ಪಾಲ್ಘರ್ ಗುಂಪು ಹತ್ಯೆ ಪ್ರಕರಣದ 89 ಆರೋಪಿಗಳಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ. ಪ್ರಕರಣದಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಸಾಧುಗಳು ಹಾಗೂ ಚಾಲಕ ಸೇರಿದಂತೆ ಒಟ್ಟು ಮೂವರನ್ನು ಜನರ ಗುಂಪೊಂದು ಹತ್ಯೆ ಮಾಡಿತ್ತು.
ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್.ಬಿ. ಬಹಲ್ಕರ್ ಅವರು ತಮ್ಮ ಆದೇಶದಲ್ಲಿ 89 ಆರೋಪಿಗಳಿಗೆ ಜಾಮೀನು ನೀಡಿದ್ದು, ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕವನ್ನು ಫೆಬ್ರವರಿ 15 ಕ್ಕೆ ನಿಗದಿಪಡಿಸಿದ್ದಾರೆ.
ಇದನ್ನೂ ಓದಿ: Fact check: ಪಾಲ್ಘರ್ ಗುಂಪು ಹತ್ಯೆಯ ಬಗ್ಗೆ ಸುಳ್ಳು ವರದಿ ಮಾಡಿದ ಪಿಟಿಐ
ಆರೋಪಿಗಳ ಪರವಾಗಿ ಹಾಜರಾದ ವಕೀಲರಾದ ಅಮೃತ್ ಅಧಿಕಾರಿ ಮತ್ತು ಅತುಲ್ ಪಾಟೀಲ್ ತಮ್ಮ ಕಕ್ಷಿದಾರಿಗೆ ದಾಳಿಯಲ್ಲಿ ಯಾವುದೇ ಪಾತ್ರವಿಲ್ಲ ಮತ್ತು ಪೊಲೀಸರು ಅವರನ್ನು ಕೇವಲ ಅನುಮಾನದಿಂದ ಬಂಧಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಮೂರು ಎಫ್‌ಐಆರ್‌ಗಳ ಸಿಂಧುತ್ವವನ್ನೂ ಆರೋಪಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 201 ಜನರನ್ನು ಬಂಧಿಸಲಾಗಿದ್ದು, ಈ ಪೈಕಿ 75 ಪ್ರಮುಖ ಆರೋಪಿಗಳು ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ನನ್ನ ಮೇಲೆ ಗುಂಪು ಹಲ್ಲೆಯಾದಾಗ ನೀವೇಕೆ ಮಾತಾಡಲಿಲ್ಲ?: ಸ್ವಾಮಿ ಅಗ್ನಿವೇಶ್ ಪ್ರಶ್ನೆ
ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸತೀಶ್ ಮನೇಶಿಂದೆ ಹಾಜರಾಗಿದ್ದರೆ, ವಕೀಲ ಪಿ ಎನ್ ಓಜಾ ಸಾಧುಗಳ ಕುಟುಂಬದ ಪರವಾಗಿ ಹಾಜರಾದರು.
ಏಪ್ರಿಲ್ 16, 2020 ರಂದು, ಉದ್ರಿಕ್ತ ಗುಂಪು ಇಬ್ಬರು ಸಾಧುಗಳಾದ ಮಹಾರಾಜ್ ಕಲ್ಪವ್ರಕ್ಷಗಿರಿ (70), ಸುಶಿಲ್ ಗಿರಿ ಮಹಾರಾಜ್ (35), ಮತ್ತು ಅವರ ಕಾರು ಚಾಲಕ ನಿಲೇಶ್ ತೆಲ್ಗಡೆ (30) ಅವರನ್ನು ಮುಂಬೈಯಿಂದ 140 ಕಿ.ಮೀ ಉತ್ತರದಲ್ಲಿರುವ ಪಾಲ್ಘರ್ ಜಿಲ್ಲೆಯ ಗದ್ಚಿಂಚಲೆಯಲ್ಲಿ ಹತ್ಯೆ ಮಾಡಲಾಗಿತ್ತು.
ಬಿಜೆಪಿ ಮತ್ತು ಬಲಪಂಥೀಯ ಚಾನೆಲ್ ಸಂಪಾದಕ ಅರ್ನಬ್ ಗೋಸ್ವಾಮಿ ಈ ಘಟನೆಯನ್ನು ಇಟ್ಟುಕೊಂಡು ಕೋಮುಗಲಭೆಗೆ ಪ್ರಚೋದನೆ ನೀಡಿದ್ದರು.
ಇದನ್ನೂ ಓದಿ: ಪಾಲ್ಘರ್ ಘಟನೆಗೆ ಕೋಮು ಆಯಾಮವಿಲ್ಲ: ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸ್ಪಷ್ಟನೆ


