Homeಮುಖಪುಟವಿಶೇಷ ವರದಿ: ರಂಗೇರಿದ ಕಸಾಪ ಚುನಾವಣೆ; ಮಹಿಳಾ ಅಧ್ಯಕ್ಷರಿಗಾಗಿ ಹೆಚ್ಚಿದ ಕೂಗು

ವಿಶೇಷ ವರದಿ: ರಂಗೇರಿದ ಕಸಾಪ ಚುನಾವಣೆ; ಮಹಿಳಾ ಅಧ್ಯಕ್ಷರಿಗಾಗಿ ಹೆಚ್ಚಿದ ಕೂಗು

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಚುನಾವಣೆಗೆ ಅಧಿಕೃತ ದಿನಾಂಕ ಘೋಷಣೆಯಾಗಿದ್ದು ಈ ಬಾರಿಯ ಚುನಾವಣೆಯು ನಾನಾ ಕಾರಣಗಳಿಗೆ ವಿಶೇಷವೆನಿಸಿದೆ. ಮೊದಲನೆಯದಾಗಿ, ಕಸಾಪ ಆರಂಭವಾಗಿ 100 ವರ್ಷಗಳು ಕಳೆದರೂ ಇದಕ್ಕೆ ಒಬ್ಬ ಮಹಿಳಾ ಅದ್ಯಕ್ಷರು ಕೂಡ ಆಯ್ಕೆಯಾಗದಿರುವುದು ವಿಷಾದದ ಸಂಗತಿ. ಆದರೆ ಈ ಬಾರಿ ಕಸಾಪಗೆ ಮಹಿಳಾ ಅಧ್ಯಕ್ಷರೇ ಆಗಬೇಕು ಎಂಬ ಕೂಗು ರಾಜ್ಯದಾದ್ಯಂತ ಬಲವಾಗಿ ಕೇಳಿಬರುತ್ತಿದೆ. ಇನ್ನು ಎರಡನೆಯದಾಗಿ, ಕನ್ನಡದ ಅಸ್ಮಿತೆಯ ಮೇಲೆ ತೀವ್ರ ದಾಳಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಸಾಪ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಕನ್ನಡ-ಕರ್ನಾಟಕದ ಮೇಲಾಗುತ್ತಿರುವ ದಾಳಿಯನ್ನು ತಪ್ಪಿಸಲು, ಮುಂದೆ ಅಧ್ಯಕ್ಷಗಾದಿ ಹಿಡಿಯುವವರು ಯಾವ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ ಎನ್ನುವುದು ಈಗ ಪ್ರಮುಖ ವಿಷಯವಾಗಿದೆ.

