ಅದಾನಿ ಲಂಚ-ವಂಚನೆ ಪ್ರಕರಣ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಇತರ ವಿಷಯಗಳ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆ ಹಿನ್ನೆಲೆ, ಸಂಸತ್ತಿನ ಉಭಯ ಸದನಗಳ ಕಲಾಪಗಳು ಮುಂದೂಡಲಾಗಿದೆ.
ಇಂದು (ನ.27) ಲೋಕಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ವಿವಿಧ ವಿಷಯಗಳ ಚರ್ಚೆಗೆ ಒತ್ತಾಯಿಸಿದರು. ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ಹಿನ್ನೆಲೆ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು. ಬಳಿಕ ಪುನರಾರಂಭಗೊಂಡಾಗ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. ಈ ಹಿನ್ನೆಲೆ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.
ಪ್ರತಿ ಸದಸ್ಯರ ಪ್ರತಿಭಟನೆ ವೇಳೆ, ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೋತ್ತರ ಅವಧಿಗೆ ಅವಕಾಶ ಕೊಡಿ. ನಂತರ ಪ್ರಸಕ್ತ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದು ಎಂದರು. ಆದರೆ, ಪ್ರತಿಪಕ್ಷ ಸದಸ್ಯರು ಮೊದಲು ಚರ್ಚೆಗೆ ಪಟ್ಟು ಹಿಡಿದರು. ಗದ್ದಲದ ನಡುವೆ ಒಂದು ಪ್ರಶ್ನೆಯನ್ನು ಕೇಳಲಾಯಿತು. ಸುಮಾರು 6 ನಿಮಿಷಗಳ ಕಲಾಪದ ಬಳಿಕ, ಸದನವನ್ನು ಮುಂದೂಡಲಾಯಿತು.
ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ
ಪ್ರತಿಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಗಳನ್ನೇ ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿ ಚರ್ಚೆಗೆ ಪಟ್ಟು ಹಿಡಿದವು. ಈ ಹಿನ್ನೆಲೆ ಆರಂಭದಲ್ಲಿ ಬೆಳಿಗ್ಗೆ 11.30ರವರೆಗೆ ಕಲಾಪ ಮುಂದೂಡಲಾಯಿತು. ಕಲಾಪ ಪುನರಾರಂಭಗೊಂಡಾಗ ಪ್ರತಿಪಕ್ಷ ಸದಸ್ಯರು ಮತ್ತೆ ಪ್ರತಿಭಟಿಸಿದರು. ಈ ಹಿನ್ನೆಲೆ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್ ಕಲಾಪವನ್ನು ನಾಳೆಗೆ (ನ.28) ಮುಂದೂಡಿದರು.
ಕಲಾಪ ಆರಂಭಗೊಂಡಾಗ, ಪಟ್ಟಿ ಮಾಡಲಾದ ವಿಷಯಗಳನ್ನು ಸದನದಲ್ಲಿ ಮಂಡಿಸಿದ ಕೂಡಲೇ, ಅಧ್ಯಕ್ಷ ಜಗದೀಪ್ ಧನ್ಕರ್ ಅವರು, ನಿಗದಿತ ಚರ್ಚೆಗಳನ್ನು ನಿಲ್ಲಿಸಿ ಅದಾನಿ ಸಮೂಹ, ಸಂಭಾಲ್ ಹಿಂಸಾಚಾರ ಮತ್ತು ದೆಹಲಿಯಲ್ಲಿ ಹೆಚ್ಚುತ್ತಿರುವ ಅಪರಾಧ ಘಟನೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಂತೆ ಕೋರಿ ನಿಯಮ 267 ರ ಅಡಿಯಲ್ಲಿ 18 ನೋಟಿಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ಆದರೆ, ಅವರು ನೋಟಿಸ್‌ಗಳನ್ನು ಸ್ವೀಕರಿಸಲಿಲ್ಲ. ಇದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು. ನಂತರ ಸಭಾಪತಿ ಕಲಾಪವನ್ನು ಮುಂದೂಡಿದರು.
ಇದನ್ನೂ ಓದಿ | ಮಣಿಪುರ: ನ.16ರಿಂದ ಪ್ರಾರಂಭವಾಗದ ಶಾಲಾ-ಕಾಲೇಜುಗಳು


