ಕದನ ವಿರಾಮದ ನಡುವೆಯೇ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಮತ್ತೆ ಘರ್ಷಣೆ ನಡೆದು ಕನಿಷ್ಟ 10 ಮಂದಿ ಹತರಾಗಿದ್ದಾರೆ. ಇತರ 21 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾದ ಕುರ್ರಮ್ ಜಿಲ್ಲೆಯಲ್ಲಿ ಎರಡು ಬುಡಕಟ್ಟು ಸಮುದಾಯದ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಶುಕ್ರವಾರ ಈ ಎರಡು ಬುಡಕಟ್ಟುಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಟ 47 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಬಳಿಕ ಭಾನುವಾರ ಪ್ರಾಂತೀಯ ಸರ್ಕಾರ ಹಾಗೂ ಎರಡೂ ಬುಡಕಟ್ಟು ಗುಂಪುಗಳ ಮುಖಂಡರ ನಡುವೆ ನಡೆದ ಮಾತುಕತೆಯಲ್ಲಿ ಒಂದು ವಾರದ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಈ ನಡುವೆ ಮಂಗಳವಾರ (ನ.26) ತಡರಾತ್ರಿ ಮತ್ತೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
ಮಂಗಳವಾರದ ಸಂಘರ್ಷದ ಬಳಿಕ ಕದನ ವಿರಾಮವನ್ನು ಇನ್ನೂ 10 ದಿನಗಳವರೆಗೆ ವಿಸ್ತರಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕುರ್ರಂನ ಡೆಪ್ಯುಟಿ ಕಮಿಷನರ್ ಜಾವೇದುಲ್ಲಾ ಮೆಹ್ಸೂದ್ ಹೇಳಿದ್ದಾರೆ.
ಇತ್ತೀಚಿನ ಸಂಘರ್ಷದಲ್ಲಿ ಇದುವರೆಗೆ ಸುಮಾರು 100 ಮಂದಿ ಮೃತಪಟ್ಟಿದ್ದು, 180 ಜನರು ಗಾಯಗೊಂಡಿದ್ದಾರೆ ಎಂದು ಜಾವೇದುಲ್ಲಾ ಮೆಹ್ಸೂದ್ ತಿಳಿಸಿದ್ದಾರೆ.
ಇದನ್ನೂ ಓದಿ : ಮಾಂಸಾಹಾರ ತ್ಯಜಿಸುವಂತೆ ಪ್ರಿಯಕರನಿಂದ ಕಿರುಕುಳ ಆರೋಪ : ಮಹಿಳಾ ಪೈಲಟ್ ಆತ್ಮಹತ್ಯೆ


