯನ್ನೇ ನಮ್ಮಿಂದ ಕಸಿಯಲು ಪ್ರಭುತ್ವ ಹುನ್ನಾರ ಹೂಡಿದೆ. ಅದಕ್ಕೇ ಇಂದಿನ ದಾಳಿಗಳು ಇನ್ನಷ್ಟೂ ಭೀಕರ ಎನಿಸುತ್ತಿರುವುದು.

ಅಂಬೇಡ್ಕರರು ಹಾಕಿಕೊಟ್ಟ ಹೋರಾಟದ ದಾರಿಯನ್ನು ಉಳಿಸಿಕೊಳ್ಳುವ ತುರ್ತು ನಮ್ಮೆಲ್ಲರಿಗಿದೆ.

(ಮಾರುಕಟ್ಟೆಯೂ ಒಂದು ಸಂಸ್ಥೆಯೆಂಬ ವ್ಯಾಖ್ಯಾನವನ್ನು ಇಲ್ಲಿ ಪರಿಗಣಿಸಲಾಗಿಲ್ಲ.)

ರಶಾದ್ ಖಾನ್

ರಶಾದ್ ಖಾನ್
ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ವುಮೆನ್ ಸ್ಟಡೀಸ್ ವ್ಯಾಸಂಗ ಮಾಡುತ್ತಿದ್ದಾರೆ.

ಶಶಾಂಕ್ ಎಸ್ ಆರ್

ಶಶಾಂಕ್ ಎಸ್ ಆರ್
ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾರ್ಥಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...