ಇನ್ನು ಮೂರನೆಯದಾಗಿ, 2016ರಲ್ಲಿ ಕಸಾಪದ ಅಧ್ಯಕ್ಷರಾಗಿದ್ದ ಮನು ಬಳಿಗಾರ್ ಅಧ್ಯಕ್ಷರ ಅವಧಿಯನ್ನು 3 ವರ್ಷಗಳಿಂದ 5 ವರ್ಷಕ್ಕೆ ವಿಸ್ತರಿಸಿಕೊಂಡಿದ್ದರು. ರಾಜ್ಯದಲ್ಲಿ ಹಲವರು ಇದರ ಪರ ಮತ್ತು ವಿರೋಧದ ಚರ್ಚೆ ನಡೆಸಿದ್ದರು. ಇದನ್ನು ಮುಂದಿನ ಅಧ್ಯಕ್ಷರು ಹೇಗೆ ನಿಭಾಯಿಸಲಿದ್ದಾರೆ ಎಂಬ ಅಂಶವೂ ಪ್ರಮುಖವಾಗಿದೆ. ಇನ್ನು ಕೊನೆಯದಾಗಿ ಈ ಬಾರಿಯ ಚುನಾವಣೆಯಲ್ಲಿ ಹಲವರು ಸ್ಪರ್ಧಿಸುತ್ತಿದ್ದಾರೆ. ಕೊರೊನಾ ಕನ್ನಡ ಸಾಹಿತ್ಯ ಲೋಕದ ಮೇಲೂ ದೊಡ್ಡ ಪರಿಣಾಮವನ್ನುಂಟುಮಾಡಿರುವ ಈ ಸಂದರ್ಭದಲ್ಲಿ ಕಸಾಪ ತನ್ನ ಕಾರ್ಯಸೂಚಿಗಳನ್ನು ಇನ್ನಷ್ಟು ಬಲಪಡಿಸಿಕೊಂಡು ನವೀನ ರೀತಿಯಲ್ಲಿ ಕಾರ್ಯಪ್ರವೃತ್ತವಾಗಬೆಕಿದೆ. ಈ ಎಲ್ಲಾ ಕಾರಣಗಳಿಂದ ಈ ಬಾರಿಯ ಪರಿಷತ್ ಚುನಾವಣೆ ವಿಶೇಷವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಗಳಾಗಿರುವ ದೂರದರ್ಶನ ನಿವೃತ್ತ ಅಧಿಕಾರಿ ಡಾ.ಮಹೇಶ್ ಜೋಷಿ, ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಕೊಪ್ಪಳ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ್ ಮಾಲಿ ಪಾಟೀಲ್, ಸಂಗಮೇಶ ಬಾದವಾಡಗಿ, ಹಿರಿಯ ಲೇಖಕಿ ಸರಸ್ವತಿ ಚಿಮ್ಮಲಗಿ ಸೇರಿದಂತೆ ಹಲವರು ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದು ನಾಮಪತ್ರಗಳನ್ನು ಸಲ್ಲಿಸಿದ ಮೇಲೆ ಸ್ಪಷ್ಟಚಿತ್ರಣ ಸಿಗಲಿದೆ. ಮೇ 9ರಂದು ಚುನಾವಣೆ ನಡೆಯಲಿದೆ.

ಮನು ಬಳಿಗಾರ್

ಅಧ್ಯಕ್ಷರ ಅವಧಿಯನ್ನು ವಿಸ್ತರಿಸಿದ ಕುರಿತು ಗೌರಿ ಲಂಕೇಶ್ ನ್ಯಾಯಪಥ ಪತ್ರಿಕೆಯೊಂದಿಗೆ ಮಾತನಾಡಿದ ಪ್ರಸ್ತುತ ಕಸಾಪದ ಅಧ್ಯಕ್ಷರಾದ ಮನು ಬಳಿಗಾರ್, “ಇದುವರೆಗೂ ಸಾಕಷ್ಟು ಅಧ್ಯಕ್ಷರುಗಳು ಈ ಅವಧಿಯನ್ನು ವಿಸ್ತರಿಸಿದ್ದಾರೆ. 8 ವರ್ಷಗಳವರೆಗೂ ಅಧ್ಯಕ್ಷರಾಗಿರುವ ಉದಾರಣೆಗಳಿವೆ. ಇದರ ನಡುವೆ ಯಾವುದೋ ಕಾರಣಕ್ಕೆ 3 ವರ್ಷಕ್ಕೆ ಇಳಿಸಲಾಗಿತ್ತು. ಈಗ ನಾನು 5 ವರ್ಷಕ್ಕೆ ಹೆಚ್ಚಿಸಿದ್ದೇನೆ. ಹಾಗಾಗಿ ಇದರಲ್ಲಿ ತಪ್ಪೇನಿಲ್ಲ. ಇನ್ನು ಕಳೆದ 105 ವರ್ಷಗಳಲ್ಲಿ ಆಗದ ಕೆಲಸಗಳನ್ನು ನಾವು ನಮ್ಮ ಅವಧಿಯಲ್ಲಿ ಮಾಡಿದ್ದೇವೆ. ಏನೂ ಗೊತ್ತಿಲ್ಲದವರು ಕಸಾಪದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅದನ್ನೂ ಒಪ್ಪಿಕೊಳ್ಳೋಣ. ಏಕೆಂದರೆ ಇದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಆದರೆ ನಮ್ಮ ಅವಧಿಯಲ್ಲಿ ನಾವು ಮಾಡಿರುವ ಕೆಲಸ ಒಂದು ಪುಸ್ತಕದಷ್ಟಿದೆ. ಹಾಗಾಗಿಯೇ ’ಕಾಯಕ ನಿರತ’ ಎನ್ನುವ ಪುಸ್ತಕದಲ್ಲಿ ನಾವು ಮಾಡಿರುವ ಕೆಲಸಗಳ ಕುರಿತು ದಾಖಲೆ ಸಮೇತ ಮಾಹಿತಿ ನೀಡಿದ್ದೇವೆ” ಎನ್ನುತ್ತಾರೆ.

