ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮಾಡಿದ್ದಕ್ಕೆ ದಾಖಲಾದ ಮೂರು ಪ್ರಕರಣಗಳನ್ನು ಲಕ್ನೋಗೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ಜೊತೆಗೆ ಅವರ ಮಧ್ಯಂತರ ಜಾಮೀನನ್ನು ಏಪ್ರಿಲ್ 10 ರವರೆಗೆ ವಿಸ್ತರಿಸಿದೆ.
ಪವನ್ ಖೇರಾ ವಿರುದ್ಧ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಎರಡು ಎಫ್‌ಐಆರ್ ದಾಖಲಾಗಿವೆ. ಫೆಬ್ರವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ನಾಯಕ ಖೇರಾ ಅವರು, ಪ್ರಧಾನಿಯನ್ನು ”ನರೇಂದ್ರ ಗೌತಮ್‌ದಾಸ್ ಮೋದಿ” ಎಂದು ಉಲ್ಲೇಖಿಸಿದ್ದಾರೆ – ನರೇಂದ್ರ ದಾಮೋದರದಾಸ್ ಮೋದಿ ಬದಲಿಗೆ – ಅವರನ್ನು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರೊಂದಿಗೆ ಲಿಂಕ್ ಮಾಡುವ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಖೇರಾ ಅವರು ಮೋದಿ ಸರ್ಕಾರವನ್ನು ಟೀಕಿಸಿದರು, ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂದು ಆರೋಪಿಸಿದರು. ಈ ಕಂಪನಿ ಸಂಸ್ಥಾಪಕ ಗೌತಮ್ ಅದಾನಿ ಬಗ್ಗೆ ಪ್ರಧಾನಿ ಒಲವು ತೋರುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಖೇರಾ ಅವರು ಫೆಬ್ರವರಿ 23ರಂದು ದೆಹಲಿ ವಿಮಾನ ನಿಲ್ದಾಣದ ಇಂಡಿಗೋ ವಿಮಾನದಲ್ಲಿ ಪಕ್ಷದ ಇತರ ನಾಯಕರೊಂದಿಗೆ ಕಾಂಗ್ರೆಸ್‌ನ ಸರ್ವಸದಸ್ಯ ಅಧಿವೇಶನಕ್ಕಾಗಿ ರಾಯಪುರಕ್ಕೆ ತೆರಳುತ್ತಿದ್ದರು. ಆ ವೇಳೆ ಅಸ್ಸಾಂ ಪೊಲೀಸರು ಅವರನ್ನು ಕೆಳಗಿಳಿಸಿ ಬಂಧಿಸಿದ್ದರು. ಅದೇ ದಿನ ಖೇರಾ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಉತ್ತರ ಕ್ಯಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿಯ ಸದಸ್ಯ ಸ್ಯಾಮ್ಯುಯೆಲ್ ಚಾಂಗ್ಸನ್ ಅವರ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಖೇರಾ ಅವರ ಹೇಳಿಕೆಗಳು ”ಉನ್ನತ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು ಮಾನಹಾನಿ ಮತ್ತು ಅಪಖ್ಯಾತಿ ಮಾಡುವ ಮೂಲಕ ನಮ್ಮ ರಾಷ್ಟ್ರವನ್ನು ಕೀಳಾಗಿ ಮತ್ತು ಅಸ್ಥಿರಗೊಳಿಸುವ ವ್ಯಾಪಕ ಪಿತೂರಿಯ ಭಾಗವಾಗಿದೆ” ಎಂದು ಚಾಂಗ್ಸನ್ ಆರೋಪಿಸಿದ್ದಾರೆ.
ಸೋಮವಾರದ ವಿಚಾರಣೆಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಖೇರಾ ಅವರ ಮಧ್ಯಂತರ ಜಾಮೀನು ಮುಗಿದ ನಂತರ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದೆ.


