Homeಮುಖಪುಟಹೊನ್ನಾಳಿ ಶಾಸಕರ ‘ಫೋನ್-ಇನ್ ಫಜೀತಿ ಪ್ರಸಂಗ'

ಹೊನ್ನಾಳಿ ಶಾಸಕರ ‘ಫೋನ್-ಇನ್ ಫಜೀತಿ ಪ್ರಸಂಗ’

- Advertisement -
‘ನರ್ಸ್ ಪ್ರೇಮ ಪ್ರಸಂಗ’ ಖ್ಯಾತಿಯ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯರ ನಸೀಬೇ ಅದ್ಯಾಕೊ ನೆಟ್ಟಗಿದ್ದಂತೆ ಕಾಣುತ್ತಿಲ್ಲ. ಕೈಯಿಟ್ಟಲ್ಲೆಲ್ಲ ಬಿಸಿ ಅನುಭವವೇ ತಾಕುತ್ತಿವೆ. ಯಡ್ಯೂರಪ್ಪನವರ ಸಂಪುಟದಲ್ಲಿ ಇನ್ನೇನು ಮಂತ್ರಿ ಆಗಿಯೇಬಿಟ್ಟೆ ಅಂತ ಅಣಿಯಾಗಿದ್ದ ರೇಣುಕಾಚಾರಿಯವರಿಗೆ ಹೈಕಮಾಂಡ್ ದೊಡ್ಡ ಶಾಕ್ ಕೊಟ್ಟಿತ್ತು.
- Advertisement -

ಇವರ ಮೇಲಿರುವ ಅಕ್ಕರೆಗಿಂತ ಹೆಚ್ಚಾಗಿ ಕಳೆದಸಲ ಮಂತ್ರಿಗಿರಿ ಸಿಗಲಿಲ್ಲವೆಂದು ಬೇಳೂರು ಜೊತೆ ಸೇರಿ ಗೋವಾ ಹೈಡ್ರಾಮಾ ಸೃಷ್ಟಿಸಿದ್ದ ರೇಣುಕಾಚಾರ್ಯರ ಐಲಾಟಗಳಿಗೆ ಬೆದರಿ ಪಾಪಾ ಯಡ್ಯೂರಪ್ಪನವರೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಬ ನಿರಾಶ್ರಿತ ಶಿಬಿರವೊಂದನ್ನು ವ್ಯವಸ್ಥೆ ಮಾಡಿ ಸದ್ಯಕ್ಕೆ ಸಮಾಧಾನ ಮಾಡಿದ್ದಾರೆ. ಆದರೆ ಅಲ್ಲೂ ಯಡವಟ್ಟುಗಳೇ ರೇಣುಕಾರನ್ನು ಕಾಡುತ್ತಿವೆ.

ಕೊರೊನಾ ಹರಡಿಸುತ್ತಿದ್ದಾರೆಂಬ ಕೋಮುಭ್ರಮೆಯಲ್ಲಿ ಮುಸ್ಲಿಮರನ್ನು ಗುಂಡಿಟ್ಟು ಕೊಲ್ಲಬೇಕು ಎಂಬರ್ಥದ ಬೇಜವಾಬುದಾರಿ ಹೇಳಿಕೆ ಕೊಟ್ಟು ಹಿಗ್ಗಾಮುಗ್ಗಾ ತರಾಟೆಗೆ ತುತ್ತಾಗಿದ್ದ ರೇಣುಕಾಚಾರಿ, ಮೊನ್ನೆ ‘ಕೊರೊನಾ ವಾರಿಯರ್ಸ್’ ಆಶಾ ಕಾರ್ಯಕರ್ತೆಯರನ್ನು ದೈಹಿಕ ಅಂತರವಿಲ್ಲದೆ ಕಿಷ್ಕಿಂಧೆಯಂತಹ ಕೋಣೆಯಲ್ಲಿ ತುರುಕಿ ಅವರ ಮುಂದೆ ಭಾಷಣ ಬಿಗಿಯಲು ಹೋಗಿ ಖುದ್ದು ಯಡ್ಯೂರಪ್ಪನವರಿಂದಲೇ ‘ಲಾಸ್ಟ್ ವಾರ್ನಿಂಗ್’ಗೆ ತುತ್ತಾಗಿದ್ದೂ ಉಂಟು. ಇದೀಗ ಮೀಡಿಯಾಗಳ ಮುಂದೆ ಬೊಗಳೆ ಬಿಲ್ಡಪ್ ತೆಗೆದುಕೊಳ್ಳಲು ಹೋಗಿ ಮಾಜಿ ಶಾಸಕ ಶಾಂತನಗೌಡರ ಕೈಗೆ ತಗುಲಿಕೊಂಡು ಕಣ್ಣ್ ಕಣ್ಣು ಬಿಡುತ್ತಿದ್ದಾರೆ.

