Homeಅಂಕಣಗಳುಪರಿಘಪರಿಘ 1: ಕನ್ನಡದ ನೆಲಕ್ಕಾಗಿ ಹೋರಾಡುವಿರಾ? ಅಥವಾ ಸೊಲ್ಲಾಪುರದ ಗೊಡವೆ ನಮಗೇಕೆ ಎನ್ನುವಿರಾ?

ಪರಿಘ 1: ಕನ್ನಡದ ನೆಲಕ್ಕಾಗಿ ಹೋರಾಡುವಿರಾ? ಅಥವಾ ಸೊಲ್ಲಾಪುರದ ಗೊಡವೆ ನಮಗೇಕೆ ಎನ್ನುವಿರಾ?

ಮುಖ್ಯವಿಷಯ ಅಂದರೆ ಕರ್ನಾಟಕದ ಬೆಳಗಾವಿ ಜಿಲ್ಲೆಯೊಂದೇ ಮಹಾರಾಷ್ಟ್ರದ ಸೀಮೆಗೆ ಅಂಟಿಕೊಂಡಿಲ್ಲ, ಇತರೆ ಜಿಲ್ಲೆಗಳೂ ಅಂದರೆ ಬಾಗಲಕೋಟೆ, ವಿಯಜಪುರ, ಗುಲಬರ್ಗಾ, ಬೀದರ ಇವೂ ಕೂಡ ಅನುಕ್ರಮವಾಗಿ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಸೊಲ್ಲಾಪುರ, ಲಾತೂರು ಜಿಲ್ಲೆಗಳಲ್ಲಿಗೆ ಅಂಟಿಕೊಂಡಿವೆ.

- Advertisement -
- Advertisement -

1974 ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ಸೊಲ್ಲಾಪುರದ ಡಾ. ಜಯದೇವಿತಾಯಿ ಲಿಗಾಡೆಯವರು. ಒಬ್ಬ ಮಹಿಳೆಗೆ ಅ.ಭಾ.ಕ.ಸಾ.ಸ.ದ ಅಧ್ಯಕ್ಷತೆ ದೊರಕಿದ್ದು ಅದೇ ಮೊದಲು. ಅಂದು ತಾಯಿ ಸಮ್ಮೇಳನದ ವೇದಿಕೆಯಿಂದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೆರೆದ ಜನರಿಗೆ ಮತ್ತು ಅಲ್ಲಿದ್ದ ರಾಜಕಾರಣಿಗಳಿಗೆ ಸಂಬೋಧಿಸುತ್ತ ಎತ್ತಿದ ಪ್ರಶ್ನೆ ಇಂದಿಗೂ ಪ್ರಸ್ತುತ ಎಂದೆನಿಸುತ್ತದೆ.

