ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬೈಸರನ್ ಕಣಿವೆಯ ಸುಂದರ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ (ಏ.22) ನಡೆಸಿದ ಗುಂಡಿನ ದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ಪಹಲ್ಗಾಮ್ ಎಂಬ ರೆಸಾರ್ಟ್ ಪಟ್ಟಣದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಬೈಸರನ್‌ನಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ದಟ್ಟವಾದ ಪೈನ್ ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ಈ ವಿಶಾಲವಾದ ಹುಲ್ಲುಗಾವಲು ಪ್ರದೇಶ ದೇಶ ವಿದೇಶಗಳ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
2019ರ ಪುಲ್ವಾಮಾ ದಾಳಿಯ ನಂತರ ಈ ಪ್ರದೇಶದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ.
ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಜೊತೆ ನಂಟು ಹೊಂದಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ವರದಿಗಳು ಹೇಳಿವೆ.
ಇಬ್ಬರು ಕನ್ನಡಿಗರು ಸಾವು
ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮತ್ತು ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿ ಮೂಲದ ಭರತ್ ಭೂಷಣ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ದಾಳಿಯಲ್ಲಿ ಮಂಜುನಾಥ್ ಅವರ ಪತ್ನಿ ಪಲ್ಲವಿ ಮತ್ತು ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಂಡ ಕಳುಹಿಸಿದ ಕರ್ನಾಟಕ ಸರ್ಕಾರ
ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಿಎಂ, ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಐಪಿಎಸ್ ಅಧಿಕಾರಿ ಚೇತನ್ ಆರ್ ಮತ್ತು ಇತರ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ತಲುಪಿದ್ದಾರೆ.
ದಾಳಿಯಲ್ಲಿ ಸಾವಿಗೀಡಾದ ಕರ್ನಾಟಕ ಇಬ್ಬರ ಸೇರಿದಂತೆ 25 ಜನರ ಶವಗಳನ್ನು ಅವರ ಊರುಗಳಿಗೆ ತಲುಪಿಸಲು ವಿಮಾನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ವ್ಯವಸ್ಥೆಗಳನ್ನು ಮಾಡಿದೆ.

ಅಧಿಕಾರಿಗಳ ಸಭೆ ನಡೆಸಿದ ಅಮಿತ್ ಶಾ
ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಮಂಗಳವಾರ ಸಂಜೆ ದೆಹಲಿಯಿಂದ ಕಾಶ್ಮೀರಕ್ಕೆ ತೆರಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶ್ರೀನಗರದ ರಾಜಭವನದಲ್ಲಿ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಸೌದಿಯಿಂದ ಹಿಂದಿರುಗಿದ ಪ್ರಧಾನಿ ಮೋದಿ
ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ್ದಾರೆ. ಎರಡು ದಿನಗಳ ಭೇಟಿಗೆ ಮಂಗಳವಾರ ಸೌದಿ ತಲುಪಿದ ಅವರು, ಇಂದು ಮುಂಜಾನೆ ತುರ್ತಾಗಿ ದೇಶಕ್ಕೆ ಮರಳಿದ್ದಾರೆ. ಅಧಿಕಾರಿಗಳ ಜೊತೆ ಇಂದು ಪ್ರಧಾನಿ ಸಭೆ ನಡೆಸುವ ಸಾಧ್ಯತೆ ಇದೆ.
#WATCH | Prime Minister Narendra Modi arrives in Delhi after cutting short his Saudi Arabia visit in view of the #PahalgamTerroristAttack in Kashmir
(Source – ANI/DD) pic.twitter.com/5WAk8kL0g5
— ANI (@ANI) April 23, 2025
ಅಮಿತ್ ಶಾ ಜೊತೆ ರಾಹುಲ್ ಗಾಂಧಿ ಚರ್ಚೆ
ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಗೃಹ ಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ಜಮ್ಮು ಕಾಶ್ಮೀರ ಪಿಸಿಸಿ ಅಧ್ಯಕ್ಷ ತಾರಿಕ್ ಕರ್ರಾ ಅವರೊಂದಿಗೆ ಮಾತನಾಡಿದೆ. ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದೆ. ಬಲಿಪಶುಗಳ ಕುಟುಂಬಗಳಿಗೆ ನ್ಯಾಯ ಮತ್ತು ನಮ್ಮ ಸಂಪೂರ್ಣ ಬೆಂಬಲ ಬೇಕು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
Spoke with HM Amit Shah, J&K CM Omar Abdullah, and J&K PCC President Tariq Karra about the horrific Pahalgam terror attack. Received an update on the situation.
The families of victims deserve justice and our fullest support.
— Rahul Gandhi (@RahulGandhi) April 23, 2025
ಸಹಾಯವಾಣಿ ತೆರೆದ ಪೊಲೀಸರು
ಅಗತ್ಯವಿರುವ ಪ್ರವಾಸಿಗರಿಗೆ ತಕ್ಷಣದ ಬೆಂಬಲ ಮತ್ತು ಮಾಹಿತಿಯನ್ನು ಒದಗಿಸಲು ಅನಂತನಾಗ್ ಪೊಲೀಸರು ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ 24/7 ತುರ್ತು ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಗಳು ಅಥವಾ ಪ್ರಶ್ನೆಗಳಿಗೆ ಪ್ರವಾಸಿಗರಿಗೆ ಸಹಾಯ ಮಾಡಲು ಮೀಸಲಾಗಿರುವ ಅನಂತ್‌ನಾಗ್ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಈಗ ದಿನದ 24 ಗಂಟೆಯೂ ವಿಶೇಷ ಸಹಾಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ಸಹಾಯವಾಣಿಯ ಸಂಪರ್ಕ ಸಂಖ್ಯೆಗಳು ಕೆಳಗಿವೆ
9596777669
01932225870
ವಾಟ್ಸಾಪ್ : 9419051940


