ಫ್ರೆಂಚ್ ಯುದ್ಧ ವಿಮಾನ ರಫೇಲ್ ತಯಾರಕರಾದ ಡಸಾಲ್ಟ್ ಕಂಪನಿಯು, 36 ರಫೇಲ್ ವಿಮಾನಗಳಿಗಾಗಿ ಭಾರತವು ಫ್ರಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಭಾರತದ ಮಧ್ಯವರ್ತಿಯೊಬ್ಬರಿಗೆ 1.1 ಮಿಲಿಯನ್ ಯೂರೋ ಪಾವತಿಸಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ PIL (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಅನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ವಕೀಲರೊಬ್ಬರು ಸಲ್ಲಿಸಿದ ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಸಂಸ್ಥೆ ‘ಎಜೆನ್ಸ್ ಫ್ರಾಂಕೈಸ್ ಆಂಟಿಕೊರಪ್ಷನ್ (ಎಎಫ್‌ಎ)’ ಅವರು ಡಸಾಲ್ಟ್ ಅವರ ಲೆಕ್ಕಪರಿಶೋಧನೆಯ ಸಮಯದಲ್ಲಿ ಭಾರತದ ಮಧ್ಯವರ್ತಿಯೊಬ್ಬರಿಗೆ 1.1 ಮಿಲಿಯನ್ ಯೂರೋ ಹಣ ಕೊಡುಗೆಯಾಗಿ ನೀಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ. “ರಾಫೇಲ್ ಜೆಟ್‌ಗಳ 50 ದೊಡ್ಡ ಪ್ರತಿಕೃತಿಗಳ ತಯಾರಿಕೆಗೆ ಪಾವತಿಸಲು ಈ ಹಣವನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿದೆ, ಆದರೆ ಈ ಮಾದರಿಗಳನ್ನು ತಯಾರಿಸಲಾಗಿದೆಯೆಂದು ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆ ನೀಡಲಾಗಿಲ್ಲ” ಎಂದು ಫ್ರೆಂಚ್ ಮಾಧ್ಯಮ ಮೀಡಿಯಾಪಾರ್ಟ್ ವರದಿ ಮಾಡಿತ್ತು.
ಅಗುಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ವಿ.ವಿ.ಐ.ಪಿ ಹೆಲಿಕ್ಯಾಪ್ಟರ್‌ಗಳ ಒಪ್ಪಂದದಲ್ಲಿ ಭಾರತದಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪದ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಸುಶೇನ್ ಗುಪ್ತಾ ನಡೆಸುತ್ತಿರುವ ಭಾರತೀಯ ಕಂಪನಿ ಡೆಫ್ಸಿಸ್ ಸೊಲ್ಯೂಷನ್ಸ್‌ನಿಂದ ಮೇಲಿನ ಹಣಕ್ಕೆ ರಶೀದಿ ನೀಡಲಾಗಿದೆ. ಭಾರತದ ಡಸಾಲ್ಟ್‌ನ ಉಪ ಗುತ್ತಿಗೆದಾರರಲ್ಲಿ ಡೆಫ್ಸಿಸ್ ಕೂಡ ಒಂದಾಗಿದೆ. ಹೆಲಿಕ್ಯಾಪ್ಟರ್ ಡೀಲ್ ಪ್ರಕರಣದಲ್ಲಿ ಸುಶೇನ್ ಗುಪ್ತಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಈಗ ಜಾಮೀನು ನೀಡಲಾಗಿದೆ. ಅವರ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಭಾರತವು ಫ್ರಾನ್ಸ್‌ನಿಂದ 36 ಫೈಟರ್ ಜೆಟ್‌ಗಳನ್ನು 2016 ರಲ್ಲಿ, 59,000 ಕೋಟಿ ರೂ ಹಣ ನೀಡಿ ಅಂತರಾಷ್ಟ್ರೀಯ ಒಪ್ಪಂದದಲ್ಲಿ ಖರೀದಿಸಿತ್ತು.
ಇದನ್ನೂ ಓದಿ: ರಫೇಲ್ ಒಪ್ಪಂದಕ್ಕಾಗಿ ಭಾರತೀಯ ಮಧ್ಯವರ್ತಿಗೆ 1 ಮಿಲಿಯನ್ ಯೂರೋ ನೀಡಲಾಗಿದೆ: ವರದಿ


