ಸಿರಿಯಾದಲ್ಲಿ ಇತ್ತೀಚೆಗೆ ಆಂತರಿಕ ಮತ್ತು ಬಾಹ್ಯ ಕಲಹಗಳು ಉಲ್ಬಣಗೊಂಡ ನಂತರ ತೀವ್ರ ಆಹಾರ ಮತ್ತು ಇಂಧನ ಕೊರತೆ ಸಮಸ್ಯೆ ಉಂಟಾಗಿದೆ. ಇದರಿಂದ ದೇಶದಾದ್ಯಂತ 1.1 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಸಂಸ್ಥೆ (ಒಸಿಹೆಚ್‌ಎ) ತಿಳಿಸಿದೆ.
ವಿಶ್ವಸಂಸ್ಥೆ ಮತ್ತು ಅದರ ಪಾಲುದಾರರು ಭದ್ರತಾ ಪರಿಸ್ಥಿತಿಯನ್ನು ನೋಡಿಕೊಂಡು ಮಾನವೀಯ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ. ಕೆಲವು ಪಾಲುದಾರರು ಡಮಾಸ್ಕಸ್, ಟಾರ್ಟಸ್, ಲಟಾಕಿಯಾ ಮತ್ತು ರಕ್ಕಾ ನಗರಗಳ ವ್ಯಾಪ್ತಿಯಲ್ಲಿ ಮಾತ್ರ ಸೀಮಿತ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಒಸಿಹೆಚ್‌ಎ ಹೇಳಿದೆ.
ಸಿರಿಯಾದ ವಾಯುವ್ಯದಲ್ಲಿ ಪರಿಸ್ಥಿತಿಯನ್ನು ವಿಶ್ವ ಸಂಸ್ಥೆಯು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಿಟ್ಟು ಮತ್ತು ಇಂಧನದ ಕೊರತೆಯಿಂದ ಅಲೆಪ್ಪೊ ನಗರದಲ್ಲಿ ಬೇಕರಿಗಳನ್ನು ಮುಚ್ಚಲಾಗಿದೆ ಎಂದು ಒಸಿಹೆಚ್‌ಎ ಕಚೇರಿ ತಿಳಿಸಿದೆ.
ಸೀಮಿತ ತರಕಾರಿ ಪೂರೈಕೆ ಇದೆ. ಅಲೆಪ್ಪೋದ ಸುತ್ತ ಮುತ್ತಲಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತದ ವರದಿಯಾಗಿದೆ. ಇಂಧನ ಬೆಲೆಯೂ ಹೆಚ್ಚಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಲೆಪ್ಪೊ ಗವರ್ನರೇಟ್‌ನ ಟಿಶ್ರೀನ್ ಅಣೆಕಟ್ಟಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಮಂಗಳವಾರದಿಂದ ವಿದ್ಯುತ್ ಕಡಿತ ಉಂಟಾಗಿದೆ. ಇದರಿಂದ ಪ್ರಮುಖ ನಗರಗಳಾದ ಮೆನ್‌ಬಿಜ್ ಮತ್ತು ಕೊಬಾನಿ ಸೇರಿದಂತೆ ವಿವಿಧ ಪ್ರದೇಶಗಳ 400,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ನೀರು ಮತ್ತು ಇತರ ಪ್ರಮುಖ ಸೇವೆಗಳಿಗೆ ಸಮಸ್ಯೆಯಾಗಿದೆ.
ಸವಾಲುಗಳ ಹೊರತಾಗಿಯೂ, ಭದ್ರತೆಯನ್ನು ನೋಡಿಕೊಂಡು ವಿಶ್ವಸಂಸ್ಥೆ ಮತ್ತು ಅದರ ಪಾಲುದಾರರು ವಾಯುವ್ಯ ಸಿರಿಯಾದಲ್ಲಿ 700,000 ಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಿದ್ದಾರೆ.
ಒಸಿಹೆಚ್‌ಎ ಪ್ರಕಾರ, ಈಶಾನ್ಯ ಸಿರಿಯಾದಲ್ಲಿ ಮಾನವೀಯ ಸೇವೆಯು ಸವಾಲಾಗಿ ಪರಿಣಮಿಸಿದೆ. ಅಲ್ಲಿನ ರಕ್ಕಾ, ತಬ್ಕಾ, ಹಸ್ಸಾಕೆ ಮತ್ತು ಡೆರಿಕ್ ನಗರಗಳ ಚೆಕ್‌ಪೋಸ್ಟ್‌ಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲಿ ದರೋಡೆಯ ಕುರಿತು ವರದಿಯಾಗಿದೆ. 40,000ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರು ಸುಮಾರು 200 ಸಮುದಾಯ ಕೇಂದ್ರಗಳಲ್ಲಿ ತಂಗಿದ್ದಾರೆ.
ಮಾನವೀಯ ಸಂಸ್ಥೆಗಳು ಮಕ್ಕಳು ಮತ್ತು ವಯಸ್ಕರಿಗೆ ಆಹಾರ, ನೈರ್ಮಲ್ಯ ಕಿಟ್‌ಗಳು, ನಗದು ಮತ್ತು ಮಾನಸಿಕ ಸಾಮಾಜಿಕ ಬೆಂಬಲವನ್ನು ನೀಡುತ್ತಿವೆ.
ಸಿರಿಯಾದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಾದ್ಯಂತ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಅವರು ಕೋರಿದ್ದಾರೆ.
ಸಿರಿಯಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳ ಬಗ್ಗೆ ಆಂಟೋನಿಯೊ ಗುಟೆರೆಸ್ ಹೆಚ್ಚಿನ ಕಳವಳ ವ್ಯಕ್ತಪಡಿಸಿದ್ದು, ಹಿಂಸಾಚಾರ ಕೊನೆಗೊಳಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ : ವಿದೇಶಗಳಲ್ಲಿ ಭಾರತೀಯರ ಮೇಲಿನ ದಾಳಿ ಹೆಚ್ಚಳ – ರಾಜ್ಯಸಭೆಗೆ ಕೇಂದ್ರ ಸರ್ಕಾರ ಮಾಹಿತಿ


