ಹೋರಾಟ ನಿರತ ರೈತರಿಂದ ದೆಹಲಿಯಲ್ಲಿ ‘ಕಿಸಾನ್ ಮೆಟ್ರೋ’ ಆರಂಭ! | Naanu gauri

ದೆಹಲಿಯ ಗಡಿಗಳಲ್ಲಿ ರೈತ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಿ, ಒಂದು ಸಮಿತಿ ರಚಿಸುವ ಮೂಲಕ ರೈತರ ಬೇಡಿಕೆಗಳನ್ನು ವಿಶ್ಲೇಷಿಸಿ, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿ ಕೊಡಿ ಎಂದು ಮೋದಿ ಸರ್ಕಾರಕ್ಕೆ ಸಲಹೆ ಕೊಟ್ಟಿದೆ. ಸಮಿತಿ ರಚಿಸುವುದರಿಂದ ಈ ಜಟಿಲ ಪ್ರಶ್ನೆ ಬಗೆಹರಿಯುವಂತೆ ಕಾಣುತ್ತಿಲ್ಲ.

ರೈತರ ಮತ್ತು ಸರ್ಕಾರದ ಉದ್ದೇಶಗಳೇ ಬೇರೆಯಾಗಿರುವುದರಿಂದ ಸಮಿತಿಯೊಂದಕ್ಕೆ ಹೇಗೆ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ? ಸರ್ಕಾರ ಈ ಶಾಸನಗಳಲ್ಲಿ ಕೆಲವು ತಿದ್ದುಪಡಿಗಳನ್ನು ಈಗಾಗಲೇ ಸೂಚಿಸಿವೆ. ಇದಕ್ಕೆ ರೈತರು ವಿರೋಧ ಮಾಡಿದ್ದಾರೆ. ಸರ್ಕಾರಕ್ಕೆ ಇದು ಅರಿವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾವ ಸಮಿತಿ ತಾನೇ ಈ ಸಮಸ್ಯೆಯನ್ನು ಬಗೆಹರಿಸಬಲ್ಲದು? ಸರ್ಕಾರ ತನ್ನ ನಿಲುವನ್ನು ಬದಲಾಯಿಸುವುದೊಂದೇ ಇರುವ ರಾಜಮಾರ್ಗ. ಆರ್‌ಎಸ್‌ಎಸ್‌ನ ಭಾರತ ಕಿಸಾನ್ ಸಂಘ ತಾನು ರೈತರ ಪರ ಎಂದು ಘೋಷಣೆ ಮಾಡಿ ನಾಟಕವಾಡುತ್ತಿದೆ. ಅದರ ಪ್ರೇರಣೆಯಿಂದಲೇ ಮೋದಿ ಇಂತಹ ಘೋರ ಕಾನೂನುಗಳನ್ನು ರಚಿಸುತ್ತಿರುವುದು ಎಂಬುದು ಪ್ರಪಂಚಕ್ಕೆ ಗೊತ್ತಿದೆ. ಆ ದೃಷ್ಟಿಯಿಂದ ಇದೂ ಒಂದು ದೆವ್ವದ ಬಾಯಿಂದ ಬಂದ ಭಗವದ್ಗೀತೆಯೇ ಸರಿ.

ಕಾಂಗ್ರೆಸ್‌ಗೆ ಇಂತಹ ಬಿಗಡಾಯಿಸಿದ ಸ್ಥಿತಿಯಲ್ಲಿ ಹೇಗೆ ತನ್ನ ಕಾರ್ಯನಿರ್ವಹಿಸಬೇಕು ಎಂದು ತಿಳಿದಿತ್ತು. ಇಂತಹ ಅನೇಕ ಸಂದರ್ಭಗಳು ನಿರ್ಮಾಣವಾಗಿದ್ದ ಮತ್ತು ಅವುಗಳನ್ನು ಚಾಕಚಕ್ಯತೆಯಿಂದ ಪರಿಹರಿಸಿದ ಅನೇಕ ನಿದರ್ಶನಗಳಿವೆ. ಈಗ ಮೋದಿ ಸರ್ಕಾರಕ್ಕೆ ಸಲಹೆ ನೀಡುವವರಿಗೆ ಅಂತಹ ಯೋಗ್ಯತೆ ಇಲ್ಲ ಅಥವಾ ಉದ್ದೇಶಪೂರ್ವಕವಾಗಿ ಈ ೩ ಮಸೂದೆಗಳನ್ನು ಜಾರಿಗೆ ತರಲಾಗಿವೆ.