ಇನ್ನು ಚುನಾವಣೆಯ ಕುರಿತು ಪ್ರತಿಕ್ರಿಯಿಸಿ, “ಈ ಬಾರಿಯ ಚುನಾವಣೆಯ ವಿಷಯದಲ್ಲಿ ನಾನು ತಟಸ್ಥವಾಗಿದ್ದೇನೆ. ಏಕೆಂದರೆ ಈ ಬಾರಿ ಸ್ಪರ್ಧಿಸಿರುವವರೆಲ್ಲ ನನ್ನ ಅಭ್ಯರ್ಥಿಗಳೇ. ಅವರಲ್ಲಿ ಯಾರು ಗೆಲ್ಲುತ್ತಾರೋ ಕಾದು ನೋಡಬೇಕಿದೆ” ಎಂದು ಹೇಳಿದರು.

ಕಲಬುರ್ಗಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿರುವ ಲೇಖಕಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸರಸ್ವತಿ ಚಿಮ್ಮಲಗಿಯವರು ಈ ಬಾರಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರ ಪ್ರಕಾರ “ಕಳೆದ 105 ವರ್ಷದಲ್ಲಿ ಒಬ್ಬ ಮಹಿಳಾ ಸಾಹಿತಿಗಳು ಕಸಾಪಗೆ ಅಧ್ಯಕ್ಷರಾಗಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪುಚುಕ್ಕೆ. ಹಾಗಾಗಿ ನಾನು ಈ ಸ್ಥಾನಕ್ಕೆ ಸ್ಪರ್ಧಿಸಬೇಕೆಂದು ಹಲವರು ಒತ್ತಾಯಿಸಿದರು. ಜೊತೆಗೆ ನನಗೆ ಅರ್ಹತೆಯಿದೆ ಎಂದೂ ಹೇಳಿದ್ದಾರೆ. ಜೊತೆಗೆ ಕನ್ನಡದ ಪರವಾಗಿ ಏನನ್ನಾದರೂ ಸಾಧಿಸಬೇಕು ಎನ್ನುವ ಹಂಬಲ ನನ್ನೊಳಗೆ ಇದೆ. ನಾನು ಅಧ್ಯಕ್ಷಳಾದರೆ, ಬೈಲಾದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತೇನೆ. ಜೊತೆಗೆ ಕನ್ನಡಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಬೇಕು ಎಂಬ ಆಸೆಯಿದೆ” ಎಂದು ತಿಳಿಸಿದರು.

ಹಿರಿಯ ಪತ್ರಕರ್ತರು ಮತ್ತು ಕನ್ನಡ ನುಡಿ ಪತ್ರಿಕೆಯ ಮಾಜಿ ಸಂಪಾದಕರಾದ ಮಹದೇವ್ ಪ್ರಕಾಶ್ ಅವರು ಕೂಡ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಇತ್ತು. ಇದರ ಬಗ್ಗೆ ಅವರ ಪ್ರತಿಕ್ರಿಯೆ ಕೋರಿದಾಗ “ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ನನ್ನ ಕೆಲವು ಗೆಳೆಯರು ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರು. ಹಾಗಾಗಿ ಇದರ ಬಗ್ಗೆ ಸ್ವಲ್ಪ ವಿಚಾರಣೆ ನಡೆಸಿದ್ದೆ. ಆದರೆ ಈ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಾದರೆ, ಕನಿಷ್ಟ 1.5 ಕೋಟಿ ಖರ್ಚಾಗುತ್ತದೆ. ಅಷ್ಟು ಹಣ ನನ್ನ ಬಳಿ ಇಲ್ಲ. ಒಂದು ವೇಳೆ ಇದ್ದರೂ ಸ್ಪರ್ಧಿಸುವುದಿಲ್ಲ. ನಾವು ಮತವನ್ನು ಮಾರಾಟ ಮಾಡಬಾರದು ಎಂಬುದನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಆದರೆ ಈಗ ನಾವೇ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಬೇಕಾದ ಪರಿಸ್ಥಿತಿ ಬರಬಾರದು ಎನ್ನುವ ಕಾರಣಕ್ಕೆ ಈ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ” ಎಂದರು.

