ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಕ್ಫ್ (ತಿದ್ದುಪಡಿ) ಮಸೂದೆಯ ಕರಡು ವರದಿ ಮತ್ತು ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಮಾಡಿದ ಆವೃತ್ತಿಯನ್ನು ಬಹುಮತದಿಂದ ಅಂಗೀಕರಿಸಿದೆ ಎಂದು ಅಧ್ಯಕ್ಷ ಜಗದಾಂಬಿಕಾ ಪಾಲ್ ಬುಧವಾರ (ಜ.29) ತಿಳಿಸಿದ್ದಾರೆ.
ಸಮಿತಿಯ 16 ಸದಸ್ಯರು ಕರಡು ವರದಿಯ ಪರ ಮತ ಚಲಾಯಿಸಿದರೆ, 11 ಸದಸ್ಯರು ವಿರೋಧಿಸಿದ್ದಾರೆ ಎಂದು ಪಾಲ್ ಹೇಳಿದ್ದಾರೆ. ಸಂಸದೀಯ ಸಮಿತಿ ಸದಸ್ಯರಿಗೆ ತಮ್ಮ ಭಿನ್ನಾಭಿಪ್ರಾಯ ತಿಳಿಸಲು ಇಂದು ಸಂಜೆ 4 ಗಂಟೆಯವರೆಗೆ ಸಮಯ ನೀಡಲಾಗಿದೆ.
ಇಲ್ಲಿಯವರೆಗೆ, ತೃಣಮೂಲ ಕಾಂಗ್ರೆಸ್ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ನದಿಮುಲ್ ಹಕ್, ಡಿಎಂಕೆ ಸಂಸದ ಎ ರಾಜಾ, ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಅವರು ಔಪಚಾರಿಕವಾಗಿ ತಮ್ಮ ಭಿನ್ನಾಭಿಪ್ರಾಯವನ್ನು ಸಲ್ಲಿಸಿದ್ದಾರೆ.
ಅಂತಿಮ ವರದಿ ಪರಿಶೀಲಿಸಲು ತಮಗೆ ಕಡಿಮೆ ಸಮಯ ನೀಡಲಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ಸದಸ್ಯರು, ಕರಡು ವರದಿ ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ.
ಇದು “ಪ್ರಜಾಪ್ರಭುತ್ವ ವಿರೋಧಿ” ನಡೆ ಎಂದಿರುವ ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್, ಎಲ್ಲಾ ವಿರೋಧ ಪಕ್ಷದ ಸದಸ್ಯರು ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ.
ಜಗದಾಂಬಿಕಾ ಪಾಲ್ ಅವರು ಪರಿಷ್ಕೃತ ಮಸೂದೆಯನ್ನು ಗುರುವಾರ (ಜನವರಿ 30) ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸುವ ನಿರೀಕ್ಷೆಯಿದೆ.
ವಕ್ಫ್ (ತಿದ್ದುಪಡಿ) ಮಸೂದೆ- 2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ ನಂತರ, ಆಗಸ್ಟ್ 8, 2024 ರಂದು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗಿತ್ತು.
ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಜಾರಿಗೆ ತಂದ 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಗುರಿಯನ್ನು ಈ ಮಸೂದೆ ಹೊಂದಿದೆ.
ಸೋಮವಾರ (ಜನವರಿ 27) ಸಂಸದೀಯ ಸಮಿತಿಯು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಅಂಗೀಕರಿಸಿದೆ ಮತ್ತು ವಿರೋಧ ಪಕ್ಷದ ಸದಸ್ಯರು ಸೂಚಿಸಿದ ಎಲ್ಲಾ ತಿದ್ದುಪಡಿಗಳನ್ನು ತಿರಸ್ಕರಿಸಿದೆ.
ಅನುಮೋದಿತ ತಿದ್ದುಪಡಿಗಳಲ್ಲಿ ವಕ್ಫ್ ಸಮಿತಿಯಲ್ಲಿ ಮುಸ್ಲಿಮೇತರ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಒಂದು. ತಿದ್ದುಪಡಿಯ ಪ್ರಕಾರ, ವಕ್ಫ್ ಸಮಿತಿಗಳಲ್ಲಿ ಇಬ್ಬರು ಮುಸ್ಲಿಮೇತರರು ಸದಸ್ಯರಾಗಬಹುದು.
ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ಜೊತೆಗೆ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ವಕ್ಪ್‌ನ ಕೆಲ ಹುದ್ದೆಗಳಿಗೆ ನೇಮಿಸಲು ಅವಕಾಶ ನೀಡುವುದು ಮತ್ತು ವಕ್ಫ್ ನ್ಯಾಯಮಂಡಳಿಗಳ ಸದಸ್ಯರನ್ನು ಎರಡರಿಂದ ಮೂರಕ್ಕೆ ಹೆಚ್ಚಿಸುವುದು ತಿದ್ದುಪಡಿಗಳಲ್ಲಿ ಸೇರಿವೆ.


