ಲಾಕ್‌ಡೌನ್ ಕಾರಣದಿಂದಾಗಿ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಿರುವ 10 ಜನ ವಲಸೆ ಕಾರ್ಮಿಕರಲ್ಲಿ ಮೂವರಿಗೆ ಕೊರೊನಾ ವೈರಸ್ ಕಾಯಿಲೆ ಹರಡುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಎರಡು ಸಾರ್ವಜನಿಕ ಹಿತಾಸಕ್ತಿ ದಾವೆಗಳ (ಪಿಐಎಲ್) ವಿಚಾರಣೆಯಲ್ಲಿ ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉತ್ತರಿಸಿದ್ದು, ಸುಮಾರು 4.14 ಕೋಟಿ ಜನರು ಕೆಲಸಕ್ಕಾಗಿ ವಲಸೆ ಬಂದಿದ್ದಾರೆ. ಆದರೆ ಕೊರೊನಾವೈರಸ್ ಲಾಕ್‌ಡೌನ್ ಕಾರಣಕ್ಕಾಗಿ ಹಿಮ್ಮುಖ ವಲಸೆ ನಡೆಯುತ್ತಿದೆ ಎಂದಿದ್ದಾರೆ.
ಆಶ್ರಯ ಮನೆಗಳಲ್ಲಿ ಇರಿಸಲಾಗಿರುವ ವಲಸೆ ಕಾರ್ಮಿಕರಿಗೆ ಆಹಾರ, ವೈದ್ಯಕೀಯ ನೆರವು ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶನ ನೀಡಿತು. ವಲಸಿಗರ ಭೀತಿಯನ್ನು ಹೋಗಲಾಡಿಸಲು ಸಹಾಯ ಮಾಡಲು ಎಲ್ಲಾ ಧರ್ಮಗಳ ತರಬೇತಿ ಪಡೆದ ಸಲಹೆಗಾರರು ಮತ್ತು ಧಾರ್ಮಿಕ ಮುಖಂಡರ ಸಹಾಯವನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಸೂಚಿಸಿದೆ.
“ಭೀತಿಯು ವೈರಸ್‌ಗಿಂತ ಹೆಚ್ಚಿನ ಜನರನ್ನು ನಾಶಮಾಡುತ್ತದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ನಿಮಗೆ ಸಲಹೆಗಾರರ ಅಗತ್ಯವಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರ ನ್ಯಾಯಪೀಠವು ಹೇಳಿದೆ. ಅದಕ್ಕಾಗಿ ನೀವು ’ಭಜನೆ, ಕೀರ್ತನೆ ನಮಾಜ್’ ಅಥವಾ ಯಾವುದನ್ನಾದರೂ ಮಾಡಿಸುವ ಮೂಲಕ ಜನರಿಗೆ ಬಲವನ್ನು ನೀಡಬೇಕು ಎಂದು ಹೇಳಿದರು.
ಭೀತಿ ಮತ್ತು ನಕಲಿ ಸುದ್ದಿಗಳನ್ನು ಎದುರಿಸಲು ಕೊರೊನಾದ ನೈಜ-ಸಮಯದ ಮಾಹಿತಿಯನ್ನು ಪ್ರಸಾರ ಮಾಡಲು 24 ಗಂಟೆಗಳ ಒಳಗೆ ಪೋರ್ಟಲ್ ಸ್ಥಾಪಿಸಲು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕೊರೊನ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ವಿಧಿಸಿದ ನಂತರ ಅಸಹಾಯಕರಾಗಿ ಉಳಿದಿರುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಆಶ್ರಯ ನೀಡುವಂತೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಈ ಸಮಯದಲ್ಲಿ ಹಳ್ಳಿಗಳಲ್ಲಿ ವೈರಸ್ ಹರಡುವುದರಿಂದ ಜನರ ವಲಸೆಯನ್ನು ಈ ಸಮಯದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಮೆಹ್ತಾ ಹೇಳಿದರು.
“ನೀವು ವಲಸೆ ನಿಲ್ಲಿಸಿದ ಎಲ್ಲರನ್ನು ಆಹಾರ, ಆಶ್ರಯ, ಪೋಷಣೆ ಮತ್ತು ವೈದ್ಯಕೀಯ ನೆರವಿನ ವಿಷಯದಲ್ಲಿ ನೋಡಿಕೊಳ್ಳುವುದನ್ನು ಭರವಸೆ ನೀಡಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಪಿಐಎಲ್‌ಗಳ ಮೇಲಿನ ವಿಚಾರಣೆಯನ್ನು ಏಪ್ರಿಲ್ 7 ಕ್ಕೆ ಮುಂದೂಡಿದ ನ್ಯಾಯಪೀಠ, ವಲಸಿಗರ ಸಮಸ್ಯೆಯನ್ನು ತೆಗೆದುಕೊಳ್ಳದಂತೆ ಹೈಕೋರ್ಟ್‌ಗಳನ್ನು ತಡೆಯಲು ನಿರಾಕರಿಸಿದೆ. ಅವರು ಈ ಸಮಸ್ಯೆಯನ್ನು ಹೆಚ್ಚು ನಿಕಟವಾಗಿ ಮೇಲ್ವಿಚಾರಣೆ ಮಾಡಬಹುದು ಎಂದು ಕೋರ್ಟ್ ಹೇಳಿದೆ.
ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ದೇಶಾದ್ಯಂತ 21,000 ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 6.6 ಲಕ್ಷಕ್ಕೂ ಹೆಚ್ಚು ನಿರ್ಗತಿಕರು ಮತ್ತು ಕೋವಿಡ್ -19 ಲಾಕ್‌ಡೌನ್ ಕಾರಣದಿಂದಾಗಿ ಸಿಕ್ಕಿಕೊಂಡವರಿಗೆ ಆಶ್ರಯ ನೀಡಲಾಗಿದೆ.


