ಗುರುವಾರ (ಡಿ.19) ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ವೇಳೆ ಇಂಡಿಯಾ ಮತ್ತು ಎನ್‌ಡಿಎ ಬಣದ ಸಂಸದರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಂಸತ್ತಿನ ಆವರಣದಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ರಾಹುಲ್ ಗಾಂಧಿ ತಳ್ಳಿದ್ದರಿಂದ ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಕೇಶ್ ರಜಪೂತ್ ಅವರು ನೆಲಕ್ಕೆ ಬಿದ್ದು ಗಾಯಗಳಾಗಿವೆ ಎಂದು ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್, ಬಾನ್ಸುರಿ ಸ್ವರಾಜ್ ಮತ್ತು ಹೇಮಂಗ್ ಜೋಶಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಗುರುವಾರ ಸಂಜೆ ದೂರು ನೀಡಿದ್ದರು. ‘ಕೊಲೆಯತ್ನ’ ಮತ್ತು ಇತರ ಆರೋಪಗಳಡಿ ರಾಹುಲ್ ಗಾಂಧಿ ವಿರುದ್ದ ಪ್ರಕರಣ ದಾಖಲಿಸುವಂತೆ ಕೋರಿದ್ದರು.
ವಡೋದರಾ ಸಂಸದ ಹೇಮಂಗ್ ಜೋಶಿ ಅವರು ಸಲ್ಲಿಸಿರುವ ದೂರಿನಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿ ಸಂಸದರ ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ವರದಿಗಳ ಪ್ರಕಾರ, ರಾಹುಲ್ ಗಾಂಧಿ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 117 (ಸ್ವಯಂ ಪ್ರೇರಿತವಾಗಿ ನೋವುಂಟು ಮಾಡುವುದು), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆ), 131 (ಕ್ರಿಮಿನಲ್ ಬಲ ಪ್ರಯೋಗ), 351 (ಕ್ರಿಮಿನಲ್ ಬೆದರಿಕೆ) ಮತ್ತು 3(5) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್‌ನಿಂದ ಪ್ರತಿದೂರು
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಬಿಜೆಪಿ ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರ ನಿಯೋಗ ಗುರುವಾರ ಪೊಲೀಸ್ ದೂರು ದಾಖಲಿಸಿದೆ. ಬಿಜೆಪಿ ನಿಯೋಗ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ ಬಳಿಕ, ಕಾಂಗ್ರೆಸ್ ಪ್ರತಿದೂರು ನೀಡಿದೆ.
ಬಿಜೆಪಿ ಸಂಸದರು ಸಂಸತ್ ಭವನದ ಬಾಗಿಲ ಬಳಿ ನನ್ನನ್ನು ತಳ್ಳಿ ಹಲ್ಲೆ ಮಾಡಿದ್ದಾರೆ. ಇದರಿಂದ ಮೊಣಕಾಲಿಗೆ ಗಾಯವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆರೋಪಿಸಿ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಉಪರಾಷ್ಟ್ರಪತಿ ಧನಕರ್ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ವಜಾ


