Homeಮುಖಪುಟಅಸ್ಪೃಶ್ಯತಾ ನಿವಾರಣಾ ಸಂವಾದ ಸಭೆಯಲ್ಲಿ ಪೇಜಾವರ ಶ್ರೀ ಹೇಳಿದ್ದೇನು? - ಡಾ. ಬಿ.ಎಲ್. ವೇಣು

ಅಸ್ಪೃಶ್ಯತಾ ನಿವಾರಣಾ ಸಂವಾದ ಸಭೆಯಲ್ಲಿ ಪೇಜಾವರ ಶ್ರೀ ಹೇಳಿದ್ದೇನು? – ಡಾ. ಬಿ.ಎಲ್. ವೇಣು

ಬಸವ ಮಾದಾರಚನ್ನಯ್ಯ ಶರಣರು ಸದುದ್ವೇಶದಿಂದ ತಮ್ಮ ಮಾದಾರ ಪೀಠದಿಂದ ಏರ್ಪಡಿಸಿದ್ದ ಸಭೆಯು ಅರ್ಥಪೂರ್ಣವೆನ್ನಿಸಿದರೂ ಯಾವುದೇ ಸಮಸ್ಯೆಗೆ ಪರಿಹಾರ ಕಾಣದೆ ನೀರಸ ಮುಕ್ತಾಯ ಕಂಡಿತು.

- Advertisement -
- Advertisement -

ಚಿತ್ರದುರ್ಗದಲ್ಲಿ 2009 ಜನವರಿ 18 ರಂದು ನಡೆದ ‘ಅಸ್ಪೃಶ್ಯತಾ ನಿವಾರಣಾ ಸಂವಾದ’ ಕಾರ್ಯಕ್ರಮಕ್ಕೆಂದೇ ಅಸ್ಪೃಶ್ಯತೆಗೆ ಕಾರಣರಾದವರ ಪ್ರತಿನಿಧಿಯಂತಿಪ್ಪ ಶ್ರೀ ವಿಶ್ವೇಶತೀರ್ಥ ಪಾದಂಗಳವರನ್ನು ಕರೆಸಿ ಸಂವಾದ ಏರ್ಪಡಿಸಿದ್ದು ವಿಶೇಷ. ಆದರೆ ಅಲ್ಲೇನು ವಿಶೇಷ ವಿಷಯಗಳೇ ಪ್ರಸ್ತಾಪವಾಗಲಿಲ್ಲವೆಂದರೆ ಖಂಡಿತ ಕುಚೋದ್ಯವಲ್ಲ. ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಮೂರ್ತಿ ಮುರುಘ ಶರಣರೇನೋ ಅಸ್ಪೃಶ್ಯತೆ ತೊಲಗದ ಹೊರತುದೇಶ ಬಲಿಷ್ಠವಾಗದು, ದೇಶದ ಎಲ್ಲೆಡೆ ಕೆಡವುವ, ಭಾವನೆಗಳನ್ನು ಕೆರಳಿಸುವ ಕಾರ್ಯಗಳೇ ನಡೆಸಿವೆ. ಕಟ್ಟುವ ಕೆಲಸವಾಗುತ್ತಿಲ್ಲ. ಮೈಸೂರಿನಲ್ಲಿ ಮಡಿವಾಳರ ದೇವಸ್ಥಾನವನ್ನು ಕೆಡವಿದ ಬಗ್ಗೆಯೂ ಪ್ರಸ್ತಾಪಿಸುತ್ತಾ ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕರೆದೊಯ್ಯುವ ಅಗತ್ಯವಿದೆ. ಧರ್ಮವೆಂದರೆ ದಾಂಧಲೆ ಅಲ್ಲ. ಬಲಿಷ್ಠರು ದುರ್ಬಲರು ಎಂಬ ಭೇದ ಭಾವ ತೊಲಗಿ ಒಂದಾಗುವ ವಾತಾವರಣ ನಿರ್ಮಾಣವಾಗಬೇಕೆಂದು ಸಹಜವಾಗಿಯೇ ಪೇಜಾವವರಿಗೆ ಚುಚ್ಚುಮದ್ದು ನೀಡಿದರು.

