ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪೇಶಾವರಕ್ಕೆ ತೆರಳುತ್ತಿದ್ದ ರೈಲೊಂದನ್ನು ಮಂಗಳವಾರ ‘ಬಲೂಚ್ ಲಿಬರೇಶನ್ ಆರ್ಮಿ’ ಎಂಬ ಪ್ರತ್ಯೇಕತಾವಾದಿ ಗುಂಪು ಅಪಹರಿಸಿದ್ದು, ಅದರಲ್ಲಿದ್ದ 450 ಪ್ರಯಾಣಿಕರಲ್ಲಿ 182 ಜನರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬಂಡುಕೋರರು ಬೆದರಿಕೆ ಹಾಕಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ಪಾಕಿಸ್ತಾನ
ಸುಮಾರು 450 ಪ್ರಯಾಣಿಕರಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಬಲೂಚ್ ನಾಗರಿಕರು ಸೇರಿದಂತೆ ಎಲ್ಲಾ ನಾಗರಿಕ ಪ್ರಯಾಣಿಕರನ್ನು (ಒಟ್ಟು 450 ರಲ್ಲಿ) ಯಾವುದೇ ಹಾನಿಯಾಗದಂತೆ ಬಿಡುಗಡೆ ಮಾಡಲಾಗಿದೆ ಮತ್ತು ಸುರಕ್ಷಿತ ಮಾರ್ಗವನ್ನು ಒದಗಿಸಲಾಗಿದೆ ಎಂದು ಬಂಡುಕೋರ ಗುಂಪು ಹೇಳಿದೆ. ಒತ್ತೆಯಾಳುಗಳಲ್ಲಿ ರಜೆಯಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನಿ ಸೇನೆ, ಪೊಲೀಸ್, ISI ಮತ್ತು ATIF ನ ಸೇವೆ ಸಲ್ಲಿಸುತ್ತಿರುವ ಸದಸ್ಯರು ಸೇರಿದ್ದಾರೆ ಎಂದು ವರದಿಯಾಗಿದೆ.
ಬಂಡುಕೋರರೊಂದಿಗೆ ಭದ್ರತಾ ಪಡೆಗಳು ಭಾರೀ ಘರ್ಷಣೆ ನಡೆಸಿದ್ದು 11 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಹರಿಸಲ್ಪಟ್ಟ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡು ಹಾರಿಸಲಾಯಿತು ಎಂದು ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ದಾಳಿಯಲ್ಲಿ ಚಾಲಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ರೈಲು ಸುರಂಗದೊಳಗೆ ಸಿಲುಕಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ
“ರೈಲಿನಲ್ಲಿದ್ದ 450 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಂದೂಕುಧಾರಿಗಳು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ” ಎಂದು ಕ್ವೆಟ್ಟಾದಲ್ಲಿರುವ ರೈಲ್ವೆ ಸರ್ಕಾರಿ ಅಧಿಕಾರಿ ಮುಹಮ್ಮದ್ ಕಾಶಿಫ್ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. ಕ್ವೆಟ್ಟಾ ಬಲೂಚಿಸ್ತಾನ್‌ನ ಪ್ರಾಂತೀಯ ರಾಜಧಾನಿಯಾಗಿದೆ.
“ರೈಲು ಒಂಬತ್ತು ಬೋಗಿಗಳನ್ನು ಹೊಂದಿದ್ದು, ಸುಮಾರು 500 ಪ್ರಯಾಣಿಕರನ್ನು ಹೊಂದಿತ್ತು. ಸುರಂಗ ಸಂಖ್ಯೆ 8 ರಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ರೈಲನ್ನು ನಿಲ್ಲಿಸಿದರು. ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.” ಎಂದು ಕಾಶಿಫ್ ಅವರು ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
“ರೈಲು ನಿಂತಿರುವ ಪ್ರದೇಶವು ಪರ್ವತ ಪ್ರದೇಶವಾಗಿದ್ದು, ಬಂಡುಕೋರರು ಅಡಗುತಾಣಗಳನ್ನು ಹೊಂದಲು ಮತ್ತು ದಾಳಿಗಳನ್ನು ಯೋಜಿಸಲು ಸುಲಭವಾಗುತ್ತದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು AFP ಗೆ ತಿಳಿಸಿದ್ದಾರೆ. ಸುರಂಗದ ಸುತ್ತಲೂ ಸ್ಫೋಟದ ಶಬ್ದ ಕೇಳಿಬಂದಿದ್ದು, ಅವರು ಆ ಪ್ರದೇಶದಲ್ಲಿ ಬಂಡುಕೋರರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ ಎಂದು ಭದ್ರತಾ ಪಡೆಗಳು ಹೇಳಿರುವುದಾಗಿ ರಾಯಿಟರ್ಸ್ ಉಲ್ಲೇಖಿಸಿದೆ.
ರೈಲನ್ನು ಅಪಹರಿಸಿದ ನಂತರ ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಭದ್ರತಾ ಪಡೆಗಳು ಸೇರಿದಂತೆ ರೈಲಿನಲ್ಲಿರುವ ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿರುವುದಾಗಿ ಹೇಳಿದೆ. ಭದ್ರತಾ ಪಡೆಗಳು ಹಿಂದೆ ಸರಿಯದಿದ್ದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಗುಂಪು ಬೆದರಿಕೆ ಹಾಕಿದೆ.
ದಾಳಿಯನ್ನು ಖಂಡಿಸಿರುವ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, “ಮುಗ್ಧ ಪ್ರಯಾಣಿಕರ ಮೇಲೆ ಗುಂಡು ಹಾರಿಸುವ ಮೃಗಗಳಿಗೆ ತಮ್ಮ ಸರ್ಕಾರ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ” ಎಂದು ಹೇಳಿದ್ದಾರೆ.
ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಂಡುಕೋರ ಗುಂಪಾಗಿದ್ದು, ಸಶಸ್ತ್ರ ಹೋರಾಟದ ಮೂಲಕ ಈ ಪ್ರದೇಶವನ್ನು ದೇಶದಿಂದ ಬೇರ್ಪಡಿಸುವುದಾಗಿ ಪ್ರತಿಪಾದಿಸುತ್ತದೆ. ಈ ಸಂಘಟನೆಯನ್ನು ಪಾಕಿಸ್ತಾನ ಸರ್ಕಾರ ”ಭಯೋತ್ಪಾದಕ ಸಂಘಟನೆ” ಎಂದು ಗುರುತಿಸಿದೆ. ಈ ಗುಂಪು ಸರ್ಕಾರ, ಸೈನ್ಯ ಮತ್ತು ಚೀನಾದ ಹಿತಾಸಕ್ತಿಗಳ ವಿರುದ್ಧ ಆಗಾಗ್ಗೆ ದಾಳಿಗಳನ್ನು ನಡೆಸುತ್ತಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕೆಂಪು ಮೆಣಸಿನಕಾಯಿ ಬೆಲೆ ಕುಸಿತ | ಮಧ್ಯಪ್ರವೇಶಿಸುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಕೆಂಪು ಮೆಣಸಿನಕಾಯಿ ಬೆಲೆ ಕುಸಿತ | ಮಧ್ಯಪ್ರವೇಶಿಸುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