ಅಧಿಕಾರದ ಲಾಲಸೆ ಬಿಟ್ಟು ಅಖಂಡ ಕರ್ನಾಟಕಕ್ಕಾಗಿ ಹೋರಾಡುವಿರಾ? ಹೊರನಾಡು ಎಂಬ ಹಣೆಪಟ್ಟಿ ಹೊತ್ತು ಕನ್ನಡವನ್ನೇ ಉಸಿರಾಡುತ್ತಿರುವ ಸೊಲ್ಲಾಪುರ ಹಾಗೂ ಇನ್ನುಳಿದ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕು. ಒಳನಾಡಿನಲ್ಲಿ ನಿಶ್ಚಿಂತರಾಗಿ ಇರುವ ನೀವುಗಳು ಸೊಲ್ಲಾಪುರದ ಗೊಡವೆ ನಮಗೇಕೆ ಎನ್ನುವಿರಾ? ಇಂತಹ ಅನ್ಯಮನಸ್ಕತೆಯಿಂದ ಕೈಕಟ್ಟಿ ಕುಳಿತರೆ ಇಂದು ಸೊಲ್ಲಾಪುರಕ್ಕೆ ಬಂದ ಸ್ಥಿತಿ ನಾಳೆ ಬೇಲೂರಿಗೂ ಬರಬಹುದು. ಅಖಂಡ ಕರ್ನಾಟಕ ನಿರ್ಮಾಣಕ್ಕಾಗಿ ನಾನು ಪ್ರಾಣವನ್ನೂ ನೀಡಲು ಸಿದ್ಧ. ನೀವು? ಎಂದು ಅವರು ಅಂತಃಕರಣಪೂರಿತವಾಗಿ, ಕಣ್ಣೀರು ಮಿಡಿಯುತ್ತ ಸವಾಲೆಸೆದಿದ್ದರು. ಅಂದು ಇಡೀ ಸಭೆ ಮೌನ ತಾಳಿತ್ತು. ಇಂದೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಪ್ರಶ್ನೆ ಎದ್ದಾಗೆಲ್ಲ ಜಾಣತನದಿಂದ ಮೌನ ವಹಿಸಲಾಗುತ್ತದೆ. ಸದ್ಯದ ರಾಜಕೀಯ ಸ್ಥಿತಿಗಳಲ್ಲಿ ಇದೆಲ್ಲ ಸಾಧ್ಯವಿಲ್ಲ ಎಂಬುದು ಸೊಲ್ಲಾಪುರ ಹಾಗೂ ಹೊರನಾಡ ಕನ್ನಡಿಗರಿಗೆ ಮನದಟ್ಟಾಗಿದೆ. ಆದರೆ ಅವರೆಲ್ಲರ ಮನಸುಗಳು ಮಾತ್ರ ಕನ್ನಡ ನಾಡು, ನುಡಿಗಾಗಿ ಎಂದಿಗೂ ಹಂಬಲಿಸುತ್ತಲೇ ಇರುತ್ತವೆ.

ಸಾಹಿತ್ಯಿಕ, ಸಾಮಾಜಿಕ ಕಾರ್ಯಕ್ರಮಗಳಿಗಾಗಿ ನಾನು ಕರ್ನಾಟಕದಾತ್ಯಂತ ಸಂಚರಿಸುತ್ತಿರುತ್ತೇನೆ. ವಿಷಯ ಮಂಡನೆ, ಉಪನ್ಯಾಸ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಇತ್ಯಾದಿ ಆಯೋಜನೆಗಳಲ್ಲಿ ಸಾಮಾನ್ಯವಾಗಿ ಭಾಗವಹಿಸುತ್ತೇನೆ. ಸಂಯೋಜಕರು ನನ್ನನ್ನು ವೇದಿಕೆಗೆ ಆಹ್ವಾನಿಸಿ ಪರಿಚಯಿಸುತ್ತ ಗಿರೀಶ ಜಕಾಪುರೆ ಮಹಾರಾಷ್ಟ್ರದವರು ಎಂದು ಹೇಳಿದಾಗ ಹಲವಾರು ಜನರ ಹುಬ್ಬೇರುತ್ತವೆ. ಸಮಾರಂಭದ ನಂತರ ಅದೇ ಜನರು ಬಳಿ ಬಂದು ಕನ್ನಡ ಚೆನ್ನಾಗಿ ಮಾತಾಡುತ್ತೀರಿ? ನೀವು ಮಹಾರಾಷ್ಟ್ರದವರಾ? ಎಂದು ಕೇಳುತ್ತಾರೆ. ಹೌದು, ನಾನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯವನು, ಅಲ್ಲಿಯೇ ಕನ್ನಡ ಶಾಲೆಗಳಲ್ಲಿ ಕಲಿತಿದ್ದೇನೆ, ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅವರು ಮುಂದುವರಿದು ‘ಸೊಲ್ಲಾಪುರ ಜಿಲ್ಲೆಯಾ? ಎಲ್ಲಿದೆ ಅದು? ಬೆಳಗಾವಿಗೆ ಅಂಟಿಕೊಂಡಿದೆಯಲ್ಲವೆ?’ ಎಂದು ಕೇಳುತ್ತಾರೆ, ಸಹಜವಾಗಿಯೇ ಬೆಳಗಾವಿಯ ಪ್ರಸ್ತಾಪವಾಗುತ್ತದೆ. ಇಲ್ಲ, ಸೊಲ್ಲಾಪುರ ಕಲಬುರಗಿ-ವಿಜಯಪುರ ಜಿಲ್ಲೆಗಳಿಗೆ ಅಂಟಿಕೊಂಟಿದೆ, ಅದು ವಚನಕಾರ ಸಿದ್ಧರಾಮನ ನೆಲೆ ಎಂದು ವಿವರಣೆಗೆ ಇಳಿಯುತ್ತೇನೆ. ಇಂದಿನ ಕನ್ನಡಿಗರಿಗೆ ಕನ್ನಡದ ಒಟ್ಟು ಪ್ರದೇಶ ಎಷ್ಟಿದೆ ಎಂಬುದುರ ಸ್ಪಷ್ಟ ಮಾಹಿತಿಯಿಲ್ಲದ್ದಕ್ಕೆ ಮರುಕ ಪಡುತ್ತೇನೆ.

ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ನೆಲ, ನೀರು, ಗಡಿ ಹಾಗೂ ಪ್ರದೇಶಗಳಿಗೆ ಸಂಬಂಧಿಸಿದಂತೆ ಹಲವಾರು ವಿವಾದಗಳು ಸೃಷ್ಟಿಯಾಗಿವೆ. ಗಡಿವಿವಾದ ಎಂದ ಕೂಡಲೇ ನಾವೆಲ್ಲ ಬೆಳಗಾವಿಯತ್ತ ಮುಖ ಮಾಡುತ್ತೇವೆ. ಮಹಾರಾಷ್ಟ್ರ ಯಾವಾಗಲೂ ಬೆಳಗಾವಿಯನ್ನು ಆಕ್ರಮಿಸುವ ಹುನ್ನಾರ ರೂಪಿಸುತ್ತದೆ, ಕನ್ನಡವನ್ನು ಕ್ಷೀಣಗೊಳಿಸಿ ಮರಾಠಿಯ ಪ್ರಭಾವವನ್ನು ಹೆಚ್ಚಿಸುವ ಸಲುವಾಗಿ ಪ್ರಯತ್ನಿಸುತ್ತದೆ, ಗಡಿಪ್ರದೇಶದ ಊರುಗಳಲ್ಲಿಯ ಕನ್ನಡ ಫಲಕಗಳನ್ನು, ಮೈಲಿಗಲ್ಲುಗಳನ್ನು ಮರಾಠಿಮಯವಾಗಿಸಲು ಯತ್ನಿಸುತ್ತದೆ ಎಂಬೆಲ್ಲ ಅಂಶಗಳು ಕಂಡುಬರುತ್ತವೆ.

ಮುಖ್ಯವಿಷಯ ಅಂದರೆ ಕರ್ನಾಟಕದ ಬೆಳಗಾವಿ ಜಿಲ್ಲೆಯೊಂದೇ ಮಹಾರಾಷ್ಟ್ರದ ಸೀಮೆಗೆ ಅಂಟಿಕೊಂಡಿಲ್ಲ, ಇತರೆ ಜಿಲ್ಲೆಗಳೂ ಅಂದರೆ ಬಾಗಲಕೋಟೆ, ವಿಯಜಪುರ, ಗುಲಬರ್ಗಾ, ಬೀದರ ಇವೂ ಕೂಡ ಅನುಕ್ರಮವಾಗಿ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಸೊಲ್ಲಾಪುರ, ಲಾತೂರು ಜಿಲ್ಲೆಗಳಲ್ಲಿಗೆ ಅಂಟಿಕೊಂಡಿವೆ. ಬೆಳಗಾವಿಯನ್ನು ಹೊರತು ಪಡಿಸಿ ಬೇರೆ ಯಾವ ಜಿಲ್ಲೆಗಳಲ್ಲಿಯೂ ಎರಡೂ ರಾಜ್ಯಗಳ ನಡುವೆ ಎಂದೂ ಯಾವುದೇ ವಿವಾದಗಳು ಸೃಷ್ಟಿಯಾಗಿಲ್ಲ. ಈ ಪ್ರದೇಶಗಳಲ್ಲಿಯ ಭಾಷಿಕ, ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ವಾತಾವರಣ ಅತ್ಯಂತ ಸೌಹಾರ್ದಪೂರ್ಣವಾಗಿದೆ ಎಂದು ಎದೆತಟ್ಟಿ ಹೇಳಬಲ್ಲೆ. ಮಹಾರಾಷ್ಟ್ರದ ಹೆಸರು ಬಂದ ಕೂಡಲೇ ಬೆಳಗಾವಿಯ ಗಡಿವಿವಾದ ನೆನಪಾಗುವಂತೆಯೇ ಸೊಲ್ಲಾಪುರದ ಸೌಹಾರ್ದವೂ ನೆನಪಾಗಬೇಕು.