ಆದರೆ ಕೃಶಗೊಂಡ ಅವರ ದೇಹವಾಗಲಿ, ಧರ್ಮದ ಸುಕ್ಕುಗಳನ್ನು ಎತ್ತಿತೋರುವ ಅವರ ಚರ್ಮಕ್ಕಾಗಲಿ ಸನಾತನ ಧರ್ಮದಿಂದಾಗಿ ಪಾಚಿಗಟ್ಟಿದ ಮನಕ್ಕಾಗಲಿ ಶರಣರು ನೀಡಿದ ಚುಚ್ಚುಮದ್ದು ನಾಟಿದಂತೆ ತೋರಲಿಲ್ಲ. ಎಲ್ಲರೂ ನಿರೀಕ್ಷಿಸಿದಂತೆಯೇ ಉಲಿದ ಪೇಜಾವರರು; ದೇವಸ್ಥಾನ ಕಟ್ಟಲು ದಲಿತರು ಬೇಕು ದರ್ಶನಕ್ಕೆ ಬೇಡವೆಂದರೆ ಹೇಗೆ ಎಂದು ದಲಿತರ ಬಗ್ಗೆ ವಾತ್ಸಲ್ಯ ಸುರಿಸುತ್ತಾ, ಹೀಗೆಲ್ಲ ನಡೆದರೆ ನಾವು ಅವರನ್ನು ಜೊತೆಗಿರಿ ಎಂದಾದರೂ ಹೇಳಲಿಕ್ಕುಂಟೆ? ಎಂದೆಲ್ಲಾ ಮಮ್ಮಲ ಮರುಗಿದರು. “ಮನಃ ಪರಿವರ್ತನೆಯಾಗಬೇಕಾಗಿರೋದು ದಲಿತರದ್ದಲ್ಲ. ಶೋಷಣೆ ಮಾಡಿದ ಉಳಿದ ಸಮದಾಯದವರೂ (ಅರ್ಥಾತ್ ಬ್ರಾಹ್ಮಣೇತರರು) ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕೆಂದು” ಅಪ್ಪಣೆಗೈದ ಶ್ರೀಗಳು ಕರ್ಮಠ ಬ್ರಾಹ್ಮಣರ ತಾರತಮ್ಯ ವರ್ತನೆ ಕುರಿತು ತುಟಿ ಬಿಚ್ಚಲಿಲ್ಲ! ನಾವು ಕನಕನ ಕಿಂಡಿಯನ್ನು ನವಗ್ರಹ ಕಿಂಡಿ ಅಂದಿಲ್ಲ. ಕೆಡವಿದ್ದು ಕನಕ ಗೋಪುರವಲ್ಲವೆಂದು ಬಡಬಡಿಸುತ್ತಾ ದಲಿತರೊಬ್ಬರು ಈ ದೇಶದ ಪ್ರಧಾನಿಯಾಗಬೇಕೆಂದು ತಿಪ್ಪೆ ಸಾರಿಸಿದರೇ ವಿನಹ ಕರ್ನಾಟಕದಲ್ಲಿ ದಲಿತರಿನ್ನೂ ಮುಖ್ಯಮಂತ್ರಿ ಪಟ್ಟಕ್ಕೇ ಏರಿಲ್ಲ. ಆದಕಾರಣ ಇಲ್ಲಿಯ ದಲಿತ ರಾಜಕಾರಣಿಯನ್ನು ಬೆಂಬಲಿಸುತ್ತೇನೆ ಎಂಬ ದಿಟ್ಟ ನಿಲುವು ತೋರದೆ ಮೂಗಿಗೆ ತುಪ್ಪ ಸವರಿದರು. ಬೌದ್ಧ ಧರ್ಮವು ಹಿಂದೂ ಧರ್ಮದ ಭಾಗ. ಅದು ಈ ದೇಶದಲ್ಲೇ ಹುಟ್ಟಿದ ಕಾರಣ ಈ ರೀತಿ ಹೇಳಿಕೆ ನೀಡಿದೆ. ನನಗೆ ಬೌದ್ಧ ಧರ್ಮದ ಬಗ್ಗೆ ಗೌರವವಿದೆ ಇತ್ಯಾದಿ ಇತ್ಯಾದಿ ಹೇಳಿ ‘ಕನಫೆಸ್’ ಮಾಡಿಕೊಂಡರು.

