ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಗುಪ್ತಚರ ವೈಫಲ್ಯದ ಪರಿಣಾಮವಾಗಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬುಧವಾರ ಆರೋಪಿಸಿದ್ದಾರೆ. ಉರಿ ಮತ್ತು ಪುಲ್ವಾಮಾದಲ್ಲಿ ನಡೆದ ಇದೇ ರೀತಿಯ ಘಟನೆಗಳಿಗಿಂತ ಈ ದಾಳಿ ಹೆಚ್ಚು ಅಪಾಯಕಾರಿ, ಖಂಡನೀಯ ಮತ್ತು ನೋವಿನಿಂದ ಕೂಡಿದೆ ಎಂದು ಹೇಳಿದ ಅವರು, ನರೇಂದ್ರ ಮೋದಿ ಸರ್ಕಾರ ಈ ಘಟನೆಗೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರವು ಈ ಎಲ್ಲಾ ಭಯೋತ್ಪಾದಕರಿಗೆ ಪಾಠ ಕಲಿಸಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ಆದಷ್ಟು ಬೇಗ ನ್ಯಾಯವನ್ನು ಖಚಿತಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
“ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಭಯೋತ್ಪಾದಕರು ಅಮಾಯಕ ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಂದರು. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇನ್ನೊಂದು ಪ್ರಮುಖ ವಿಷಯವೆಂದರೆ ಇದು ಗುಪ್ತಚರ ವೈಫಲ್ಯವೂ ಆಗಿದೆ” ಎಂದು ಅವರು ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರದ ತಡೆಗಟ್ಟುವ ನೀತಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಬೇಕು ಎಂದು ಅವರು ಹೇಳಿದ್ದಾರೆ.
ನೆರೆಯ ದೇಶದಿಂದ ಬಂದ ಭಯೋತ್ಪಾದಕರ ಉದ್ದೇಶ ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುವುದು ಮತ್ತು ಅಮಾಯಕರನ್ನು ಕೊಲ್ಲುವುದು ಎಂದು ಅವರು ಹೇಳಿದ್ದಾರೆ. “ಇದು ನೋವಿನ ಘಟನೆ ಮತ್ತು ಇದು ಹತ್ಯಾಕಾಂಡ” ಎಂದು ಓವೈಸಿ ಹೇಳಿದ್ದಾರೆ.
ಘಟನೆಯಲ್ಲಿ ಬಲಿಯಾದವರ ಕುಟುಂಬಗಳೊಂದಿಗೆ AIMIM ನಿಲ್ಲುತ್ತದೆ ಮತ್ತು ಗಾಯಗೊಂಡವರ ಚೇತರಿಕೆಗಾಗಿ ಪ್ರಾರ್ಥಿಸುತ್ತದೆ ಎಂದು ಅವರು ಹೇಳಿದ್ದಾರೆ. ಕಾಶ್ಮೀರದ ಪ್ರವಾಸೋದ್ಯಮಕ್ಕೆ ನಷ್ಟವನ್ನುಂಟುಮಾಡಲು (ಕೆಲವು ಶಕ್ತಿಗಳಿಂದ) ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಪ್ರಮುಖ ಪ್ರವಾಸಿ ತಾಣದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 28 ಜನರು ಬಲಿಯಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಮೃತರಾದ 28 ಜನರಲ್ಲಿ ಯುಎಇ ಮತ್ತು ನೇಪಾಳದ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜಮ್ಮು ಕಾಶ್ಮೀರ | ಇಬ್ಬರು ಶಂಕಿತ ಭಯೋತ್ಪಾದಕರನ್ನು ಹತ್ಯೆ ಮಾಡಿದ ಭದ್ರತಾ ಪಡೆ
ಜಮ್ಮು ಕಾಶ್ಮೀರ | ಇಬ್ಬರು ಶಂಕಿತ ಭಯೋತ್ಪಾದಕರನ್ನು ಹತ್ಯೆ ಮಾಡಿದ ಭದ್ರತಾ ಪಡೆ