ಈ ಪ್ರದೇಶಗಳಲ್ಲಿನ ಸೌಹಾರ್ದತೆಗೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಮುಖ್ಯವಾಗಿರುವ ಅಂಶವೆಂದರೆ ಮಹಾರಾಷ್ಟ್ರದ ಕೊಲ್ಲಾಪುರ ಹೊರತು ಪಡಿಸಿ ಸಾಂಗಲಿ, ಸೊಲ್ಲಾಪುರ, ಲಾತೂರು ಜಿಲ್ಲೆಗಳಲ್ಲಿರುವ ಕನ್ನಡ ಭಾಷಿಕ ಜನರ ಬಹುಸಂಖ್ಯೆ. ಮಹಾರಾಷ್ಟ್ರದ ಈ ಪ್ರದೇಶದಲ್ಲಿಯ ಕನ್ನಡಿಗರು ಮರಾಠಿಗರೊಂದಿಗೆ ಒಡಹುಟ್ಟಿದವರಂತೆ ಅನ್ಯೋನ್ಯವಾಗಿದ್ದಾರೆ. ಬಹುಸಂಖ್ಯೆಯಲ್ಲಿ ಇದ್ದರೂ ಕೂಡ ಬಹುಸಂಖ್ಯಾತರಂತೆ ದಬ್ಬಾಳಿಕೆಗೆ ಇಳಿದಿಲ್ಲ. ಈ ಪ್ರದೇಶದ ಯಾವುದೇ ರಾಜಕೀಯ, ವ್ಯವಹಾರಿಕ, ಸಾಮಾಜಿಕ, ಸಾಂಸ್ಕೃತಿಕ ಆಗುಹೋಗುಗಳು ಕನ್ನಡಿಗರು ಇಲ್ಲದೆ ಸಾಧ್ಯವೇ ಇಲ್ಲ. ಇಂತಹ ಅನಿವಾರ್ಯತೆಯ ಸಂದರ್ಭದಲ್ಲಿಯೂ ಸೌಮ್ಯವಾಗಿಯೇ ವರ್ತಿಸುತ್ತ ಇಲ್ಲಿನ ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಹಾಗೆಂದು ಮರಾಠಿಗರನ್ನು, ಮರಾಠಿ ಭಾಷೆಯನ್ನು, ಮಹಾರಾಷ್ಟ್ರೀಯನ್ ಸಂಸ್ಕೃತಿಯನ್ನು ಕೀಳಾಗಿಯೂ ಕಂಡಿಲ್ಲ.