ಆಗ ಸಭೆಯಲ್ಲಿದ್ದ ಯುವ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ‘ಇಷ್ಟೆಲ್ಲಾ ದಲಿತರಲ್ಲಿ ಆಪ್ತತೆ ತೋರುವ ನೀವು ಅವರು ಕರೆದರೇಕೆ ಭೋಜನಕ್ಕೆ ಹೋಗಲಿಲ್ಲ? ಅಂತ ಪ್ರಶ್ನಿಸಿದರು. ಅವರನ್ನು ನಾನು ಚರ್ಚೆಗೆ ಕರೆದೆ. ಆ ಜನ ಬರಲಿಲ್ಲ ವಿಳಾಸವನ್ನೂ ಕೊಟ್ಟಿರಲಿಲ್ಲ. ಅಷ್ಟೇ ಅಲ್ಲ ನಾವು ಬ್ರಾಹ್ಮಣರೊಡನೆಯೂ ಕೂತು ಉಟ ಮಾಡುವುದಿಲ್ಲ. ಮದ್ಯ ಮಾಂಸ ಸೇವಿಸುವ ಜನರೊಂದಿಗೆ ಹೇಗೆ ಉಟ ಮಾಡಲು ಸಾಧ್ಯ? ನಮಗೆ ಊಟದಲ್ಲಿ ಕಟ್ಟುಪಾಡುಗಳಿವೆ. ಹಾಗಾಗಿ ಯಾರೊಡನೆಯೂ ಪಂಕ್ತಿ ಭೋಜನ ಮಾಡೋದಿಲ್ಲವೆಂಬ ಭಂಡ ಸಮರ್ಥನೆಗಿಳಿದರು.

ಮಾಡನಾಯ್ಕನಹಳ್ಳಿ ರಂಗಪ್ಪ; ಬೌದ್ಧ ಧರ್ಮದವರ ಮೇಲೆ ಶಂಕರಾಚಾರ್ಯ ಹಲ್ಲೆ ನಡೆಸಿದರು. ಸ್ತೂಪಗಳನ್ನು ಕೆಡವಿ ಕಗ್ಗೊಲೆ ಮಾಡಿಸಿದರು ಅದಕ್ಕೇನು ಹೇಳುತ್ತೀರಿ? ಎಂದು ಉದ್ವೇಗಗೊಂಡರು. ಆಗ ಪೇಜಾವರ ಶ್ರೀಗಳು; ನೋಡಿ ಈ ಕುರಿತು ನಮಗೆ ಸ್ಪಷ್ಟ, ಮಾಹಿತಿಯಲ್ಲ. ನಮಗೂ ಶಂಕರಾಚಾರ್ಯರಿಗೂ ಸಂಬಂಧವಿಲ್ಲ. ನಾವು ಮಧ್ವ ಅನುಯಾಯಿಗಳು. ಹಾಗೆಲ್ಲಾ ನಡೆದಿದ್ದರೆ ಅದನ್ನು ಇತಿಹಾಸ ತಜ್ಞರೊಡನೆ ಚರ್ಚಿಸೋಣವಂತೆ ಎಂದು ತಡಬಡಾಯಿಸಿದರು. ನಾಶವಾಗಬೇಕಾಗಿರೋದು ಅಸ್ಪೃಶ್ಯತೆಯಲ್ಲ ಸ್ವಾಮಿ ಜಾತಿಯತೆ ಎಂದು ಶಿವಣ್ಣ ದನಿ ಏರಿಸಿದಾಗ, “ಅದು ನನ್ನೊಬ್ಬನಿಂದ ಅಸಾಧ್ಯ. ಎಲ್ಲಾ ಮಠಾಧೀಶರೂ ಒಟ್ಟಾಗಬೇಕು ಸರ್ವರೂ ದಲಿತಕೇರಿಗೆ ಹೋಗಿ ಊಟ ಮಾಡಬೇಕು” ಎಂಬ ಫರ್ಮಾನು ಹೊರಡಿಸಿದರು ಪೇಜಾವರ, ಇಷ್ಟೆಲ್ಲಾ ಔದಾರ್ಯ ಪ್ರದರ್ಶಿಸುವ ಶ್ರೀಗಳು ಬ್ರಾಹ್ಮಣ ಯತಿಗಳಿಗಿರುವಂತೆಯೇ ಇತರರಿಗೂ ಊಟದಲ್ಲಿ ಕಟ್ಟುಪಾಡುಗಳೇನಾದರೂ ಉಂಟೆ ಎಂದು ಪಕ್ಕದಲ್ಲೇ ಇದ್ದ ಬ್ರಾಹ್ಮಣೇತರ ಸ್ವಾಮಿಗಳನ್ನು ವಿಚಾರಿಸುವ ಗೊಡವೆಗೇ ಹೋಗದಿದ್ದದು ‘ಜಾತಿಯ ಅಹಂ’ ಅವರಿಗೆಷ್ಟಿದೆ ಎಂಬುದರ ದ್ಯೋತಕವೆನಿಸಿತು. ಯಾರು ಏನೇ ಪ್ರಶ್ನೆಗಳು ಕೇಳಿದರೂ ಒಂದಿನಿತೂ ವಿಚಲಿತರಾಗದ ಅವರಲ್ಲಿ ಎಲ್ಲದಕ್ಕೂ ಸಿದ್ಧ ಉತ್ತರ, ಹಾರಿಕೆ ಉತ್ತರಗಳಿದ್ದವು.