ಆಗಿದ್ದಿಷ್ಟು. ಮೊನ್ನೆ ವಿಜಯವಾಣಿ ಪತ್ರಿಕೆ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರೇಣುಕಾಚಾರ್ಯರ ‘ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರಿಗಾಗಿ ತಾನು ತನ್ನ ಸ್ವಂತ ಹಣದಿಂದ ನೆರವು ನೀಡುತ್ತಿದ್ದೇನೆ. ಈಗಾಗಲೇ ಹತ್ತರಿಂದ ಹದಿನೈದು ಸಾವಿರ ರೇಷನ್ ಕಿಟ್ ವಿತರಿಸಿದ್ದೇನೆ. ಪ್ರತಿದಿನ ನೂರಾರು ಜನಕ್ಕೆ ಊಟ ಹಾಕಿಸುತ್ತಿದ್ದೇನೆ. ಇದೆಲ್ಲನ್ನು ನನ್ನ ಸ್ವಂತ ದುಡ್ಡಿನಿಂದಲೆ ಖರ್ಚು ಮಾಡಿದ್ದೇನೆ’ ಅಂತೆಲ್ಲ ದಾನಶೂರನ ಕಾಸ್ಟ್ಯೂಮು ಹಾಕಿಕೊಂಡು ಮಾತಾಡುತ್ತಿದ್ದರು.

ಆಗ ಅದೇ ಕಾರ್ಯಕ್ರಮಕ್ಕೆ ಫೋನಾಯಿಸಿದ ಮಾಜಿ ಶಾಸಕ ಶಾಂತನಗೌಡರು, ‘ಸ್ವಾಮಿ ಶಾಸಕರೇ, ನಾವೂ ಇದೇ ಹೊನ್ನಾಳಿ ತಾಲೂಕಿನಲ್ಲಿ ವಾಸವಿದ್ದೇವೆ. ಜನರ ಸಂಕಟಗಳಿಗೆ ಸ್ಪಂದಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಲೆ ಸಾಕಷ್ಟು ತಿರುಗಾಟವನ್ನೂ ಮಾಡುತ್ತಿದ್ದೇವೆ. ಅದೆಲ್ಲಿ ಹತ್ತದಿನೈದು ಸಾವಿರ ಕಿಟ್ ಕೊಟ್ಟಿದ್ದೀರಿ? ಅದ್ಯಾವಾಗ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ್ದೀರಿ? ಜನ ಈ ಪರಿ ನರಳಾಡುತ್ತಿರುವ ಸಂದರ್ಭದಲ್ಲು ಇಂಥಾ ಸುಳ್ಳುಗಳ ಮೂಲಕ ಇಮೇಜ್ ಸೃಷ್ಟಿಸಿಕೊಳ್ಳುವುದು ಎಷ್ಟು ಸರಿ. ಜನರ ಬವಣೆಗಿಂತ ನಿಮಗೆ ಇಂಥಾ ಗಿಮಿಕ್ ರಾಜಕಾರಣವೇ ಮುಖ್ಯವಾಯ್ತೆ? ನಿಜಕ್ಕು ನೀವು ಇಷ್ಟೆಲ್ಲ ವೈಯಕ್ತಿಕ ನೆರವು ನೀಡಿದ್ದರೆ ಅದನ್ನು ಎಲ್ಲರೆದುರು ಸಾಬೀತು ಮಾಡಿ, ನಾವೇ ಮುಂದೆ ನಿಂತು ನಿಮ್ಮ ಕಾರ್ಯ ಶ್ಲಾಘಿಸುತ್ತೇವೆ. ಸನ್ಮಾನವನ್ನೂ ಮಾಡುತ್ತೇವೆ’ ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ಮಾಜಿ ಶಾಸಕ ಶಾಂತನಗೌಡರು

