ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ, ಇಂಡಿಯಾ ಒಕ್ಕೂಟ ಬುಧವಾರ (ಡಿ.3) ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ದ ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿತು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಾಲ್ಕು ಕಾರ್ಮಿಕ ಸಂಹಿತೆಗಳು “ಕಾರ್ಪೊರೇಟ್ ಜಂಗಲ್ ರಾಜ್” ಉದ್ಧೇಶ ಹೊಂದಿದೆ. “ಕಾರ್ಪೊರೇಟ್ ಜಂಗಲ್ ರಾಜ್ ಬೇಡ, ಕಾರ್ಮಿಕರಿಗೆ ನ್ಯಾಯ ಬೇಕು” ಎಂದು ಬರೆದ ದೊಡ್ಡ ಬ್ಯಾನರ್ ಅನ್ನು ಪ್ರತಿಭಟನಾ ನಿರತರು ಹಿಡಿದಿದ್ದರು.
ಚಳಿಗಾಲದ ಅಧಿವೇಶನ ಪ್ರಾರಂಭಗೊಂಡ ಬಳಿಕ ಬುಧವಾರ ಮೊದಲ ಬಾರಿಗೆ ಉಭಯ ಸದನಗಳ ಕಲಾಪಗಳು ಸುಗಮವಾಗಿ ನಡೆಯುತ್ತಿವೆ. ಡಿಸೆಂಬರ್ 1ರಂದು ಆರಂಭಗೊಂಡ ಅಧಿವೇಶನದ ಮೊದಲ ಎರಡು ದಿನಗಳು ಎಸ್‌ಐಆರ್ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟಿಸಿದ ಕಾರಣ ಗದ್ದಲ ಉಂಟಾಗಿ ಕಲಾಪ ಮುಂದೂಡಿಕೆಯಾಗಿತ್ತು.
ಪ್ರತಿಪಕ್ಷಗಳು ಎರಡು ದಿನಗಳ ಕಾಲ ಪಟ್ಟು ಹಿಡಿದ ಕಾರಣ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ಮಂಗಳವಾರ ಸಂಜೆ ಸರ್ವಪಕ್ಷಗಳ ಸಭೆ ನಡೆಸಿದೆ. ಸಭೆಯಲ್ಲಿ ಡಿಸೆಂಬರ್ 9ರಂದು ಚುನಾವಣಾ ಬದಲಾವಣೆಗಳು ಎಂಬ ಹೆಸರಿನಲ್ಲಿ ಎಸ್‌ಐಆರ್ ಕುರಿತು ಚರ್ಚೆ ನಡೆಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಹಾಗಾಗಿ, ಬುಧವಾರ ಕಲಾಪಗಳು ಸುಗಮವಾಗಿ ನಡೆಯುತ್ತಿವೆ.