ಸಭೆಯಲ್ಲಿದ್ದ ನನ್ನನ್ನು (ಬಿ.ಎಲ್. ವೇಣು) ಮಾತನಾಡಿರೆಂದು ಶ್ರೀ ಶಿವಮೂರ್ತಿ ಶರಣರೇ ಸೂಚಿಸಿದರು. ಆಗ ನಾನು ಹೇಳಿದ್ದಿಷ್ಟು: “ಶ್ರೀಗಳು ಸಿದ್ದ ಉತ್ತರಗಳೊಡನೆ ಬಂದಿದ್ದಾರೆ. ಅವರನ್ನು ಊಟಕ್ಕೆ ಕರೆದವರೇನು ಬಾಡೂಟಕ್ಕೆ ಕರೆದಿರಲಿಲ್ಲ. ಅಲ್ಲೂ ಸಸ್ಯಾಹಾರದ ಭೋಜನ ಏರ್ಪಾಡಾಗಿತ್ತು. ವಿಚಾರಿಸಿದ್ದರೆ ಆಹ್ವಾನಿಸಿದವರ ವಿಳಾಸ ತಿಳಿಯುವುದೇನು ಕಷ್ಟವಾಗುತ್ತಿರಲಿಲ್ಲ. ಆದರೆ ಪೇಜಾವರರ ಮಾತಿನ ವರಸೆಯೇ ಬೇರೆಯಾಗಿದೆ. ನಮ್ಮ ಊಟದಲ್ಲಿ ಕಟ್ಟುಪಾಡುಗಳಿವೆ ಅಂತಾರೆ. ಶಂಕರಾಚಾರಿ ಬೌದ್ಧ ಧರ್ಮದವರ ಮೇಲೆ ಹಲ್ಲೆ ಮಾಡಿದನೆಂದರೆ ಅದನ್ನು ಇತಿಹಾಸಕಾರರೊಡನೆ ಚರ್ಚಿಸೋಣ ಅಂತಾರೆ! ಜಾತಿ ನಾಶ ಮಾಡಲು ನನ್ನೊಬ್ಬನಿಂದ ಸಾಧ್ಯವಾಗುವುದಿಲ್ಲ ಅಂತಾರೆ. ಒಟ್ಟಿನಲ್ಲಿ ಇವರ ಕೈಲಿ ಏನು ಮಾಡಲೂ ಸಾಧ್ಯವಿಲ್ಲ ಬಿಡಿ” ಎಂದು ಲೇವಡಿ ಮಾಡಿದೆ.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರೆಲ್ಲಾ ದಲಿತರನ್ನು ಮಾನವೀಯವಾಗಿ ನೆಡೆಸಿಕೊಂಡರು ಸಮಾನತೆಗಾಗಿ ಕ್ರಾಂತಿ ಮಾಡಿದರು. ಆದರೆ ಅರ‍್ಯಾರು ಕಾವಿ ತೊಟ್ಟವರಲ್ಲ, ಸನ್ಯಾಸಿಗಳೂ ಅಲ್ಲ. ಕಾವಿ ತೊಟ್ಟವರಿಂದ ಈ ದೇಶದಲ್ಲಿ ಕ್ರಾಂತಿಯಾಗುತ್ತದೆಂಬುದು ಬರೀ ಭ್ರಮೆಯಷ್ಟೇ. ಜಾತ್ಯತೀತ ಮಠಗಳೆಂದು ಹೇಳಿಕೊಳ್ಳುವ ಎಲ್ಲಾ ಮಠಗಳು ಜಾತಿ ಮಠಗಳೇ, ಇಲ್ಲಿ ಯಾರೂ ಜಗದ್ಗುರುಗಳಲ್ಲ ಎಲ್ಲಾ ಜಾತಿ ಗುರುಗಳು.

