PC:CNBCTV18

ಫ್ರೆಂಚ್ ಯುದ್ಧ ವಿಮಾನ ರಫೇಲ್ ತಯಾರಕರಾದ ಡಸಾಲ್ಟ್ ಕಂಪನಿಯು, 36 ರಫೇಲ್‌ ವಿಮಾನಗಳಿಗಾಗಿ ಭಾರತವು ಫ್ರಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಭಾರತದ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯೂರೋ ಪಾವತಿಸಿದೆ ಎಂದು ದೇಶದ ಭ್ರಷ್ಟಾಚಾರ-ವಿರೋಧಿ ಏಜೆನ್ಸಿಯ ತನಿಖೆಯನ್ನು ಉಲ್ಲೇಖಿಸಿ ಫ್ರೆಂಚ್ ಪತ್ರಿಕೆ “ಮೀಡಿಯಾಪಾರ್ಟ್” ಆರೋಪಿಸಿದೆ.

ಆ ಮಧ್ಯವರ್ತಿಯು ಮತ್ತೊಂದು ರಕ್ಷಣಾ ಒಪ್ಪಂದದಲ್ಲಿ ಮನಿ ಲಾಂಡರಿಂಗ್ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರಫೇಲ್ ಜೆಟ್‌ಗಳ 50 ಪ್ರತಿಕೃತಿಗಳ ತಯಾರಿಕೆಗೆ ಪಾವತಿಸಲು ಈ ಹಣವನ್ನು ಬಳಸಲಾಗಿದೆ ಎಂದು ಡಸಾಲ್ಟ್ ಹೇಳಿದೆ. “ರಾಫೇಲ್ ಜೆಟ್‌ಗಳ 50 ದೊಡ್ಡ ಪ್ರತಿಕೃತಿಗಳ ತಯಾರಿಕೆಗೆ ಪಾವತಿಸಲು ಈ ಹಣವನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿದೆ, ಆದರೆ ಈ ಮಾದರಿಗಳನ್ನು ತಯಾರಿಸಲಾಗಿದೆಯೆಂದು ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆ ನೀಡಲಾಗಿಲ್ಲ” ಎಂದು ಮೀಡಿಯಾಪಾರ್ಟ್ ವರದಿ ಮಾಡಿದೆ.

ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಸಂಸ್ಥೆ ‘ಎಜೆನ್ಸ್ ಫ್ರಾಂಕೈಸ್ ಆಂಟಿಕೊರಪ್ಷನ್ (ಎಎಫ್‌ಎ)’ ಅವರು ಡಸಾಲ್ಟ್ ಅವರ ಲೆಕ್ಕಪರಿಶೋಧನೆಯ ಸಮಯದಲ್ಲಿ ಈ ಸಂಗತಿಗಳು ಹೊರಬಿದ್ದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಎಎಫ್‌ಎ, ಈ ಪ್ರಕರಣವನ್ನು ಪ್ರಾಸಿಕ್ಯೂಟರ್‌ಗಳಿಗೆ ಉಲ್ಲೇಖಿಸದಿರಲು ನಿರ್ಧರಿಸಿದೆ ಎಂದು ಅದು ಹೇಳಿದೆ.

“2017 ರ ಒಟ್ಟು ವ್ಯವಹಾರ ಗಮನಿಸಿದಾಗ 5,08,925 ಯೂರೋಗಳಷ್ಟು ವೆಚ್ಚವನ್ನು ‘ಗ್ರಾಹಕರಿಗೆ ಉಡುಗೊರೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ತರಲಾಗಿದೆ. ಇದು ಎಎಫ್‌ಎ ಅಧಿಕಾರಿಗಳನ್ನು ಆಶ್ಚರ್ಯಗೊಳಿಸಿದೆ ಎಂದು ವರದಿ ತಿಳಿಸಿದೆ.

ಅಗುಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ವಿ.ವಿ.ಐ.ಪಿ ಹೆಲಿಕ್ಯಾಪ್ಟರ್‌ಗಳ ಒಪ್ಪಂದದಲ್ಲಿ ಭಾರತದಲ್ಲಿ ಕಿಕ್‌ಬ್ಯಾಕ್‌ ಪಡೆದ ಆರೋಪದ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಸುಶೇನ್ ಗುಪ್ತಾ ನಡೆಸುತ್ತಿರುವ ಭಾರತೀಯ ಕಂಪನಿ ಡೆಫ್ಸಿಸ್ ಸೊಲ್ಯೂಷನ್ಸ್‌ನಿಂದ ಮೇಲಿನ ಹಣಕ್ಕೆ ರಶೀದಿ ನೀಡಲಾಗಿದೆ. ಭಾರತದ ಡಸಾಲ್ಟ್‌ನ ಉಪ ಗುತ್ತಿಗೆದಾರರಲ್ಲಿ ಡೆಫ್ಸಿಸ್ ಕೂಡ ಒಂದಾಗಿದೆ. ಹೆಲಿಕ್ಯಾಪ್ಟರ್ ಡೀಲ್ ಪ್ರಕರಣದಲ್ಲಿ ಸುಶೇನ್ ಗುಪ್ತಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಈಗ ಜಾಮೀನು ನೀಡಲಾಗಿದೆ.