ಕಸಾಪ ಅಧ್ಯಕ್ಷರ ಕೆಲಸಗಳನ್ನು ಕುರಿತು ಮಾತನಾಡಿದ ಅವರು, “ಯಾರೇ ಅಧ್ಯಕ್ಷರಾದರೂ, ಮೊದಲು ನಮ್ಮ ಅಕ್ಷರ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡ ನಶಿಸುತ್ತಿದೆ. ಇದಕ್ಕೆ ಕಾರಣ ನಾವು ಕನ್ನಡದ ಬಳಕೆಯನ್ನು ಕಡಿಮೆ ಮಾಡಿರುವುದೆ ಅಗಿದೆ.

ಹಾಗಾಗಿ ನಮ್ಮ ಅಕ್ಷರ ಸಂಸ್ಕೃತಿಯನ್ನು ಉಳಿಸಬೇಕಾದ ತುರ್ತು ಇದೆ. ಇನ್ನು ಎರಡನೆಯದಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಖಾಸಗಿ ಶಾಲೆಗಳ ದರ್ಜೆಗೆ ಅಂದರೆ ಗುಣಮಟ್ಟಕ್ಕೆ ಏರಿಸಬೇಕು. ಮೂಲಭೂತವಾಗಿ ಇವೆರಡೂ ಕೆಲಸ ನಡೆದರೆ ಉಳಿದದ್ದೆಲ್ಲಾ ತಾನಾಗಿಯೇ ಆಗುತ್ತದೆ. ಇನ್ನೊಂದು ಪ್ರಮುಖವಾದ ವಿಷಯ, ಒಂದು ವೇಳೆ ನಾನು ಅಧ್ಯಕ್ಷನಾದರೆ, ಅಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಿರುವುದನ್ನು ತಿದ್ದುಪಡಿಗೊಳಿಸಿ, 5 ವರ್ಷದಿಂದ ಮತ್ತೆ 3 ವರ್ಷಕ್ಕೆ ಇಳಿಸುತ್ತೇನೆ. ಏಕೆಂದರೆ ಎಲ್ಲಿ ಅಧಿಕಾರ ಎರಡನೇ ಅವಧಿಗೆ ಮುಂದುವರೆಯುತ್ತದೆಯೋ ಅಥವಾ ಎಲ್ಲಿ ಒಮ್ಮೆ ಅಧಿಕಾರ ಅನುಭವಿಸಿದವನು ಮತ್ತೊಮ್ಮೆ ಅಲ್ಲಿಯೇ ಮುಂದುವರಿಯುತ್ತಾನೆಯೋ ಅಲ್ಲಿ ಭ್ರಷ್ಟಾಚಾರ ಮತ್ತು ಅನೈತಿಕತೆ ತಲೆದೋರುತ್ತದೆ. ಹಾಗಾಗಿ ಮನು ಬಳಿಗಾರ್ ಅಧ್ಯಕ್ಷೀಯ ಅವಧಿಯನ್ನು ಹೆಚ್ಚಿಸಿ ಜನತೆಗೆ ವಂಚನೆ ಮಾಡಿದ್ದಾರೆ” ಎನ್ನುತ್ತಾರೆ.