ಆದರೆ ಅದಕ್ಕೆಲ್ಲ ಜಗ್ಗದ ರೇಣುಕಾರು ‘ನಾನು ಸುಳ್ಳು ಹೇಳುತ್ತಿಲ್ಲ. ಇದರಲ್ಲೆಲ್ಲ ನೀವು ರಾಜಕಾರಣ ಮಾಡಲು ಬರಬೇಡಿ. ಬೇಕಿದ್ದರೆ ತಾಲೂಕಾಫೀಸಿಗೆ ಬನ್ನಿ ಎಲ್ಲರೆದುರು ಸಾಬೀತು ಮಾಡ್ತೀನಿ’ ಅಂತ ಸವಾಲು ಹಾಕಿದ್ದರು. ಅಷ್ಟರಲ್ಲಿ ಲೈವ್ ಫೋನ್ ಇನ್ ಕಾರ್ಯಕ್ರಮದ ಕರೆ ‘ತಾಂತ್ರಿಕ’(!) ದೋಷದಿಂದ ಕಟ್ ಆಗಿದೆ.

ಕೊರೊನಾ ಪರಿಹಾರ ನೀಡದೇ ಶಾಸಕ ರೇಣುಕಾಚಾರ್ಯರಿಂದ ಬಿಟ್ಟಿ ಪ್ರಚಾರ.. ಮಾಜಿ ಶಾಸಕ ಶಾಂತನಗೌಡರಿಂದ ತರಾಟೆ.. ಚರ್ಚೆಗೆ ಬಾರದೇ ಓಡಿ ಹೋಗಿದ್ದೇಕೆ ಎಂಬ ಆಕ್ರೋಶ.#Renukacharya #Honnalli #Shantangowdaru

Posted by Naanu Gauri on Tuesday, April 28, 2020

ಅಂದಹಾಗೆ, ಕೆಲದಿನಗಳ ಹಿಂದಷ್ಟೆ ಇನ್ನೊಂದು ಪತ್ರಿಕೆಯವರ ಫೋನ್ ಇನ್ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರು ಭಾಗವಹಿಸಿದ್ದರು. ಆಗಲೂ ಮಾಜಿ ಶಾಸಕರು ಕರೆ ಮಾಡಿ ಇಂಥಾ ಪ್ರಶ್ನೆ ಕೇಳುತ್ತಿದ್ದಂತೆಯೇ ‘ತಾಂತ್ರಿಕ’ ದೋಷದಿಂದ ಕಟ್ ಆಗಿತ್ತು. ಎಂಥಾ ಕಾಕತಾಳೀಯ!

ಇತ್ತ ಇದನ್ನು ಗಂಭೀರವಾಗಿ ತೆಗೆದುಕೊಂಡ ಶಾಂತನಗೌಡರು ಏಪ್ರಿಲ್ 27ರ ಸೋಮವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮತ್ತಿತರ ಮುಖಂಡರ ಜೊತೆ ಸೀದಾ ತಹಶೀಲ್ದಾರ್ ತುಷಾರ್ ಬಿ.ಹೊಸೂರರ ಮುಂದೆ ಹಾಜರಾಗಿ ‘ಇಡೀ ತಾಲೂಕಿನಲ್ಲಿ ಲಾಕ್ ಡೌನ್ ಶುರುವಾದ ನಂತರ ಎಷ್ಟು ಜನರಿಗೆ ರೇಷನ್ ಕಿಟ್ ವಿತರಿಸಲಾಗಿದೆ. ಅದರಲ್ಲಿ ಶಾಸಕ ರೇಣುಕಾಚಾರ್ಯರ ತಮ್ಮ ಸ್ವಂತ ಹಣದಿಂದ ಎಷ್ಟು ಕಿಟ್ ಕೊಟ್ಟಿದ್ದಾರೆ? ದಿನಂಪ್ರತಿ ಇನ್ನೂರು ಮುನ್ನೂರು ಜನಕ್ಕೆ ಎಲ್ಲಿ ಊಟ ಹಾಕುತ್ತಿದ್ದಾರೆ? ತುಸು ಮಾಹಿತಿ ಕೊಡಿ ಸ್ವಾಮಿ’ ಎಂದು ಕೇಳಿದ್ದಾರೆ. ಆಗ ತಿಳಿದುಬಂದ ಸತ್ಯವೆಂದರೆ, ಲಾಕ್ ಡೌನ್ ಸಂತ್ರಸ್ತರಿಗೆ ನೀಡಲು ಸರ್ಕಾರ ಮತ್ತು ವಿವಿಧ ಸಂಘಸಂಸ್ಥೆಗಳು ನೀಡಿದ ಕಿಟ್ ಮತ್ತು ಸೌಲಭ್ಯಗಳನ್ನು ಜನಪ್ರತಿನಿಧಿಯಾಗಿ ಹಸ್ತಾಂತರ ಮಾಡಿದ್ದು ಬಿಟ್ಟರೆ ರೇಣುಕಾಚಾರಿಯವರು ವೈಯಕ್ತಿಕವಾಗಿ ಸ್ವಂತ ಹಣದಿಂದ ಏನನ್ನೂ ಮಾಡಿಲ್ಲ!

