ದೇಶದಾದ್ಯಂತ ಕ್ರೈಸ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿ 400ಕ್ಕೂ ಹೆಚ್ಚು ಹಿರಿಯ ಕ್ರೈಸ್ತ ನಾಯಕರು ಮತ್ತು 30 ಚರ್ಚ್ ಗುಂಪುಗಳು ಡಿಸೆಂಬರ್ 31, 2024ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕ್ರಿಸ್‌ಮಸ್ ವೇಳೆ ದೇಶದಾದ್ಯಂತ 14ಕ್ಕೂ ಹೆಚ್ಚು ಕ್ರಿಶ್ಚಿಯನ್ ಕೂಟಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ, ಬೆದರಿಕೆಯ ಘಟನೆಗಳು ನಡೆದ ಬಗ್ಗೆ ವರದಿಯಾದ ಬಳಿಕ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆಯಲಾಗಿದೆ.
ಪ್ರಮುಖ ಕ್ರೈಸ್ತ ನಾಯಕರಾದ ಥಾಮಸ್ ಅಬ್ರಹಾಂ, ಡೇವಿಡ್ ಒನೆಸಿಮು, ಜೋಬ್ ಲೋಹರಾ, ರಿಚರ್ಡ್ ಹೋವೆಲ್, ಮೇರಿ ಸ್ಕೇರಿಯಾ, ಸೆಡ್ರಿಕ್ ಪ್ರಕಾಶ್ ಎಸ್.ಜೆ., ಜಾನ್ ದಯಾಲ್, ಪ್ರಕಾಶ್ ಲೂಯಿಸ್ ಎಸ್.ಜೆ., ಝೆಲ್ಹೌ ಕೀಹೋ, ಇ.ಹೆಚ್. ಖಾರ್ಕೊಂಗೊರ್, ಅಲೆನ್ ಬ್ರೂಕ್ಸ್, ಕೆ. ಲೊಸಿ ಮಾವೊ, ಅಖಿಲೇಶ್ ಎಡ್ಗರ್, ಮೈಕೆಲ್ ವಿಲಮ್ಸ್, ಎ.ಸಿ. ಮೈಕೆಲ್ ಮತ್ತು ವಿಜಯೇಶ್ ಲಾಲ್ ಪತ್ರಕ್ಕೆ ಸಹಿ ಹಾಕಿದ್ದು, ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ದ್ವೇಷದ ಆತಂಕಕಾರಿ ಪ್ರವೃತ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇವಾಂಜೆಲಿಕ್ ಫೆಲೋಶಿಪ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ (ಯುಸಿಎಫ್) ವರದಿ ಮಾಡಿದ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದ ಅಂಕಿ ಅಂಶಗಳನ್ನು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಮತಾಂತರ-ವಿರೋಧಿ ಕಾನೂನುಗಳ ದುರುಪಯೋಗ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೆಚ್ಚುತ್ತಿರುವ ಬೆದರಿಕೆಗಳು, ಹೆಚ್ಚುತ್ತಿರುವ ದ್ವೇಷದ ಮಾತುಗಳು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ನಿರಾಕರಿಸುವ ಬಹಿಷ್ಕಾರ ನೀತಿಗಳು ಸೇರಿದಂತೆ ಹಲವು ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೇ 2023 ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ. 360 ಚರ್ಚ್‌ಗಳನ್ನು ನಾಶಪಡಿಸಲಾಗಿದೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಮಣಿಪುರದಲ್ಲಿ ಶಾಂತಿ, ಸಾಮರಸ್ಯವನ್ನು ಸ್ಥಾಪಿಸುವಲ್ಲಿ ಪ್ರಧಾನಿ ನೇತೃತ್ವ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುವ ಹಿಂಸಾಚಾರ ಘಟನೆಗಳ ಬಗ್ಗೆ ತ್ವರಿತ ಮತ್ತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವುದು, ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವುದು, ಎಲ್ಲಾ ಸಮುದಾಯಗಳ ಪ್ರತಿನಿಧಿಗಳ ಜೊತೆ ನಿರಂತರ ಮಾತುಕತೆ ನಡೆಸುವುದು, ಒಬ್ಬರ ನಂಬಿಕೆಯನ್ನು ಮುಕ್ತವಾಗಿ ಪ್ರತಿಪಾದಿಸುವ ಮತ್ತು ಅಭ್ಯಾಸ ಮಾಡುವ ಮೂಲಭೂತ ಹಕ್ಕನ್ನು ರಕ್ಷಿಸುವುದು ಸೇರಿದಂತೆ ಪರಿಸ್ಥಿತಿಯನ್ನು ಪರಿಹರಿಸಲು ಗಟ್ಟಿಯಾದ ನಿಲುವುಗಳನ್ನು ತೆಗೆದುಕೊಳ್ಳುವಂತೆ ಕ್ರೈಸ್ತ ಮುಖಂಡರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಾನೂನು ಬಾಹಿರವಾಗಿ ಪತ್ರಕರ್ತನ ಮನೆ ಕೆಡವಿದ ಪ್ರಕರಣ : ಮಾಜಿ ಜಿಲ್ಲಾಧಿಕಾರಿ ಸೇರಿ 26 ಮಂದಿಯ ವಿರುದ್ಧ ಎಫ್‌ಐಆರ್