ಈ ಚುನಾವಣೆಯ ಕುರಿತು ಮಾತನಾಡಿದ ಯುವ ಸಾಹಿತಿ-ಕವಿ ರಾಜೇಂದ್ರ ಪ್ರಸಾದ್, “ಯಾವುದೇ ಸಾಹಿತ್ಯ ಸಂಸ್ಥೆಗೂ ಸದಸ್ಯನಾಗಬಾರದು ಅಂತ ನಿರ್ಧಾರ ಮಾಡಿದ್ದೇನೆ. ಏಕೆಂದರೆ, ಇಂದು ಕಸಾಪ ಚುನಾವಣೆ ಪ್ರಜಾಸತ್ತಾತ್ಮಕವಾಗಿ ಉಳಿದಿಲ್ಲ. ಇಂದು ಚುನಾವಣೆಯಲ್ಲಿ ಆಯ್ಕೆಯಾಗಬೇಕಾದರೆ, ಒಂದು ಜಾತಿ ಬಲ ಬೇಕು ಅಥವಾ ಹಣಬಲ ಬೇಕು. ಇವುಗಳ ಆಧಾರದಲ್ಲಿ ಚುನಾವಣೆ ನಡೆಯುವಾಗ ನಾವು ಮತ ಹಾಕಿ ಏನು ಪ್ರಯೋಜನವಿದೆ? ಹಾಗಾಗಿ ನಾನು ಈ ಚುನಾವಣೆಯನ್ನು ಧಿಕ್ಕರಿಸುತ್ತೇನೆ” ಎಂದು ಹೇಳಿದರು.

ಮುಂದುವರೆದು “ಜೊತೆಗೆ ಕಸಾಪದಿಂದ ಸಮ್ಮೇಳನಗಳನ್ನು ನಡೆಸುವುದನ್ನು ಬಿಟ್ಟರೆ ಯಾವುದೇ ಉನ್ನತ ಕೆಲಸಗಳು ಆಗುತ್ತಿಲ್ಲ. ಹಾಗಾಗಿ ಇದನ್ನು ಉಳಿಸಿಕೊಳ್ಳುವುದಕ್ಕಿಂತ ಸ್ಥಗಿತಗೊಳಿಸುವುದೇ ಸೂಕ್ತ. ಇತಿಹಾಸವನ್ನು ನೆನೆಸಿಕೊಂಡು ಇಂತಿಂಥ ಒಳ್ಳೊಳ್ಳೆ ಕೆಲಸಗಳು ಆಗಿದ್ದವು ಅಂತ ಖುಷಿ ಪಡಬಹುದು. ಇಲ್ಲ ಇದನ್ನು ಸಂಪೂರ್ಣವಾಗಿ ಪುನರ್ರಚಿಸಬೇಕು. 50 ವರ್ಷದ ಮೇಲ್ಪಟ್ಟವರು ಈ ಚುನಾವಣೆಯಲ್ಲಿ ನಿಲ್ಲಲೇಬಾರದು. ಉಳಿದವರಿಗೆ ಅವಕಾಶ ಮಾಡಿಕೊಡಬೇಕು” ಎನ್ನುತ್ತಾರೆ.