ಪ್ರಾಂತವಿಭಜನೆಯ ಸಂದರ್ಭದ ಸ್ಥಿತಿಗಿಂತ ಇಂದಿನ ಪರಿಸ್ಥಿತಿ ಬಹಳ ಬದಲಾಗಿದೆ. ಆರೇಳು ದಶಕಗಳ ಹಿಂದೆ ಈ ಪ್ರದೇಶದಲ್ಲಿ ಅಸಂಖ್ಯಾತ ಕನ್ನಡ ಶಾಲೆಗಳಿದ್ದವು. ವ್ಯವಹಾರ, ಕೊಡುಕೊಳ್ಳುವಿಕೆ ಕನ್ನಡದಲ್ಲಿಯೇ ಇತ್ತು. ಅಂಗಡಿ ಮುಂಗಟ್ಟುಗಳ ಮುಂದಿನ ಫಲಕಗಳೆಲ್ಲವೂ ಕನ್ನಡದಲ್ಲಿಯೇ ಇದ್ದವು. ಅಂದು ಈ ಪ್ರದೇಶಗಳಲ್ಲಿ ಕನ್ನಡ ಭಾಷೆಯೇ ಆಡಳಿತದಲ್ಲಿತ್ತು ಎಂಬುದನ್ನು ಇತಿಹಾಸ ಸಾರಿಹೇಳುತ್ತದೆ. ಈ ಪ್ರದೇಶದ ಸ್ಥಳನಾಮಗಳನ್ನು ಗಮನಿಸಿದರೆ ಅವೆಲ್ಲವೂ ಕರ್ನಾಟಕದಲ್ಲಿರುವ ಊರುಗಳ ಹೆಸರುಗಳಂತೆಯೇ ಇವೆ. ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ, ಚಾಲುಕ್ಯ, ಕದಂಬರು ಈ ಪ್ರದೇಶಗಳನ್ನು ಬಹಕಾಲದವರೆಗೆ ಆಳಿದ್ದಾರೆ. ಗೋದಾವರಿಯಿಂದ ಕಾವೇರಿಯವರೆಗೆ ಕನ್ನಡ ನಾಡು ವಿಶಾಲವಾಗಿ ಹಬ್ಬಿತ್ತು ಎಂಬುದಕ್ಕೆ ಸಾಕ್ಷಿಗಳು ಲಭಿಸಿವೆ. ಆ ದಿನಗಳಲ್ಲಿ ಇಂದಿನ ಸೊಲ್ಲಾಪುರ ಬಹುಶಃ ಅಖಂಡ ಕರ್ನಾಟಕದ ಮಧ್ಯಭಾಗವಾಗಿತ್ತು. ಹೀಗಾಗಿ ಸಹಜವಾಗಿಯೇ ಇಲ್ಲಿ ಕನ್ನಡ ಶತಶತಮಾನಗಳಿಂದಲೂ ಇತ್ತು ಎಂಬುದು ತಿಳಿಯುತ್ತದೆ. ಈ ಪ್ರದೇಶದಲ್ಲಿ ದೊರೆತಿರುವ ಹಲವಾರು ಶಾಸನಗಳು ಇದಕ್ಕೆ ಪುಷ್ಟಿ ನೀಡುತ್ತವೆ.

ಹನ್ನೆರಡನೆ ಶತಮಾನದಲ್ಲಿ ವಚನಕಾರ ಬಸವಣ್ಣ ಸೊಲ್ಲಾಪುರದ ಮಂಗಳವೇಢೆಯ ಆಸ್ಥಾನದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸುತ್ತ ಸುಮಾರು ಏಳು ವರ್ಷಗಳ ಕಾಲ ತಂಗಿದ್ದರು. ಸೊಲ್ಲಾಪುರ ವಚನಕಾರ ಸಿದ್ಧರಾಮನ ಜನ್ಮಭೂಮಿ ಮತ್ತು ಕರ್ಮಭೂಮಿ. ಅಲ್ಲಮಪ್ರಭು ಸೊಲ್ಲಾಪುರಕ್ಕೆ ಬಂದಿದ್ದರೆಂಬ ಉಲ್ಲೇಖಗಳು ಸಿಗುತ್ತವೆ. ಅಷ್ಟೇ ಅಲ್ಲದೆ, ವಚನಕಾರ ಅಮುಗೆ ದೇವಯ್ಯ ಇಲ್ಲಿನ ಪುಳುಜೆ ಗ್ರಾಮದನು, ವಚನಕಾರ ದಂಪತಿ ಗಜೇಶ ಮಸಣಯ್ಯ ಅವರು ಇಲ್ಲಿನ ಕರಜಗಿ ಗ್ರಾಮದವರು. ಅಂದಿನಿಂದಲೂ ಈ ಪ್ರದೇಶದಲ್ಲಿ ಕನ್ನಡ ಮನೆಮಾತಾಗಿತ್ತು ಎಂಬುದಕ್ಕೆ ಈ ವಚನಕಾರರ ವಚನಗಳೇ ಸಾಕ್ಷಿ. ಇಷ್ಟೆಲ್ಲ ಪುರಾವೆಗಳಿದ್ದರೂ ಇಂದು ಕನ್ನಡದ ಈ ಪ್ರದೇಶ ಗಡಿಯಾಚೆ ಉಳಿದಿದೆ.

