ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ಬಾಡೂಟದ ವ್ಯವಸ್ಥೆ ಮಾಡಲು ಆಗ್ರಹ ಹೆಚ್ಚಾಗಿದೆ.
‘ಬಾಡೂಟದ ವ್ಯವಸ್ಥೆ ಮಾಡದಿದ್ದರೆ, ಮನೆಗೊಂಡು ಕೋಳಿ ಸಂಗ್ರಹಿಸಿ ನಾವೇ ಮಾಂಸದೂಟ ಹಾಕಿಸುತ್ತೇವೆ’ ಎಂದು ಮಂಡ್ಯದ ಬಾಡೂಟ ಬಳಗದವರು ಎಚ್ಚರಿಕೆ ಕೊಟ್ಟಿದ್ದಾರೆ.
ಮಂಡ್ಯದ ಕಾವೇರಿ ಉದ್ಯಾನವನದಲ್ಲಿ ಭಾನುವಾರ (ಡಿ.8) ಸಭೆ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಬಾಡೂಟ ಕೊಡಿಸುವ ನಮ್ಮ ಒತ್ತಾಯಕ್ಕೆ ಜಿಲ್ಲಾಡಳಿತ ಮತ್ತು ಕಸಪಾ ಪದಾಧಿಕಾರಿಗಳು ಸ್ಪಂದಿಸದಿದ್ದರೆ ಸ್ವಯಂಪ್ರೇರಿತರಾಗಿ ಸಮ್ಮೇಳನದ ಮೊದಲನೇ ದಿನ ಮೊಟ್ಟೆ, 2ನೇ ದಿನ ಮುದ್ದೆ-ನಾಟಿ ಕೋಳಿ ಸಾರು, 3ನೇ ದಿನ ಚಿಕನ್ ಬಿರಿಯಾನಿ ಬಡಿಸುತ್ತೇವೆ ಎಂದಿದ್ದಾರೆ. ಇದಕ್ಕಾಗಿ ‘ಮನೆಗೊಂದು ಕೋಳಿ’ ಸಂಗ್ರಹಿಸುವ ಅಭಿಯಾನ ನಡೆಸಲು ತೀರ್ಮಾನಿಸಿದ್ದಾರೆ.
ಸಾಹಿತ್ಯ ಸಮ್ಮೇಳನದ ನಿಬಂಧನೆಗಳಲ್ಲಿ ಮಾಂಸಹಾರಕ್ಕೆ ನಿಷೇಧ ಹೇರುವ ಮೂಲಕ, ಮಾಂಸಾಹಾರವನ್ನು ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಈ ಮೂಲಕ ಬಹುಜನರ ಆಹಾರದ ಹಕ್ಕನ್ನು ಅವಮಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಬ್ರಾಹ್ಮಣ ಶಾಹಿ ಫ್ಯಾಶಿಸ್ಟ್ ಸಂಸ್ಕೃತಿ’
“ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಿರುವುದು ಬ್ರಾಹ್ಮಣ ಶಾಹಿ, ಫ್ಯಾಶಿಸ್ಟ್ ಸಂಸ್ಕೃತಿ. ಸರ್ಕಾರಿ ಕಾರ್ಯಕ್ರಮಗಳಲ್ಲಿ, ಸರ್ಕಾರಿ ಪೋಷಿತ ಕಾರ್ಯಕ್ರಮಗಳಲ್ಲಿ, ಸರ್ಕಾರಿ ಜಯಂತಿ ದಿನಗಳಲ್ಲಿ, ಕೆಲವೊಮ್ಮೆ ಅಂಬೇಡ್ಕರ್ ದಿನಗಳಲ್ಲೂ, ಸರ್ಕಾರಿ ಭವನಗಳಲ್ಲೂ, ಕೆಲವೊಮ್ಮೆ ಬಲಿಷ್ಠ ಅಬ್ರಾಹ್ಮಣ ಜಾತಿಗಳ ಸಂಭ್ರಮಗಳಲ್ಲೂ ಬಹುಸಂಖ್ಯಾತರ ಮಾಂಸಾಹಾರ ಸಂಸ್ಕೃತಿಯನ್ನು ಅಪಮಾನಿಸಿ ಅಧಿಕೃತವಾಗಿ ಅಥವಾ ಅನಾಧಿಕೃತವಾಗಿ ನಿಷೇಧಿಸಲಾಗುತ್ತಿದೆ. ಆ ಜಾತಿ ಶ್ರೇಷ್ಠತೆಯ ಆಹಾರ ಸಂಸ್ಕೃತಿಯ ಮೂಲಕ ಬಹಿರಂಗವಾಗಿ ಬ್ರಾಹ್ಮಣಶಾಹಿ ಮತ್ತು ನವ ಬ್ರಾಹ್ಮಣಶಾಹಿಗೆ ಮಾನ್ಯತೆ ಕೊಡಲಾಗುತ್ತಿದೆ” ಎಂದು ಚಿಂತಕ ಶಿವಸುಂದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಜೋಶಿಯವರು ಸಮ್ಮೇಳನದಲ್ಲಿ ಮಾಂಸಾಹಾರ ಮಾರಾಟವನ್ನು ಕೂಡ ಬಹಿರಂಗ ನಿಷೇಧಿಸಿರುವುದು ಮತ್ತು ಅದನ್ನು ಮಾದಕ ವ್ಯಸನಗಳ ಜೊತೆಗೆ ಹೋಲಿಸಿರುವುದು ದಲಿತ-ರೈತ -ಶೂದ್ರ ಶ್ರಮಣ ಸಂಸ್ಕೃತಿಯ ಮೇಲೆ ನೇರ ಹಾಗೂ ಬಹಿರಂಗ ಬ್ರಾಹ್ಮಣಶಾಹಿ ದಾಳಿಯಾಗಿದೆ. ಇದನ್ನು ಬಹಿರಂಗವಾಗಿಯೇ ವಿರೋಧಿಸಬೇಕು. ಮಂಡ್ಯದ ಬಾಡೂಟದ ಬಳಗ ಈ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರತಿರೋಧವನ್ನು ನಾಡೋಜರಿಂದ ಹಿಡಿದು ಸಾಮಾನ್ಯ ನಾಡಿಗರವರೆಗೆ ಎಲ್ಲರೂ ಬೆಂಬಲಿಸಬೇಕು. ಈ ವಿರೋಧವನ್ನು ಅಧಿಕೃತ ಮಾಂಸಾಹಾರ ನಿಷೇಧವಿರುವ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಿಗೂ ವಿಸ್ತರಿಸಬೇಕು ಎಂದು ಹೇಳಿದ್ದಾರೆ.
ಮದ್ಯ & ತಂಬಾಕಿನೊಂದಿಗೆ ‘ಮಾಂಸಾಹಾರ’ ಹೋಲಿಕೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮದ್ಯ ಮತ್ತು ತಂಬಾಕಿನ ಜೊತೆಗೆ ಮಾಂಸಹಾರವನ್ನು ಕೂಡಾ ಹೋಲಿಕೆ ಮಾಡಲಾಗಿದೆ. ಡಿಸೆಂಬರ್ 20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಮೈದನಾದಲ್ಲಿ ನಡೆಯಲಿದ್ದು, ಅಲ್ಲಿ ಮಳಿಗೆ ಹಾಕುವ ವ್ಯಾಪಾರಿಗಳಿಗೆ ಸಾಹಿತ್ಯ ಪರಿಷತ್ ಕೆಲವು ಸೂಚನೆಗಳನ್ನು ನೀಡಿದೆ. ಅವುಗಳಲ್ಲಿ 4ನೇ ಸೂಚನೆಯಾಗಿ ಮಾಂಸಹಾರವನ್ನು ನಿಷೇಧಿಸಲಾಗಿದೆ. ಅಲ್ಲದೆ, ಮಾಂಸಹಾರವನ್ನು ಕೆಟ್ಟ ಚಟಗಳಾದ ‘ಕುಡಿತ – ತಂಬಾಕು’ ಜೊತೆ ಸಮೀಕರಿಸಲಾಗಿದೆ.
ಇದನ್ನೂ ಓದಿ : ಮದ್ಯ & ತಂಬಾಕಿನೊಂದಿಗೆ ‘ಮಾಂಸಾಹಾರ’ವನ್ನು ಹೋಲಿಸಿದ ಕನ್ನಡ ಸಾಹಿತ್ಯ ಪರಿಷತ್ – ಆಕ್ರೋಶ


