ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಹಿನ್ನೆಲೆ ಮೂರನೇ ದಿನವೂ ಸಂಸತ್ತಿನ ಉಭಯ ಸದನಗಳ ಕಲಾಪ ಮುಂದೂಡಿಕೆಯಾಗಿದೆ.
ಆರಂಭದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಕಲಾಪ ಮುಂದೂಡಿಕೆಯಾಗಿದೆ. ನಂತರದ ಬೆಳವಣಿಗೆ ಕಾದು ನೋಡಬೇಕಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಕುರಿತು ಉಭಯ ಸದನಗಳಲ್ಲಿ ಚರ್ಚಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಪಕ್ಷಗಳು ಪ್ರತಿಭಟಿಸುತ್ತಿವೆ.
“ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಗಣಿಸುತ್ತಿಲ್ಲ. ಇದರಿಂದ ಕಲಾಪಕ್ಕೆ ಅಡ್ಡಿಯಾಗುತ್ತಿದೆ. ಕಲಾಪಕ್ಕೆ ತಡೆಯಾದರೆ, ಅದರ ಅತಿದೊಡ್ಡ ಫಲಾನುಭವಿ ಸರ್ಕಾರ” ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ ಬ್ರಿಯಾನ್ ಹೇಳಿದ್ದಾರೆ.
“ಸಂಸತ್ತು ಕಾರ್ಯ ನಿರ್ವಹಿಸದಿದ್ದರೆ ಅದರ ಲಾಭ ಯಾರಿಗೆ? ಸರ್ಕಾರಕ್ಕೆ. ಏಕೆಂದರೆ, ಸಂಸತ್ತಿನ ಜವಾಬ್ದಾರಿ ಸರ್ಕಾರದ ಮೇಲಿದೆ. ಜನರ ಜವಾಬ್ದಾರಿ ಸಂಸತ್ತಿನ ಮೇಲಿದೆ. ಸಂಸತ್ತೇ ಕಾರ್ಯನಿರ್ವಹಿಸದಿದ್ದರೆ ಸರ್ಕಾರಕ್ಕೆ ಯಾವ ಜವಾಬ್ದಾರಿಯೂ ಇರುವುದಿಲ್ಲ” ಎಂದು ಒಬ್ರಿಯಾನ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮುಂಗಾರು ಅಧಿವೇಶನವು ಒಟ್ಟು 190 ಗಂಟೆಗಳ ಕಾಲ ನಿಗದಿಯಾಗಿದ್ದು, ಅದರಲ್ಲಿ ಶೇ. 70ರಷ್ಟು ಸಮಯವನ್ನು ಸರ್ಕಾರಿ ವ್ಯವಹಾರಗಳಿಗೆ ಮೀಸಲಿಡಲಾಗಿದೆ ಎಂದು ವಿವರಿಸಿದ ಒಬ್ರಿಯಾನ್ ಅವರು, ಬ್ಲಾಗ್ ಪೋಸ್ಟ್‌ಗೆ ಲಿಂಕ್ ಒಂದನ್ನು ಹಂಚಿಕೊಂಡಿದ್ದಾರೆ. ವಿರೋಧ ಪಕ್ಷದ ಸಂಸದರು ಪ್ರಶ್ನೋತ್ತರ ಅವಧಿಗೆ ಅರ್ಧದಷ್ಟು ಪ್ರಶ್ನೆಗಳನ್ನು ಮತ್ತು ಶೂನ್ಯ ವೇಳೆಯ ನೋಟಿಸ್‌ಗಳನ್ನು ನೀಡುತ್ತಾರೆ. ಅವರಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಎತ್ತಲು 31 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಒಬ್ರಿಯಾನ್ ವಿವರಿಸಿದ್ದಾರೆ.
ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಚರ್ಚೆಗಳಿಗೆ ಅವಕಾಶ ನೀಡಲು ಪ್ರತಿ ಸದನದಲ್ಲಿ ಪ್ರತಿ ವಾರ ನಾಲ್ಕು ಗಂಟೆಗಳನ್ನು ಕಾಯ್ದಿರಿಸಬೇಕು ಮತ್ತು ಗಮನ ಸೆಳೆಯುವ ಪ್ರಸ್ತಾಪಕ್ಕಾಗಿ ಹೆಚ್ಚುವರಿಯಾಗಿ ಎರಡು ಗಂಟೆಗಳನ್ನು ಮೀಸಲಿಡಬೇಕು. ಇದು ಸರ್ಕಾರಿ ವ್ಯವಹಾರಗಳಿಗೆ 117 ಗಂಟೆಗಳು ಮತ್ತು ವಿರೋಧ ಪಕ್ಷಗಳಿಗೆ 49 ಗಂಟೆಗಳ ಸಮಯ ನೀಡುತ್ತದೆ. ಈ ಮಾದರಿಯು ‘ಹೆಚ್ಚು ನ್ಯಾಯಯುತ ವ್ಯವಸ್ಥೆ’ ಎಂದು ಒಬ್ರಿಯಾನ್ ಹೇಳಿದ್ದಾರೆ.
ಬಿಹಾರ ಮತದಾರರ ಪಟ್ಟಿಯಿಂದ 52 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಟ್ಟ ಚುನಾವಣಾ ಆಯೋಗ!