ಗಡಿನಾಡ ಸಿಂಹಿಣಿ ಡಾ. ಜಯದೇವಿತಾಯಿ ಲಿಗಾಡೆಯವರು ‘ಧಡಿ ಗಟ್ಟಿಯಿದ್ದರೆ ಸೀರೆ, ಗಡಿ ಗಟ್ಟಿಯಿದ್ದರೆ ನಾಡು’ ಎಂದು ಹೇಳುತ್ತ ತಮ್ಮ ಕೊನೆಯ ಉಸಿರಿನವರೆಗೂ ಕನ್ನಡದ ಈ ಭಾಗ ಕರ್ನಾಟಕಕ್ಕೆ ಸೇರಬೇಕೆಂದು, ಈ ಪ್ರದೇಶದಲ್ಲಿನ ಕನ್ನಡ ಗಟ್ಟಿಯಾಗಬೇಕೆಂದು ಹೋರಾಡಿದರು. ಅವರ ಆಸೆ ಈಡೇರಲಿಲ್ಲ. ಒಂದು ರೀತಿಯಲ್ಲಿ ಹತಾಶೆಯೇ ಆಯಿತು. ಅವರು ಜೀವನದುದ್ದಕ್ಕೂ ಮಾಡಿದ ಸಂಘರ್ಷ ವಿಫಲವಾಯಿತು, ಕರ್ನಾಟಕದಲ್ಲಿ ವಿಲೀನಗೊಂಡು ಕನ್ನಡದ ನೆಲದಲ್ಲಿ ಬದುಕಬೇಕು ಎಂಬ ಅವರ ಇಚ್ಛೆ ನುಚ್ಚುನೂರಾಯಿತು. ಕೊನೆಪಕ್ಷ ತಾನು ಕನ್ನಡನಾಡಿನಲ್ಲಿಯೇ ಮಡಿಯಬೇಕು ಎಂದುಕೊಂಡು ಅವರು ಬಸವಕಲ್ಯಾಣಕ್ಕೆ ಸ್ಥಳಾಂತರಗೊಂಡು ಅಲ್ಲಿಯೇ ಕೊನೆಯುಸಿರೆಳೆದರು. ಜೂನ್ 23 ತಾಯಿಯವರ ಜನ್ಮದಿನ ಹಾಗೂ ಜುಲೈ 25 ಅವರ ಪುಣ್ಯತಿಥಿ. ಈ ನಿಮಿತ್ತವಾಗಿ ಆದರ್ಶ ಕನ್ನಡ ಬಳಗವು ಈ ಇಡೀ ಅವಧಿಯನ್ನು ತಾಯಿಯವರ ಸ್ಮರಣೆಗೆ ಮೀಸಲಿಟ್ಟಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕನ್ನಡಿಗರು ಎಂದೂ ಮರೆಯಬಾರದ ಘನವ್ಯಕ್ತಿತ್ವ ತಾಯಿಯವರದು.