ಈ ಚುನಾವಣೆಯ ಕುರಿತು ಮಾತನಾಡಿದ ಹಲವು ವರ್ಷಗಳಿಂದ ಕಸಾಪ ಸದಸ್ಯರಾಗಿದ್ದು ಮತದಾನ ಮಾಡುತ್ತಿರುವವರೊಬ್ಬರು, “ಇದುವರೆಗೂ ಕಸಾಪ ಕೇವಲ ಸಮ್ಮೇಳನಗಳನ್ನಷ್ಟೆ ಮಾಡಿಕೊಂಡು ಬಂದಿದೆ. ಈ ಹಿಂದೆ ಕೆಲವು ಮೇರು ಸಾಹಿತಿಗಳು ಅದ್ಯಕ್ಷರಾಗಿದ್ದಾಗ ಹಲವು ಅತ್ಯುನ್ನತ ಕೆಲಸಗಳಾಗಿವೆ. ಆದರೆ ಈಗ ಜಾತಿ ಮತ್ತು ಹಣದ ಆಧಾರದಲ್ಲಿ ಅಧ್ಯಕ್ಷರಾಗಿ ಬಂದವರು ಯಾವುದೇ ನ್ಯಾಯಯುತವಾದ ಕೆಲಸಗಳನ್ನು ಮಾಡುತ್ತಿಲ್ಲ. ಹಿಂದೆ ಕಸಾಪ ಮಾಡುತ್ತಿದ್ದ ಕೆಲಸಗಳನದ್ದೀಗ ವಿವಿಗಳು ಸೇರಿದಂತೆ ಇತರ ಅಕಾಡೆಮಿಗಳು ಮಾಡುತ್ತಿವೆ. ಹಾಗಾಗಿ ಕಸಾಪ ಇನ್ನೂ ಮೌಲ್ಯಯುತವಾದ ಕೆಲಸಗಳನ್ನು ಮಾಡಬೇಕಿದೆ” ಎಂದರು.

PC : ಭೀಮಾಸಿರಿ
(ಸರಸ್ವತಿ ಚಿಮ್ಮಲಗಿ)

“ಇನ್ನು ಮಹಿಳೆಯರು ಕಸಾಪದ ಅಧ್ಯಕ್ಷರಾಗುವುದು ತುಂಬಾ ದೂರದ ಮಾತು. ಈ ಚುನಾವಣೆಯೂ ಕೂಡ ರಾಜಕೀಯ ಚುನಾವಣೆಗಳಂತೆಯೇ ಆಗಿದೆ. ಇಲ್ಲಿಯೂ ಮಹಿಳೆಯರಿಗೆ ಅವಕಾಶವೇ ಇಲ್ಲ” ಎನ್ನುತ್ತಾರೆ.

ಕಸಾಪ ಹಿನ್ನೆಲೆ 

ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ದಿನಾಂಕ 5-5-1915ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂದು 1914ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯ್ತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ಕರ್ಣಾಟಕ ಸಾಹಿತ್ಯ ಪರಿಷತ್ತೇ ಇಂದು ’ಕನ್ನಡ ಸಾಹಿತ್ಯ ಪರಿಷತ್ತು’ ಆಗಿ ಹೆಮ್ಮರವಾಗಿ ಬೆಳೆದಿದೆ.

ಅಂದಿನಿಂದಲೂ ಎಚ್ ವಿ ನಂಜುಂಡಯ್ಯ, ಶ್ರೀ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದೂರ್, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರೊ. ಎ. ಎನ್. ಮೂರ್ತಿರಾವ್, ಶ್ರೀ ಜಿ. ನಾರಾಯಣ, ಡಾ. ಹಂಪನಾಗರಾಜಯ್ಯ, ಶ್ರೀ ಪುಂಡಲೀಕ ಹಾಲಂಬಿ, ಡಾ. ಚಂದ್ರಶೇಖರ ಪಾಟೀಲ, ಡಾ. ಸಾ. ಶಿ. ಮರುಳಯ್ಯ, ಶ್ರೀ ಗೊ. ರು. ಚನ್ನಬಸಪ್ಪ, ಶ್ರೀ ಜಿ.ಎಸ್. ಸಿದ್ಧಲಿಂಗಯ್ಯ ಸೇರಿದಂತೆ ಹಲವರು ಕಸಾಪ ಅಧ್ಯಕ್ಷರಗಿ ಸೇವೆ ಸಲ್ಲಿಸಿದ್ದಾರೆ.