ಜಾತಿಗೊಬ್ಬ ಸ್ವಾಮಿಗಳನ್ನು ಮಾಡುತ್ತಾ ಹೋದರೆ ಜಾತಿನಾಶ ಅದ್ಹೇಗೆ ಸಾಧ್ಯ? ಇದ್ಯಾವ ಸೀಮೆ ಬಸವತತ್ವ ಎಂದು ಶರಣರನ್ನೂ ಕೆಣಕಿದೆ. ಜಾತಿಗೊಬ್ಬ ಮಠಾಧಿಪತಿಗಳೆಲ್ಲಾ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಸರಿಸಮನಾಗಿ ಕೂತಿರುವುದನ್ನು ಇಂದು ಕಾಣುವಂತಾಗಿದೆ. ಅಷ್ಟರಮಟ್ಟಿಗೆ ಶರಣರು ಯಶಸ್ವಿ ಅಂತ ವಿಶ್ಲೇಷಿಸಿದೆ. “ಅಲ್ರಿ, ನಾವೇಕೆ ಪೇಜಾವರರ ಜೊತೆ ಕೂತು ಊಟ ಮಾಡಬೇಕು? ಅವರೇಕೆ ದಲಿತಕೇರಿಗೆ ದಯಮಾಡಿಸಬೇಕು? ಅವರ ಮಠಗಳು ದೇವಸ್ಥಾನಗಳಿಗೆ ನಾವೇಕೆ ಹೋಗಬೇಕು. ಸುಖಾಸುಮ್ಮನೆ ನಾವು ಅವರನ್ನು (ಬ್ರಹ್ಮಣರನ್ನು) ದೊಡ್ಡವರನ್ನಾಗಿ ಮಾಡುತ್ತಿದ್ದೇವೆ. ನಮಗೆ ನಮ್ಮದೇ ಆದ ಆಚಾರ ವಿಚಾರ ಗುಡಿಗಳಿವೆ. ಬಹು ಮುಖ್ಯವಾಗಿ ನಮ್ಮವರು ಓದಿ ವಿದ್ಯಾವಂತರಾಗಬೇಕು. ದಲಿತನೊಬ್ಬ ಜಿಲ್ಲಾಧಿಕಾರಿಯಾಗಿ ಕೂತರೆ ಬ್ರಾಹ್ಮಣ ಗುಮಾಸ್ತ ಸಲಾಂ ಹೊಡೆದು ತಲೆಬಾಗಿ ನಿಲ್ಲುತ್ತಾನೆ. ಸಮಾನತೆಯನ್ನು ವಿದ್ಯೆ ಅಧಿಕಾರದಿಂದ ಪಡೆಯಬೇಕೆ ಹೊರತು ಮೇಲ್ಜಾತಿಯವರಿಂದ ಅಂಗಲಾಚುವ ಅಗತ್ಯವಿಲ್ಲ” ಎಂದು ಆವೇಶಕ್ಕೆ ಒಳಗಾಗದೆ ತಣ್ಣಗೆ ಹೇಳಿ ಮುಗಿಸಿದೆ.