ಚುನಾವಣೆಗಳಲ್ಲಿ ಗೆಲವು ಸಾಧಿಸುವ ತಂತ್ರ ತಿಳಿದ ಮಾತ್ರಕ್ಕೆ ನೀವು Democratic ಆಗಿಬಿಡುವುದಿಲ್ಲ ಈ ಬಗೆಯ ಮಸೂದೆಗಳನ್ನು ಮಂಡಿಸುವುದಕ್ಕೆ ಮುಂಚೆ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕೆಂಬ ಕಾಳಜಿಯೇ ನಿಮಗಿಲ್ಲ. ಈ ಕಾಯ್ದೆಯಿಂದ ಯಾರಿಗೆ ನೇರವಾಗಿ ಸಮಸ್ಯೆ ಉಂಟಾಗುವುದೋ, ಅವರ ಅನುಭವಪೂರ್ಣ ಸಲಹೆಯನ್ನು ಪಡೆಯುವ ದೊಡ್ಡತನವೂ ನಿಮಗಿಲ್ಲ. ಅವರು ನೀಡುವ ಅನುಭವ ಜನ್ಯವಾದ ಸಲಹೆಗಳನ್ನು ಪಡೆದು ಒಂದು ಒಳ್ಳೆಯ ಕಾನೂನು ರಚಿಸಬೇಕೆಂಬ ತವಕವೂ ನಿಮಗಿಲ್ಲ. ದೇಶವನ್ನು ಬಂಡವಾಳಗಾರರ ವಶಕ್ಕೆ ಒಪ್ಪಿಸಬಯಸುವ ನಿಮಗೆ ಆತ್ಮಸಾಕ್ಷಿ ಇರಲು ಸಾಧ್ಯವಿಲ್ಲ.

PC : India Legal

ಮೋದಿಯವರು ಜಮೀನು ಮತ್ತು ವ್ಯವಸಾಯ ಮತ್ತು ಮಾರುಕಟ್ಟೆಗೆ ಸಂಬಂಧಪಟ್ಟಂತೆ 3 ಉಗ್ರ ಕಾಯ್ದೆಗಳನ್ನು ಆರ್ಡಿನೆಸ್ಸ್ ಮುಖಾಂತರ ಜಾರಿಗೆ ತಂದು ಆ ನಂತರ ಪಾರ್ಲಿಮೆಂಟಿನ ಕಾನೂನು ಕಟ್ಟಲೆಗಳನ್ನು ಧಿಕ್ಕರಿಸಿ, ಕಾನೂನುಗಳನ್ನಾಗಿ ಪರಿವರ್ತಿಸಲಾಯಿತು. ವ್ಯವಸಾಯ ಭೂಮಿಯನ್ನು ಕಾರ್ಪೊರೆಟ್ ಕಂಪನಿಗಳ ವಶ ಮಾಡುವುದು, ರೈತರನ್ನು ಕೂಲಿಗಳಾಗಿ ಪರಿವರ್ತಿಸಿ, ಕಾರ್ಪೊರೆಟ್‌ಗಳಿಗೆ ಬೇಕಾದ ಬೆಳೆ ಬೆಳೆದುಕೊಡಲು ಅವಕಾಶ ಮಾಡಿಕೊಡಲಾಯಿತು. ರೈತರ ಹಿತದೃಷ್ಟಿಯಿಂದ ರಚಿಸಿರುವ ಮಾರ್ಕೆಟ್ ಯಾರ್ಡ್‌ಗಳನ್ನು ಮುಚ್ಚಿಸುವುದು, ರೈತರು ಕೂಲಿಯಾಳುಗಳಾಗಿ ಬೆಳೆದ ಬೆಳೆಯನ್ನೆಲ್ಲ ವಶಕ್ಕೆ ತೆಗೆದುಕೊಳ್ಳುವುದು, ರೈಲ್ವೆ ನಿಲ್ದಾಣಗಳ ಸಮೀಪ ಗೋಡೌನ್‌ಗಳನ್ನು ಮಾಡಿಕೊಂಡು ಗೂಡ್ಸ್ ರೈಲಿನ ಮೂಲಕ ಅವುಗಳನ್ನು ತಮಗೆ ಮಾರುಕಟ್ಟೆ ಇರುವ ಸ್ಥಳಗಳಿಗೆ ರವಾನಿಸುವುದು, ಅವುಗಳನ್ನು ದುಬಾರಿ ಬೆಲೆಗೆ ಮಾರಿಕೊಳ್ಳುವುದು ಈ ರೀತಿ ಕಾರ್ಪೊರೆಟ್ ಕಂಪನಿಗಳ ಹಿತದೃಷ್ಟಿಯಿಂದ ರೈತರನ್ನು ನಾಶ ಮಾಡುವ ದುರುದ್ದೇಶ ಮೋದಿಯವರ ಸರ್ಕಾರದ್ದು. ಆ ಮೂಲಕ ಭಾರತವನ್ನು ಬಂಡವಾಳಶಾಹಿ ರಾಷ್ಟ್ರವನ್ನಾಗಿ ಪರಿವರ್ತಿಸುವುದು ಅವರ ದುರಾಲೋಚನೆ.

