ಕನ್ನಡದ ಮಾಧ್ಯಮಗಳಾದ ಸುವರ್ಣ ಟಿವಿ, ಟಿವಿ9 ಮತ್ತು ಬಿಟಿವಿ ಕಚೇರಿಗಳ ಮುಂದೆ ‘ಆತ್ಮಾವಲೋಕನ ಸತ್ಯಾಗ್ರಹ’ ನಡೆಸಲು ತೆರಳುತ್ತಿದ್ದ ಸತ್ಯಾಗ್ರಹಿಗಳನ್ನು ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕನ್ನಡದ ಸುದ್ದಿ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ಜನರನ್ನು ದಾರಿ ತಪ್ಪಿಸುತ್ತಿರುವ ಹಿನ್ನಲೆಯಲ್ಲಿ ಅವರ ಕರ್ತವ್ಯವನ್ನು ನೆನಪಿಸಲು ಬೆಂಗಳೂರಿನ ಸಮಾನ ಮನಸ್ಕರ ಗುಂಪು ಸತ್ಯಾಗ್ರಹ ನಡೆಸಲು ಯೋಜಿಸಿದ್ದರು.
ಸತ್ಯಾಗ್ರಹವು ಬೆಳಿಗ್ಗೆ 09:30ಕ್ಕೆ ಪಬ್ಲಿಕ್ ಟಿವಿ ಕಚೇರಿಯಿಂದ ಪ್ರಾರಂಭವಾಗಿ, ನಂತರ 11:30ಕ್ಕೆ ಸುವರ್ಣ ಟಿವಿ ಕಚೇರಿಯ ಮುಂದೆ ತಲುಪಿ, ಅದರ ನಂತರ ಮಧ್ಯಾಹ್ನ 2 ಗಂಟೆಗೆ ಬಿಟಿವಿ ಕಚೇರಿ ಬಳಿ ತೆರಳಿ, ಸಂಜೆ 4 ಗಂಟೆಗೆ ಟಿವಿ9 ಕಚೇರಿ ಮುಂದೆ ಸೇರಲಿತ್ತು. ಆದರೆ ಸತ್ಯಾಗ್ರಹಿಗಳು ಪಬ್ಲಿಕ್ ಟಿವಿ ಮುಂದೆ ತೆರಳಿ ಅಲ್ಲಿನ ಮಾಧ್ಯಮ ಸಿಬ್ಬಂದಿಗೆ ಆಗ್ರಹಗಳ ಮನವಿ ಪತ್ರ ಸಲ್ಲಿಸಿ ಸುವರ್ಣ ಟಿವಿ ಕಚೇರಿಗೆ ತೆರಳುತ್ತಿದ್ದಾಗ, ಹೈಗ್ರೌಂಡ್ ಪೊಲೀಸರು ಸತ್ಯಾಗ್ರಹಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಂ. ಯುವರಾಜ್, “ಸತ್ಯಾಗ್ರಹಿಗಳನ್ನು ಪೊಲೀಸರು ಹೈಗ್ರೌಂಡ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನಾವು ಮೊದಲಿಗೆ ಪಬ್ಲಿಕ್ ಟಿವಿ ಕಚೇರಿ ಮುಂದೆ ಮೊದಲಿಗೆ ಹೋದೆವು. ಅವರು ನಮ್ಮನ್ನು ಬರಮಾಡಿಕೊಂಡು, ನಮಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