ಇಂದು ಇದೆಲ್ಲವೂ ಸುಳ್ಳು ಎಂದೆನಿಸುವಂತಹ ಸ್ಥಿತಿಯಿದೆ. ನಮಗೆ ಎಲ್ಲವೂ ಮರೆತುಹೋಗುತ್ತಿದೆ. ಅಂದು ಕರ್ನಾಟಕದ ಹೃದಯಭಾಗದಲ್ಲಿದ್ದ ಈ ಪ್ರದೇಶಗಳು ಇಂದು ಕರ್ನಾಟಕದ ಹೊರಗಿವೆ. ಹಿಂದೆ ಅಚ್ಚಗನ್ನಡದ ನೆಲವಾಗಿದ್ದ ಈ ಪ್ರದೇಶಗಳಲ್ಲಿಯ ಕನ್ನಡ ಈಗ ಕ್ಷೀಣಿಸುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿದ್ದ ಶಾಲೆಗಳು ಬೆರಳೆಣಿಕೆಗೆ ತಲುಪಿವೆ. ಆಡಳಿತದಿಂದ ಕನ್ನಡ ಎಂದೋ ಹೊರದಬ್ಬಲ್ಪಟ್ಟಿದೆ, ಅಂಗಡಿ ಮುಂಗಟ್ಟುಗಳಲ್ಲಿದ್ದ ಕನ್ನಡ ಫಲಕಗಳು ಮಾಯವಾಗಿವೆ. ಇನ್ನೂ ದುರಂತವೆಂದರೆ ವಚನ ಪರಂಪರೆಯಲ್ಲಿ ಎಲ್ಲಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ ಸಿದ್ಧರಾಮನ ಸಮಾಧಿ ಸ್ಥಳದಲ್ಲಿ ಒಂದು ದಶಕದ ಮೊದಲಿನವರೆಗೂ ಇದ್ದ ಕನ್ನಡ ಭಾಷೆಯಲ್ಲಿನ ವಚನದ ಫಲಕಗಳೂ ಕಾಣೆಯಾಗಿದ್ದು, ಅವುಗಳ ಸ್ಥಳದಲ್ಲಿ ಮರಾಠಿ ಅನುವಾದಿತ ವಚನಗಳುಳ್ಳ ಫಲಕಗಳನ್ನು ಹಾಕಲಾಗಿದೆ. ಈಗ ಮಹಾರಾಷ್ಟ್ರದ ಈ ಜಿಲ್ಲೆಗಳಲ್ಲಿ ಎಲ್ಲಿಯೂ ಕನ್ನಡದ ಫಲಕಗಳು ಕಾಣುತ್ತಿಲ್ಲ. ಇವೆಲ್ಲವೂ ಹಂತ ಹಂತದಲ್ಲಿ ಆದ ಬದಲಾವಣೆಗಳು, ಎಲ್ಲವೂ ಸುನಿಯೋಜಿತ ಎಂದೆನಿಸುತ್ತದೆ.

ಹೀಗೆ ದಿನದಿಂದ ದಿನಕ್ಕೆ ಇಲ್ಲಿಯ ಕನ್ನಡ ಕ್ಷೀಣಿಸುವುದಕ್ಕೆ ಇರುವ ಹಲವಾರು ಕಾರಣಗಳಲ್ಲಿ ಮುಖ್ಯವಾದುದೆಂದರೆ ಇಲ್ಲಿನ ಕನ್ನಡ ಭಾಷೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಬಗೆಗಿನ ಇಚ್ಛಾಶಕ್ತಿಯ ಕೊರತೆ. ಜಯದೇವಿತಾಯಿ, ಕೈಯಾರ, ಪಾಪುರಂತಹ ಧಿಮಂತರು ಹೋದ ಮೇಲೆ ಕನ್ನಡವನ್ನು ಯಾರು ಉಳಿಸಬೇಕು? ಮತ್ತೆ ಇಂತಹ ಸಿಂಹಗಳು ಜನಿಸುತ್ತಾರೆಯೇ? ನೀವು ಕನ್ನಡಕ್ಕಾಗಿ, ಕನ್ನಡದ ನೆಲಕ್ಕಾಗಿ ಹೋರಾಡುವಿರಾ? ಅಥವಾ ಸೊಲ್ಲಾಪುರದ ಗೊಡವೆ ನಮಗೇಕೆ ಎನ್ನುವಿರಾ?

ಗಿರೀಶ ಜಕಾಪುರೆ. ಇವರು ಹೊಸತಲೆಮಾರಿನ ಕತೆಗಾರರರು, ಅನುವಾದಕರಾಗಿದ್ದು ಎರಡು ಭಿನ್ನ ಭಾಷೆಯ ಪರಂಪರೆಗಳನ್ನು ಪರಿಚಯಿಸುವ ಮತ್ತು ಬೆಸೆಯುವ ಅಂಕಣಗಳನ್ನು ನೀಡುತ್ತಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಮೈಂದರ್ಗಿಯಲ್ಲಿ ವಾಸವಿದ್ದಾರೆ.


ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...