ಅದೇ ವೇಳೆಯಲ್ಲಿ ಶಾಸಕ ಸಾಹೇಬರು ತಹಶೀಲ್ದಾರ್ ಆಫೀಸಿನ ಪಕ್ಕದಲ್ಲೆ ಒಂದಷ್ಟು ಅಧಿಕಾರಿಗಳ ಜೊತೆ ಸಭೆಯಲ್ಲಿದ್ದರು. ಕೂಡಲೇ ಶಾಂತನಗೌಡರು ರೇಣುಕಾಚಾರಿಯವರಿಗೆ ಫೋನಾಯಿಸಿ ‘ನೀವು ಹಾಕಿದ ಸವಾಲಿನಂತೆ ನಾವೀಗ ತಹಶೀಲ್ದಾರ್ ಕಚೇರಿಯಲ್ಲೆ ಇದ್ದೇವೆ. ಬನ್ನಿ ಚರ್ಚೆಗೆ’ ಎಂದು ಕರೆದಿದ್ದಾರೆ. ಆಗ ತಡಬಡಾಯಿಸಿಹೋದ ರೇಣುಕಾಚಾರಿಯವರು ‘ನಾನು ಹಾಗೆ ಹೇಳಿಯೇ ಇಲ್ಲ, ನೀವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ, ನೀವು ಬೇಕಂತ ರಾಜಕಾರಣ ಮಾಡ್ತಿದೀರಿ’ ಎಂದು ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ಯಾವಾಗ ಶಾಂತನಗೌಡರು ಪ್ರವಾಹ ಸಂತ್ರಸ್ತ ನಿಧಿಯನ್ನು ಚರ್ಚೆಯೊಳಗೆ ಎಳೆದುತಂದು ‘ಕಳೆದ ವರ್ಷ ನಮ್ಮ ಜನ ಪ್ರವಾಹಕ್ಕೆ ತುತ್ತಾದಾಗ ಅವರ ನೆರವಿಗೆಂದು ಸಾರ್ವಜನಿಕರಿಂದ ಸಂಗ್ರಹವಾದ ಸುಮಾರು ನಲವತ್ತೇಳು ಲಕ್ಷ ಹಣ ಇವತ್ತಿಗೂ ಹೊನ್ನಾಳಿ ತಹಶೀಲ್ದಾರರ ಅಕೌಂಟಿನಲ್ಲೆ ಕೊಳೆಯುತ್ತಾ ಬಿದ್ದಿದೆ. ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಇಷ್ಟೊತ್ತಿಗೆ ಅದು ಸಂತ್ರಸ್ತರ ಕೈಸೇರುವಂತೆ ಮಾಡುವುದು ಶಾಸಕರಾಗಿ ನಿಮ್ಮ ಕರ್ತವ್ಯವಾಗಿತ್ತು. ಅದನ್ನೇ ನೀವು ಮಾಡಿಲ್ಲ. ಈಗ ಸ್ವಂತ ಹಣದಿಂದ ನೆರವು ನಿಡ್ತಿದೀನಿ ಅಂತ ಸುಳ್ಳು ಹೇಳ್ಕೊಂಡು ತಿರುಗಾಡ್ತಿದೀರಾ’ ಅಂತ ತರಾಟೆಗೆ ತೆಗೆದುಕೊಂಡರೊ ಆಗ ರೇಣುಕಾರು ತಬ್ಬಿಬ್ಬಾಗಿದ್ದಾರೆ. (ಪ್ರವಾಹದ ಸಂದರ್ಭದಲ್ಲಿ ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ನಡೆಸುತ್ತಾ ತಾನು ಸಂತ್ರಸ್ತರ ರಕ್ಷಣೆ ಮಾಡಿದೆ ಎಂದು ಬಿಂಬಿಸಿಕೊಳ್ಳಲು ಹೋಗಿ ಸಿಕ್ಕಾಪಟ್ಟೆ ಟ್ರೋಲ್‌ಗು ತುತ್ತಾಗಿದ್ದರು)

