ಗುಜರಾತ್‌ನ ಭಾವನಗರ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಬುರ್ಖಾ ಧರಿಸಿದ ಮಹಿಳೆಯರನ್ನು ‘ಭಯೋತ್ಪಾಕದರು’ ಎಂದು ಚಿತ್ರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಭಾವನಗರ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ಹಿತೇಂದ್ರಸಿಂಹ ಡಿ ಪಧೇರಿಯಾ ಅವರು ಮಂಗಳವಾರ (ಆ.19) ಭಾವನಗರ ಮುನ್ಸಿಪಲ್ ಸ್ಕೂಲ್ ಬೋರ್ಡ್ ಆಡಳಿತ ಅಧಿಕಾರಿ (ಎಒ) ಮುಂಜಾಲ್ ಬದ್ಮಾಲಿಯಾ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಭಾವನಗರದ ಕುಂಭಾರ್ವಾಡ ಪ್ರದೇಶದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರಾಥಮಿಕ ಶಾಲಾ ಸಂಖ್ಯೆ 51 ರಲ್ಲಿ ನಡೆದ ವಿವಾದಾತ್ಮಕ ಕಾರ್ಯಕ್ರಮದ ಕುರಿತು ಏಳು ದಿನಗಳಲ್ಲಿ ವಾಸ್ತವಿಕ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ನಾಟಕವು ‘ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರಂತೆ ಚಿತ್ರಿಸಿದೆ’ ಎಂದು ಆರೋಪಿಸಿ ಮತ್ತು ನಾಟಕದ ಹಿಂದಿನ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಬಂಧನ್ ಬಚಾವ್ ಸಮಿತಿ ಭಾವನಗರ ಎಂಬ ಸಾಮಾಜಿಕ ಸಂಘಟನೆಯು ನೀಡಿದ ದೂರಿನ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ.
ಭಾವನಗರ ಮುನ್ಸಿಪಲ್ ಸ್ಕೂಲ್ ಬೋರ್ಡ್ ಆಡಳಿತ ಅಧಿಕಾರಿ (ಎಒ) ಮುಂಜಾಲ್ ಬದ್ಮಾಲಿಯಾ ಅವರಿಗೆ ಕಳುಹಿಸಲಾದ ನೋಟಿಸ್‌ನಲ್ಲಿ ಡಿಇಒ ಅವರು, ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವಿವರಗಳನ್ನು ಕೇಳಿದ್ದು, ವಿವಾದಾತ್ಮಕ ನಾಟಕದ ಪಾತ್ರವನ್ನು ಉದ್ದೇಶಪೂರ್ವಕವಾಗಿ ಮಾಡಿಸಲಾಗಿದೆಯೇ ಅಥವಾ ಉದ್ದೇಶಪೂರ್ವಕವಲ್ಲದ ಕೃತ್ಯವೇ? ಎಂದು ಮತ್ತು ಶಾಲಾ ಆವರಣದಲ್ಲಿ ನಡೆದ ಸಮಾರಂಭದ ವಿವರಗಳನ್ನು ಕೇಳಿದ್ದಾರೆ.
600ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಭಾವನಗರದ ಬಾಲಕಿಯರ ಶಾಲೆಯು ವಿವಾದಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಗಮನ ಸೆಳೆದಿದೆ.
ಬಂಧನ್ ಬಚಾವ್ ಸಮಿತಿ ಭಾವನಗರ ತನ್ನ ದೂರಿನಲ್ಲಿ “ವಿವಾದಾತ್ಮಕ ನಾಟಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಮತ್ತು ಸಾರ್ವಜನಿಕರಲ್ಲಿ ಅಶಾಂತಿಯನ್ನು ಹರಡಲು ಶಾಲಾ ಸಿಬ್ಬಂದಿ ಮಾಡಿದ ಪ್ರಯತ್ನ” ಎಂದು ಆರೋಪಿಸಿದೆ.
“ಭಾವನಗರದ ಕುಂಭರ್ವಾಡಾ ಪ್ರದೇಶದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರಾಥಮಿಕ ಶಾಲಾ ಸಂಖ್ಯೆ 50-51 ರಲ್ಲಿ, ಮಕ್ಕಳಿಂದ ನಾಟಕವನ್ನು ಪ್ರದರ್ಶಿಸಲಾಗಿದೆ. ಈ ನಾಟಕದಲ್ಲಿ, ಕಾಶ್ಮೀರಿ ಯಾತ್ರಿಕರು ಹಾಗೂ ಸೇನೆ ಮತ್ತು ಭಯೋತ್ಪಾದಕರನ್ನು ಚಿತ್ರಿಸಲಾಗಿದೆ. ನಾಟಕದಲ್ಲಿ, ಮುಸ್ಲಿಂ ಉಡುಪು (ಬುರ್ಖಾ) ಧರಿಸಿದ ಹುಡುಗಿಯರನ್ನು ಭಯೋತ್ಪಾದಕರಂತೆ ತೋರಿಸಲಾಗಿದೆ. ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರಂತೆ ಸ್ಪಷ್ಟವಾಗಿ ಚಿತ್ರಿಸಲಾಗಿದೆ” ಎಂದು ಬಂಧನ್ ಬಚಾವ್ ಸಮಿತಿ ದೂರಿನಲ್ಲಿ ಹೇಳಿದೆ.
ಶಾಲೆಯಲ್ಲಿ ಇಂತಹ ನಾಟಕ ಪ್ರದರ್ಶಿಸುವ ಮೂಲಕ ತಮ್ಮ ಕ್ರಿಮಿನಲ್ ಮನಸ್ಥಿತಿಯನ್ನು ಪ್ರದರ್ಶಿಸಿದ ಶಿಕ್ಷಕರ ವಿರುದ್ಧ ಮುಸ್ಲಿಂ ಸಮುದಾಯದ ಆಕ್ರೋಶ ವ್ಯಕ್ತಪಡಿಸಿದೆ ಎಂದು ಸಮಿತಿ ಹೇಳಿದೆ.
ಭಾವನಗರ ನಗರದ 68 ಪುರಸಭೆ ಶಾಲೆಗಳಲ್ಲಿ 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ವರ್ಷ ಆಪರೇಷನ್ ಸಿಂಧೂರ್ ಆಚರಣೆಯ ಭಾಗವಾಗಿ, ಶಾಲಾ ವಿದ್ಯಾರ್ಥಿಗಳು ಗುಜರಾತ್‌ನ ಸೈನಿಕರಿಗೆ ರಾಖಿಗಳು ಮತ್ತು ಪತ್ರಗಳನ್ನು ಕಳುಹಿಸಿದ್ದಾರೆ. ಭಾವನಗರ ಜಿಲ್ಲೆಯಿಂದ ಮಾತ್ರ, 2 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಗುಜರಾತ್‌ನ ಸೈನಿಕರಿಗೆ ಪತ್ರ ಬರೆದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಉತ್ತರಾಖಂಡದಲ್ಲಿ ಮುಸ್ಲಿಂ ಲಾರಿ ಚಾಲಕನ ಮೇಲೆ ಗುಂಪು ಹಲ್ಲೆ: ಸಂತ್ರಸ್ತನಿಂದ ನ್ಯಾಯಕ್ಕೆ ಆಗ್ರಹ