ಮಾರ್ಚ್ 30, 2017 ರ ಡೆಫ್ಸಿಸ್ ಸೊಲ್ಯೂಷನ್ಸ್‌ನ ರಶೀದಿ ನೋಡಿದರೆ ಇದು “ಸಾಮಾನ್ಯ ಉಡುಗೊರೆಗಿಂತ ದೊಡ್ಡದಾಗಿದೆ” ಎಂದು ಡಸಾಲ್ಟ್ ಕಂಪನಿ ಸಮರ್ಥಿಸಿಕೊಳ್ಳಲು ಮುಂದಾಗಿತ್ತು ಎನ್ನಲಾಗಿದೆ.

ರಫೇಲ್ ಜೆಟ್‌ಗಳ 50 ಪ್ರತಿಕೃತಿಗಳ ತಯಾರಿಕೆಗಾಗಿ 10,17,850 ಯುರೋಗಳಷ್ಟು ಹಣದ 50 ಪ್ರತಿಶತವನ್ನು ಡೆಫ್ಸಿಸ್‌ಗೆ ಪಾವತಿಸಲಾಗಿದೆ ಎಂದು ರಶೀದಿ ಸೂಚಿಸಿದೆ. ಅಂದರೆ ಪ್ರತಿ ಮಾದರಿಯ ಬೆಲೆ 20,000 ಯೂರೋಗಳಿಗಿಂತ ಹೆಚ್ಚಾಗಿದೆ!

ಆದರೆ ಆ ಪ್ರತಿಕೃತಿಗಳನ್ನು ತಯಾರಿಸಿರುವುದರ ಕುರಿತು ಯಾವುದೇ ಸಾಕ್ಷ್ಯಗಳು ಮತ್ತು ಗ್ರಾಹಕರಿಗೆ ಅಂತಹ ದೊಡ್ಡ ಉಡುಗೊರೆ ನೀಡಿದ್ದು ಏಕೆ ಎಂಬುದರ ಕುರಿತು ಡಸಾಲ್ಟ್ ಯಾವುದೇ ವಿವರಣೆ ನೀಡಿಲ್ಲ ಎಂದು ಮೀಡಿಯಾಪಾರ್ಟ್ ಆರೋಪಿಸಿದೆ.

ಈ ಆರೋಪಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದೆ.

ಫ್ರೆಂಚ್ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಎಫ್‌ಎ ನಡೆಸಿದ ತನಿಖೆಯಲ್ಲಿ 2016 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಡಸಾಲ್ಟ್ 1.1 ಮಿಲಿಯನ್ ಯೂರೋವನ್ನು ಮಧ್ಯವರ್ತಿಯೊಬ್ಬರಿಗೆ (ಡೆಫ್ಸಿಸ್ ಸೊಲ್ಯೂಷನ್ಸ್) ಪಾವತಿಸಿದೆ ಎಂದು ತಿಳಿದುಬಂದಿದೆ. ಈ ಮೊತ್ತವನ್ನು ‘ಗ್ರಾಹಕರಿಗೆ ಉಡುಗೊರೆಗಳು’ ಎಂದು ಡಸಾಲ್ಟ್ ಕಂಪನಿಯು ಖರ್ಚು ಲೆಕ್ಕದಲ್ಲಿ ತೋರಿಸಲಾಗಿದೆ” ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಹೇಳಿದ್ದಾರೆ.

“ವಾಸ್ತವದಲ್ಲಿ ಎಷ್ಟು ಲಂಚ ಮತ್ತು ಕಮಿಷನ್ ಅನ್ನು ಪಾವತಿಸಲಾಗಿದೆ? ಮತ್ತು ಭಾರತ ಸರ್ಕಾರದಲ್ಲಿ ಯಾರಿಗೆ ನೀಡಲಾಗಿದೆ ಎಂದು ಕಂಡುಹಿಡಿಯಲು ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದದ ಬಗ್ಗೆ ಪೂರ್ಣ ಮತ್ತು ಸ್ವತಂತ್ರ ತನಿಖೆಯ ಅಗತ್ಯವಿಲ್ಲವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಇದನ್ನೂ ಓದಿ: ರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣ – ರಫೇಲ್ ಡೀಲ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here