ಅದುವರೆಗೂ ಎಲ್ಲರ ಪ್ರಶ್ನೆಗಳಿಗೆ ತೋಚಿದ ಉತ್ತರ ನೀಡಿದ ಪೇಜಾವರರು ಉತ್ತರಿಸದೆ ಕೈಲಿದ್ದ ಮೈಕ್ ಅನ್ನು ಶರಣರ ಕೈಗೆ ರವಾನಿಸಿದರು. ಶರಣರು ಅದನ್ನು ನಂಜಾವಧೊತರ ಕೈಗಿಟ್ಟರು. ಅವರು “ವೇಣು ಹೇಳಿದ್ದರಲ್ಲಿ ಅರ್ಥವಿದೆ. ವಿದ್ಯೆಯಿಂದ ಅಧಿಕಾರ, ಅಧಿಕಾರದಿಂದ ಸಮಾನತೆ ಸಿಗುತ್ತದೆ. ನಮ್ಮವರು ವಿದ್ಯಾವಂತರಾಗಬೇಕೆಂದು” ಚುಟುಕು ಉತ್ತರ ನೀಡಿದರು. ಇದರಿಂದ ಸಮಾಧಾನಗೊಳ್ಳದ ನೆರೆದ ಜನ (ದಲಿತರೇ ಹೆಚ್ಚಾಗಿದ್ದರು) ಚರ್ಚಿಸಲು ನಿಂತಾಗ ಸಭೆಯನ್ನು ನಿಯಂತ್ರಿಸಲು ಆಯೋಜಕರು ಪರದಾಡುವಂತಾಯಿತು.

ಅಲ್ಲಿನ ಸಭೆಯಲ್ಲಿ ಮೇಲ್ವರ್ಗದ ಸಾಹಿತಿಗಳಾಗಲಿ, ಬುದ್ಧಿಜೀವಿಗಳಾಗಲಿ ಕಾಣದಿದ್ದದು ಅನಿರೀಕ್ಷಿತವೆನ್ನಿಸಲಿಲ್ಲ. ಅಚ್ಚರಿಯನ್ನೂ ಉಂಟು ಮಾಡಲಿಲ್ಲ. ನೀರಾವರಿ ಹೋರಾಟಗಾರ ದಲಿತ ಮುಖಂಡ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್, ಪತ್ರಕರ್ತ ಅರುಣಕುಮಾರ್ ಮುಂತಾದವರ ಹರಿತ ಪ್ರಶ್ನೆಗಳಿಗೆ ಉತ್ತರ ಸಿಕ್ಕದೆ ಹೋದಾಗ ಸಭೆ ಗದ್ದಲದ ಗೂಡಾಯಿತು. ಗದ್ದಲ ನಡೆದಿರುವಾಗಲೇ ಸಭೆ ಬರಖಾಸ್ತ್ ಆಯಿತು.

ಬಸವ ಮಾದಾರಚನ್ನಯ್ಯ ಶರಣರು ಸದುದ್ವೇಶದಿಂದ ತಮ್ಮ ಮಾದಾರ ಪೀಠದಿಂದ ಏರ್ಪಡಿಸಿದ್ದ ಸಭೆಯು ಅರ್ಥಪೂರ್ಣವೆನ್ನಿಸಿದರೂ ಯಾವುದೇ ಸಮಸ್ಯೆಗೆ ಪರಿಹಾರ ಕಾಣದೆ ನೀರಸ ಮುಕ್ತಾಯ ಕಂಡಿತು.

(2009ರಲ್ಲಿ “ಮಾದಾರ ಪೀಠ ಏರ್ಪಡಿಸಿದ್ದ ಸಭೆಯ ವರದಿ – ಪತ್ರಿಕೆಯೊಂದರಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...