ಪಂಜಾಬ್ ಮತ್ತು ಹರಿಯಾಣದ 30ಸಾವಿರಕ್ಕಿಂತಲೂ ಹೆಚ್ಚು ರೈತರು ಸರ್ಕಾರದ ವಿರುದ್ಧ ಶಾಂತಿಯುತ ದಂಗೆ ಎದ್ದಿರುವುದು ಸ್ವಾಭಾವಿಕವಾಗಿಯೇ ಇದೆ. ಕಡಿಮೆ ದರದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಮಧ್ಯಮವರ್ಗದ ಹಾಗೂ ಬಡವರ ಅನುಕೂಲಕ್ಕಾಗಿ ನಿರ್ಮಿತವಾದ ರೈಲ್ವೆಯನ್ನು ಬಿಡಿಬಿಡಿಯಾಗಿ ಬಂಡವಾಳಶಾಹಿಗಳಿಗೆ ವಹಿಸತಕ್ಕ ಹುನ್ನಾರವೂ ಇದರಲ್ಲಿದೆ. ರೈಲ್ವೆ ವ್ಯವಸ್ಥೆ ಈ ಬಂಡವಾಳಶಾಹಿಗಳ ಕೈಗೆ ಹೋಗುತ್ತಿರುವುದರಿಂದ ತಾವು ನಿರ್ವಹಿಸುವ ಗೋಡೌನ್‌ಗಳಿಂದ ಉಚಿತವಾಗಿ ಗೂಡ್ಸ್ ಬೋಗಿಗಳಲ್ಲಿ ಕೃಷಿ ಉತ್ಪನ್ನಗಳನ್ನು ತುಂಬಿ ಸಾಗಿಸಲೂ ಅವಕಾಶ ಕಲ್ಪಿಸಿಕೊಡಲಾಗಿದೆ. ವ್ಯವಸಾಯಗಾರನ ಭೂಮಿ ಕಿತ್ತುಕೊಂಡು ಅವನನ್ನು ಬಂಡವಾಳಶಾಹಿಯ ಗುಲಾಮನನ್ನಾಗಿ ಮಾಡಿ ಅವನು ಬೆಳೆದು ಕೊಟ್ಟ ಆಹಾರ ಪದಾರ್ಥಗಳನ್ನು ಸಾಗಿಸುವ ಖರ್ಚನ್ನು ಉಳಿಸಿ ಈ ಧೂರ್ತರ ಕಿಸೆ ತುಂಬುವ ಯೋಜನೆ ಇದು.

ಕೇಂದ್ರ ಸರ್ಕಾರದ ಈ ವರ್ಷದ ಹಣಕಾಸಿನ ಪರಿಸ್ಥಿತಿ ತಿಳಿಯಬೇಕು. ಆರ್ಥಿಕಸ್ಥಿತಿ ಬಹಳ ಬಿಗಡಾಯಿಸಿದೆ. ಹಣಕಾಸಿನ ಸಚಿವಾಲಯದ ಮಾತನ್ನು ನಂಬುವುದಾದರೆ ಆಹಾರ ಧಾನ್ಯಗಳನ್ನು ಕೊಳ್ಳಲು ಸರ್ಕಾರದ ಬಳಿ ಹಣವಿಲ್ಲ. ಫುಡ್ ಕಾರ್ಪೊರೇಶನ್ ಇಂಡಿಯಾಗೆ ಈಗಾಗಲೇ ಕೊಟ್ಟಿರುವ ಸಾಲದ ಮೊತ್ತ 2.65 ಲಕ್ಷ ಕೋಟಿ. ಆದರೆ ಜನರಿಗೆ ಆಹಾರ ಒದಗಿಸುವುದು ಕಾನೂನು ರೀತ್ಯಾ ಸರ್ಕಾರದ ಜವಾಬ್ದಾರಿ. ಹಣದ ಕೊರತೆ ಇದೆ ಎಂದು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ. ಈ ನ್ಯಾಯಬದ್ಧ ಜವಾಬ್ದಾರಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ, ಖಾಸಗಿಯವರಿಗೆ ವಹಿಸಿಕೊಡಲು ಬರುವುದೇ! ಗಂಭೀರವಾಗಿ ವಿಚಾರ ಮಾಡಬೇಕಾದ ಜಟಿಲ ಪ್ರಶ್ನೆ ಇದು.


ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ: ದಿಟ್ಟ ರೈತ ಹೋರಾಟದ ಗಮನಸೆಳೆದ 10 ಫೋಟೊಗಳು

LEAVE A REPLY

Please enter your comment!
Please enter your name here