ಅಷ್ಟೊತ್ತಿಗೆ ತನ್ನ ತಾಳ್ಮೆ ಕಳೆದುಕೊಂಡ ರೇಣುಕಾಚಾರಿಯವರು ‘ಇದನ್ನೆಲ್ಲ ಕೇಳಕ್ಕೆ ನೀನ್ಯಾರು? ಮುಖ್ಯಮಂತ್ರಿಯಾ, ಪ್ರಧಾನಮಂತ್ರಿಯಾ, ರಾಷ್ಟ್ರಪತಿಯಾ? ನಿನಗೇನು ಹಕ್ಕಿದೆ’ ಅಂತೆಲ್ಲ ಏಕವಚನದಲ್ಲೆ ತನ್ನ ಸ್ಥಾನದ ಘನತೆಯನ್ನು ಮರೆತು, ತನಗಿಂತ ಹಿರಿವಯಸ್ಸಿನ ಒಬ್ಬ ಮಾಜಿ ಶಾಸಕನ ಮೇಲೆ ರೇಗಾಡಿದ್ದಾರೆ. ತಹಶೀಲ್ದಾರರ ಸಮ್ಮುಖದಲ್ಲೆ ಇಬ್ಬರ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆದಿದೆ. ನಂತರ ಯಥಾ ಪ್ರಕಾರ ರೇಣುಕಾಚಾರಿಯವರು ಫೋನ್ ಕಟ್ ಮಾಡಿದ್ದಾರೆ.

ಈ ಸುದ್ದಿ ತಾಲೂಕಿನಾದ್ಯಂತ ಹರಡುತ್ತಿದ್ದಂತೆಯೇ ಅದಕ್ಕೆ ಬೇರೊಂದು ಆಯಾಮವೂ ಸೇರಿಕೊಂಡಿದೆ. ತಮ್ಮ ಸಮುದಾಯದ ಹಿರಿಯ ರಾಜಕಾರಣಿಯನ್ನು ಏಕವಚನದಲ್ಲಿ ನಿಂದಿಸಿದ ಪಂಚಮಸಾಲಿ ಸಮುದಾಯದ ರೇಣುಕಾಚಾರಿಯ ವಿರುದ್ಧ ಸಾದರ ಲಿಂಗಾಯತರು ಗರಂ ಆಗಿದ್ದಾರೆಂಬ ಗುಲ್ಲೂ ಹರಡಿದೆ. ಕಾಂಗ್ರೆಸ್ ಪಕ್ಷವೂ ಶಾಸಕನ ಈ ದುರ್ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ಇವತ್ತು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದೆ.

ತಮ್ಮನ್ನು ತಾವು ಯಡ್ಯೂರಪ್ಪನವರ ಮಾನಸಪುತ್ರ ಅಂತ ಪ್ರೊಜೆಕ್ಟ್ ಮಾಡಿಕೊಂಡ ಶಿವಮೊಗ್ಗದ ಆಯುರ್ವೇದಿಕ್ ಕಾಲೇಜಿನ ಒಡೆಯ ರೇಣುಕಾಚಾರ್ಯರಿಗೆ ಹೊನ್ನಾಳಿಯಲ್ಲಿ ಗಟ್ಟಿ ನೆಲೆ ಸಿಕ್ಕಿದ್ದೇ ಯಡ್ಯೂರಪ್ಪನವರ ನಾಮಬಲದಿಂದ. ಆದರೆ ಬಿಜೆಪಿಯೊಳಗೆ ಸ್ವತಃ ಯಡ್ಯೂರಪ್ಪನವರೂ ಆಲ್ ಪವರ್‌ಫುಲ್ ಅಲ್ಲ. ಅವರೂ ದಿನನಿತ್ಯ ಸ್ಥಳೀಯ ತ್ರಿವಳಿಗಳು (ಮೂರು ಡಿಸಿಎಂಗಳು) ಮತ್ತು ಹೈಕಮ್ಯಾಂಡ್‌ನ ತ್ರಿವಳಿಗಳನ್ನು ಎದುರಿಸುತ್ತಲೇ ಇರಬೇಕು. ಕೊರೊನಾ ರೋಗ ವಕ್ಕರಿಸದಿದ್ದರೆ ಇಷ್ಟೊತ್ತಿಗಾಗಲೆ ಅವರನ್ನು ಸಿಎಂ ಗಾದಿಯಿಂದ ಕೆಳಗಿಳಿಸಿ ಅಲ್ಲಿಗೆ ಅರೆಸ್ಸೆಸ್ ಮೂಲದ ಬಿ.ಎಲ್.ಸಂತೋಷ್‌ರನ್ನು ಕೂರಿಸುತ್ತಾರೆಂಬ ವದಂತಿಗಳೂ ಹರಡಿ ಬೆಳೆಯುತ್ತಿದ್ದವು.