ಚುನಾವಣಾ ಪ್ರಕ್ರಿಯೆ

2021ರ ಮೇ 9ಕ್ಕೆ ಮತದಾನ ನಡೆಯಲಿದ್ದು, ಮೇ 12ರಂದು ಫಲಿತಾಂಶ ಪ್ರಕಟವಾಗಲಿದೆ. ಕಸಾಪ ಸುಧಾರಣಾ ಸಲಹಾ ಸಮಿತಿ, ಹಾಲಿ ಸದಸ್ಯರಾದ ಎಸ್.ಟಿ.ಮೋಹನ್‌ರಾಜ್ ಅವರನ್ನು ವಿಶೇಷ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಪರಿಷತ್‌ನ ನಿಬಂಧನೆಗಳಂತೆ ಚುನಾವಣಾ ಅಧಿಸೂಚನೆ ಹಾಗೂ ಮತದಾನಕ್ಕೆ ಅರ್ಹರಿರುವ ಕರಡು ಮತದಾರರ ಪಟ್ಟಿಯನ್ನು ಮಾ.25 ರಂದು ಪ್ರಕಟಿಸಲಾಗಿದೆ. ಸುಮಾರು 3 ಲಕ್ಷಕ್ಕೂ ಅಧಿಕ ಮತದಾರರು ರಾಜ್ಯದಾದ್ಯಂತ ಮತ ಚಲಾಯಿಸಲಿದ್ದಾರೆ. ಕಸಾಪ ಚುನಾವಣೆಯಲ್ಲಿ ಮತ ಚಲಾಯಿಸಲು ಕೆಲವು ನಿಯಮಗಳಿವೆ. 18 ವರ್ಷ ತುಂಬಿದವಾಗಿದ್ದು ಕನ್ನಡ ಬಲ್ಲವರು ಯಾರಾದರೂ ಕಸಾಪದ ಸದಸ್ಯರಾಗಬುದು. ಸದಸ್ಯರಾದ 3 ವರ್ಷದ ನಂತರ ಅವರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣಾ ದಿನಾಂಕಕ್ಕೆ 10 ವರ್ಷಗಳ ಹಿಂದಿನಿಂದ ಸತತವಾಗಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು 5 ವರ್ಷಗಳ ಹಿಂದಿನಿಂದ ಕಸಾಪ ಸದಸ್ಯರಾಗಿರಬೇಕು.

ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಾ.29ರಿಂದ ಏಪ್ರಿಲ್ 7ರವರೆಗೆ ಅವಕಾಶವಿದೆ. ಏ.8ಕ್ಕೆ ನಾಮಪತ್ರ ಪರಿಶೀಲನೆ ಮತ್ತು ನಾಮಪತ್ರ ಹಿಂಪಡೆಯಲು ಏ.12ರ ಸೋಮವಾರ 3 ಗಂಟೆಯವರೆಗೆ ಅವಕಾಶವಿದೆ. ಮೇ 9ಕ್ಕೆ ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಮೇ 11ರಂದು ಅಂಚೆಪತ್ರಗಳ ಮತ ಎಣಿಕೆ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಫಲಿತಾಂಶ ಪ್ರಕಟ, ಮೇ12ಕ್ಕೆ ಕೇಂದ್ರ ಕಸಾಪ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ನಡೆಯಲಿದೆ. ಮತದಾರರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ electionkasapa2020-21 ಮೊಬೈಲ್ ಆಪ್‌ನ್ನು ರೂಪಿಸಲಾಗಿದೆ. ಕಸಾಪ ಅಧಿಕೃತ ವೆಬ್‌ಸೈಟ್ www.kasapa.in ನಲ್ಲೂ ಸುಲಭವಾಗಿ ವಿವರಗಳನ್ನು ಪಡೆಯುವ ಹಾಗೆ ಹುಡುಕುವ ಆಯ್ಕೆ(ಸರ್ಚಿಂಗ್)ಯನ್ನು ಸಹ ರೂಪಿಸಲಾಗಿದೆ. ಮತದಾರರು ತಮ್ಮ ವಿವರಗಳನ್ನು ಇಲ್ಲಿ ಪಡೆಯಬಹುದಾಗಿದೆ.


ಇದನ್ನೂ ಓದಿ: APMC ತಿದ್ದುಪಡಿ ಕಾಯ್ದೆಯ ದುಷ್ಪರಿಣಾಮ ಆರಂಭ: 16% ಇಳುವರಿ ಹೆಚ್ಚಾಗಿದ್ದರೂ ತೊಗರಿಬೇಳೆ ದರ ಏರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...