ಶಿವಸೇನೆ ನಾಯಕ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಕೈಜೋಡಿಸಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದರು. ಈ ಬೆಳವಣಿಗೆಯಾದ ಮರುದಿನ ಸೋಮವಾರ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರು ಕರಾದ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ”ಮಹಾರಾಷ್ಟ್ರದ ಜನರು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಬಲಿಯಾಗುವುದಿಲ್ಲ” ಎಂದು ಹೇಳಿದ್ದಾರೆ.
ಪೂರ್ಣಿಮೆಯ ಸಂದರ್ಭದಲ್ಲಿ ಸತಾರಾ ಜಿಲ್ಲೆಯ ಕರಾದ್‌ನಲ್ಲಿರುವ ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಶರದ್ ಪವಾರ್ ಅವರು ಶಕ್ತಿ ಪ್ರದರ್ಶನವನ್ನು ಪ್ರದರ್ಶಿಸಿದರು.

”ಈ ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಾಮಾನ್ಯ ನಾಗರಿಕರನ್ನು ಸೇರಿಸಿಕೊಳ್ಳಬೇಕು ಎಂದು ವೈ ಬಿ ಚವಾಣ್ ಯಾವಾಗಲೂ ನಂಬಿದ್ದರು. ಅವರು ಹೊಸ ತಂಡವನ್ನು ರಚಿಸಿದರು ಮತ್ತು ಯುವ ತಂಡವನ್ನು ತಮ್ಮೊಂದಿಗೆ ಕರೆದೊಯ್ದರು. ಈ ತಂಡವು ದೇಶದ ಅಭಿವೃದ್ಧಿಗೆ ಕಾರಣವಾಗುವಂತೆ ಅವರು ನೋಡಿಕೊಂಡರು. ಅವರು ಈಗ ನಮ್ಮ ಜೊತೆಯಲ್ಲಿಲ್ಲದಿದ್ದರೂ, ಅವರ ಆಲೋಚನೆಗಳು ನಮ್ಮೊಂದಿಗಿವೆ” ಎಂದು ಎನ್‌ಸಿಪಿ ಮುಖ್ಯಸ್ಥರು ಹೇಳಿದರು.
ಸಾರ್ವಜನಿಕ ಸಭೆಯಲ್ಲಿ ಎನ್‌ಸಿಪಿ ಮುಖ್ಯಸ್ಥರು, ”ನಾವು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೆವು ಆದರೆ ನಮ್ಮ ಸರ್ಕಾರವನ್ನು ಕೆಲವರು ಉರುಳಿಸಿದರು. ದೇಶದ ಇತರ ಕೆಲವು ಭಾಗಗಳಲ್ಲಿ ದೆಹಲಿ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಸರ್ಕಾರಗಳು ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡುತ್ತಿವೆ. ಅವರ ಮೇಲೆ ದಾಳಿ ಮಾಡಲಾಗುತ್ತಿದೆ” ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
”ಇಂದು ಮಹಾರಾಷ್ಟ್ರ ಮತ್ತು ದೇಶದಲ್ಲಿ ಕೆಲವು ಗುಂಪುಗಳಿಂದ ಸಮಾಜದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬಿರುಕು ಮೂಡಿಸಲಾಗುತ್ತಿದೆ, ನಾವು ಬಿಜೆಪಿ ವಿರುದ್ಧ ನಿಲ್ಲಲು ಪ್ರಯತ್ನಿಸಿದ್ದೇವೆ, ಆದರೆ ದುರದೃಷ್ಟವಶಾತ್ ನಮ್ಮಲ್ಲಿ ಕೆಲವರು ಅವರಿಗೆ ಬಲಿಯಾದರು. ಸಾರ್ವಜನಿಕರ ಬೆಂಬಲದೊಂದಿಗೆ ಮತ್ತೆ ನಾವು ಶಕ್ತಿಯುತವಾಗಿ ಎದ್ದುನಿಲ್ಲುತ್ತೇವೆ. ಅದೇನೇ ಇದ್ದರೂ, ಮಹಾರಾಷ್ಟ್ರದ ಜನರು ಈ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಶರಣಾಗುವುದಿಲ್ಲ, ಮಹಾರಾಷ್ಟ್ರ ಮತ್ತೆ ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ” ಎಂದು ಶರದ್ ಪವಾರ್ ಗುಡುಗಿದರು.
ಅವರ ಸಾರ್ವಜನಿಕ ಭಾಷಣಕ್ಕೂ ಮುನ್ನ, ಪವಾರ್ ಅವರು ತಮ್ಮ ರಾಜಕೀಯ ಮಾರ್ಗದರ್ಶಕ ಮತ್ತು ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಪ್ರೀತಿ-ಸಂಗಮ್ ಸ್ಮಾರಕಕ್ಕೆ ಭೇಟಿ ನೀಡಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ: ‘ಮೊದಲು ಭಷ್ಟರ ಮೇಲೆ ದಾಳಿ ನಂತರ…’: ಪವಾರ್ ಸೇರ್ಪಡೆ ಬಳಿಕ ಬಿಜೆಪಿ ವಿರುದ್ಧ ಸಿಬಲ್ ವಾಗ್ದಾಳಿ