ಲಿಂಗಾಯತರು ಬಂಡಾಯವೇಳಬಾರದು ಎಂಬ ಕಾರಣಕ್ಕೆ ಉಮೇಶ್ ಕತ್ತಿ, ನಿರಾಣಿ, ಶೆಟ್ಟರ್, ಉದಾಸಿ, ರಾಜು ಕಾಗೆ ಮೊದಲಾದ ಲಿಂಗಾಯತ ಲೀಡರುಗಳನ್ನು ಮುಂದಿಟ್ಟುಕೊಂಡೇ ಯಡ್ಯೂರಪ್ಪನವರ ಕೆಳಗಿಳಿಸಲು ನೀಲನಕ್ಷೆ ಸಿದ್ಧವಾಗಿತ್ತೆಂದು ಬಿಜೆಪಿ ಮೂಲಗಳು ಹೇಳುತ್ತಿದ್ದವು. ಯಡ್ಯೂರಪ್ಪನವರ ಮಗ ವಿಜಯೇಂದ್ರನ ವಿರುದ್ಧ ಹರಿದಾಡಿದ ಪತ್ರದ ಹಕೀಕತ್ತು ಕೂಡಾ ಇದೇ ಯೋಜನೆಯ ಭಾಗವಾಗಿದ್ದು, ಕರ್ನಾಟಕದ ಕುರಿತಂತೆ ಕೇಂದ್ರ ಬಿಜೆಪಿ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆಗು ಯಡ್ಯೂರಪ್ಪನವರ ಮೇಲಿರುವ ಮುನಿಸೇ ಕಾರಣ ಎನ್ನಲಾಗುತ್ತಿದೆ. ಆದರೆ ಕೊರೊನಾ ಬಂದಿದ್ದರಿಂದ ಸದ್ಯದ ಮಟ್ಟಿಗೆ ಆ ಪ್ರಯತ್ನಗಳು ತೆರೆಮರೆಗೆ ಸರಿದಿವೆ. ಅವು ಯಾವುದೇ ಕ್ಷಣದಲ್ಲಾದರು ಮತ್ತೆ ಗರಿಗೆದರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇದೇ ರೇಣುಕಾಚಾರಿಯವರನ್ನು ಕಂಗೆಡಿಸುತ್ತಿರುವ ಸಂಗತಿ. ಯಡ್ಯೂರಪ್ಪನವರೇ ಬಿಜೆಪಿಯೊಳಗೆ ಮೂಲೆಗುಂಪಾದರೆ ಅವರ ಹಿಂಬಾಲಕರಾದ ತಮಗೆ ಭವಿಷ್ಯ ಇಲ್ಲ ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಹಾಗಾಗಿ ಆದಷ್ಟು ತನ್ನ ಸ್ವಂತ ಇಮೇಜ್ ಬೆಳೆಸಿಕೊಂಡು ಸೇಫ್ ಆಗಬೇಕೆಂದು ಹೀಗೆಲ್ಲ ಸರ್ಕಸ್ ಮಾಡಲು ಹೋಗಿ ಯಡವಟ್ಟುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಕಾನೂನು ಸಚಿವ ಮಾಧುಸ್ವಾಮಿಯವರಲ್ಲಿ ಒಂದು ಬಿನ್ನಹ : ಎಚ್.ಎಸ್ ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...