‘ನಾವು ಅವರಿಗೆ ಗುಲಾಬಿ ಕೊಟ್ಟು, ಮನವಿಯನ್ನು ನೀಡಿದೆವು, ಅವರು ಕೂಡಾ ನಮ್ಮ ಮನವಿಯನ್ನು ಸ್ವೀಕರಿಸಿದರು. ನಾವು ಶಾಂತಿಯುತವಾಗಿಯೆ ಗಾಂಧೀಜಿಯ ಭಜನೆಯಾದ ರಘುಪತಿ ರಾಘವ ರಾಜಾರಾಂ ಹಾಡಿ ಅಲ್ಲಿಂದ ತೆರಳಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಆದರೆ ಅಲ್ಲಿಂದ ಸುವರ್ಣ ಮತ್ತು ಬಿಟಿವಿ ಕಚೇರಿ ತೆಳುತ್ತಿದ್ದಾಗ ಪೊಲೀಸರು ಸತ್ಯಾಗ್ರಹಿಗಳನ್ನು ವಶಕ್ಕೆ ಪಡೆದಿದ್ದಾರೆ. “ಪಬ್ಲಿಕ್ ಟಿವಿ ಕಚೇರಿಯಿಂದ ನಾವು ಸುವರ್ಣ ಮತ್ತು ಬಿಟಿವಿ ಕಚೇರಿಗೆ ಹೊರಟಾಗ ಹೈಗ್ರೌಂಡ್ ಠಾಣೆಯ ಪೊಲೀಸರು ರಸ್ತೆಯಲ್ಲೇ ನಮ್ಮನ್ನು ತಡೆಹಿಡಿದರು” ಎಂದು ಯುವರಾಜ್ ನಾನುಗೌರಿ.ಕಾಂಗೆ ಹೇಳಿದ್ದಾರೆ.
ಇದನ್ನೂ ಓದಿ: ಪಬ್ಲಿಕ್, ಸುವರ್ಣ, ಟಿವಿ9 ಮತ್ತು ಪಬ್ಲಿಕ್ ಟಿವಿ ಕಚೇರಿ ಮುಂದೆ ಬುಧವಾರ ‘ಆತ್ಮಾವಲೋಕನ ಸತ್ಯಾಗ್ರಹ’
“ನಾವು ಪೊಲೀಸರೊಂದಿಗೆ ಪಬ್ಲಿಕ್ ಟಿವಿ ಕಚೇರಿಯಲ್ಲಿ ಮನವಿ ಮಾಡಿದಂತೆ ಬೇರೆ ಟಿವಿ ಕಚೇರಿ ಮುಂದೆಯು ಮನವಿ ಮಾಡಿ ಹೋಗುತ್ತೇವೆ ಎಂದು ತಿಳಿಸಿದೆವು. ಆದರೆ ವ್ಯಕ್ತಿಯೊಬ್ಬರು ಬಂದು, ‘ಸುವರ್ಣ ಕಚೇರಿ ಮುಂದೆ ಬರುವುದು ಬೇಡ. ಬಿಟಿವಿ ಮುಂದೆ ಕೂಡಾ ಬರುವುದು ಬೇಡ ಎಂದು ಅವರು ಹೇಳುತ್ತಿದ್ದಾರೆ’ ಎಂದು ಹೇಳಿದರು. ನಾವು ಅವರಿಗೆ ಒಂದು ಮನವಿ ಪತ್ರ ಕೂಡಾ ಕೊಡಲು ಅವಕಾಶ ಇಲ್ಲವೆ ಎಂದು ಕೇಳಿದೆವು. ಅಷ್ಟರಲ್ಲಿ ಹೈಗ್ರೌಂಡ್ ಠಾಣೆಯ ಪೊಲೀಸರು ನಮ್ಮನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನಾವು ಕಳೆದ ಒಂದು ಗಂಟೆಯಿಂದ 15 ಜನರು ಹೈಗ್ರೌಂಡ್ ಠಾಣೆಯಲ್ಲಿ ಇದ್ದೇವೆ” ಎಂದು ಯುವರಾಜ್ ಮಾಹಿತಿ ನೀಡಿದ್ದಾರೆ.
ತಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬ ಬಗ್ಗೆ ಒಂದು ಆತ್ಮಾವಲೋಕನ ಮಾಡಿಕೊಳ್ಳುವಂತೆ ಸತ್ಯಾಗ್ರಹಿಗಳು ಕನ್ನಡದ ಮಾಧ್ಯಮಗಳಿಗೆ ವಿನಂತಿಸಲಿದ್ದರು.


