ಇಂದಿನಿಂದ (ನ.29) ಸಂಸತ್ತಿನ 25 ದಿನಗಳ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಸೇರಿದಂತೆ 36 ಮಸೂದೆಗಳನ್ನು ಅಂಗೀಕರಿಸುವ ನಿರೀಕ್ಷೆಯಿದೆ. ಪೆಗಾಸಸ್ ಕಣ್ಗಾವಲು ಪ್ರಕರಣ ಮತ್ತು ಬೆಲೆ ಏರಿಕೆ ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿರುವ ಸಾಧ್ಯತೆಯಿದೆ.
ಭಾನುವಾರ ನಡೆದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾಗಿದ್ದರು. ಇದು ಸಂಪ್ರದಾಯದ ಉಲ್ಲಂಘನೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. “ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವ ಯಾವುದೇ ಸಂಪ್ರದಾಯ ಇರಲಿಲ್ಲ, ಇದನ್ನು ಮೋದಿ ಅವರು ಪ್ರಾರಂಭಿಸಿದರು” ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಚಳಿಗಾಲದ ಅಧಿವೇಶನದ 19 ಅಧಿವೇಶನಗಳಲ್ಲಿ, ಸರ್ಕಾರವು 36 ಶಾಸಕಾಂಗ ಮಸೂದೆಗಳು ಮತ್ತು ಒಂದು ಹಣಕಾಸು ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ.
ವಿವಾದಿತ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಮೊದಲ ದಿನ ಲೋಕಸಭೆಯಲ್ಲಿ ಪರಿಚಯಿಸಲು ಮತ್ತು ಅಂಗೀಕರಿಸಲು ನಿರ್ಧರಿಸಲಾಗಿದೆ. ಇದನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪರಿಚಯಿಸಲಿದ್ದಾರೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ತಮ್ಮ ಸಂಸದರಿಗೆ ಇಂದು ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿಗೊಳಿಸಿವೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್‌ಗೆ ಸಂಪುಟ ಒಪ್ಪಿಗೆ: ಅಧಿವೇಶನದ ಮೊದಲ ದಿನವೇ ಹಿಂತೆಗೆತ ಪ್ರಕ್ರಿಯೆ ಆರಂಭ
‘ಚಳಿಗಾಲದ ಅಧಿವೇಶನದ ಮೊದಲ ದಿನವೇ ಕೃಷಿ ಕಾಯ್ದೆಗಳ ಹಿಂತೆಗೆತ ಪ್ರಕ್ರಿಯೆ ಆರಂಭವಾಗಲಿದ್ದು, ಅದು ನಮ್ಮ ಆದ್ಯತೆಯ ಕರ್ತವ್ಯವಾಗಿದೆ. ಸಂಸತ್ತಿನ ಅಧಿವೇಶನದ ಮೊದಲ ದಿನದಿಂದಲೇ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ನವೆಂಬರ್ 19ರಂದು ಪ್ರಧಾನಿ ನೀಡಿದ್ದ ಭರವಸೆಯನ್ನು ಘೋಷಣೆಯಾದ ಐದು ದಿನಗಳಲ್ಲಿ ಈಡೇರಿಸಲಾಗಿದೆ. ಸಂಪುಟವು ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಹಿಂದೆ ತಿಳಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19 ರಂದು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು. ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಮನೆಗೆ ಹಿಂತಿರುಗಬೇಕು ಎಂದು ಮನವಿ ಮಾಡಿದ್ದರು.
ಆದರೆ, ಆಂದೋಲನವನ್ನು ತಕ್ಷಣವೇ ಹಿಂಪಡೆಯುವುದಿಲ್ಲ, ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ಅಧೀಕೃತವಾಗಿ ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಸರ್ಕಾರವು MSP ಜೊತೆಗೆ ರೈತರ ಇತರ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ರೈತ ನಾಯಕರು ತಿಳಿಸಿದ್ದರು.


